ತೆರೆಗಳ ಕದನವೇಕಯ್ಯ,-ತೆರೆಗಳ ದೊರೆಯೆ!
ಹೂಂಕರಿಸುವ ನೀಲಾಶ್ವಗಳಂತೆ,
ಅರುಣನ ಕುದುರೆಗಳಂತೆ,
ಕಾಲದಂತೆ,-
ತಾಕಲಾಡುತಿಹವು ತೆರೆಗಳು.
ಪೀಕಲಾಡುತಿಹವು ನೊರೆಗಳು.
ಈ ತೆರೆಗಳಲ್ಲಿ ಯಾವುದನ್ನೇರಿದೆ ಹಯವದನ?
ಏರಿ ಎಲ್ಲಿಗೆ ನಡೆದೆ?
ತೆರೆಗಳ ತುಮುಲ ಯುದ್ಧವ ನೋಡಿ
ನೀರು ನಕ್ಕ ನಗೆಯೇ ನೊರೆಯಾಯ್ತು.
ಆಹಾ! ಕಾಳರಕ್ಕಸನ ಕೋರೆ-ಹಲ್ಲುಗಳಂತೆ
ಮಿಂಚುತಿದೆ ನೋಡು ನೊರೆ,-
ತೆರೆಗಳ ಮರಣವಾಗಿ.
ಮಿಂಚಿ ಮಾಯವಾಗುತಿದೆ ಮತ್ತೆ-
ತೆರೆಗಳ ಹರಣವಾಗಿ!
ಇದೇ ನಿತ್ಯ ಜೀವನ,
ಇದೇ ಚಿರಂತನ ತತ್ವ,
ಇದೇ ಸನಾತನ ಧರ್ಮ!
ತೆರೆಯಾಗಿ ಒತ್ತರಿಸುವೆನು,
ನೊರೆಯಾಗಿ ತತ್ತರಿಸುವೆನು,-
ನೀರಾಗಿ ಬಿತ್ತರಿಸುವೆನು!
ನಿನ್ನ ಕೃಪೆಯೊಂದಿರಲಿ ಸಮುದ್ರನಾಥ!
*****



















