“ನೀವು ಹೀಗೆ ಮಾಡ್ಬಾರ್ದಿತ್ತು” ಎಂದರು ಶಾನುಭೋಗರು.
“ಈ ಹುಡ್ಗುರಿಗೆಲ್ಲ ಹೆದ್ರಿಕಂಡಿರೋಕ್ಕಾಗ್ತೈತಾ ಯಾವಾಗ್ಲು? ನೀವೊಳ್ಳೆ ಚನ್ನಾಗೇಳ್ತೀರಿ ಬಿಡ್‌ಬಿಡ್ರಿ ಅತ್ತ” – ಸಂಗಪ್ಪ ಕಡ್ಡಿ ತುಂಡಾದಂತೆ ಹೇಳಿದ; “ಬಣ್ಣ ಒರೆಸ್ಕೊಳ್ಳೋಕೆ ಅದೆಷ್ಟು ಕಷ್ಟಬಿದ್ದಿದ್ದೀನಿ. ಅದೆಷ್ಟು ಕೊಬ್ಬರಿ ಎಣ್ಣೆ ಖರ್ಚು ಮಾಡಿದ್ದೀನಿ ಅವ್ರಿಗೇನಾದ್ರೂ ಜ್ಞಾನ ಮತಿ ಐತಾ?”
“ಅದಿರ್ಲಿ ಸಾತ್ಕಾರೆ, ಯಾವಾಗ್ಲೂ ಮೊಳಕೇಲಿ ಚಿವುಟಿ ಹಾಕ್ಬೇಕು. ಉಗುರಿನಲ್ಲಿ ಹೋಗುದಿಕ್ಕೆ ಕೊಡಲಿ ಯಾಕೇಂತ? ಈಗ್ಲೇ ಉಪಾಯವಾಗಿ…”
“ಅದೇನ್ರಿ ನಿಮ್ಮ ಉಪಾಯ?”
“ಮೊದಲ್ನೆ ಪ್ರಯತ್ನಾನೆ ಹಿಂಗಾಯ್ತಲ್ಲ?”
“ಅದಕ್ ನನ್ನ ಎಕ್ಕಡ ಬಡುದ್ರು. ಇನ್ನೇನಾರ ಇದ್ರೆ ಹೇಳ್ರಿ; ಇಲ್ಲಿದ್ರೆ ಹೋಗ್ರಿ. ಸರ್ಯಾಗೊಂದು ಪದ್ಯ ಬರ್ಯೋಕಾಗ್ಲಿಲ್ಲ; ಸುಮ್ಕೆ ಮಾತಾಡ್ತೀರಿ. ಮೇಧಾವಿ ಥರಾ.”
“ಮೇಧಾವಿಗಳು ಆತುರದಲ್ಲಿ ಪದ್ಯ ಬರೆಯೊಲ್ಲ ಸಾವ್ಕಾರ್ರೆ.”
“ಅದಿರ್ಲಿ, ಏನ್ ಹೇಳೋಕ್ ಬಂದ್ರಿ, ಅದನ್ನ ಮೊದ್ಲು ಮುಗ್ಸಿ.”
“ನೋಡಿ ನೀವು ಅವರ ತಂಟೆಗೆ ಹೋಗೋದ್ ಬೇಡ. ಅವರು ಬಿಡದಂಗೆ ಒಂದಷ್ಟು ಒಳ್ಳೆ ಕೆಲ್ಸ ಅನ್ನೋ ಥರಾ ಮಾಡ್ಬೇಕು. ನಿಮ್ಮ ಬಲಾನೂ ತೋರುಸ್ಬೇಕು. ನಿಮಗೇನು ಕಡ್ಮೆ ಜನ ಗೊತ್ತವ್ರ ಲೀಡರುಗಳು!…”
“ನಾನೇ ಒಬ್ಬ ಲೀಡರ್ರಲ್ಲವೇನ್ರಿ? ಏನ್ ಮಾತಾಡ್ತೀರ ನೀವು? ಸುತ್ತೇಳಳ್ಳಿ ಓಟುದಾರ್ರೆಲ್ಲ ನನ್‌ಕೈನಾಗವ್ರೆ ಅಂತ ಚೀಪ್ ಮಿನಿಸ್ಟ್ರೀಗೂ ಗೊತ್ತೈತೆ”.
“ಅದ್ಸರಿ, ಅನ್ನಿ. ಅದುನ್ನೆಲ್ಲ ಬಳಸ್ಕೋಬೇಕು. ಜನಕ್ಕೆ ಸಹಾಯ ಮಾಡಿದಂಗೆ ಕಾಣ್ಬೇಕು. ಅವಿವ್ರನ್ನ ಕರೆಸಿ ನಿಮ್ಮ ಬಲಾನೂ ಪ್ರದರ್ಶನ ಮಾಡ್ಬೇಕು. ಈಗಿನ ಕಾಲದ ಹುಡುಗ್ರು ಬಾಯಿ ಬಿಡದೆ ಇರೋ ಹಾಗೆ, ಬಿಟ್ಟೂ ಜನ ನಂಬದ ಇರೋ ಹಾಗೆ, ಒಟ್ಟಿನಲ್ಲಿ ಕೆಲ್ಸ ನಡೀಬೇಕು.”
“ಅದು ನಂಗೂ ಅರ್ಥ ಆಗೈತ್ರಿ. ರಾತ್ರಿ ಬಣ್ಣ ಒರೆಸ್ಕೊಳ್ತಾನೆ ಒಂದಷ್ಟು ಯೋಚ್ನೆ ಮಾಡಿದ್ದೀನಿ. ಈಗ ಹೊಸ ಹುಡುಗ್ರು ದೇಶ್ದಾಗೆಲ್ಲ ಹರಿಜನ – ಗಿರಿಜನ ಅಂತ ಅರಚಿಕೊಳ್ತಾವೆ ನೋಡಿ; ನಾನು ನಮ್ಮೂರ್ನಾಗೆ ಒಂದು ಹೊಸ ದೇವಸ್ಥಾನ ಕಟ್ಟುಸ್ತೀನಿ. ಗೋಂದಯ್ಯನವರು ನಮ್ಮ ಡೆಲ್ಲಿ ದರಬಾರಿಗೆ ಗೋಂದಾಗಿ ಅಂಟಿಸಲ್ಪಟ್ಟಿದ್ದಾರೆ. ಅವರನ್ನು
ಅತಿಥಿಯಾಗಿ ಕರೀತೀನಿ.”
ಸಂಗಪ್ಪ ಗೋಂದಯ್ಯ ಅವರನ್ನೇ ಕರೆದುಬಂದ. ಗೋಂದಯ್ಯನವರು “ತುಂಬಾ ಅದ್ಭುತವಾದ ವರ್ಕ್ ಮಾಡ್ತ ಇದ್ದೀರಿ. ನಿಮ್ಮ ಮುಂದಿನ ವರ್ಷ ಒಂದು ಯಾವ್ದಾದ್ರೂ ಅವಾರ್ಡು ಕೊಡಿಸ್ಬೇಕು. ಇಂಥ ಗ್ರೇಟ್ ವರ್ಕ್ ಮಾಡೋರ್ಗೆ ಕೊಡ್ದೆ ಇನ್ನು ಯಾರಿಗೆ ಕೊಡಾಕಾಗುತ್ತೆ ಹೇಳಿ ಮತ್ತೆ?” ಎಂದಾಗ ಗೋಣು ಹಾಕಿದ. “ನಾನ್ ಬರ್ತೀನಿ. ಈ ವಿಚಾರ ನಿಮ್ಮ ಜಿಲ್ಲೆ ಆಫೀಸರುಗಳಿಗೆಲ್ಲ ಹೋಗುತ್ತೆ. ಚೆನ್ನಾಗಿ ವ್ಯವಸ್ಥೆ ಮಾಡಿ ಅಂಡರ್‌ಸ್ಟಾಂಡ್?” ಎಂದರು.
“ಅದೆಲ್ಲಿ ಸಿಗುತ್ತೆ ಸಾರ್ ಅದೆಷ್ಟೇ ಖರ್ಚಾದ್ರೂ ವ್ಯವಸ್ಥೆ ಮಾಡ್ತೀನಿ.” – ಸಂಗಪ್ಪ ಸಡನ್ನಾಗಿ ವಿನಮ್ರ ಭಾವದಿಂದ ಕೇಳಿದ.
“ಯಾವುದ್ರಿ ?”
“ಅದೇ ಸಾರ್, ಅದೆಂಥದೂ ಸ್ಟಾಂಡು”
“ನಿಮ್ಮ ತಲೇಗೆ ಚಕ್ಕೊಂಡ್ರು, ಅರ್ಥವಾಯ್ತಾ ಅಂದೆ; ಅಷ್ಟೆ.”
ಯಾರ್ ಸ್ವಾಮಿ ನನ್ ತಲೇಗ್ ಚಚ್ಕೊಂಡಿದ್ದು?
“ರೀ ಏನಾಗಿದೆ ನಿಮ್ಗೆ? ನಾನು ಹೇಳಿದ್ದಿಷ್ಟು: ಎಲ್ಲಾ ಆಫೀಸರ್‌ಗಳಿಗೂ ಸುದ್ದಿ ಹೋಗುತ್ತೆ. ದೇಶದ ದೊಡ್ಡ ನಾಯಕರ ಜಯಂತಿ ಮಾಡ್ತಾ ಇದ್ದೀರಿ. ಚೆನ್ನಾಗಿ ವ್ಯವಸ್ಥೆ ಮಾಡಿ. ನಾವು ನಾಯಕರು, ಆಫೀಸರ್‌ಗಳು ಎಲ್ಲಾ ಬಂದಾಗ ವ್ಯವಸ್ಥೆ ಸರ್ಯಾಗಿ ಆಗ್ಬೇಕು ತಾನೆ? ತಿಳೀತಾ”
“ತಿಳೀತು ಸಾರ್, ತಪ್ಪದೆ ಬರ್ಬೇಕು ನೀವು ಮಾತ್ರ ನಮ್ಮ ಸುತ್ತ ಮುತ್ತ ನಾನೇ ನಿಮ್ಮ ಪಾರ್ಟಿಗೆ ಓಟು ಹಾಕ್ಸಿದ್ದೀನಿ.”
“ಬಂದೇ ಬರ್ತೀನಿ. ಅಂದ ಹಾಗೆ ವಿಗ್ರಹ ಚೆನ್ನಾಗಿ ಮಾಡ್ಸಿದ್ದೀರಿ ತಾನೆ?”
“ಫಸ್ಟ್‌ಕ್ಲಾಸಾಗೈತೆ ಸಾರ್. ನೋಡಿದ್ರೆ ಥೇಟ್ ಮಹಾತ್ಮಗಾಂಧಿ ಎದ್ದು ಬಂದಂಗೈತೆ.”
“ಮಹಾತ್ಮಾಗಾಂಧಿ ಥರಾ ಯಾಕ್ರಿ ಕಾಣ್ಸುತ್ತೆ?”
ಸಂಗಪ್ಪನಿಗೆ ಏನು ಉತ್ತರ ಕೊಡಬೇಕೆಂದು ತಿಳೀದೆ ಸುಮ್ನೆ ಕೂತಿದ್ದ. ಆಮೇಲೆ ಗೋಂದಯ್ಯನವರೇ ಹೇಳಿದರು: “ಹೂಂ, ಹೋಗಿ, ಹೇಗೊ ಬಿಡುವು ಮಾಡ್ಕೊಂಡ್ ಬರ್ತೀನಿ.”
“ಬಂದೇ ಬರ್ಬೇಕು ಸಾರ್. ಜನ ನಿಮ್ಮನ್ನ ನೋಡೋಕೆ ಅಂತ ಕಾದ್ ನಿಂತಿದ್ದಾರೆ” ಎಂದು ಜ್ಞಾಪಿಸಿ ಸಂಗಪ್ಪ ಊರಿಗೆ ಬಂದ.
ಗಾಂಧೀ ಗುಡಿಯ ಪ್ರಾರಂಭೋತ್ಸವದ ಸುದ್ದಿ ನಾಡಿನ ಪತ್ರಿಕೆಗಳಲ್ಲೆಲ್ಲ ಬಂತು. ಸುದ್ದಿಗಾರರು, ಆಸಕ್ತರು, ಯಾರ್ಯಾರೊ ಸಾವಿರಾರು ಜನ ನೆರೆದರು. ಸಂಗಪ್ಪನ ಸಡಗರ ಹೇಳತೀರದು. ಇದನ್ನೆಲ್ಲ ರಾಮೂ ಬಳಗ ಸುಮ್ನೆ ಗಮನಿಸ್ತಾ ಇತ್ತು.
ಗೋಂದಯ್ಯನವರು ದೊಡ್ಡದಾಗೆ ಭಾಷಣ ಮಾಡಿದರು. ಅದಕ್ಕೆ ಮುಂಚೆ ಹರಿಜನ ಹನುಮಂತ ಪೂಜೆ ಮಾಡಿದ. ಫೋಟೋಗಳು ಕ್ಲಿಕ್ಕೆಂದವು. ಇವರ ಭಾಷಣದ ಭಾವಚಿತ್ರವೂ ಕ್ಯಾಮೆರಾ ಸೇರಿತು. ಭಾಷಣ ಮುಗಿಸಿ ಕುಳಿತಾಗ ಅವರಿಗೆ ಚೀಟಿಯೊಂದು ಬಂತು. ಅದರಲ್ಲಿ ಹೀಗಿತ್ತು:
“ಗಾಂಧೀಜಿಯವರು ಮೊದಲಿಗೆ ಜಾತಿವಿನಾಶ ಸಾಧ್ಯವಿಲ್ಲವೆಂದು ಭಾವಿಸಿದ್ದರು. ಈ ಕಡೆ ಹೊಲೆ ಮಾದಿಗರನ್ನು ಹರಿಜನ ಎಂದು ಹೆಸರಿಸಿದರು. ಇವೆಲ್ಲ ನಿಮಗೆ ಏನನ್ನಿಸುತ್ತೆ? ಏನೊ ಒಂದು ಉತ್ತರ ಹೇಳದೆ ಗಂಭೀರವಾಗಿ ಚರ್ಚಿಸಿ, ನಿಮ್ಮ ಉತ್ತರಬೇಕು ಎಂದರು ರಾಜೇಂದ್ರ, ಭೀಮು, ಸೋಮು ಮತ್ತು ಗೆಳೆಯರು.”
ಗೋಂದಯ್ಯನವರು ತಮ್ಮ ಆಪ್ತ ಕಾರ್ಯದರ್ಶೀನ ಕಣ್ಣಲ್ಲಿ ಹುಡುಕಿದರು. ಎಲ್ಲೂ ಕಾಣಲಿಲ್ಲ. “ಎಲ್ಲಿ ಹೋದ್ರು ನಮ್ಮ ಸೆಕ್ರೆಟರಿ?” ಎಂದಾಗ ಸಂಗಪ್ಪ “ನೀವು ಹೇಳಿದ ಕಲ್ಸಾನೆ ಮಾಡ್ತಿದಾರೆ. ಇನ್ನೇನು ಬರ್ತಾರೆ” ಎಂದುತ್ತರ ಕೊಟ್ಟ. ಗೋಂದಯ್ಯ ಎದ್ದು ನಿಂತರು; ಕೆಮ್ಮಿದರು; ಆಮೇಲೆ “ಒಂದು ಪ್ರಶ್ನೆ ಬಂದಿದೆ ಇಲ್ಲಿ” ಅಂತ ಪೂರ್ತಿ ಓದಿದ್ರು, ಆಮೇಲೆ ಹೇಳಿದರು:
“ಮಹಾತ್ಮಾ ಗಾಂಧಿ ಹಾಗೆ ಹೇಳಿರಬಹುದು; ನಂಬಿರಬಹುದು. ಇದರ ಹಿಂದೆ ಏನೂ ಮಹತ್ವದ ಉದ್ದೇಶ ಇತ್ತು ಅನ್ನೋದು ಸಣ್ಣಪುಟ್ಟವರಿಗೆ ಗೊತ್ತಾಗೊಲ್ಲ. ಇದು ಚರ್ಚೆ ಮಾಡೋಕೆ ಸರಿಯಾದ ಕಾಲ ಅಲ್ಲ. ಒಟ್ಟಿನಲ್ಲಿ ಇಷ್ಟು ಹೇಳಬಲ್ಲೆ – ನಮ್ಮ ಗಾಂಧಿ ಹೀಗೆಲ್ಲ ಹೇಳಿಲ್ಲ – ನಂಗೊತ್ತಿದ್ದಂಗೆ.”
* * *
ಸಭೆ ಮುಗಿಸಿಕೊಂಡು ಚಪ್ಪರ ದಾಟಿ ಬಂದರೂ ತಮ್ಮ ಆಪ್ತ ಕಾರ್ಯದರ್ಶಿ ಯಾಗಲಿ, ಸಭೆಗೆ ಬಂದಿದ್ದ ಜಿಲ್ಲಾಧಿಕಾರಿಗಳಾಗಲಿ, ಇತರೆ ಅಧಿಕಾರಿಗಳಾಗಲಿ ಕಾಣಲಿಲ್ಲ. ಗೋಂದಯ್ಯನವರಿಗೆ ಸಿಟ್ಟು ಬಂತು; ಕೇಳಿದರು;
“ಎಲ್ರಿ, ನಮ್ಮ ಸೆಕ್ರೆಟರಿ? ಎಲ್ಲಿ ಹಾಳಾಗಿ ಹೋದ ಆ ಡೆಪ್ಯೂಟಿ ಕಮೀಷನರ್? ಒಬ್ಬರೂ ಕಾಣ್ತಾ ಇಲ್ಲ ಆಫೀಸರುಗಳು. ಏನೆಲ್ಲ ಕೊಬ್ಬಿ ಬಿಟ್ಟಿದ್ದಾರೆ ಅನ್ಸುತ್ತೆ.”
“ಇಲ್ಲ ಸಾರ್; ಆಗ್ಲೆ ನಾನು ಹೇಳಿಲ್ವ – ನೀವು ಹೇಳಿದ ಕೆಲ್ಸಾನೆ ಮಾಡ್ತಿದಾರೆ ಅಂತ” – ಸಂಗಪ್ಪ ಉತ್ತರಿಸಿದ.
“ಏನ್ರಿ ನಾನ್ ಹೇಳಿದ ಕೆಲ್ಸ?”
“ಅದೇ ಸಾರ್ ಆಫೀಸ್ ವ್ಯಾಳೆಬಿಟ್ಟು ಆಮ್ಯಾಲೇನಾರ ಮಾಡ್ಕಳ್ರಿ, ಅರೆ ಹೊಡ್ಕಳ್ರಿ, ಕುಡ್ಕಳ್ರಿ ಹಂಗೆ ಹಿಂಗೆ ಅಂಬ್ತ ನೀವೇ ಹೇಳಿದ್ರಂತಲ್ಲ. ಈ ಆಫೀಸರ್‌ಗಳೆಲ್ಲ ನಿಮ್ಮ ಮಾತ್ನ ಚಾಚೂ ತಪ್ಪದೆ ಪರಿಪಾಲುಸ್ತಾ ಅವ್ರೆ ಇನ್ನೇನು ಬರ್ತಾರೆ. ಎಲ್ಲಾ ಮುಗೀತಾ ಐತೆ.”
ಗೋಂದಯ್ಯನವರು ತಲೆ ಮೇಲೆ ಕೈಯಿಟ್ಟುಕೊಂಡರು. ಈ ಕಡೆ ಗಾಂಧೀಗುಡಿಯ ಬಾಗಿಲಲ್ಲಿ ಹರಿಜನ ಪೂಜಾರಿ ಒಬ್ಬಂಟಿಯಾಗಿ ಕೂತಿದ್ದ. ಈ ಕಡೆ ಸಂಗಪ್ಪ “ನಿಮ್ಗೆಲ್ಲ ಸಪರೇಟ್ ಸ್ವಾಮಿ. ಎಲ್ಲಾ ರೆಡಿಯಾಗೈತೆ, ಬರ್ರಿ” ಎಂದು ಗೋಂದಯ್ಯನವರನ್ನು ಕರೆದೊಯ್ಯುತ್ತಿದ್ದ.
*****
ಮುಂದುವರೆಯುವುದು

















