ಅಪ್ಪನು ಕೇಳಿದ “ಒಡೆದವರಾರು
ಹಳೆ ಕಂದೀಲಿನ ಹೊಸ ಕಾಜು?”
ಆಂದಳು ಅವ್ವನು “ನಾನೇನಲ್ಲ
ಒಡೆದಿ ರಬಹುದು ಮಗು, ರಾಜು”
ಅಪ್ಪನು ಕೇಳಿದ ನನ್ನನು “ಏಕೆ
ಕಾಜನು ಒಡೆದದ್ದು?”
“ನಾನೇನಲ್ಲಾ” ಅಂದರು ಬಿದ್ದಿತು
ಬೆನ್ನಿಗೆ ಮೂರ್ ಗುದ್ದು.
“ಸುಳ್ಳನು ಹೇಳುವಿಯೇನೋ?” ಎಂದು
ಅಪ್ಪನು ಕಿವಿಗಳ ಹಿಂಡಿದನು
“ಹೌದೂ ಅನ್ನು, ಸತ್ಯವ ಬೊಗುಳು”
ಅಂದಳು ಅವ್ವನು ಕಂಡಿದನು.
ಅವ್ವನ ಮಾತಿಗೆ “ಹೌದೂ” ಅಂದೆ
“ಯಾತಕೆ ಒಡೆದೆ?” ಎನ್ನುತ ತಂದೆ
ಕಡಿಕಡಿದನು ಹಲ್ಲ.
ಕಾಜನು ಒಡೆದವ ನಾನೇನಲ್ಲ
ದೇವರ ಆಣೆ: ಹೇಳೆನು ಸುಳ್ಳ
ಅವ್ವನೆ ಕಾಜನು ಒಡೆದಿರಬಹುದೇ?
ಅವಳಿಗೆ ಸಹ ಅವ ಹೊಡೆದಿರಬಹುದೇ!
ಏನೂ ಗೊತ್ತಿಲ್ಲ
ನನಗೆ ಏನೂ ಗೊತ್ತಿಲ್ಲ
*****

















