Home / ಲೇಖನ / ಪತ್ರ / ಪೂರ‍್ಣಿಮ – ೧೯

ಪೂರ‍್ಣಿಮ – ೧೯

ಪೂರ‍್ಣಿಮೆಯ,
ಪೂರ‍್ಣಿಮಾ
ಇಂದು ನಿನಗೆ ಪತ್ರ ಬರೆಯುವ ಸರದಿ ಇನ್ನೂ ಬಂದಿಲ್ಲ. ನಾನು ಎರಡು ದಿನಗಳ ಹಿಂದೆ ಬರೆದ ಪತ್ರಕ್ಕೆ ಇನ್ನೂ ಉತ್ತರವೇ ನಿನ್ನಿಂದ ಬಂದಿಲ್ಲ. ಆದರೂ ಇಂದು ಬಂದ ಟಪಾಲಿನಲ್ಲಿ ಪತ್ರಿಕಾಲಯಕ್ಕೆಂದು ಪಾಂಡಿಚೇರಿಯ ಆಶ್ರಮದಿಂದ ಶ್ರೀ ತಾಯಿಯವರ ಸಂದೇಶವೊಂದು ಬಂದಿತು. ಅದನ್ನು ಆದರದಿಂದ ಓದಿದೆ. ಆಗ ಭಕ್ತಿಯಿಂದ ಉಕ್ಕಿಬಂದ ಭಾವನೆಗಳನ್ನು ತಡೆಯಲಾಗಲಿಲ್ಲ. ಆದ್ದರಿಂದ ‘ಲೆಟರಪ್ಯಾಡ’ನ್ನು ಮುಂದಿಟ್ಟುಕೊಂಡು ಬರೆಯಲು ಆರಂಭಿಸಿದ್ದೇನೆ.
ಮಾತೆಯವರ ಸಂದೇಶವು, ಅಲ್ಲ ಮಹರ್ಷಿ ಅಮರ ಅರವಿಂದರಲ್ಲಿ ನಿವೇದಿಸಿಕೊಂಡಿರುವ ನಿವೇದನವು ಇಂತಿದೆ. “Oh lord thou hast decided to test the quality of our faith and to pass our sincerity on thy touch-stone. Grant that we come out greater and purer from the ordeal……..The Mother. (“ಓ ಪ್ರಭು, ನಮ್ಮ ಶ್ರದ್ಧೆಯ ಸತ್ತ್ವವನ್ನು ಪರುಕಿಸಲು ಹಾಗು ನಮ್ಮ ನಿಷ್ಠೆಯನ್ನು ನಿನ್ನ ನಿಕಶಕ್ಕೆ ತಿಕ್ಕಿ ನೋಡಲು ನೀನು ನಿಶ್ಚಯಿಸಿರುವೆ. ಈ ಸತ್ವ ಪರೀಕ್ಷೆಯಲ್ಲಿ ನಾವು ಅಧಿಕಾಧಿಕ ಪಾವನರಾಗಿ ಅಧಿಕಾಧಿಕ ಘನತೆಯಿಂದ ಹೊರಬರುವಂತೆ ಅನುಗ್ರಹಿಸು- ಮಾತುಶ್ರೀ”)
ಮಾತೆಯವರು ಯಾರು, ಪಾಂಡಿಚೆರಿಯ ಅರವಿಂದಾಶ್ರಮ ಯಾವುದು ಇದನ್ನು ನೀನೇನು ಹೊಸದಾಗಿ ತಿಳಿದುಕೊಳ್ಳಬೇಕಾಗಿಲ್ಲ. ಅತಿ ಮಾನಸ ತೇಜಸ್ಸನ್ನು ಈ ಭೌತಿಕ ದೇಹದಲ್ಲಿ ತುಂಬಿತೋರಿಸಿದ ಮಹರ್ಷಿ ಅರವಿಂದರ ಬಗ್ಗೆ, ಅವರ ದೇಹಾಂತ್ಯದ ಕಾಲಕ್ಕೆ ಪಾಂಡಿಚೆರಿಗೆ ಹೋಗಿ ಬಂದು, ಘಂಟೆ ಗಟ್ಟಲೆ ನಾನು ಹೇಳಿದುದೆಲ್ಲವನ್ನೂ ಗಟ್ಟಿಯಾಗಿ ಉಸಿರು ಬಿಡದೆ ನೀನು ಕೇಳಿರುವೆ. ಪಾಂಡಿಚೆರಿಗೆ ಹೋಗಿಬಂದು ಮಾತೆಯವರ ದಿವ್ಯದರ್ಶನ ನನಗೆ ಆಗದಿದ್ದುದಕ್ಕಾಗಿ ನನ್ನ ಭಾಗ್ಯವನ್ನು ನೀನು ಮೂದಲಿಸಿದೆಯಲ್ಲವೆ? ಅರವಿಂದರ ಭೌತಿಕ ದೇಹದಲ್ಲಿ ಪ್ರಜ್ವಲಿಸುತ್ತಿದ್ದ ಆ ಅತಿಮಾನವ ತೇಜವನ್ನು ಮಾತೆಯವರು ಏಕಾಂತದಲ್ಲಿ ಕುಳಿತು ಆಸ್ವಾದಿಸಿಕೊಳ್ಳುತ್ತಿದ್ದರು. ಅರವಿಂದರ ಆತ್ಮ ಜ್ಯೋತಿಯು ಅವರಲ್ಲಿ ಆವಿರ್ಭವಿಸುತಿದ್ದಿತು. ಯಾರಿಗೂ ದರ್ಶನವಿರಲಿಲ್ಲ. ಮಾತೆಯವರು ಏಕಾಂತವಾಗಿದ ಆ ಕೊಠಡಿಯನ್ನೇ ತಿರುತಿರುಗಿ ನೋಡಿಕೊಂಡು, ಪುಣ್ಯವಿದ್ದರೆ ಮತ್ತೆ ಬರುವೆನು ಎಂದಂದುಕೊಂಡು ಬಂದೆನು. ಪುಣ್ಯ, ಸಂಸ್ಕಾರ ಇವುಗಳೇ ಮಾನವ ಜೀವನವನ್ನು ಸಂಸ್ಕರಿಸುವ ಸಂಪತ್ತು. ಇವು ನನ್ನಲ್ಲಿ ಇರುವುದೆಂದು ನಿನ್ನ ಮುಂದೆ ಹೇಳಿಕೊಳ್ಳಲು ಹಿಂಜರಿಯಬೇಕೇ? ಎಷ್ಟಾದರೂ ಕೂಡಿದವರಿಗೆ ಕೋಡಗ ಮುದ್ದು ಎಂಬಂತೆ ನಿನಗೆ ನಾನೇ ಇಂದ್ರ ಚಂದ್ರ, ನನ್ನ ಮಾತಿಗೆ ಉಳಿದವರು ಬೆಲೆ ಕೊಡಲಿ ಕೊಡದಿರಲಿ ನೀನಂತೂ ಕೊಡುವೆಯೆಂದು ಹಿಂದು ಮುಂದು ನೋಡದೆ ತೋಚಿದ್ದನ್ನೆಲ್ಲಾ ಬರೆಯುತ್ತಿರುವೆನು.
ಮಾತೆಯವರು ಮಹರ್ಷಿ ಅರವಿಂದರಲ್ಲಿ ನಿವೇದಿಸಿರುವ ಮಾತುಗಳೆಷ್ಟು ಮನನೀಯವಾಗಿವೆ? ಪರೀಕ್ಷಿಸುವ ಪ್ರಭುವಿಗೆ ಪರೀಕ್ಷೆಯಲ್ಲಿ ಯಶಸ್ವಿಯಾಗುವಂತಹ ಶಕ್ತಿಯನ್ನು ಅನುಗ್ರಹಿಸುವಂತೆ ಕೇಳಿಕೊಳ್ಳುವ ಮಾತಿನಲ್ಲಿ ಎಂತಹ ಅನನ್ಯ ಶರಣತ್ವವಿದೆ? ನಾನು ಮಂತ್ರಾಲಯಕ್ಕೆ ಹೋದಾಗ ಮಂತ್ರಸಿದ್ದರಾದ ಯೋಗಿವರೇಣ್ಯರಾದ ಶ್ರೀ ರಾಘವೇಂದ್ರಯತಿಗಳ ಬೃಂದಾವನದ ಮುಂದೆ ನಿಂತು ನಮಿಸಿದಾಗ, ತನಗೆ ತಾವೇ ನನ್ನ ಬಾಯಿ ಯಿ೦ದ,
“ಜೀವನದ ಸಮಸ್ಯೆಗಳನಿತುಮಂ 
ಭಾವಶುದ್ಧಿಯಲಿ ನಿನಗೊಪ್ಪಿಸಿಹೆನು
ಕಾವಭಾರವನು ನಿನ್ನಮಲಚಿತ್ತಕೆ ಬಿಡುತಿಹೆನು”
ಎಂದು ಶರಣತ್ವದ ಹಾಡು ಹೊರಹೊಮ್ಮಿತು. ಆದರೆ ಅ೦ದು ಪ್ರಾಕೃತ ಪ್ರಾರಬ್ಧದ ಬಾಧೆಗಳಿಗೆ ಬಸವಳಿದು ಬೆಂಡಾಗಿ ಬಡತನದ ಕಷ್ಟಗಳ ಸಮುದ್ರದಲ್ಲಿ ಮುಳುಗಿ ಹೋಗಿದ್ದಾಗ ಹುಟ್ಟಿ ಬಂದ ವೈರಾಗ್ಯ ಮಾತ್ರ ನನ್ನಲ್ಲಿತ್ತು. ಭಯಪೀಡಿತನಾಗಿ ಕೋಟಲೆಗಳ ಕಾಟಕ್ಕೆ ಹೆದರಿ
“ಆವಬಾಧೆಯ ಎನಗೀಯದೆ
ನೋವ ತಪ್ಪಿಸಿ ಕಾವುದೆಂದು 
ದೇವಗುರು ನಿನ್ನ ನೊಂದಿಸಲು ಬಂದಿಹೆನಯ್ಯ 
ಸಿದ್ಧಗುರು ಶ್ರೀ, ರಾಘವೇಂದ್ರ”
ಎಂದು ಬೇಡಿಕೊಂಡಿದ್ದೆನು.
ಈಗ ಐದು ವರ್ಷಗಳನಂತರದಲ್ಲಿ ಕಾಯಕದ ಕುಲುಮೆಯಲ್ಲಿ ಬೆಂದು ಸಾಧನೆಯ ಸುತ್ತಿಗೆಯಿಂದ ಪೆಟ್ಟು ತಿನ್ನ ತೊಡಗಿದ ನಂತರ ಗುರುದೇವನನ್ನು ಕೇಳುತ್ತಿರುವುದೇನು ಗೊತ್ತೇ ?
“ಶೋಕಕಂಜೆನು ನಾನು 
ಲೋಕಕಳುಕೆನು ನಾನು
ನಾಕ ನರಕಗಳೆಲ್ಲ ನಿನ್ನ ಮಮತೆ ಮುನಿಸಿನಲಿ”
ಎನ್ನುತ್ತಿರುವೆನಲ್ಲದೆ “ಭೋಗವೆಲ್ಲ ಹೋಗಿ ಬಿಡಲಿ! ಯೋಗಪುರುಷ ರಾಘವೇಂದ್ರರ ದಯವೊಂದಿರಲಿ” ಎಂದು ಕೇಳುತ್ತಿರುವೆನು, ನನಗೆ ಗೊತ್ತು. ಪೂರ‍‍್ಣೀ, ಇದಿಷ್ಟೇ ಗುರುರಾಯರ ಕೃಪೆಯನ್ನು ಪಡೆಯಲು ಸಾಲದೆಂಬುದು. ಅವರು ಮಾಡುವುದು ಯಾವಾಗಲೂ ಅಗ್ನಿ ಪರೀಕ್ಷೆಯೆ. ನಾನು ಕೇಳಿಕೊಳ್ಳುತ್ತಿರುವುದರಲ್ಲಿ ಶ್ರೀ ರಾಘವೇಂದ್ರರ ಕೃಪೆಯನ್ನು ಆಶಿಸುತ್ತಿರುವುದರಲ್ಲಿ ನನ್ನ ಕೌಟುಂಬಿಕ ನೆಮ್ಮದಿ, ನನ್ನ ಐಹಿಕ ಜೀವನದ ಆರಾಮ ಇದರ ಸ್ವರವಿದೆ. ಈ ದೋಷವು ನನ್ನಲ್ಲಿ ಹೋಗುವವರೆಗೆ ರಾಯರ ಕೃಪೆಯ ಮೇಲೆ ನನಗೇನು ಹಕ್ಕು? ಇಷ್ಟೆಲ್ಲವೂ ಒಮ್ಮೆಲೇ ಸಾಧಿಸಲಸಾಧ್ಯವೆಂದು ನಾನು ತಿಳಿದು ಕೊಂಡಿದ್ದರಿಂದಲೇ ರಾಯರ ಸಿರಿಚರಣದಲ್ಲಿ ಶರಣು ಶರಣು ಎನ್ನುವ ಸುಲಭೋಪಾಯವನ್ನು ನಾನು ಅನುಸರಿಸುವೆನು. ಆದರೂ ಒಮ್ಮೊಮ್ಮೆ ಲೋಕದ ಹೊಗಳಿಕೆಗೆ ಉಬ್ಬುವ ಮತ್ತು ಹೊಗಳಿಕೆಯನ್ನು ಬಯಸುವ ದೌರ್ಬಲ್ಯವು ನನ್ನೆದೆಯಲ್ಲಿ ಮೂಡಿದಾಗ, ನಾನು ಮಾಡಿದೆನು, ನಾನು ಮಾಡುತ್ತಿರುವೆನು, ನಾನು ಮಾಡಬಲ್ಲೆನು ಎಂಬ ನಾನತ್ವವು ತಲೆಯಲ್ಲಿ ತುಂಬತೊಡಗುವದು. ಆಗ ನನಗೆ ನನ್ನ ಅನನ್ಯ ಶರಣತ್ವದಲ್ಲಿ “ಸಂಕಟ ಬಂದಾಗ ವೆಂಕಟರಮಣ” ಎನ್ನುವ ಉದರವೈರಾಗ್ಯವಿದೆಯೆ ಎಂದೆನಿಸುವುದು ಇಂತಹ ತುಯ್ಯದಾಟದಲ್ಲಿ ನನ್ನ ಭಕ್ತಿ, ನನ್ನ ನಿವೇದನೆ, ಶ್ರದ್ಧೆ, ಆತ್ಮವಿಶ್ವಾಸ ಇವು ಆತ್ತಲಿತ್ತ ತೂಗಿ ತೊನೆಯುತ್ತಿರುವಾಗ ಮಾತೆಯವರ ನಿವೇದನದ ಉಕ್ತಿಯು ನನ್ನ ನಾಡಿ ನರಗಳಲ್ಲಿ ಯಾವುದೋ ಹೊಸ ಚೇತನವನ್ನು ತುಂಬಿ ನಿನಗೆ ಪತ್ರ ಬರೆಸುತ್ತಿದೆ.
ಸತ್ವ ಪರೀಕ್ಷೆಯು ಮಾನವನ ಜೀವನದ ಉದ್ದಕ್ಕೂ ಇದ್ದೇ ಇದೆ. ಶ್ರದ್ಧೆ ಬಾಳಿನ ಉಸಿರು, ನಿಷ್ಠೆಯ ಜೀವಾಳ, ಸಾಧನೆಯ ಶಕ್ತಿ, ಇದನ್ನು ಒರೆಗೆ ಹಚ್ಚಿದಾಗ ಬಂಗಾರದ ಬಣ್ಣ ತೇಲಿದರೆ ಆಗ ಜೀವನು ಮುಮುಕ್ಷುವಾಗುವನು. ಮುಮುಕ್ಷು ಮೋಕ್ಷೇಚ್ಚುಯೆಂದರ್ಥ. ಶ್ರೀ ಅರವಿಂದರ ವೇದಾಂತದಲ್ಲಿ ಮೋಕ್ಷವೆಂದರೆ, ಅಮೃತವನ್ನು ಕುಡಿದು ಅಮರರಾಗಿ ದೇವಲೋಕದಲ್ಲಿ ದೇವತೆಗಳಾಗಿ ಅಲ್ಲಿ, ಜೀವಿಸುವುದಲ್ಲ. ಇದೇ ಜೀವನದಲ್ಲಿ, ಇದೇ ದೇಹದಲ್ಲಿ, ಇದೇ ಉಸುರಿನಲ್ಲಿ ದಿವ್ಯ ಜೀವನವನ್ನು ಪಡೆಯುವುದಕ್ಕೆ ಶ್ರೀ ಅರವಿಂದರು ಮೋಕ್ಷವೆನ್ನುವರು. ಮಲದ ಕೂಪವಿದೆಂದು ದೇಹವನ್ನು ಶೋಷಿಸುವ, ಶಿಕ್ಷಿಸುವ, ವೈರಾಗ್ಯಕ್ಕೆ, ಅರವಿಂದರ ವೇದಾಂತದಲ್ಲಿ ಜಾಗವಿಲ್ಲ. ದೇಹವೇ ಮೋಕ್ಷಸಾಧನೆಯ ಮಂಟಪವೆಂಬುದು ಅವರ ಸಿದ್ಧಾಂತ, ದೇಹಧಾರಿಯಾದ ಜೀವನು ದೇಹಧಾರಿಯಾಗಿಯೇ ಜೀವಾತ್ಮವಾಗುವುದೇ ಅರವಿಂದ ಸಾಧನೆ, ಅರವಿಂದ ಸಿದ್ಧಿ,ಅರವಿಂದ ಯೋಗ, ಅರವಿಂದ ಶಕ್ತಿ.
ನಿಸರ್ಗವು ಮಾನವನ ಆಮೋದ ಪ್ರಮೋದಗಳಿಗಾಗಿ ಸೃಷ್ಟಿಸಿರುವ ಎಲ್ಲ ವಸ್ತುಗಳನ್ನೂ ಅವನು ಉಪಯೋಗಿಸಬೇಕು ಎಂದು ಹೇಳುವಾಗ ಹಾವಿನೊಡನೆ ಸರಸವಾಡಿರಿ, ಆದರೆ ಅದರ ಹಲ್ಲನ್ನು ಕಿತ್ತು ಅದರೊಂದಿಗೆ ಸರಸವಾಡಿರಿ ಎಂಬ ಎಚ್ಚರಿಕೆ ಇದರಲ್ಲಿರುವುದು. ವಿಷಯಗಳ ದಾಸ ನೀನಾಗದಿದ್ದರೆ ವಿಷಯಗಳು ನಿನ್ನ ಕಾಲಕೆಳಗಿನ ತೊತ್ತಿನಂತಿದ್ದರೆ ಆಗ ಅವುಗಳನ್ನು ಸ್ವೀಕರಿಸುವುದರಲ್ಲಿ ದೋಷವಿಲ್ಲ, ಎಂದೆನ್ನುವ ಉಪನಿಷತ್ ಸಾರವೇ ಅರವಿಂದ ಜೀವನದ ಸಿದ್ಧಿ, ಎಂಬ ನಂಬಿಗೆಯಿಂದ ನಾನು ವಿಷಯಗಳಲ್ಲಿನ ವಿಷವನ್ನು ತೆಗೆಯಲೆತ್ನಿಸಿರುವೆನು. ಈ ಸಾಧನೆಯ ಹಾದಿಯಲ್ಲಿ ಮುಗ್ಗರಿಸುವುದೇ ಆಗಿದೆ. ಆದುದರಿಂದ ನಾನು ಈ ಸತ್ಯ ಪರೀಕ್ಷೆಯಲ್ಲಿ “ಅಧಿಕಾಧಿಕ ಪಾವನನಾಗಿ ಅಧಿಕಾಧಿಕ ಘನತೆಯಿಂದ ಹೊರಬರುವಂತೆ ಅನುಗ್ರಹಿಸು” ಎಂದು ಗುರುರಾಯರಲ್ಲಿ ಮೊರೆಯಿಡು. ನಿನ್ನ ಕೂಗು ಗುರುದೇವನ ಕಿವಿಗೆ ಬಹು ಹತ್ತಿರ. ನೀನು ನಿನಗಾಗಿ ಏನನ್ನು ಕೇಳದೆ ನನ್ನ ಸಲುವಾಗಿ ಪ್ರಾರ್ಥಿಸುತ್ತಿರುವೆಯಾದ್ದರಿಂದ ಇದರಲ್ಲಿ ಅಷ್ಟು ಸ್ವಾರ್ಥವಿಲ್ಲವೆಂದು ರಾಯರು ಬೇಗ ಅನುಗ್ರಹಿಸಿದರೂ ಅನುಗ್ರಹಿಸಬಹುದು.
ಈ ಪತ್ರವನ್ನು ಬರೆಯಲು ಪ್ರೇರೇಪಿಸಿದ ಮಾತೆಯ ಉಕ್ತಿಯಲ್ಲಿರುವ ಶಕ್ತಿಗೂ ತಲೆಬಾಗಿ ನಮಿಸು. ಜಗದಾದಿಶಕ್ತಿಯೇ ಅರವಿಂದಾಶ್ರಮದ ಮಾತೆಯೆಂಬುದು ನನ್ನ ಸ್ವಂತ ವಿಶ್ವಾಸ. ಆ ಶಕ್ತಿಯ ಸಾಕಾರ ಸುಂದರ ರೂಪವನ್ನು ನೋಡುವ ಭಾಗ್ಯವು ನನಗೂ, ನಿನಗೂ ಜೊತೆಯಲ್ಲಿಯೇ ದೊರೆಯಲೆಂದು ಹಾರೈಸುವೆನು.
ನಿನ್ನ ಉತ್ತರ ಬರುವವರೆಗೂ ನಾನು ಪತ್ರ ಬರೆಯುವುದಿಲ್ಲ. ಈ ಸಾರಿ ಅದೇಕೋ ನಿನ್ನಿಂದ ಎನೋ ಹೊಸದನ್ನು ಆಶಿಸುತ್ತಿರುವನು. ಅದೇನು ಮಹಾರಾಯತಿ ಆ ಹೊಸದು? ಅಳಿಸುವುದನ್ನು ಬರೆಯಬೇಡ. ಅರಳಿಸುವುದನ್ನು ಬೇಕಾದಷ್ಟನ್ನು ಬರೆ, ನೀನೇ ಅಂದಿರುವೆ ನನ್ನದು ಹೆಣ್ಣಿನ ಹೃಯಯವೆಂದು.
ಇತಿ ನಿನ್ನ ಉತ್ತರಾಭಿಲಾಷಿ
*****
Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...