ಅರಳೀಮರಕ್ಕೆ ಬಿದ್ದ ಕೊಡಲಿ ಪೆಟ್ಟು ಪ್ರತಿಭಟನೆಗೆ ಬಿತ್ತೆಂದು ಸಂಗಪ್ಪ ಹಿಗ್ಗಿ ಹೀರೇಕಾಯಿಯಾಗಿದ್ದಾಗ – ಓದುಗರೇ ನೀವೇ ಹೇಳಿ – ಈ ಯುವಕರು ಹೇಗಿದ್ದಾರು. ಸುಮ್ಮನೆ ಮುಸಿಮುಸಿ ನಕ್ಕಿದ್ದಾರು; ಅಲ್ಲವೆ? ನಿಮಗನ್ನಿಸಿರಬೇಕು ಸಂಗಪ್ಪನ ಸಾಹಸಗಳ
ಚಿತ್ರಣ ಯಾಕೋ ಸೀರಿಯಸ್ಸಾಗಿದೆ ಅಂತ ಅಥವಾ ಅದು ನನಗೇ ಅನ್ನಿಸಿದ್ದೂ ಸರಿಯಾಗಿ ತಿಳಿಯದು. ಆದರೂ ಒಂದು ವೇಳೆ ಹಾಗನ್ನಿಸಿದ್ದರೆ ಕೇವಲ ಗೇಲಿ ಮಾಡಿ ಕಚಗುಳಿ ಇಟ್ಟು ಎಲ್ಲಾ ಮರೆಸೋದು ಇಲ್ಲಿನ ಉದ್ದೇಶ ಅಲ್ಲ ಅಂತ ಹೇಳೋಕಿಷ್ಟಪತ್ತೇನೆ. ಇದೇನು ಏನೊ ಒಂದಾದರೆ ಅದಕ್ಕೊಂದು ಸಮಜಾಯಿಷಿ ರೆಡಿಯಾಗಿರುತ್ತೆ ಅಂದ್ಕೋಬೇಡಿ; ಇಲ್ಲಿ ಗೇಲಿ, ಕಚಗುಳಿ, ಎಲ್ಲಾ ಇರಬಹುದು; ಕೆಲವು ಕಡೆ ಇದೆ; ಇರುತ್ತೆ. ಆದ್ರೆ ಉದ್ದೇಶ ಅಷ್ಟಕ್ಕೇ ನಿಲ್ಲೋದಲ್ಲ. ಅದನ್ನು ಮೀರಿ ನಿಲ್ಲೋದು; ಆ ಮುಖಾಂತರ ವಿಶಿಷ್ಟ ರೂಪಕ್ಕೆ ತಿರುಗೋದು. ಹೀಗಿರುವಾಗ ಕೆಲವು ಕಡೆ ಸೀರಿಯಸ್ಸಾದರೂ ಆದೀತು. ಹೋಗಲಿ ಬಿಡಿ, ಏನೊ ನೆನಪಿಗೆ ಬಂತು ಹೇಳಿದೆ. ಹಾಗಿದ್ಮೇಲೆ ಯಾಕೆ ಈ ಪೀಠಿಕೇನೋ, ಸಮಜಾಯಿಷಿನೋ ಕೊಡ್ತೀರಿ, ಮುಂದೇನು ಹೇಳಿ ಸಾಕು ಅಂತೀರೇನೋ. ಮುಂದಿನ ಪ್ರಕರಣ ನೇರವಾಗಿ ನಮ್ಮ ಯುವಕ ಮಿತ್ರರಿಗೆ ಸಂಬಂಧಿಸಿದ್ದಲ್ಲ; ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ್ದು, ಅರೆ! ಇದೇನು? ಅರಳೀಕಟ್ಟೆ, ಅದನ್ನು ನಾಶ ಮಾಡಿದ ಪ್ರಾಯಶ್ಚಿತ್ತಾರ್ಥ ಬಲಿ, ಊರಹಬ್ಬ, ನವಗ್ರಹ ಪೂಜೆ ಇತ್ಯಾದಿ ಎಲ್ಲಾ ಬಿಟ್ಟು ಇದೇನು ಸ್ವಾತಂತ್ರ್ಯ ದಿನಾಚರಣೆಗೆ ಬಾವುಟ ಹಾರಿಸೋದಿಕ್ಕೆ ಹೊರಟಿದ್ದು ಅಂತ ಅನ್ನಿಸಿತೆ? ಇರಲಾರದು ಸಂಗಪ್ಪ ಅದೆಲ್ಲ ಮಾಡೇ ಇದ್ದಾನೆ. ಊರೋರೆಲ್ಲ ಭಾಗವಹಿಸೇ ಇದ್ದಾರೆ, ಒಂದಷ್ಟು ದಿನ ಅದೇ ಮಾತು, ಆಮೇಲೆ ಮಾಮೂಲು ಬದುಕು ಅನ್ನೋದನ್ನು ಊಹಿಸಲಾರದಷ್ಟು ದಡ್ಡರೆ ನೀವು? ಅದ್ರಿಂದ ಈಗೊಂದು ಹೊಸ ಪ್ರಕರಣಕ್ಕೆ ಬರೋಣ.
ಸ್ವಾತಂತ್ರ್ಯ ದಿನಾಚರಣೆ ಅಂದ್ರೇನು ಸಾಮಾನ್ಯವೆ ? ಅದೇನೋ ಈ ದೇಶ ಸ್ವತಂತ್ರವಾಯ್ತಂತೆ; ಈಗ ನಾವೆಲ್ಲ ಸ್ವತಂತ್ರರಂತೆ; ಇಂಗ್ಲೀಷರು ಅಧಿಕಾರ ಬಿಟ್ಟು ಹೋದ್ಮೇಲೆ ನಮ್ಮನ್ನು ನಾವೇ ಆಳಿಕೊಳ್ತೀವಂತೆ… ಅರೆ! ನಿಲ್ಲಿ, ಇದ್ಯಾಕೆ ಹೀಗೆ ಅಂತೆ ಕಂತೆ ಅಂದ್ಕೊಂಡು ಸಂಬಂಧವಿಲ್ಲದ ವರದಿ ಒಪ್ಪುಸ್ತಾ ಇದ್ದೀರಿ ಅಂತ ತಡೀತಿರೊ ಹಾಗಿದೆ ನೀವು. ನಿಮ್ಮ ಪ್ರಶ್ನೆಗಳು ಎದುರಾಗ್ತಿರೋ ಹಾಗಿವೆ. ಹಾಗಿದ್ರೆ ನಾವು ಸ್ವತಂತ್ರರಲ್ಲವೆ? ನಮ್ಮ ದೇಶ ಶಾಂತಿಯುತ ಹೋರಾಟದಿಂದ ಸ್ವಾತಂತ್ರ್ಯಗಳಿಸಿ ವಿಶ್ವದಾಖಲೆ ಸ್ಥಾಪಿಸಿಲ್ಲವೆ? ನಾವೆಲ್ಲ ಸ್ವತಂತ್ರ ನಾಡಿನ ಪ್ರಜ್ಞೆಗಳಲ್ಲವೆ? ನಮ್ಮಲ್ಲಿ ಪ್ರಜಾಪ್ರಭುತ್ವವಿಲ್ಲವೆ ಈ ದೇಶದ ಪ್ರಜೆ ಮೂವತ್ತು ವರ್ಷದ ಏಕಪಕ್ಷಾಧಿಕಾರದ ಜಾಯಮಾನಾನೆ ಮುರಿದನಲ್ಲವೆ? ಹೊಸಬರಿಗೆ ಅವಕಾಶ ಕೊಟ್ಟು ಆಮೇಲೆ ಮೊದಲಿನವರ ಮೊರೆ ಹೋದದ್ದು ಗೊತ್ತಿಲ್ಲವೆ. ಇದೆಲ್ಲ ಸ್ವಾತಂತ್ರ್ಯ ಪ್ರಜಾಪ್ರಭುತ್ವಗಳ ಲಕ್ಷಣ ಅಲ್ಲವೆ?… ಸ್ವಾಮಿ, ಸ್ವಾಮಿಗಳೆ, ಬಂಧುಗಳೆ, ಸ್ವಲ್ಪ ನಿಲ್ಸಿ ನಿಮ್ಮ ಪ್ರಶ್ನೆಗಳನ್ನ, ಇಲ್ಲಿ ಎಲ್ಲಾ ಇದೆ ಸ್ವಾಮಿ ಕಾಗದದ ಮೇಲೆ; ಅಲ್ಪಸ್ವಲ್ಪ ಆಚರಣೇಲೂ ಇದೆ. ಆದರೆ ಈ ದೇಶದ ಬಹುಪಾಲು ಜನಕ್ಕೆ ಸ್ವಾತಂತ್ರ್ಯ ಇದೆಯಾ? ಪ್ರಜಾಪ್ರಭುತ್ವದ ನಿಜವಾದ ಅನುಭವ ಆಗ್ತಿದೆಯಾ? ಇಲ್ಲಿ ನಡೆಯೊ ಚುನಾವಣೆಗಳು ಭ್ರಷ್ಟತೆಯಿಂದ ಮುಕ್ತವಾಗಿದೆಯೆ? ಇಲ್ಲಿರೊ ರಾಜಕಾರಣಿಗಳಲ್ಲಿ ಎಷ್ಟು ಜನಕ್ಕೆ ಸೈದ್ಧಾಂತಿಕ ತಳಹದಿ ಇದೆ…? ಹೀಗೆ ನಾನೂ ಪ್ರಶ್ನೆ ಹಾಕಬಹುದು. ಆದರೆ ನನ್ನ ಪ್ರಶ್ನೆಗಳ ಬದಲು ಸಂಗಪ್ಪನೇ ಮುಂದಿದ್ದಾನೆ. ಈಗಾಗಲೆ ಸ್ವಲ್ಪ ಪರಿಚಯವಾಗಿದ್ದಾನೆ; ಮತ್ತಷ್ಟು ಪರಿಚಯವಾಗ್ತ ಹೋದಂತೆ ನಿಜವಾದ ಸ್ಥಿತಿ ಏನೂಂತ ನಿಮಗೂ ಗೊತ್ತಾದ್ರೆ ಸಂತೋಷ. ಅಷ್ಟು ದೂರ ಯಾಕೆ ಸ್ವಾಮಿ, ಈಗ ಹೇಳಬೇಕಾದ ಪ್ರಸಂಗಕ್ಕೆ ಬರೋಣ. ಇದು ಎಷ್ಟಾದ್ರೂ ಸ್ವಾತಂತ್ರ್ಯ ದಿನಾಚರಣೆಯ ಪ್ರಸಂಗ ತಾನೆ?
ಈಗ ಈ ಊರಿನ ಸ್ಕೂಲಲ್ಲಿ ಹೆಡ್ ಮಾಸ್ಟರಾಗಿದ್ದವರಿಗೆ ಇಲ್ಲಿನ ಸ್ವಾತಂತ್ರ ದಿನಾಚರಣೆಯ ವೈಖರಿ ಗೊತ್ತಿರಲಿಲ್ಲ. ತಮಗೆ ಸರಿಕಂಡಂತೆ ಸಿದ್ಧತೆ ನಡೆಸಿದರು. ತಾಲ್ಲೂಕಿನ ವಿದ್ಯಾಧಿಕಾರಿಗಳನ್ನು ಆಹ್ವಾನಿಸಿದರು. ಇದರ ಉತ್ಸಾಹ ಕಂಡು ರಾಜೇಂದ್ರ ಸ್ನೇಹದ ತಮಾಷೆ ಮಾಡಿದ್ದೂ ಉಂಟು.
“ಏನ್ ಸಾರ್, ಈ ಊರಲ್ಲಿ ನೀವು ಮಾಡ್ತೀರೊ ಮೊದಲ್ನೆ ಸ್ವಾತಂತ್ರ್ಯ ದಿನಾಚರಣೇನ ನಿಮ್ಮ ಮದುವೆಯ ಮೊದಲ್ನೇ ಆನಿವರ್ಸಿರಿ ಅಂತ ತಿಳ್ಕೊಂಡಿರೋ ಹಾಗಿದೆ ಅಷ್ಟು ಖುಷಿಯಾಗಿದ್ದೀರಿ.”
“ನಾನ್ ಯಾವಾದ್ರೂ ಅಷ್ಟೆ ನೋಡಿ. ಮಾಡೋ ಕೆಲ್ಸ ಅಚ್ಚುಕಟ್ಟಾಗಿ ಮಾಡ್ಬೇಕು. ಕರ್ತವ್ಯ ಮುಖ್ಯ ನನಗೆ.”
“ಏನ್ ಸಾರ್, ಇದಕ್ಕೆಲ್ಲ ಏನಾದ್ರೂ ಅರ್ಥ ಇದ್ಯಾ? ಒಂದೇ ಮನೆತನದ ಆಸ್ತಿ ಸಾವಿರಾರು ಕೋಟಿ ಇದ್ದಾಗ ಕೋಟ್ಯಾಂತರ ಜನ ಹಸಿವಿನಿಂದ ಇದ್ದೆನೊ ಸತ್ತನೊ ಅಂತ ಇದ್ದಾರೆ. ಇನ್ನು ಸ್ವಾತಂತ್ರ್ಯ ಇದೆ ಅಂದ್ರೆ ಹೇಗೆ? ಸ್ವಾತಂತ್ರ್ಯ ಸಾಯೋಕಿದೆ ಅಷ್ಟೆ; ಬದುಕೋಕಂತೂ ಇಲ್ಲ.”
“ಹಾಗಂದ್ರೆ ಹೇಗೆ ರಾಜೇಂದ್ರ ಅವರೆ, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಮತದಾನ ಇದೆಲ್ಲ ಇಲ್ವೆ?”
“ಇವೆ ಸಾರ್, ಆದ್ರೆ ಅವೆಲ್ಲ ಅರ್ಥಪೂರ್ಣವಾಗ್ಗೇಕಾದ್ರೆ ಅಸಮಾನತೆ ಹೋಗೋಕು.”
“ಏನೋ ಸ್ವಾಮಿ ಡಿಪಾರ್ಟ್‌ಮೆಂಟಿನೋರು ಹೇಳ್ತಾರೆ; ನಮ್ಮ ಕರ್ತವ್ಯ ನಾವ್ ಮಾಡ್ಬೇಕು.”
“ಅದನ್ನು ನಾನು ಇಲ್ಲ ಅನ್ನಲಿಲ್ಲ. ಆದ್ರೆ ನಾನ್ ಹೇಳಿದ್ದು ಮುಖ್ಯ ನೋಡಿ.”
“ಒಂದು ಕೆಲ್ಸ ಮಾಡಿ; ನಿಮ್ಮ ವಿಚಾರಗಳನ್ನು ಆವತ್ತೆ ಹೇಳ್ಬಿಡಿ, ಒಂದು ಒಳ್ಳೆ ಭಾಷಣ ಮಾಡಿ, ಅಷ್ಟಕ್ಕಂತೂ ಸ್ವಾತಂತ್ರ್ಯ ಇದೆ ನಮ್ಮಲ್ಲಿ.”
ರಾಜೇಂದ್ರ ಒಪ್ಪಿಕೊಂಡ. ಹೆಡ್‌ಮಾಸ್ಟರಿಗೆ ತಮ್ಮ ಕಾಲ್ದಲ್ಲಿ ಸ್ವಾತಂತ್ರ್ಯ ದಿನಾಚರಣೆ ತುಂಬಾ ಚೆನ್ನಾಗಿ ನಡೀತು ಅನಿಸ್ಬೇಕೂಂತ ಎಲ್ಲಿಲ್ಲದ ಆಸೆ, ಅದಕ್ಕಾಗಿ ಶಾಲಾಮಕ್ಕಳಿಂದ ಕವಾಯಿತು, ಮೆರವಣಿಗೆ, ದೇಶಭಕ್ತಿ ಗೀತೆಗಳು – ಎಲ್ಲಕ್ಕೂ ತಯಾರಿ ನಡೆಸಿದ್ದರು.
ನಾಳೆ ಬೆಳಗ್ಗೆ ಸ್ವಾತಂತ್ರ್ಯ ದಿನಾಚರಣೆ ಅನ್ನುವಾಗ ಸಂಗಪ್ಪನಿಗೆ ಅದನ್ನು ಜ್ಞಾಪಿಸಿದವರು ಶಾನುಭೋಗರು. ಇವರು ಹೇಳಿದ ಮೇಲೆ ಮಾರನೇ ದಿನ ಸ್ವಾತಂತ್ರ್ಯ ದಿನೋತ್ಸವವೆಂದೂ ಅದಕ್ಕಾಗಿ ಹೆಡ್ ಮಾಸ್ಟರು ಸಿದ್ಧತೆ ನಡೆಸಿದ್ದರೆಂದೂ ಜ್ಞಾನೋದಯವಾಯ್ತು. ತಕ್ಷಣ ಹೆಡ್‌ಮಾಸ್ಟರಿಗೆ ಕರೆ ಹೋಯ್ತು. ಶಾನುಭೋಗರೇ ಹೋಗಿ ಕಳಿಸಿದರು ಹೆಡ್ ಮಾಸ್ಟರು ಬಂದರು. ಬಂದವರೇ “ನಮಸ್ಕಾರ” ಎಂದರು.
“ನಾನೇ ಬರ್ಬೇಕು ಅಂತಿದ್ದೆ ನಿಮ್ಮ ಹತ್ರ. ನಾಳೆ ಸ್ವಾತಂತ್ರ್ಯ ದಿನಾಚರಣೆ ಬನ್ನಿ ಅಂತ ಹೇಳ್ಬೇಕಾಗಿತ್ತು.”
ಸಂಗಪ್ಪ ದುರುಗುಟ್ಟಿಕೊಂಡು ನೋಡಿದ; ಸ್ವಲ್ಪ ಹೊತ್ತು ಮೌನವಾಗಿದ್ದ. ಆಮೇಲೆ ವ್ಯಂಗ್ಯವಾಗಿ ಕೇಳಿದ; “ಓಹೊ… ನೀನು ನನ್ನ ಕರೀಬೇಕು ಅಂತಿದ್ಯಾ?”
“ಹೌದು ಸ್ವಾಮಿ” ವ್ಯಂಗ್ಯ ಅರ್ಥವಾದ್ರೂ ಮೇಷ್ಟ್ರು ಹೇಳಿದರು.
“ಇರ್ಲಿ, ಅಲ್ಲಯ್ಯ, ಆ ಪ್ಲೇಗ್ ಕೆಲ್ಸ ಮಾಡೋಕ್ ಯಾರ್ ಬಾರ್ತಾರೆ?”
“ಪ್ಲೇಗು?” – ಮೇಷ್ಟ್ರು ತಬ್ಬಿಬ್ಬಾದರು.
“ಅದೇ ಕಣ್ರಿ ಅರೆಸ್ಟೊ, ಅದೇನೋ ಮಾಡಲ್ವೇನ್ರಿ?”
“ಅರೆಷ್ಟು?” ತಲೆ ಕರೆದುಕೊಂಡ ಮೇಷ್ಟ್ರಿಗೆ ಸ್ವಲ್ಪ ಹೊತ್ತಿನಲ್ಲಿ ಹೊಳೀತು. “ಓ ಫ್ಲ್ಯಾಗ್ ಹಾಯ್‌ಸ್ಟ್ ತಾನೆ ನೀವು ಹೇಳೋದು?”
“ಹೂಂಕಣ್ರೀ, ಅದೇ ಮತ್ತೆ ಹೇಳಿದ್ದು. ಇಷ್ಟು ಗೊತ್ತಾಗ್ದಿದ್ರೆ ಹೆಂಗ್ರಿ ಪಾಠ ಮಾಡ್ತೀರಿ? ಅದಿರ್ಲಿ ಆಮ್ಯಾಲ್ ವಿಚಾರುಸ್ತೀನಿ. ನಾನ್ ಹೇಳ್ತಾ ಇದ್ದೀನಿ; ನಾಳೆ ಬೆಳಿಗ್ಗೆ ನಾನು ಅರೆಸ್ಟ್ ಮಾಡ್ತೀನಿ.”
“ಆಂ!?”
“ಅದೇ ಕಣ್ರಿ ಅದೇನೋ ಮಾಡ್ತೀನಿ ಅದುನ್ನ.”
“ಆಯ್ತು ಸ್ವಾಮಿ, ಏನ್ ಮಾಡ್ಬೇಕೂಂತ ಇದ್ದೀರಿ ಅನ್ನೋದರ್ಥ ಆಯ್ತು. ಆದರೆ… ಒಂದ್ ವಿಷಯ… ನಮ್ಮ A.E.O.ಸಾಹೇಬ್ರನ್ನ ಕರ್ದಿದ್ದೀವಲ್ಲ?”
“ಸಾಬ್ರುನ್ನ ಕರೀರಿ ಅಂತ ಯಾರಿ ಹೇಳಿದ್ರು, ಹಿಂದುಗಳು ಯಾರು ಗತಿಯಿಲ್ವೇನ್ರಿ?”
“ಅದೇ ಸ್ವಾಮಿ ನಮ್ಮ ತಾಲ್ಲೂಕು ವಿದ್ಯಾಧಿಕಾರಿಗಳು; ನಾವು ಸುಮ್ಮೆ ಸಾಹೇಬ್ರು ಅಂತೀವಿ ಅಷ್ಟೆ”
“ಅವ್ರನ್ನ ಯಾಕ್ರಿ ಕರ್ಸಿದ್ದು, ನಾನಿಲ್ವೆ ಇಲ್ಲಿ ?”
“ಗೊತ್ತಾಗಿಲ್ಲ, ಏನೋ ಕರ್ದಿದ್ದೀವಿ.”
`ಯಾವನ್ನ ಕೇಳಿ ಬರ್ತಾ ಇದಾನೆ ಅವ್ನು ನಮ್ಮೂರ್ಗೆ’ ಸಂಗಪ್ಪ ಗುಡುಗಿದ; ಮೇಷ್ಟ್ರು ಸ್ವಲ್ಪ ಚೇತರಿಸಿಕೊಂಡು ಹೇಳಿದರು:
“ಹಾಗಂದ್ರೆ ಹೇಗೆ ಸ್ವಾಮಿ. ಇದು ಸ್ವಾತಂತ್ರ್ಯ ದಿನಾಚರಣೆ. ನಮ್ಮ ಸ್ಕೂಲಿಗೆ ನಾವು ನಮ್ಮ ಎ.ಈ.ಓ. ಅವರನ್ನು ಕರ್ಸಿದ್ದೀವಿ.”
ಸಂಗಪ್ಪ ದುರುಗುಟ್ಟಿಕೊಂಡು ನೋಡಿದ; ಕ್ಷಣ ಹೊತ್ತು ಹಾಗೇ ನೋಡಿ ಹೇಳಿದ: “ಹಂಗಾ ಸಮಾಚಾರ? ಯಾವೊನ್ನ ಕೇಳಿ ಮಾಡ್ತ ಇದ್ದೀಯ ನಿನ್ನ ಸ್ವತಂತ್ರ ದಿನಾಚರಣೇನ? ಇದೇನು ಹುಡುಗಾಟ ಅಂಡ್ಕೊಂಡೇನಯ್ಯ? ನಮ್ಮೂರಾಗೆ ಮಾಡ್ವಾಗ ನನ್ನಯಾಕೆ ಕೇಳ್ಲಿಲ್ಲ? ಯಾಕ್ ಪ್ಲೇಗರಸ್ಟ್‌ಗೆ ಕರೀಲಿಲ್ಲ? ಅವ್ನು ನಿಮ್ಮ ಏವೋನೋ ಪೀವೋನೊ ಅದೆಂಗ್ ಬತ್ತಾನೇಂತ ನಾನೂ ನೋಡ್ತೀನಿ. ಅವ್ನು ನನ್ನ ಕೇಳ್ದೆ ನಮ್ಮೂರಿಗೆ ಬರ್ಕೂಡ್ದು. ಬೇಕಾದ್ರೆ ನಿಮ್ಮ ಸ್ಕೂಲಿಗೆ ಬರ್ಲಿ; ನನ್ ಕೇಳ್ದೆ ಈ ಊರಲ್ಲಿ ಸ್ವತಂತ್ರ ದಿನಾಚರಣೆ ನಡೆಸ್ಕೊಡ್ದು. ಬೇಕಾದ್ರೆ ನಿನ್ನ ಸ್ಕೂಲಲ್ಲಿ ಮಾಡ್ಕೊ ಆಗಂಗಿದ್ರೆ?”
“ಇದು ಹೇಗಾಗುತ್ತೆ ಹೇಳಿ ಸ್ವಾಮಿ. ಈ ಊರಿಗೆ ಬೇಡ ಸ್ಕೂಲಿಗೆ ಬರ್ಲಿ ಅಂದ್ರೆ ಹೇಗೆ? ಸ್ಕೂಲು ಇರೋದೇ ಊರಲ್ಲಿ ತಾನೇ?”
“ಹಂಗ್‌ಬಾ ಮತ್ತೆ ದಾರಿಗೆ. ಸ್ಕೂಲು ಊರ್ನಾಗಿದೆ. ಊರ್ನಾಗೆ ನಾನಿದ್ದೀನಿ. ಊರಂದ್ರೂರೇ ನನ್ನ ಮಾತ್ನಂಗ್ ನಡ್ಯುತ್ತೆ. ನೀನೊಬ್ಬ ದೊಣ್ಣೆನಾಯ್ಕ ಬಂದ್ಬಿಟ್ಟೆ ಇಲ್ಲಿ ಸ್ವತಂತ್ರ ದಿನಾಚರಣೆ ಮಾಡಾಕೆ.”
ಸಂಗಪ್ಪನ ಏರಿದ ದನಿಯಲ್ಲಿ ಮೇಷ್ಟ್ರು ಮುಚ್ಚಿ ಹೋದರು. ಏನೂ ತೋಚದೆ ಸುಮ್ಮನೆ ನಿಂತು ಕಡೆಗೆ ತಾವೂ ದೃಢವಾಗಿ ಹೇಳಿದರು: “ಈ ಸಮಾರಂಭ ನಡೀಲೇಬೇಕು. A.E.O. ಬರ್ಬೇಕು. ಒಂದ್ಸಾರಿ ಒಪ್ಸಿದ್ಮೇಲೆ ತಪ್ಪಿಸೋಕಾಗಲ್ಲ.”
“ನಡೀಲೇಬೇಕು ಅನ್ನಂಗಿದ್ರೆ ನಾನಲ್ಲಿ ಇರ್ಬೇಕು. ಪ್ಲೇಗ್‌ರಸ್ಟ್ ಮಾಡ್ಬೇಕು. ಅಧ್ಯಕ್ಷನಾಗಬೇಕು. ಎಷ್ಟು ಹಣ ಬೇಕು ಖರ್ಚಿಗೆ?”
“ಒಂದ್ ಪೈಸಾನೂ ಬೇಡಿ, ಆದ್ರೆ ಎರಡರಲ್ಲಿ ಒಂದಾದ್ರೂ ನಮ್ಮ ಸಾಹೇಬ್ರಿಗೆ…”
“ಯಾವನಯ್ಯ ನಿನ್ ಸಾಹೇಬ, ನಾನಿಲ್ಲಿ ಗುಂಡ್‌ಕಲ್ಲಂಗೆ ಕೂತಿರ್ವಾಗ? ಇಷ್ಟಕ್ಕೂ ನನ್ನ ಹತ್ರ ಮೊದ್ಲೆ ಮಾತಾಡಿದ್ರೆ ಹೇಗೊ ರಾಜಿಗೆ ಬರಬಹುದಿತ್ತು. ಈಗ ಅವೆಲ್ಲ ಆಗೊಲ್ಲ. ನೀನು ಆ ರಾಜೇಂದ್ರನ ಮಾತು ಕೇಳಿರಂಗ್ ಕಾಣ್ತೀಯ…”
“ನಾನ್ ಯಾರ್ ಮಾತೂ ಕೇಳಿಲ್ಲ; ರಾಜೇಂದ್ರ ಒಂದ್ ಭಾಷಣ ಮಾಡ್ತಾರೆ ನಾಳೆ; ಅಷ್ಟೆ.”
“ಓ… ಅದು ಬ್ಯಾರೆ ಐಯ್ತೊ? ಅದೆಂಗ್ ಮಾಡ್ತೀಯೋ ನೋಡ್ತೀನಿ. ಬೇಕಾದ್ರೆ ನಿನ್ನ ಸಾಹೇಬ್ನಿಗೆ ಒಂದ್ ಅವಕಾಶ ಕೊಟ್ರೂ ಕೊಟ್ಟೇನು, ಆ ರಾಜೇಂದ್ರ ಮಾತ್ರ ಮಾತಾಡ್ಕೂಡ್ದು. ನೀನು ಇನ್ನೂ ಈ ಊರಾಗಿರ್ಬೇಕೂಂತ ಇದ್ರೆ ನಾನ್ ಹೇಳ್ದಂಗ್ ಮಾಡು: ಹೋಗ್ ನಿಂತ್ಕಬ್ಯಾಡ ನನ್ ಎದುರಿಗೆ, ಆಮ್ಯಾಲೆ ಬಂದ್ ಬೊಗಳಿಕೊ ಏನಾರ ತಗ್ಗಿಬಗ್ಗಿ ನಡ್ಯಂಗಿದ್ರೆ.”
ಸಂಗಪ್ಪ ಹೀಗೆ ಹೇಳಿದಾಗ, ಸ್ವಲ್ಪ ಸಿಟ್ಟು ಇಳಿದ ಮೇಲೆ ಮಾತಾಡೋದು ವಾಸಿಯೆಂದು ಹೆಡ್ ಮಾಸ್ಟರು ಹೊರಟುಹೋದರು. ಮನೇಲಿ ಕೂತು ಯೋಚಿಸಿದರು. ಬಂದಿನ್ನೂ ಒಂದು ವರ್ಷವಾಗಿಲ್ಲ, ಮತ್ತೆ ವರ್ಗಾಗಿರ್ಗ ಆದ್ರೆ ಹೇಗೆ ಎಂಬ ಯೋಚನೆ ಬಂದರೂ ಅದನ್ನು ಪಕ್ಕಕ್ಕೆ ಸರಿಸಿ ಮಾರನೆ ದಿನದ ಸಭೆ ಸುಸೂತ್ರವಾಗಿ ನಡೆಯೋದು ಹೇಗೆ ಅಂತ ಚಿಂತಿಸಿದರು. A.E.O. ಅವರದೇನೋ ಹೇಗೋ ಪರಿಹಾರವಾದೀತು; ರಾಜೇಂದ್ರನ ಭಾಷಣದ ವಿಷಯ? ರಾಜೇಂದ್ರನಿಗೆ ನಡೆದ ವಿಷಯವನ್ನೆಲ್ಲ ತಿಳಿಸಿದ್ರಾಯ್ತು ಅಂದುಕೊಂಡು ಅವನನ್ನು ಕಂಡರು; ಅವನ ಸ್ನೇಹಿತರೂ ಜೊತೆಗೇ ಸಿಕ್ಕಿದ್ದರು. ಹೆಡ್‌ಮಾಸ್ತರು ನಿವೇದಿಸಿಕೊಂಡರು; “ಈಗ ರಾಜೇಂದ್ರ ಅವರು ಭಾಷಣ ಮಾಡೊಲ್ಲ ಅಂದ್ರೆ ಹೇಗೋ ಸಮಸ್ಯೆ ಪರಿಹಾರವಾಗುತ್ತೆ. ಇಲ್ದಿದ್ರೆ ನಾಳೆ ಸ್ವಾತಂತ್ರ್ಯ ದಿನಾಚರಣೇನೇ ನಡ್ಯೋಲ್ಲ ನನಗೆ ಅವಮಾನವಾಗುತ್ತೆ. ಇಷ್ಟೆಲ್ಲ ತಯಾರಿ ನಡೆಸಿ ತಲೆ ಎತ್ತದಂಗಾದ್ರೆ ಹೇಗೆ ನೀವೇ ಯೋಚನೆ ಮಾಡಿ. ಎಲ್ಲಾ ನಿಮ್ಮ ಕೈಯ್ಯಲ್ಲಿದೆ.”
ಒಂದೈದು ನಿಮಿಷ ಅವರವರೇ ಮಾತಾಡಿಕೊಂಡರು. ರಾಜೇಂದ್ರ ಹೇಳಿದ: ನಂಗೇನ್ ಭಾಷಣ ಮಾಡ್ಲೆಬೇಕೂಂತ ಹಟ ಇಲ್ಲ. ಆದ್ರೆ ಆ ಸಂಗಪ್ಪನ ಅಹಂಕಾರ ನೋಡಿ. ಭೀಮು ಹೇಳಿದ; “ಅದು ಯಾವಾಗ್ಲೂ ಇದ್ದದ್ದೇ ಅಲ್ವಾ, ಈಗ ಈ ಮೇಷ್ಟ್ರನ್ನು ಪಾರು ಮಾಡೋದು ನೋಡೋಣ. ನಾನು ಇನ್ನು ಮೂರ್ನಾಲ್ಕು ದಿನಗಳಲ್ಲೇ ನಮ್ಮ ಸ್ಕೂಲಲ್ಲಿ ನಿಮ್ಮ ಭಾಷಣಕ್ಕೆ ಏರ್ಪಾಟು ಮಾಡ್ತೀನಿ.”
ಎಲ್ಲರೂ ಇದಕ್ಕೆ ಒಪ್ಪಿದರು. ಮೇಷ್ಟ್ರು “ತಪ್ಪು ತಿಳ್ಕೊಬ್ಯಾಡಿ. ನಾನೇ ಭಾಷಣ ಮಾಡಿ ಅಂದು ಆಮೇಲೆ ತಪ್ಪಿಸಿದೆ” ಎಂದು ಪೇಚಾಡಿಕೊಂಡರು. ಈ ಮಿತ್ರರು “ಅದಕ್ಕೆಲ್ಲ ಯಾಕಿಷ್ಟು ಪೇಚಾಟ; ನಿಮ್ಮ ಕೆಲ್ಸ ಮುಂದುವರಿಸಿ” ಎಂದರು.
ಹೆಡ್‌ಮಾಸ್ತರು ಸಂತೋಷದಿಂದ ಸಂಗಪ್ಪನ ಬಳಿ ಬಂದು ‘ರಾಜೇಂದ್ರನ ಭಾಷಣ ಕ್ಯಾನ್ಸಲ್’ ಎಂದರು. ಸಂಗಪ್ಪ “ಭೇಷ್, ಆಮೇಲೆ?” ಎಂದ. “ಉಳಿದದ್ದು ನಿಮ್ಮ ಮೇಲೆ ಭಾರ ಹಾಕಿದ್ದೀನಿ, ಏನ್ ಮಾಡ್ತಿರೋ ಮಾಡಿ, ಯಾವ್ದಾದ್ರೂ ಒಂದು ಕೈಬಿಡಿ”
ಎಂದು ಕೇಳಿಕೊಂಡರು.
ಸಂಗಪ್ಪ ಏನೋ ಗಂಟು ಕಳಕೊಂಡವನಂತೆ “ಏನ್ ಮಾಡೋದು ನೀವಷ್ಟೊಂದು ಬೇಡಿಕೊಂಡ್ಮೇಲೆ ಅದೇನೋ ಪ್ಲೇಗ್‌ರಸ್ಟ್ ಅವಯ್ಯನೆ ಮಾಡ್ಲಿ. ನಿಮ್ಮ ಮೆರವಣಿಗೆಗೆ
ಅದೂ ಇದೆಲ್ಲ ಮುಗಿಸಿ ನೀವೇ ಬಂದು ನನ್ನ ಕರ್ಕಂಡ್ ಹೋಗ್ಬೇಕು. ನಾನು ಅಧ್ಯಕ್ಷ ಆಗ್ತೀನಿ ತಿಳೀತಾ? ಏನಾರ ಎಡವಟ್ಟು ಮಾಡೀರ ಆಮ್ಯಾಲೆ. ಆಂ?”
“ತಿಳೀತು ಸ್ವಾಮಿ” ಎಂದು ಬಂದರು ಮೇಷ್ಟ್ರು.
ಮಾರನೇ ದಿನ ವಿದ್ಯಾಧಿಕಾರಿಗಳಿಗೆ ವಿವರ ಹೇಳದೆ, ಸೂಚ್ಯವಾಗಿ ಹೇಳಿ ಸಂಗಪ್ಪ ನಿರ್ಧರಿಸಿದ ಕೆಲಸವನ್ನು ಅವರಿಗೆ ವಹಿಸಿದ್ದಾಯಿತು. ಮುಂದೆ ಸಭೆ A.E.O. ಅತಿಥಿಗಳು; ಸಂಗಪ್ಪ ಅಧ್ಯಕ್ಷ ಆದರೂ ಕೇಳಿದ: “ನಂಗಿಂತ ಅವ್ರೇ ಮುಂಚೆ ಮಾತಾಡ್ತಾರೇನ್ರಿ? ನಾನ್ ಕೊನೇಲಿ ಮಾತಾಡಾದು? ಎಷ್ಟು ಹೇಳಿದ್ರೂ, ಹಿಂಗಾ ಕಡೆಗಣ್ಸೋದು?” ಮೇಷ್ಟ್ರು ಅಧ್ಯಕ್ಷತೆಯ ಮಹತ್ವವನ್ನು ಕಿವೀಲಿ ಊದಬೇಕಾಯ್ತು. ಆದರೂ ‘ಹಿಂದೆಲ್ಲ ಹೀಗಿರ್ಲಿಲ್ಲ’ ಎನ್ನದೆ ಬಿಡಲಿಲ್ಲ. ಆಮೇಲೆ ಮೇಷ್ಟರನ್ನು ಹತ್ತಿರ ಕರೆದು ಹೇಳಿದ: “ನೋಡ್ರಿ ನಮ್ಮ ಶಾನುಭೋಗರು ನನ್ನ ಮೇಲೆ ಒಂದು ಪದ್ಯ ಬರ್ದವ್ರೆ ಅದ್ಯಾವುದೊ ‘ಭಾಮೆ ಷಟಪ್’ನಲ್ಲಿ…
“ಭಾಮೆ ಷಟಪ್?” ಶಾನುಭೋಗರೂ ಚಕಿತರಾದರು. ಮರುಕ್ಷಣದಲ್ಲೇ ಗೊತ್ತಾಯ್ತು.
“ಓ… ಅದಾ? ಭಾಮಿನಿ ಷಟ್ಪದೀಲಿ ಒಂದು ಪದ್ಯ ಬರ್ದಿದ್ದೆ. ಇಲ್ಲೆಲ್ಲ ಓದೋದು ಬೇಡ. ನಾನೇ ಹೇಳ್ತಿನಿ ಅವ್ರಿಗೆ” ಎಂದು ಎದ್ದು ಬಂದು ಸಾವ್ಕಾರ್ರ ಕಿವೀಲಿ ಹೇಳಿದರು: “ಇಲ್ಲಿ ಸಾಹಿತ್ಯ ಸಂಸ್ಕಾರ ಇರೊ ಸುಸಂಸ್ಕೃತ ಒಬ್ನೂ ಇಲ್ಲ ಸಾವ್ಕಾರ್ರೆ ಆ ಪದ್ಯ ಬೇಡ. ಮುಂದೆ ರಿಪಬ್ಲಿಕ್ ಡೇಗೆ ಈ ಜನರಿಗೆ ತಿಳ್ಯಂಗೆ ಒಂದು ಹೊಸಾದ್ ಹೊಸೆದುಬಿಡ್ತೀನಿ ಈಗ ಜನಕ್ಕೆ ತಿಳೀದಿದ್ರೆ ನಿಮಗೇ ಅವಮಾನ.”
ಸಂಗಪ್ಪನಿಗೆ ನಿರಾಶೆಯಾದರೂ ಶ್ಯಾನುಭೋಗರ ತರ್ಕಕ್ಕೆ ತಲೆ ಆಡಿಸಿದ. ಎದುರುಗಡೆ ಇದ್ದ ರಾಮೂ ಬಳಗಕ್ಕೆ ಸವಾಲೆಂಬಂತೆ ತನ್ನ ಮೇಲಿನ ಪ್ರಶಂಸಾ ಪದ್ಯ ಓದಿಸಬೇಕೆಂದಿದ್ದ. ಇದೇನೊ ಈ ಶಾನುಭೋಗರು ಮಾತ್ರ ಬರ್ತಾ ಇದ್ದ ಬೆವರನ್ನು ಒರೆಸಿಕೊಂಡು `ಬದುಕಿದೆಯಾ ಬಡಜೀವವೇ’ ಅಂದುಕೊಂಡು ಕೂತರು.
ಕಡೆಯಲ್ಲಿ ಅಧ್ಯಕ್ಷ ಭಾಷಣ ಶುರುವಾಯ್ತು. ಸಂಗಪ್ಪ ನಿಂತು ಠೀವಿಯಿಂದ ಜನರನ್ನೊಮ್ಮೆ ನೋಡಿದ; ಹೆಚ್ಚು ಪ್ರೇಕ್ಷಕರು ವಿದ್ಯಾರ್ಥಿ, ವಿದ್ಯಾರ್ಥಿನಿಯರು. ಮಾತು ಪ್ರಾರಂಭಿಸೋಕೆ ಮುಂಚೆ ತಾನು ಕೈಯಿಟ್ಟಿದ್ದ ಮೇಜಿನ ಕಡೆ ನೋಡಿದ. ತನ್ನ ಮುಖಕ್ಕೆ ತೀರಾ ಹತ್ತಿರದಲ್ಲಿದೆ? ಈ ಮೇಷ್ಟ್ರ ಕಿತಾಪತಿ ಇರಬಹುದಾ ಇದು? ಬೇಕಾಗೀನೆ ಎತ್ತರದ ಮೇಜು ಹಾಕಿರಬಹುದಾ? ಒಂದು ಕ್ಷಣ ಇಂಥ ಆಲೋಚನೆ ಬಂತು. ಭಾಷಣ ಪ್ರಾರಂಭ ಮಾಡ್ತಾ ಮೇಜನ್ನು ಸರಿಯಾಗಿ ನೋಡಿ, ಅದೇನೋ ಸರಿಯಾದ ಎತ್ತರ ಇದೆ, ತಾನೇ ಕುಳ್ಳ ಅನ್ನೋದು ಖಚಿತ ಮಾಡಿಕೊಂಡ. ಸ್ವಾತಂತ್ರ್ಯ ದಿನಾಚರಣೆಯ ಮಹತ್ವಾನ ಸಂಗಪ್ಪ ಹೀಗೆ ವಿವರಿಸಿದ:
“ಯಾಕೆ ಇದು ತುಂಬಾ ಮುಖ್ಯವಾದ್ದಪ್ಪ ಅಂದ್ರೆ ನಮ್ಮಪ್ಪ ಸ್ವತಂತ್ರಕ್ಕಾಗಿ ದುಡಿದವರು. ಅವರು ಐದಾರು ವರ್ಷ ಜೈಲಲ್ಲಿದ್ದು ನಮ್ಮ ಮನೆತನಕ್ಕೆ ದೊಡ್ಡ ಉಪಕಾರ ಮಾಡಿದ್ರು. ಯಾಕಪ್ಪ ಅಂತಂದ್ರೆ ಆಗ್ಲೆ ನಮ್ಮಮ್ಮ ನನ್ನನ್ನು ಹಡೆದದ್ದು; ಅಪ್ಪ ಇದ್ದಿದ್ರೆ ಏನಾಗ್ತಿತ್ತೊ ಗೊತ್ತಿಲ್ಲ ಅಂತೂ ಅಪ್ಪ ಇಲ್ದಾಗ ನನ್ನ ಹಡೆದು ಬೆಳೆಸಿದ್ರಿಂದ ನಮ್ಮ ಮನೆತನಕ್ಕೆ ದೊಡ್ಡ ಹೆಸ್ರು ಬಂತು…”
ಫಕಫಕನೆ ಬಂದ ನಗುವಿನಿಂದ ಭಾಷಣ ನಿಲ್ಲಿಸಿ ನೋಡಿದ; ಅದೇ ರಾಜೇಂದ್ರನ ಬಳಗ! ಯಾಕೇಂತ ಗೊತ್ತಾಗ್ದೆ ಸ್ವಲ್ಪ ಬೆಪ್ಪಾದ; ಆಮೇಲೆ ದಡ್ಡನಿಗೆ ಧೈರ್ಯ ಜಾಸ್ತಿ ಅನ್ನೋ ಹಾಗೆ “ನಗೊ ಅಂತೋರು ಸ್ವತಂತ್ರ ದಿನಾಚರಣೆಗೆ ಬರಬಾರ್ದು. ನಾನು ಅಂದ್ರೇನು ಸಾಮಾನ್ಯಾನ? ನಾನು ಎಂಥ ಮನೆತನ್ದಾಗೆ ಹುಟ್ಟಿದ್ದೀನಿ; ಹೆಂಗ್ ಹುಟ್ಟಿದೆ ಹೆಂಗ್ ಬೆಳೆದೆ ಅಂತ ಹೇಳ್ತಾ ಹೋದ್ರೆ ಇನ್ನೊಂದು ಸ್ವತಂತ್ರ ದಿನಾಚರಣೆ ಬಂದ್ರೂ ಮುಗ್ಯಾಕಿಲ್ಲ. ಮೈಯಾಗ್ ನೆದರು ಐತೆ ಅಂತ ನಗ್ಸಾರ ಆಡಾಕ್ ಬಂದಿದ್ರೆ ಅವ್ರಿಗೆಲ್ಲ ಈಗ್ಲೆ ಬುದ್ಧಿ ಕಲಿಸ್ತೀನಿ…”
ಸಭೆಯ ವಾತಾವರಣ ಬಿಸಿಯಾಗಿ ಬಿಡುತ್ತೆ ಅಂತ ಹೆಡ್‌ಮಾಸ್ಟರು ಚಡಪಡಿಸಿದರೆ, ಸರ್ಯಾಗಿ ಹೇಳೋಕೆ ಬರದ ಸಂಗಪ್ಪನ ಅವಾಂತರಕ್ಕೆ ಅರ್ಥ ಹೇಳೋಕೆ ಶಾನುಭೋಗರು ಎದ್ದು ಬಂದರು; ಸಂಗಪ್ಪನಿಗೆ ಸನ್ನೆ ಮಾಡಿ ತಾವು ಶುರು ಮಾಡಿದ್ರು; “ಸ್ವಲ್ಪ ಶಾಂತವಾಗಿ ಕೇಳ್ಬೇಕು ಎಲ್ರೂ. ಸಂಗಪ್ಪನೋರು ರಭಸದಲ್ಲಿ ಹೇಳಿದ ಮಾತ್ಗೆ ಅಪಾರ್ಥ ಮಾಡೋದು ಸಣ್ಣತನ. ಇವರ ತಂದೆ ಜೈಲಿಗೆ ಹೋಗುವಾಗ ಇವರ ತಾಯಿ ಗರ್ಭಿಣಿ; ತಂದೆ ಜೈಲಲ್ಲಿದ್ದಾಗ ಇಲ್ಲಿ ಇವರನ್ನು ಹಡೆದು ಒಬ್ಬಳೇ ಕಷ್ಟ ಬಿದ್ದು ಬೆಳೆಸಿ ಗಂಡನಿಗೆ ಕಿಂಚಿತ್ತು ಕಷ್ಟಾನೂ ಕೊಡಲಿಲ್ಲವಾದ್ರಿಂದ ಮನೆತನಕ್ಕೆ ಒಳ್ಳೆ ಹೆಸರು ಬಂತು. ಇವರ ತಂದೆ ಮನೇಲೆ ಇದ್ದಿದ್ರೆ ತಾಯಿಗೆ ಹೆಚ್ಚು ಕಷ್ಟವಾಗಿರಲಿಲ್ಲ. ಸ್ವತಂತ್ರ ಹೋರಾಟಕ್ಕೆ ಮನೆತನದಿಂದ ತ್ಯಾಗ ಮಾಡ್ದಂತೆಯೂ ಆಗ್ತಿರಲಿಲ್ಲ. ಇದಿಷ್ಟೇ ಇವರ ಮಾತಿನ ತಾತ್ಪರ್ಯ. ಇವರಪ್ಪ ಜೈಲಿನಲ್ಲಿದ್ದಾಗ ಇವರಮ್ಮ ಗರ್ಭಿಣಿಯಾದ್ರೂ ಅಂತ ಅರ್ಥವಲ್ಲ.”
ಮುಂದೆ ಸಂಗಪ್ಪನೋರು ತಮ್ಮ ಸಾಧನೆ, ಊರಿಗೆ ಮಾಡಿದ ಉಪಕಾರಗಳನ್ನು ಉಬ್ಬಿ ಹೇಳಿಕೊಂಡರು. ತಾವಿರೋದ್ರಿಂದ್ಲೆ ಈ ಊರಲ್ಲಿ ಜಗಳ ಇಲ್ಲ, ಶಾಂತಿ ಇದೆ ಎಂದರು. ಊರಿನ ಒಳ್ಳೇದಕ್ಕೆ ಅದೆಷ್ಟು ಪೂಜೆ ಪುನಸ್ಕಾರ ಮಾಡ್ತಿದ್ದೇನೇಂತ ಪಟ್ಟಿ ಕೊಟ್ಟರು.
ಸ್ವಾತಂತ್ರೋತ್ಸವ ಸಂಗಪ್ಪೋತ್ಸವವಾಗಿ ಮುಗಿದ ಮೇಲೆ, ಮೇಷ್ಟ್ರು ಮಾತು ಕೊಟ್ಟಂತೆ ಐದಾರು ದಿನಗಳ ನಂತರ ರಾಜೇಂದ್ರನ ಭಾಷಣ ಏರ್ಪಡಿಸಿದರು. ಈ ವಿಷಯ ಸಂಗಪ್ಪನಿಗೆ ಗೊತ್ತಾಗದೆ ಇದ್ದೀತೆ? ಸಂಗಪ್ಪನಿಗೆ ಅನ್ನಿಸಿತು – ಈ ಹೆಡ್‌ಮಾಸ್ತರನ್ನ ಹಿಂಗೇ ಬಿಟ್ರೆ ಹೆಡ್‌ಲಾಂಗ್ ಆಗ್ತಾನೆ; ತಕ್ಕ ಪೂಜೆ ಮಾಡ್ಬೇಕು. ಇದರ ಫಲಿತಾಂಶವೆಂದರೆ ದೂರದೂರಿಗೆ ಹೆಡ್‌ಮಾಸ್ಟರ್ ‘ಎತ್ತಂಗಡಿ’. ಇದು ಸ್ವಾತಂತ್ರ್ಯ ಹೋರಾಟದ ಪ್ರಸಿದ್ಧಿಯ ಮನೆತನಕ್ಕೆ ಸೇರಿದ ಸಾವ್ಕಾರ್ ಸಂಗಪ್ಪ, ಹೆಡ್ ಮಾಸ್ಟರಿಗೆ ದಯಪಾಲಿಸಿದ ಸ್ವಾತಂತ್ರೋತ್ಸವದ ಕೊಡುಗೆ.
*****
ಮುಂದುವರೆಯುವುದು


















