ಇಲ್ಲಿ ನೋಡಿಲ್ಲಿ!
ಮುಗಿಲು ಮುನ್ನೀರ ಚುಂಬಿಸಿತಿಲ್ಲಿ;
ಮುನ್ನೀರು ಮುಗಿಲ ರಂಬಿಸಿತಿಲ್ಲಿ.
ನಂಬಿಸಿತಿಲ್ಲಿ ಬೆಳಗು,-
ಕೂಟದ ಗೆರೆ ಬೆಳ್ಳಿಯ ಕಟ್ಟೆಂದು.
ಬಿಂಬಿಸಿತಿಲ್ಲಿ ಸಂಜೆ-
ಪರಿಧಾನವಿದು ನೀಲಿಮ ರೇಖೆಯೆಂದು!
ಚೌಕೆಂದರೆ ಚೌಕು,
ದುಂಡೆಂದರೆ ದುಂಡಗೆ!
ಇಹುದೆಂದರೆ ಇಹುದು,
ಇಲ್ಲವೆಂದರೆ ಇಲ್ಲ!
ಇದೆಂತಹ ಮಾಟ, ಸಮುದ್ರನಾಥ?
ಇದೇನು ನಿನ್ನ ಕಲೆಯೊ, ನೀರ ನೆಲೆಯೊ,
ಮುಗಿಲ ಗೆರೆಯೊ, ಕಣ್ಣುಕಟ್ಟೊ,-
ಬಲ್ಲವನೇ ಬಲ್ಲನದನು!
ದಿನಮಣಿಯು ಬಲ್ಲ, ಸಮುದ್ರನಾಥ!
ನಗೆಮೊಗದ ಚಂದಿರನೂ ಬಲ್ಲನದನು!
*****


















