ಮೂಲ: ಪಿಗಟ್
(Tortoise ಎಂಬ ಇಂಗ್ಲಿಷ್ ಕವಿತೆಯ ಛಾಯಾನುವಾದ)
ಎಷ್ಟೋ ಸಾವಿರ ವರ್ಷ ಮಣ್ಣಲ್ಲಿ ಹೂತು
ಹೊಳಪು ಕಂದಿದ್ದ
ರೂಪ ಕುಂದಿದ್ದ
ಕೊಳಕು ಹೆಂಚಿನ ನೂರು ಚೂರನ್ನು
ಅದರೊಳಗೆ
ಸೆರೆಯಾದ ಎಷ್ಟೋ ಯುಗಯುಗವನ್ನೆ ಕಂಡವನು,
ಸತ್ತ ಬದುಕನ್ನೆತ್ತಿ ಬೆಳಕಲ್ಲಿ ಬಿಚ್ಚುವುದೆ.
ಒಂದೆ ಗುದ್ದಲಿಯೇಟಿನಿಂದ ಕಾಲದ ಮುಳ್ಳ
ಲಕ್ಷ ವರ್ಷಗಳಷ್ಟು ಹಿಂದಕ್ಕೆ ತಳ್ಳುವುದೆ
ಮನುಕುಲದ ಗತಕಥೆಯ ಪದರ ಪದರವ ಬಿಚ್ಚಿ
ನಾಲ್ಕು ದಿನಗಳ ನಮ್ಮ ಅಲ್ಪ ಬಾಳುವೆಯನ್ನು
ಮುಟ್ಟಿ ಮೂದಲಿಸುವುದೆ
ವೃತ್ತಿಯಾಗಿದ್ದವನು ನಾನು, ಆದರು ಏನು?
ಆ ದಿನದವರೆಗೂ
ನೋಡಿಯೇ ಇರಲಿಲ್ಲ ಅಂಥ ಪ್ರಪ್ರಾಚೀನ ವಸ್ತುವನ್ನು.
ಬಲ್ಲೆ ನಾನೆಂದುಕೊಂಡಿದ್ದ ಕಾಲದ ಎಲ್ಲ ಥರದ ಕಸರತ್ತನ್ನು
ಹಳೆ ಗಳಿಗೆಬಟ್ಟಲಿನ ಭಾಷೆಯನ್ನು,
ಒಂದೊಂದು ಗಂಟೆ ಬಡಿತಕ್ಕು ಸಹ ಯುಗಯುಗದ
ಕಥೆಯೆ ಮುಗಿದದ್ದನ್ನು,
ಮುಪ್ಪು ಅಂತರ ಸಾವು ಬದುಕ ಮೆಟ್ಟಿದ್ದನ್ನು,
ಅದೃಷ್ಟ ಬೆನ್ನು ಚಪ್ಪರಿಸಿದ್ದ ಮಾನವ
ಸುಮೇರು ಸೆಯಿಸ್ತಾನ ಹಿಮಾಲಯದ ಅಡಿಯಲ್ಲಿ
ನೈಲ್ ನದಿಯ ತಡಿಯಲ್ಲಿ
ಕಾಲನ ಬಾಲ್ಯದಲ್ಲೆ
ಕಣ್ಣ ಸೋಲಿಸುವಂಥ
ಹಿರಿಯ ನಾಗರಿಕತೆಯ ಪಯಿರ ಬೆಳೆಸಿದ್ದನ್ನು,
ಅಂದು ಕಟ್ಟಿದ ನಗರಿ
ಅಂದೆ ನೆಲಕ್ಕೆ ಉರುಳಿ
ಮುಳ್ಳು ಕಳ್ಳಿಯ ಮಣ್ಣು ದಿಬ್ಬವಾದದನ್ನು.
ಇಷ್ಟು ಗೊತ್ತಿದ್ದು ಸಹ ಬೆಚ್ಚಿ ಬೆರಗಾದೆ
ನಂಬಲಾಗದೆ ಪ್ರಾಣಿಮೈಯನ್ನೆ ದಿಟ್ಟಿಸಿದೆ
ಸುಕ್ಕುಗಟ್ಟಿತ್ತು ಮೈ ಒಣಗಿ ಮೂಲೆಗೆ ಬಿದ್ದ
ಕಪ್ಪಾದ ಹಳೆ ಒರಟು ಬೂಟಿನಂತೆ
ಕವಿದ ಚಿಪ್ಪಿನ ಅಂಚು ಹೂತ್ತು ಹುಲ್ಲಲ್ಲಿ
ಟಾರ್ಟರನ ಚಳಿದಿನದ ಡೇರೆಯಂತೆ.
ಕತ್ತನ್ನೆತ್ತಿತು ಪ್ರಾಣಿ ನಿಧಾನವಾಗಿ
ಸತ್ತವನು ಗೋರಿಜೊತೆ ಏಳುವಂತೆ
ದಿಟ್ಟ ಹರಿಸಿತು ಒಮ್ಮೆ ನನ್ನ ಕಡೆಗೆ
ಕಾಲವೇ ಕಣ್ಣಾಗಿ ಹಾಯುವಂತೆ.
ಝಲ್ಲೆಂದಿತೆದೆ ಅದರ ಸೋಲುನೋಟಕ್ಕೆ
ಥಣ್ಣನೆಯ ಕಣ್ಣಲ್ಲಿ ಹೆಚ್ಚಾಗಿ ಏನೇನೊ ಕಪ್ಪಾದ ಹೇಳಿಕೆ
ಮಣ್ಣಾದ ರಾಜ್ಯಗಳು ಮೆರೆದ ಸಣ್ಣತನಕ್ಕೆ
ಉಂಟಾದ ನಾಚಿಕೆ
ಕೆನ್ನೀರ ತೊರೆ ಹರಿಸಿ ಬೆಳೆದ ಸಂಸ್ಕೃತಿ ಕಂಡು
ಅದಕ್ಕಾದ ಹೇಸಿಕೆ.
ಕೀಳ್ಮೆಯಲ್ಲ,
ಎಲ್ಲವನ್ನೂ ಕಂಡು ಉಳಿದು ಬಳಲಿದ್ದವನ ತಾಳ್ಮೆಯಿತ್ತು.
ನಾನು ಅಲ್ಲಿದ್ದದ್ದು ಸರಿಹೋಗಲಿಲ್ಲೇನೊ
ಗೊತ್ತೇ ಸಿಗದ ಹಾಗೆ ಅತ್ತ ಸರಿಯುವ ರೀತಿ
ಕೊಂಚ ಎತ್ತಿತು ಮೈಯ
ಒಣಗಿ ಸುಕ್ಕಾದ ಚಕ್ಕಳಕಾಲು ಚಲಿಸಿದುವು
ಆದರೆಷ್ಟು ನಿಧಾನ!
ಪೆಚ್ಚಾಯ್ತು ಕಾಲವೇ
ಚಲಿಸತೊಡಗಿತೊ ಆಮೆ ಗಂಟೆ ದಿನಗಳ ಲೆಕ್ಕ ನಿಂತುಹೋಯ್ತು
ಹುಟ್ಟಿ ಬೆಳೆಯಿತು ಗ್ರೀಸ್
ಮೆಟ್ಟಿ ಮೆರೆಯಿತು ರೋಮ್
ಸತ್ತುರುಳಿದರು ಎಲ್ಲ ಸೀಜರರು ಆಳಿ
ಬರ್ಬರರ ಮುತ್ತಿಗೆಗೆ ತುತ್ತಾಗಿ ಅತಿ ಹಿರಿಯ
ಚಕ್ರಾಧಿಪತ್ಯವೊಂದರ ಕಥೆಯೆ ಮುಗಿದಿತ್ತು
ಆ ಆಮೆ ನಿಲ್ಲುವುದರಲ್ಲಿ.
ಬೆರಗಾದ ನಾನು.
ಯಾವ ಹಳೆ ಜವುಗಲ್ಲಿ
ಮೊಟ್ಟೆಯೊಡೆದೀಚೆ ಬಂದಿತೊ ಏನೊ ಈ ಪ್ರಾಣಿ!
ನೆಲದ ಮೈ ಮುಸುಕಿದ್ದ ಹಿಮದ ಹೊದಿಕೆಗಳೆಲ್ಲ
ಧ್ರುವದತ್ತ ಸರಿದು
ಭೂರ್ಜಕಾಂಡಗಳಲ್ಲಿ ಮೊದಲ ಎಲೆ ಮೊಳೆದು
ಆದಿಮಾನವನಿನ್ನೂ ಗುಹೆಯಲ್ಲಿ ಉಳಿದು
ಸಾಧನೆಯ ಹಾದಿಯನು ತುಳಿವ ಹೊತ್ತು,
ಇದಕ್ಕೆ ವರ್ಷ ಹತ್ತು.
ದಾರಿಯಲ್ಲಿ ನಡುವೆ
ಒಂದ ಸಮ ಉದುರಿ ಸಾಗಿದ ಜೀವರಾಶಿಗಳ
ಹಾದು ಬಂತು
ಈ ಪುಟ್ಟ ಜಂತು.
ಲಂಕೆ ಬೆಂಕಿಗೆ ಸಿಕ್ಕು ಉರಿ ಕಾರಿದಾಗ
ಕುಂಭಕರ್ಣನ ಕಾಯ ನೆಲಕುರುಳಿದಾಗ
ಇದಕೆ ಮುದಿಪ್ರಾಯ.
ಶತಮಾನಗಳ ಕಾಲ
ಲೋಕದ ಕಚ್ಚಾಟವನ್ನ,
ಕರುಣೆಯಿಂದೆನುವಂತೆ
ದ್ವೇಷದ ಹುಚ್ಚಾಟವನ್ನ
ದಿಟ್ಟಿಸಿದೆ ನುಡಿಯದೆಯೆ ಒಂದು ಮಾತೂ
ತಲೆಯಮೇಲರಳಿರುವ
ಕಾಲವನೆ ಹಳಿದಿರುವ
ಆ ಮಹಾಛತ್ರದಡಿ ಮುದುರಿ ಕೂತು.
*****
















