Home / ಲೇಖನ / ಪತ್ರ / ಪೂರ‍್ಣಿಮ – ೨೧

ಪೂರ‍್ಣಿಮ – ೨೧

ಪೂರ‍್ಣಿಮೆ,
ಪ್ರತ್ಯುತ್ತರ ಬರೆಯಲಾರದಂತಹ ಪತ್ರವನ್ನು ಬರೆದು ಬಿಟ್ಟರುವಿ. ನನ್ನ ಗುಟ್ಟನ್ನು ಬಯಲು ಮಾಡಿರುವಿ. ನೀನು ಏನು ಬರೆದಿರುವಿಯೋ, ಅದು ನನ್ನ ನಿಜಪರಿಸ್ಥಿತಿಯ ಪೂರ್ಣ ಚಿತ್ರವಾಗಿದೆ. ನಿನಗೂ ಇದೇ ವಿಚಾರದ ಮಂಥನವಾಗುತ್ತಿರಬಹುದು. ಆದರೂ ನಿನ್ನ ಅಗಲಿಕೆ, ನಿನ್ನ ಬಳಲಿಕೆ, ನಿನ್ನ ಏಕಾಕಿತನ, ಇವನ್ನು ನೆನಸಿಕೊಂಡಾಗ ಎದೆಯ ಧೈರ್ಯವೆಲ್ಲವೂ ಕರಗಿ ಹೋಗುವುದು. ಹೀಗೆ ಕರಗಿ ಹೋದಾಗ ಮಾತ್ರ ನಾನು ಜಗತ್ತನ್ನು ನೋಡಿ ಹುಲಿಯನ್ನು ಕಂಡ ಹುಲ್ಲೆಯಂತೆ ಹೆದರಿಬಿಡುವೆನು. ಅಂತಹ ಸಮಯದಲ್ಲಿ ನೀನೇ ಬರೆದ ಈ ಪತ್ರಗಳನ್ನು ಓದಿದ ಮೇಲೆ ನನಗೆ ಬುದ್ಧಿ ಹೇಳಲಾರಂಭಿಸಿದಂತೆ ಭಾಸವಾಗುತ್ತದೆ.
ಇದು ಬುದ್ಧಿವಾದವಲ್ಲ, ಧೈರ್ಯ ಸಂಜೀವಿನಿ. ನೀನು ಅಬಲೆಯೋ ಸಬಲೆಯೋ ಈ ಪತ್ರವೇ ಹೇಳುತ್ತಿರುವುದು. ಇಷ್ಟೊಂದು ಧೈರ್ಯ ನಿನ್ನಲ್ಲಿ ಬಂದಿರುವಾಗ ನನ್ನ ಅಗಲಿಕೆಯನ್ನು ಸಂಯಮದಿಂದ ಇಂತು ಸಹಿಸಿಕೊಳ್ಳುವುದಾದರೆ ನಿಜವಾಗಿಯೂ ನನ್ನ ಜೀವನಕ್ಕೆ ನೀನೇ ಧೈರ್ಯ ವಾಹಿನಿ.
ಪೂರ‍‍್ಣೀ, ನನ್ನ ಜೀವನದ ಪೂರ‍‍್ಣತೆಗಾಗಿಯೇ ಪೂರ‍‍್ಣಿಮೆಯಾಗಿ ನನ್ನ ಕೈ ಹಿಡಿದೆಯೆಂದು ನಿನ್ನನ್ನು ಹೊಗಳಿದರೆ ನೀನು ಉಬ್ಬಿ ಹೋಗಬೇಡ, ಇರುವ ಮಾತು ಇದ್ದಂತೆ ಹೇಳಿದರೆ ಉಬ್ಬಬೇಕೆ?
ನೀನು ನಿನ್ನ ಪತ್ರದಲ್ಲಿ ಆರಿಸಿ ಬರೆದಿರುವ ಬಸವಣ್ಣನವರ ವಚನಾಮೃತವು ನನ್ನ ಎಡೆತನವಲ್ಲಾ ಕರಗಿಸಹತ್ತಿದೆ. “ಪ್ರೇಮ ಕರ್ತವ್ಯದ ದಾರಿಯ ಬಂಡೆಗಲ್ಲಾಗಿರಬಾರದು. ಕರ್ತವ್ಯಕ್ಕೆ ಶಕ್ತಿ ವಾಹಿನಿಯಾಗಿರ ಬೇಕು” ಎಂದೆನ್ನುವಂತೆ ನೀನು ನನ್ನ ಈ ಕರ್ಮಕ್ಷೇತ್ರದಲ್ಲಿ ಹೆಗಲ ಸರಿಸಮ ನಿಂತು ಹೆಗಲುಬ್ಬಿಸುವುದಕ್ಕೆ ತೊಡಗಿದ ಮೇಲೆ ನನಗೇನು ಕಡಮೆ? ಬಹುಶಃ ಗುರುರಾಯರು ನನ್ನ ಸಂಯಮವನ್ನು ಒರೆಗೆ ಹಚ್ಚಲೆಂದೇ ಅಗಲಿಕೆಯ ಅಧ್ಯಾಯವನ್ನು ಮುಗಿಸಿಲ್ಲ. ನಾನಿನ್ನು ಅಂಜುವುದಿಲ್ಲ. ಭಕ್ತ ಕಂಪಿತರಾದ ಗುರುರಾಯರ ಮುಂದೆ ಕೈ ಮುಗಿದು ಕೂಡಲ ಸಂಗಮೇಶ್ವರನ ಮುಂದೆ ಕೈ ಮುಗಿದು ಬಸವಣ್ಣನವರು ಅಂದ ಮಾತನ್ನೇ ಪುನರುಚ್ಚರಿಸಿ ಅದನ್ನೆ ನನ್ನ ಧ್ಯಾನಮಂತ್ರವನ್ನಾಗಿ ಮಾಡಿಕೊಂಡು ನನ್ನ ಜೀವನದ ಸಿಹಿ ಕಹಿಯನ್ನು ಸೈರಿಸುವೆನು. ನೀನು ಧೈರ್ಯಗಟ್ಟಲ್ಲಿ ಮಾತ್ರ ನನ್ನ ಧೈರ್ಯದಿಂದೇನು ಫಲ? ನೀನು ಬೆನ್ನು ಕೊಡದಿದ್ದರೆ, ನನಗೆ ಬೇರೆಯವರು ಹೆಗಲ
ಮೇಲೆತ್ತಿ ಕುಣಿದಾಡಿದರೇನು ಫಲ? ನೀನೂ ಸಹ ಶ್ರೀ ರಾಘವೇಂದ್ರ ಯತಿಗಳ ಮುಂದೆ ಈ ಕೆಳಗಿನಂತೆ ದಿನದಿನವೂ ಪ್ರಾರ್ಥಿಸುತ್ತಿರು.
“ಕಾಯದ ಕಳವಳಕಂಜಿ 
ಕಾಯೋ ಎನ್ನನು ಜೀವನೋ 
ಪಾಯಕ್ಕಂಜಿ ಈಯಯ ಎನ್ನನು.”
“ಯದ್ಭಾವಂ ತದ್ಭವತಿ”
“ಉರಿಬರಲಿ, ಸಿರಿಬರಲಿ; ಬೇಕು ಬೇಡೆನ್ನೆನು 
ಆನು ನಿಮ್ಮ ಹಾರೆನು- ಮಾನವರ ಬೇಡೆನು. 
ಆಣೆ, ನಿಮ್ಮಾಣೆ ಕೂಡಲ ಸಂಗಮದೇವ.”
ಮಂತ್ರಾಲಯದ ಗುರುರಾಯರು ದಯಾಘನರು. ಅಗ್ನಿಯಲ್ಲಿ ಹಾಕಿ ಸುಟ್ಟರೂ ಮೈ ಬೇಯದಂತೆ ನೋಡಿಕೊಳ್ಳುವರು. ಇಲ್ಲವಾದರೆ ನಾನು ಜಗತ್ತಿನ ಕಣ್ಣಿನಲ್ಲಿ ತೀರ ಅಪರಾಧಿಯಾಗಿ ಮೋಸಗಾರನಾಗಿ, ದ್ರೋಹಿಯಾಗಿ ಕಂಡು ಕಂಡವರಿಗೆಲ್ಲ ಹೆದರಿ ದೇಶಭ್ರಷ್ಟನಾದಾಗ ನನ್ನನ್ನು ತಮ್ಮ ಬೃಂದಾವನದೆಡೆಗೆ ಬರುವಂತೆ ಪ್ರೇರೇಪಿಸಿ ಅಲ್ಲಿನ ಪೂಜ್ಯ ತುಂಗಭದ್ರೆಯಲ್ಲಿ ನನ್ನ ಪಾಪದ ಹೊರೆಯನ್ನೆಲ್ಲ ತೊಳೆಸುತ್ತಿದ್ದರೆ?
ಎಷ್ಟೊಂದು ದಯೆ ತೋರಿಸಿದರು? ಎಂತೆಂತಹ ಮಹಾಪಾಪಗಳನ್ನು ಕ್ಷಮಿಸಿದರು? ಜೀವನದ ಪರಿಶುದ್ಧತೆಗೆ ಎಂತಹ ಅವಕಾಶ ಕೊಟ್ಟರು ಅವರು? ಆದರೂ ಈ ಅಗಲಿಕೆಯನ್ನೇಕೆ ಕೊಟ್ಟಿರುವೆ ಎಂದೆನ್ನುವೆ ಏನು? ಅದಕ್ಕೆ ಉತ್ತರವೇನು ಗೊತ್ತೆ? ಅಷ್ಟು ಪಾಪಕ್ಕೆ ಇದೊಂದಾದರೂ ಶಿಕ್ಷೆ ಬೇಡವ ಪೂರ‍್ಣಿ? ಇದನ್ನು ಶಿಕ್ಷೆಯೆಂದು ನಾನು ಇನ್ನು ಮುಂದೆ ಕರೆಯುವುದಿಲ್ಲ. ಆ ಗುರುವಿನ ದೀಕ್ಷೆಯೆಂದು ಕರೆದುಕೊಳ್ಳುವೆನು.
ನೀನಿಂದು ಬರೆದಿರುವ ಪತ್ರವು ತುಳಸೀದಾಸನಿಗೆ ಮಮತಾದೇವಿಯು ಮಾಡಿದ ಉಪದೇಶದಂತಿದೆ. ಇದನ್ನು ಅನುದಿನ ಮನನ ಮಾಡಿ ದೀಕ್ಷೆಯಲ್ಲಿ ಯಶಸ್ವಿಯಾಗುವೆನು. ನೀನು ಅನುಗ್ರಹಿಸು; ಆಶೀರ್ವದಿಸು. ನಾನು ಸ್ತ್ರೀಯನ್ನು ಒಂದು ಶಕ್ತಿಯೆಂದೇ ಭಾವಿಸಿಕೊಂಡಿರುವೆನಲ್ಲವೆ? ನಿನಗೆ ನನ್ನನ್ನು ಹರಸುವ ಅಧಿಕಾರವು ಹೆಂಡತಿಯೆಂಬ ಸ್ಥಾನಮಾನದಿಂದ ಇಲ್ಲವೆಂದು ಅವರಿವರು ವಾದಿಸಿದರೂ ವಾದಿಸಲಿ, ಶಕ್ತಿಸ್ವರೂಪಿಣಿಯಾಗಿ, ತಾಯಾಗಿ, ಹರಸಬಲ್ಲ ಅಧಿಕಾರ ನಿನಗೆ ಇದೆ ಎಂದು ನಾನು ಸಮರ್ಥಿಸಿಕೊಳ್ಳುವೆನು.
ಇಂತಹ ಪತ್ರಗಳನ್ನು ಇನ್ನು ಮುಂದೆ ಬರೆಯುತ್ತಿರು. ಇದುವರೆಗೆ ನನ್ನನ್ನು ಸಂಸ್ಕರಿಸಿದವು ನನ್ನ ಪತ್ರಗಳು; ಇನ್ನು ಮುಂದೆ ನಿನ್ನ ಪತ್ರಗಳು ನನ್ನನ್ನು ಸಂಸ್ಕರಿಸಲಿ.
ನಮಸ್ತೆ, ಪೂರ‍್ಣಿಮಾ,
ಇತಿ ನಿನ್ನ ಒಡನಾಡಿ,
*****
Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...