ಪೂರ‍್ಣಿಮೆಯ ಪತ್ರ
ಹೃದಯೇಶ್ವರರ ಹೃದಯಾರವಿಂದಕ್ಕೆ ಭಕ್ತಿಪೂರ್ವಕ ನಮಸ್ಕಾರಗಳು.
ಮಕ್ಕಳಾದಿಯಾಗಿ ಎಲ್ಲರೂ ಕ್ಷೇಮವಾಗಿದ್ದಾರೆ. ನಿಮ್ಮ ರಾಘು ಈಗೀಗ ನಡೆಯಲು ಆರಂಭಿಸಿದ್ದಾನೆ. ಅವನ ಜೀವದ ಮೇಲೆ ಬಂದಿದ್ದ ಗಂಡಾಂತರ ಶ್ರೀ ರಾಘವೇಂದ್ರ ಸ್ವಾಮಿಗಳ ದಯೆಯಿಂದ ತಪ್ಪಿತು. ನೀವು ನಿಮ್ಮ ಪತ್ರಗಳಲ್ಲಿ ಗುರುರಾಯರ ಅನುಗ್ರಹವಿದೆಯೋ ಇಲ್ಲವೋ ಎಂದು ಸಂದೇಹಪಡುವಂತಿದೆ. ಆದರೆ ನನಗೆ ಆ ಸಂದೇಹ ಸ್ವಲ್ಪವೂ ಇಲ್ಲ. ಕೈ ಬಿಟ್ಟು ಹೋಗಿದ್ದ ನನ್ನ ರಾಘುವನ್ನು ನನಗೆ ಪುನಃ ಕೊಟ್ಟು ರಾಘವೇಂದ್ರ ಸ್ವಾಮಿಗಳ ಅನುಗ್ರಹವು ನಮ್ಮ ಮೇಲೆ ಸಂಪೂರ್ಣವಾಗಿದೆಯೆಂದು ನಾನೇನೋ ನಂಬಿದ್ದೇನೆ ನೀವೂ ನಂಬಿರಿ. “ನಂಬುಗೆಯೇ ಕಾರಣವು ಶಂಭುವಿನೊಲುಮೆಗೆ” ಎಂಬುದನ್ನು ಮರೆತರೇನು?
ರಾಘು ದಿನಕ್ಕೆ ನೂರು ಸಾರಿಯಾದರೂ ಅಮ್ಮ ಅಮ್ಮ ಎನ್ನುವನು. ವಾರಕ್ಕೆ ಒಂದು ಸಾರಿ ಮಾತ್ರ ಅಪ್ಪ ಎನ್ನುವನು. ಕಣ್ಣೆದುರಿಗೆ ಇಲ್ಲದವರನ್ನು ಕನವರಿಸಿಕೊಂಡು ಕರೆಯುವುದಕ್ಕೆ ಅವನಿಗಿನ್ನೂ ವಯಸ್ಸು ಸಾಲದು ಅಲ್ಲವೇ?
ನೀವು ಮೊನ್ನೆ ಬಸವನಾಳರ ಬಗ್ಗೆ ಬರೆದ ಪತ್ರವನ್ನು ಓದಿದಾಗ ನನ್ನ ಹೃದಯ ಕಲುಕಿಹೋಯಿತು. ಬಸವನಾಳರಿಗೆ ಕುಳಿತಲ್ಲಿಂದಲೇ ನಮಿಸಿದೆ. ಕಣ್ಣ ಮುಚ್ಚಿ ಅಂಬಿಕಾತನಯದತ್ತರನ್ನೇ ನೆನೆಸಿಕೊಂಡೆ. ಧಾರವಾಡದ ಬೀದಿ ಬೀದಿಗಳನ್ನು ಸ್ಮರಿಸಿಕೊಂಡೆ; ಸಮಾಧಾನ ಬರಲಿಲ್ಲ. ಮತ್ತೊಮ್ಮೆ ಅದೇ ಪತ್ರವನ್ನು ಓದಿದೆ. ಏಕೋ, ಏನೋ ಸಾವು ಬಹು ಕರ್ಕಶವಾಗಿ ಕ೦ಡುಬ೦ತು. ಅ೦ದು ನನ್ನ ಸ್ಕೂಲಿಗೆ ರಜೆ. ಬಿಡುವು ಬೇಕಷ್ಟಿದ್ದಿತು. ಆ ಕಲಿಯುವ ಮಕ್ಕಳ ಮಧ್ಯೆ ತಲೆ ಹೊಡೆದುಕೊಂಡು ಮಗ್ಗಿ ಹೇಳಿಸಿ ಲೆಕ್ಕ ಹಾಕಿಸಿ ಸುಸ್ತಾಗುವ ನಮ್ಮಂತಹ ‘ಮೇಡಂ’ಗಳಿಗೆ ವಾರಕ್ಕೊಂದು ದಿನ ರಜೆ ಸಾಲದು. ಏಕೆಂದರೆ ನಾನು ಶಾಲೆಯಲ್ಲಿ ಉಪಾಧ್ಯಾಯನಿ, ಮನೆಯಲ್ಲಿ ಕೆಲಸದವಳು, ಮಕ್ಕಳಿಗೆ ತಾಯಿ. ಇದರ ಜತೆಗೆ ನಿಮಗೆ ಉದ್ದುದ್ದ ಪತ್ರಗಳನ್ನೂ ಬರೆಯಬೇಕು. ನಡುವೆ ರಾಘುವಿನೊಂದಿಗೆ ಆಟವಾಡಲು ಸಮಯವೇ ಸಾಲದು. ಆ ಮುದ್ದಿನ ಮೂಡೆ ನಿಮ್ಮ ಮುದ್ದಿನ ಮುದ್ದೆ ಲೀಲಾ ಸತ್ತು ಹೋದ ನಿಮ್ಮ ಸೋದರತ್ತೆ ಸಾಕಮ್ಮಯ್ಯನ ಅಪರಾವತಾರವೇ ಸರಿ. ಸಿಡುಕೆಂದರೆ ಸಿಡುಕು. ಅವಳು ನನ್ನ ಮಗಳೇನಲ್ಲ. ನಿಮ್ಮ ಸ್ವಂತ ಮಗಳು. ನೀವು ಒಂದೊಂದು ಸಾರಿ ಅವಳಿಗೆ ಹೇಳಿಕೊಡುತ್ತಿದ್ದಿರಿ, ನಾನು ಅವಳ ಮಲತಾಯಿಯೆಂದು. ಎಲ್ಲೋ ಆ ಪೆದ್ದು ಹುಡುಗಿ ಅದನ್ನೇ ನಿಜವೆಂದು ತಿಳಿದುಕೊಂಡಂತಿದೆ. ಅವಳಿಗೆ ಸಿಟ್ಟು ಬಂದಿತೆಂದರೆ ಅವಳ ಮುಖ ನೋಡಲು ನನಗೇ ಭಯ. ಹೈಸ್ಕೂಲಿನಲ್ಲಿ ಓದುತ್ತಿರುವಳು. ಮುಂದಿನ ವರುಷ ಮ್ಯಾಟ್ರಿಕ್ ಪ್ಯಾಸಾಗುವಳು, ಆದರೂ ಒಂದಿಷ್ಟೂ ಚುರುಕಿಲ್ಲ. ಚುರುಕಿಲ್ಲದಿದ್ದರೂ ಹೋಗಲಿ ಸಿಡುಕೇಕೆ ಅಷ್ಟು? ಹೋ, ಹೋ, ಮರೆತಿದ್ದೆ. ಅವಳ ಸುದ್ದಿ ಎತ್ತಿದರೆ ನಿಮಗೆ ಕೋಪ ಮೂಗಿನ ಕೊನೆಗೇ ಬಂದು ಬಿಡುವುದು. ಇರಲಿ, ನೀವಿರುವುದು ಹುಬ್ಬಳ್ಳಿ, ನಾನಿರುವುದು ಬೆಂಗಳೂರು; ಸಿಟ್ಟು ಬಂದರೂ ಕಾಫಿಯ ಮೇಲೆ ತೋರಿಸಬೇಕು ಅಷ್ಟೆ, ಹೋಗಲಿ ಆ ವಿಷಯ.
ನಿನ್ನ ಮನಸ್ಸಿನ ಸಮಾಧಾನಕ್ಕೆ ಏನೂ ಉಪಾಯವೇ ಕಾಣುವುದಿಲ್ಲ. ಕೊನೆಗೆ ನೀವು ನನಗೆ ಬರೆದಿರುವ ಪತ್ರಗಳ ಫೈಲನ್ನು ತೆಗೆದುಕೊಂಡು ಓದುತ್ತಾ ಕುಳಿತೆನು. ಅವುಗಳನ್ನೆಲ್ಲಾ ಒಮ್ಮೆ ವಿಮರ್ಶೆ ಮಾಡಿಬಿಡಲೇ ಎಂದು ಹುಮ್ಮಸ್ಸು ಬಂದಿತು. ಈ ಯೋಚನೆಗೆ ನನಗೇ ನಾಚಿಕೆಯಾಗಿ ಸೆರಗನ್ನು ಸರಿಮಾಡಿಕೊಂಡೆನು. ಕನ್ನಡಿಯಲ್ಲಿ ಮುಖವನ್ನು ನೋಡಿಕೊಂಡು ನಕ್ಕೆನು. ಆದರೂ ಒಂದು ಮಾತ್ರ ಮನಸ್ಸಿಗೆ ಹೊಳೆಯದೇ ಇರಲಿಲ್ಲ. ನೀವು ನನಗೆ ಧೈರ್ಯ ತುಂಬುತ್ತಿದ್ದರೂ ನಿಮ್ಮ ಧೈರ್ಯವನ್ನೇ ನೀವು ಕಳೆದು ಕೊಳ್ಳುತ್ತಿರುವಿರಿ. ಈ ಗುಟ್ಟು ರಟ್ಟಾದುದು ಎಲ್ಲಿ ಗೊತ್ತೆ? ನನ್ನ ಮತ್ತು ನಿಮ್ಮ ಅಗಲಿಕೆಯ ನೆನಹು ಬಂದಾಗ, ಹೆಚ್ಚು ಕಡಿಮೆ ಪ್ರತಿ ಪತ್ರದಲ್ಲಿ ಈ ನೋವನ್ನು ಒಂದಲ್ಲ ಒಂದು ವಿಧದಲ್ಲಿ ತುಂಬಿರುವಿರಿ. ಒಂದು ಸಾರಿಯಾದರೂ ಗಟ್ಟಿ ಮನಸ್ಸು ಮಾಡಿಕೊಂಡು ಅಗಲಿಕೆಗಾಗಿ ಸಮಾಧಾನವನ್ನು ತಂದುಕೊಂಡಿಲ್ಲ. ಇಂತಹ ಅರೆಮನಸ್ಸಿನಲ್ಲಿ ನೀವಲ್ಲಿ ದುಡಿವ ದುಡಿತದಿಂದ ಬರಿಯ ದೇಹಶ್ರಮ ಮಾತ್ರವಾಗುವುದಾದರೆ ಪ್ರಯೋಜನವೇನು? ನಿಮ್ಮ ಸಂಪಾದನೆಗಾಗಿ ನಿಮ್ಮನ್ನು ಅಲ್ಲಿ ಬಿಟ್ಟಿಲ್ಲ. ನನಗೆ ಬಡತನ, ಬಹು ಬಡತನವನ್ನು ಅನುಭವಿಸುವುದು ತಿಳಿಯದಿಲ್ಲ. ನನ್ನ ಮತ್ತು ಮಕ್ಕಳ ಸಲುವಾಗಿ, ನಮ್ಮ ಹೊಟ್ಟೆ, ಬಟ್ಟೆಗಾಗಿಯೇ ದುಡಿಯುವುದಿದ್ದರೆ ಅದಕ್ಕಾಗಿಯೇ, ಮಾನ ಅಭಿಮಾನಗಳನ್ನು ಬಿಟ್ಟಿರುವಿರೆಂದೂ ಸೇವೆಯನ್ನು ಮಾರಿ ಕೊಂಡಿರುವಿರೆಂದು, ಲೇಖನಿಯನ್ನೂ ಒತ್ತಿ ಹಾಕಿರುವಿರೆಂದು ನಿಮಗನ್ನಿಸಿದ್ದರೆ, ಅದಕ್ಕಿಂತ ದುಃಖವಾದ ಸಂಗತಿ ಮತ್ತೊಂದಿಲ್ಲ. ಹೀಗೆ ನಾನು ಬದುಕಿದ್ದು, ನಿಮ್ಮ ಧ್ಯೇಯ ಜೀವನಕ್ಕೆ ಮುಳ್ಳಾಗುವುದಕ್ಕಿಂತ ಸತ್ತು ಅದೃಶ್ಯವಾದ ಆ ಕೈಗಳಿಂದಲೇ ನೀವು ನಡೆವ ದಾರಿಯನ್ನು ಹಸನ ಮಾಡುತ್ತ, ನಿಮ್ಮ ದಾರಿಯನ್ನು ಕಾಯುತ್ತ ಅಲ್ಲಿ ಕುಳ್ಳಿರ ಬಲ್ಲೆನು. ಆದುದರಿಂದ ಒಮ್ಮೆ ನಿರ್ಧಾರಕ್ಕೆ ಬನ್ನಿರಿ, ಗುರುದೇವಂ ಸಮ್ಮುಖದಲ್ಲಿ ನಿಂತು ಪ್ರತಿಜ್ಞೆ ಮಾಡಿರಿ. ವಿರಹ, ವ್ಯಾಮೋಹ, ಇವುಗಳ ಬಿಸಿಗೆ ಕರಗುವುದಿಲ್ಲವೆಂದು ನೀವು ನನ್ನ ಮನಸ್ಸಿಗೆ ನಂಬಿಕೆ ಮಾಡಿಕೊಡಿರಿ. ಆಮೇಲೆ ನನಗೂ ನೆಮ್ಮದಿ, ನಿಮಗೂ ನೆಮ್ಮದಿ.
ಕೋಪಿಸಬೇಡಿ. ನಿಮ್ಮಲ್ಲಿ ಇತರರಿಗೆ ಬುದ್ಧಿ ಹೇಳುವುದೇ ಬಹಳವಿದೆ, ನೀವು ಹೇಳಿದ್ದನ್ನೆಲ್ಲ ಇತರರು ಕೇಳಬೇಕೆನ್ನುವಾಗ ಇನ್ನೊಬ್ಬರು ಹೇಳುವುದನ್ನು ಸ್ವಲ್ಪವಾದರೂ ಕೇಳುವ ಸಹನೆ, ಸೌಜನ್ಯ, ನಿಮಗೆ ಇರಬಾರದೆ. ಡಿಯರ್? ಹುಬ್ಬಳ್ಳಿಗೆ ಹೋದಮೇಲಂತೂ, ಅಬ್ಬ, ನಿಮ್ಮ ಬಾಯಿ ಅದೆಷ್ಟು ದೊಡ್ಡದಾಯಿತು? ಇಲ್ಲವಾದರೆ, ಆ ದಿನ ಪತ್ರಿಕೆಯ ನಾಲ್ಕು ಪುಟಗಳು ತುಂಬಬೇಕಲ್ಲ?
ನಿಮ್ಮೊಂದಿಗೆ ವಾದಕ್ಕೆ ನಿಲ್ಲಲಾರೆ. ನೀವು ಯಾವಾಗಲೂ ಚಂದ್ರನನ್ನು ಸೂರ್ಯನೆಂದು ಸಮರ್ಥಿಸಲು ಹೊರಡುವಿರಿ. ಆದ್ದರಿಂದ ಹೆಚ್ಚು ಬರೆಯದೆ ಮಾಡಿಕೊಳ್ಳಬೇಕಾಗಿ ಪ್ರಾರ್ಥನೆಯೊಂದನ್ನು ಮಾಡಿಕೊಳ್ಳುವೆನು, ನಡಿಸಿಕೊಡುವಿರಾ? ನನ್ನ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿ ನಿಮ್ಮಲ್ಲಿ ಇಲ್ಲದಿದ್ದರೆ ಈ ಗೊಣಗುವದೇಕೆ? ಕೊರಗೇಕೆ? ಸುಮ್ಮನೆ ಇಲ್ಲಿಗೆ ಬಂದು ಬಿಡಿ. ಆದುದಾಯಿತು. ಆದುದಾಗುವುದು, ಅಲ್ಲಿರುವುದಾದರೆ ಎದೆಯಲ್ಲಿ ಈ ಬಗೆಯ ನೋವಿದ್ದರೆ ಆ ಎದೆ ಉಳಿಯ ಬೇಕೆಂತು? ನೀವು ಮೇಲಿಂದ ಮೇಲೆ ಓದುತ್ತಲಿದ್ದ ಬಸವಣ್ಣನವರ ವಚನಾಮೃತವನ್ನು ಮರೆತರೇನು? ಜ್ಞಾಪಿಸುವೆನು.
“ಸಂಸಾರದಲ್ಲಿ ಹುಟ್ಟಿ, ಮತ್ತೊಂದ ಬಯಸುವೇಕಯ್ಯ? ನಗುವುದು ನುಡಿವುದು, ಶಿವಭಕ್ತರೊಡನೆ, ಸುಮ್ಮಾನಹಮ್ಮು ಬಿಮ್ಮನಿರಬೇಕಯ್ಯ.. ನಮ್ಮ ಕೂಡಲ ಸಂಗನ ಶರಣರೊಡನೆ ಮನದೆರೆದು ಮಾತನಾಡುವುದಯ್ಯಾ”
ಇನ್ನೊಂದು ವಚನ.
“ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ, ಇದಕಾರಂಜುವರು? ಇದಕಾರಳುಕುವರು?”
ಮತ್ತೊಂದು
“ಆಯುಷ್ಯತೀರಿದಲ್ಲದೆ ಮರಣವಿಲ್ಲ, ಭಾಗ್ಯತೀರಿದಲ್ಲದೆ ದಾರಿದ್ರ್ಯವಿಲ್ಲ. ಅಂಜಲೇಕೋ, ಲೋಕವಿಗರ್ಭಣೆಗೆ! ಅಳುಕಲೇಕೋ ಕೂಡಲ ಸಂಗಮದೇವ ನಿಮ್ಮಾಳಾಗಿ.”
ಬಸವಣ್ಣನವರ ಧೈರ್ಯ ಸ್ಥೆರ್ಯಗಳನ್ನು ಚಿತ್ರಿಸುವ ಈ ಮಹೋಕ್ತಿಯು ನಿಮಗೆ ನಮ್ಮ ಆಗಲಿಕೆಯನ್ನು ಸಹಿಸುವ ಶಕ್ತಿಯನ್ನು ಕೊಡಲಿ. ಈ ವಿರಹದ ಅವಧಿಯಲ್ಲಿ ಪ್ರೇಮಲೋಕದ ಸಾಯುಜ್ಯಕ್ಕಾಗಿ ತಪಸ್ಸನ್ನು ಮಾಡೋಣ.
ಹೆಚ್ಚು ಬರೆದು ನಿಮ್ಮ ಕೈಯಲ್ಲಿ ಹುಚ್ಚಿ ಎನಿಸಿಕೊಳ್ಳಲಾರೆ. ತಿಳಿದವರಿಗೆ ಮತ್ತೆಷ್ಟು ಬರೆಯಲಿ? ನನ್ನ ಬರಹದಲ್ಲಿ (ನೀವು ಕಲಿಸಿದ್ದು
ತಾನೆ?) ತಪ್ಪಿದ್ದರೆ ನೀವೇ ಕ್ಷಮಿಸಿಕೊಳ್ಳಿ.
ಈ ತಿಂಗಳ ಕೊನೆಯಲ್ಲಿ ಬರುವೆನೆಂದು ಬರೆದಿರುವಿರಿ. ಬರುವವರೆಗೂ ಬರುವರೆಂಬ ಹುಮ್ಮಸು ಇರುವುದು. ಆದರೆ ಬಂದು ಹೋದ ಮೇಲೆ ಮತ್ತೆಷ್ಟು ದಿನಕ್ಕೆ ಬರುವರೋ ಎಂಬ ಬವಣೆ ಬಯಕೆಗೆ ಈಡಾಗುವೆನು. ಆಗ ಪುನಹ ಮೊದಲಿನಿಂದ ವ್ಯಥೆಯನ್ನು ಆರಂಭಿಸಬೇಕಾಗುವುದು. ಆದ್ದರಿಂದ ಸಾಕಾಗುವಷ್ಟು ದಿನ ತಡೆದು ಬಂದರೆ ಅಷ್ಟು ದಿನಗಳವರೆಗೆ ಬರುವರೆಂಬ ಭರವಸೆಯ ಮೇಲೆ ಇರುವೆನು. ಇದರ ಮೇಲೆ ನಿಮ್ಮ ಚಿತ್ತ.
ಛೇ ಛೇ, ಇಷ್ಟೊಂದು ವೀರೋಪದೇಶ ಮಾಡಿದ ನಾನು ಇದನ್ನೇಕೆ ಬರೆದೆನೋ, ಸ್ತ್ರೀಗೆ ಶಾಪವಿದೆಯಂತೆ. ಆಕೆ ತನ್ನ ಹೃದಯದಲ್ಲಿ ಯಾವ ಗುಟ್ಟನ್ನೂ ಮುಚ್ಚಿಟ್ಟಿರಬಾರದೆಂದು. ನಾನೇನು ಮಾಡಲಿ?
ಇತಿ ನಿಮ್ಮ ಚರಣ ದಾಸಿ ಪೂರ‍್ಣಿ
ಬೆಂಗಳೂರು
೨೨-೧-೫೨
*****
















