Home / ಕವನ / ಕವಿತೆ / ಇದಾವ ಶಕ್ತಿ?

ಇದಾವ ಶಕ್ತಿ?

ಇದಾವ ಶಕ್ತಿಯಿಂತು ನನ್ನ
ನಿನ್ನೆಡೆಗೆ ಸೆಳೆವುದು?
ಇದೇಕೆ ನಿನ್ನ ಕಂಡರಿಂತು
ದುಡಿಯೊಲೆದೆಯು ಬಡಿವುದು?
ಮಧುರ ದುಃಖ ಸುಳಿವುದು?

ಪಾಶವೀ ಕಾಮವೆನಲೆ?
ರಸವ ಹೀರಿ ಸಿಪ್ಪೆಯುಗುಳಿ ಬಿಸುಡುವಂತೆ ಕಬ್ಬನು
ಹೆಣ್ಣ ಹೀರ್ವ ಕಾಮಿ ಕೂಡ ನೀ ಕುರೂಪಿ ಎಂಬನು!
ಸ್ಫಟಿಕ ಸ್ವಚ್ಛ ಪ್ರೇಮವೆನಲೆ?
ತುಟಿಗೆ ತುಟಿಯ ಎದೆಗೆ ಎದೆಯ ಬೆಸೆದು ನಿನ್ನ ತನುವೊಳು
ನನ್ನ ಕರಗಿಪುತ್ಕಟೇಚ್ಛೆ ಮೊಳಗುತಿಹುದು ಎದೆಯೊಳು
ಅಂತಾದೊಡೆ,
ಇದಾವ ಶಕ್ತಿಯಿಂತು ನನ್ನ
ನಿನ್ನೆಡೆಗೆ ಸೆಳೆವುದು?
ಇದೇಕೆ ನಿನ್ನ ಕಂಡರಿಂತು
ದುಡಿಯೊಲೆದೆಯು ಬಡಿವುದು?
ಮಧುರ ದುಃಖ ಸುಳಿವುದು?

ನಿನ್ನ ನಡೆಯು ದೀಪದ ಕುಡಿಯಂತೆ ಬಾಗಿ ಬಳುಕದು!
ನಿನ್ನ ಜಡೆಯು ನಾಗರವನು ಎಳ್ಳನಿತೂ ಹೋಲದು!

ಹಾಲುಕೆನೆಯ ನಗುವ ಬಣ್ಣ ನಿನ್ನ ಪಾಲಿಗಿಲ್ಲವು!
ವಿಶಾಲ ನೇತ್ರಗಳನು ಪಡೆವ ಪುಣ್ಯ ನಿನ್ನದಲ್ಲವು!

ಭಾವಿಸೆ ನೀ ಕುಬ್ಜೆ; ಬಗ್ಗ ಬೇಕು ತುಟಿಯ ಸಂಧಿಸೆ
ತಿರೆಯ ಮರೆತು ನಿನ್ನ ತೋಳ ನಡುವೆ ಹಿಡಿದು ಬಂಧಿಸೆ!

“ನಿನ್ನ ಕೆನ್ನೆ ದಪ್ಪವೆಂದು ಜರೆವ ಜನರು ಜರೆಯಲಿ!
ನನಗೆ ಅವೇ ರಸಪೂರಿಯ ಮಾವಿನ ಫಲ ತಿರೆಯಲಿ!

“ದಿಟವು ನಿನಗೆ ದಪ್ಪ ತುಟಿಯು, ನಾನೆ ಅದನು ಕಾಂಬೆನು!
ತುಟಿಯಿಲ್ಲದ ಬಾಯಿಗಿಂತ ಇದೇ ಮೇಲು ಎಂಬೆನು!

“ಕಿರಿದಾದರು ನಿನ್ನ ನೇತ್ರ ಅದರ ಕಾಂತಿಯೆಂಥದು!
ಮೋಟಾದರು ನಿನ್ನ ಜಡೆಯು ಅದರ ಲಾಸ್ಯವೆಂಥದು!”

ಎನುತಲೆನ್ನ ಬುದ್ಧಿಯನ್ನೆ ಗಾಳಿಯೊಳಗೆ ತೂರುತ
ಇದಾವ ಶಕ್ತಿಯಿಂತು ನನ್ನ
ನಿನ್ನೆಡೆಗೆ ಸೆಳೆವುದು?
ಇದೇಕೆ ನಿನ್ನ ಕಂಡರಿಂತು
ದುಡಿಯೊಲೆದೆಯು ಬಡಿವುದು?
ಮಧುರ ದುಃಖ ಸುಳಿವುದು?

ಇದೆಕೊ ನೋಡು! ಈ ಹೆಣ್ಣು! ಕಡೆದ ಬೊಂಬೆಯೇ ಸರಿ!
ಇಂಥ ಕಣ್ಣು ಮೂಗು, ತುಟಿಯು!- ಚೆಲುವಿಗು ಸಹ ಅಚ್ಚರಿ!

ಆದರೇಕೊ ನನ್ನನಿವಳ ದೇಹ ಸೆಳೆಯಲೊಲ್ಲದು!
ನಿನ್ನಲಿರುವಪೂರ್ವ ಜೀನಕಳೆಯೆ ಇಲ್ಲಿ ಕಾಣದು!

ನಗಲಿ ಜಗ, ಮುರಿದು ಮೊಗ
ತಿರೆಯೆಲ್ಲವು ‘ಗಿಡ್ಡಿ’ ಯೆಂದಸಡ್ಡೆಗೈವ ನಿನ್ನೆಡೆ
ಇದಾವ ಶಕ್ತಿಯಿಂತು ನನ್ನ
ನೊಂದೆಸಮನೆ ಸೆಳೆವುದು?
ಇದೇಕೆ ನಿನ್ನ ಕಂಡರಿಂತು
ದುಡಿಯೊಲೆದೆಯು ಬಡಿವುದು?
ಮಧುರ ದುಃಖ ಸುಳಿವುದು?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...