Home / ಕಥೆ / ಕಾದಂಬರಿ / ಸಂಗಪ್ಪನ ಸಾಹಸಗಳು – ೩

ಸಂಗಪ್ಪನ ಸಾಹಸಗಳು – ೩

ಸೈಕಲ್ ಸವಾರಿಯಂಥ ಸಣ್ಣ ವಿಷಯಕ್ಕೆ ಸಂಗಪ್ಪ ಇಷ್ಟೆಲ್ಲ ಅವಾಂತರ ಮಾಡಿಕೊಳ್ಳಬೇಕಿತ್ತೆ ಅಥವಾ ಇಂಥಾದ್ದೆಲ್ಲಾದರೂ ಉಂಟೆ ಎಂದೆಲ್ಲ ಓದುಗ ಮಹಾಶಯರಿಗೆ ಅನ್ನಿಸಿರಬೇಕು. ಇಂಥಾದ್ದೆಲ್ಲಾದರೂ ಉಂಟೆ ಎಂಬ ಸಂಶಯ ಹಳ್ಳಿಗಳ ಪಾಳೇಗಾರಿ ವ್ಯವಸ್ಥೆಯಲ್ಲಿ ಬದುಕಿ ನರಳಿ ಬಂದವರಿಗೆ ಅಥವಾ ಸಂವೇದನಾಶೀಲತೆಯಿಂದ ನೋಡಿ ಬಂದವರಿಗೆ ಬರುವುದು ಸಾಧ್ಯವಿಲ್ಲ. ಇನ್ನು ಇಷ್ಟೆಲ್ಲ ಅವಾಂತರ ಮಾಡಿಕೊಳ್ಳೋ ಸಂಗಪ್ಪನ ‘ಸಾಹಸ’ಕ್ಕೂ ಮೇಲಿನ ಮಾತಿನಲ್ಲೇ ಉತ್ತರವಿದೆ. ಆದರೂ ಸಂಗಪ್ಪ ಈ ರೀತಿಯ ಸಂಗಪ್ಪನಾದದ್ದು ಹೇಗೆ ಅನ್ನೋದಕ್ಕಾಗಿ ಒಂದು ಪ್ರಸಂಗವನ್ನು ಉದಾಹರಣೆಯಾಗಿ ಕೊಡಬಹುದು. ಇದು ಉದಾಹರಣೆ ಮಾತ್ರ ಇಂಥ ಅನೇಕ ಪ್ರಸಂಗಗಳು ಅವನ ಬದುಕಿನಲ್ಲಿ ನಡೆದಿವೆ. ನಿಮ್ಮೂರಲ್ಲಿರುವ ಸಂಗಪ್ಪಂದಿರ ಬದುಕಿನಲ್ಲೂ ನಡೆದಿರಬಹುದು.

ನಾನಿಲ್ಲಿ ಹೇಳೋದು ಸಂಗಪ್ಪನ ಅಂತರಂಗದ ವಿಷಯ. ಕೆಲವರು ಹೇಳೋದುಂಟು – ನಮ್ಮಂಥವರು ಬರೆಯೊ ಸಾಮಾಜಿಕ, ರಾಜಕೀಯ ಪ್ರಜ್ಞೆಯ ಸಾಹಿತ್ಯದಲ್ಲಿ ಮನುಷ್ಯನ ಅಂತರಂಗಾನೇ ನೋಡಿರೊಲ್ಲ ಅಂತ. ಸಾಹಿತ್ಯ ವ್ಯಕ್ತಿಯ ಅಂತರಂಗಕ್ಕೆ ಮಾತ್ರ ಸೀಮಿತವಾಗಬೇಕಿಲ್ಲ. ನನ್ನ ಉದ್ದೇಶವಂತು ಸಮಾಜದ ಅಂತರಂಗವನ್ನು ನೋಡೋದು. ಆದರೆ ಇದು ಇಷ್ಟಕ್ಕೇ ನಿಲ್ಲದೆ ಸಮಾಜದ ಅಂತರಂಗದ ಮೂಲಕ ವ್ಯಕ್ತಿಯ ಅಂತರಂಗವನ್ನೂ ಕಾಣುವ ಕ್ರಿಯೆ ಉತ್ತಮ ಸೃಜನಶೀಲ ಕ್ರಿಯೆಯಾಗಬಲ್ಲದು. ಇಲ್ಲದೆ ಹೋದರೆ ಕೇವಲ ವೈಯುಕ್ತಿಕವಾಗುವ ಒಂದು ಅತಿರೇಕ ಮತ್ತು ಒಣ ಘೋಷಣೆ ಭಾಷಣಗಳಾಗುವ ಇನ್ನೊಂದು ಅತಿರೇಕವನ್ನು ಕಾಣಬೇಕಾಗುತ್ತದೆ. ಇಲ್ಲಿಯೇ ಇನ್ನೊಂದು ಮಾತು. ವ್ಯಕ್ತಿಯ ಬಾಹ್ಯ ಚಟುವಟಿಕೆಗಳನ್ನು ಮಾತ್ರ ಹೇಳಿ ಅಂತರಂಗವನ್ನು ಮರೆಯಲಾಗಿದೆ – ಎಂಬಂಥ ಮಾತುಗಳೂ ಟೀಕೆಯಾಗಿ ಕೇಳಿಬರುತ್ತವೆ. ವ್ಯಕ್ತಿಯ ಬಾಹ್ಯ ಚಟುವಟಿಕೆಗಳ ಹಿಂದೆ ಆಂತರಿಕ ಒತ್ತಡ ಇಲ್ಲವೆಂದು ಯಾಕೆ ತಿಳಿದುಕೊಳ್ಳಬೇಕು. ಉದಾಹರಣೆಗೆ ನಮ್ಮ ಕಥಾನಾಯಕ ಸಂಗಪ್ಪನನ್ನೇ ತೆಗೆದುಕೊಳ್ಳಿ, ಆತನ ಚಟುವಟಿಕೆಗಳು ‘ಬಾಹ್ಯ’ ಎನ್ನಿಸಿದರೆ ಏನನ್ನೋಣ? ಸಾಹಿತಿಯೊಬ್ಬ ವ್ಯಕ್ತಿಗಳ ಖಾಸಗಿ ಬದುಕನ್ನು ಮಾತ್ರ ಚಿತ್ರಿಸಬೇಕೆ ? ಬಾಹ್ಯಾಂತರಂಗಗಳಿಗೆ ಸಂಬಂಧವಿಲ್ಲವೆ ? ಒಂದು ಕೃತಿಗೆ ನಿರ್ದಿಷ್ಟ ಚೌಕಟ್ಟು ಇರುವಾಗ ಅದರೊಳಗಿನ ವಿವಿಧ ಸಾಧ್ಯತೆಗಳನ್ನು ನಿರೀಕ್ಷಿಸಬೇಕೇ ಹೊರತು ಎಲ್ಲವೂ ಒಂದೇ ಕೃತಿಯಲ್ಲಿರಬೇಕೆಂದರೆ ಹೇಗೆ ? ಹೀಗೆ ಏನೇನೋ ಪ್ರಶ್ನೆಗಳು ನನ್ನನ್ನು ಕಾಡಿಸುತ್ತವೆ. ಅದೇನೇ ಇರಲಿ ಸಮಾಜದ ಅಂತರಂಗವನ್ನು ಶೋಧಿಸುವ, ಆ ಮೂಲಕ ಈ ‘ಅಂತರಂಗ’ದ ಭಾಗವಾದ ವ್ಯಕ್ತಿಯ ಅಂತರಂಗಕ್ಕೂ ಚಾಚಿಕೊಳ್ಳುವ ಕೃತಿ ಹೆಚ್ಚು ಮಹತ್ವದ್ದಾಗಬಲ್ಲದು. ಜೊತೆಗೆ ಸಮಾಜದ ಅಂತರಂಗ ಶೋಧನೆಯ ಹಂತದ ಕೃತಿಗಳಿಗೂ ಒಂದು ಮಹತ್ವವಿದೆ. ವಸ್ತುವಿನ ಇತಿಮಿತಿ, ವ್ಯಾಪ್ತಿಗಳೇನು ಎನ್ನುವುದು ಮೊದಲು ಮುಖ್ಯ. ಆಮೇಲೆ ಸಾಧ್ಯತೆ ಮತ್ತು ನಿರೀಕ್ಷೆಯ ನಿರ್ಧಾರ, ನಿಜ, ಓದುಗ ಮಹಾಶಯ ಚರ್ಚೆ ಸಂಗಪ್ಪನನ್ನು ಬಿಟ್ಟು ಸಾಹಿತ್ಯ ಮೀಮಾಂಸೆಗೆ ಹೋಯ್ತು. ಈಗ ಅದನ್ನು ನಿಲ್ಲಿಸಿ ನಮ್ಮ ಸಂಗಪ್ಪನ ಅಂತರಂಗದ ವಿಷಯಕ್ಕೆ ಬರೋಣ.

ವ್ಯಕ್ತಿಯೊಬ್ಬ ಸಾರ್ವಜನಿಕ ಮಹತ್ವದವನಾಗಿದ್ದರೆ ತೀರಾ ಅಂತರಂಗದ ಅಥವಾ ಖಾಸಗಿ ವಿಷಯಗಳೂ ಹೀಗೆ ಬಹಿರಂಗ ಚರ್ಚೆಯ ಸಂಗತಿಗಳಾಗುತ್ತವೆಯೆಂಬುದಕ್ಕೆ ಈತನ ಒಂದು ಘಟನೆ ಸಾಕ್ಷಿ.

ಸಂಗಪ್ಪನ ಅಪ್ಪ ಸಾಮಾನ್ಯನಲ್ಲ. ಸ್ವಾತಂತ್ರ್ಯ ಹೋರಾಟಗಾರ. ಆದರೆ ಸಂಗಪ್ಪನಿಗೆ ಮೀಸೆ ಬರೋವೇಳೆಗೆ ಆತ ಗಾಂಧೀನ ಅರೆದು ಕುಡಿದ ‘ಲೀಡರ್ ಗಾಂಧೀವಾದಿ’ಯಾಗಿದ್ದ. ಸ್ವಾತಂತ್ರ್ಯೋತ್ತರ ಭಾರತದ ಗಾಂಧೀ ಒಕ್ಕಲಿಗೆ ಸೇರಿದ್ದ. ಈತನ ಪ್ರಾರಂಭಿಕ ಚಟುವಟಿಕೆಗಳು ಮಗ ಸಂಗಪ್ಪನ ಮೇಲೆ ಪ್ರಭಾವ ಬೀರದೆ ಇರಲಿಲ್ಲ. ಸ್ವಾತಂತ್ರ್ಯಪೂರ್ವ ಗಾಂಧೀವಾದಿ ಅಪ್ಪನ ಹರಿಜನ ಪ್ರೇಮ ಅದು ಹೇಗೋ ಸ್ವಾತಂತ್ರೋತ್ತರದಲ್ಲಿ ಮಗ ಸಂಗಪ್ಪನ ಮನಸ್ಸಿಗೆ ಹರಿದು ಒಬ್ಬ ಹರಿಜನ ಕನ್ಯೇನ ಪ್ರೇಮಿಸಿಯೇ ಬಿಟ್ಟ. ಯಾರಾ ಪುಣ್ಯಶಾಲಿ, ಸಂಗಪ್ಪನಂಥವನನ್ನು ಆಕರ್ಷಿಸುವ ಭಾಗ್ಯಶಾಲಿ – ಅಂತ ಕುತೂಹಲವೆ? ಅವಳ ಹೆಸರು ಮಲ್ಲಿ. ಒಳ್ಳೆ ಮೈಕಟ್ಟಿನ ಮಲ್ಲಿ. ನಮ್ಮ ಸಂಗಪ್ಪನ ಪ್ರೇಮಕ್ಕೆ ಇನ್ನೇನು ಬೇಕು? ಹೊಲಕ್ಕೆ ಕೂಲಿಗೆ ಬಂದಾಗ ಕೇಳೇಬಿಟ್ಟ ಆಕೆ ಒಂದು ಕ್ಷಣ ನಡುಗಿದಳು; ಆಮೇಲೆ ನಾಚಿದಳು. ಕಾಲ ಬೆರಳಲ್ಲಿ ನೆಲ ಗೀಚಿದಳು. ಅದರಿಂದ ಸಂಗಪ್ಪನಿಗೆ ಆಕೆ ಪ್ರೇಮ ಪತ್ರ ಬರೆದಷ್ಟೇ ಖುಷಿಯಾಗಿ ಪ್ರೇಮೋತ್ಕಟತೆಯಿಂದ ‘ಚಿನ್ನ ರನ್ನ’ ಎಂದೆಲ್ಲ ಪಾಠ ಒಪ್ಪಿಸಿದ. ದಿನದಿನಕ್ಕೆ ಹೊಲದ ಮರದ ಗುಂಪುಗಳ ನಡುವೆ ಒಡನಾಟ ಜಾಸ್ತಿಯಾಗಿ ತನ್ನ ಪ್ರೇಮಕ್ಕೊಂದು ಆದರ್ಶದ ಮೆರುಗು ಕೊಟ್ಟ. ‘ಗಾಂಧೀವಾದಿ ಅಪ್ಪನ ಮಗನಾಗಿ ನಿನ್ನ ಮದುವೆಯಾಗ್ತನೆ, ಆದರ್ಶವಾದಿಯಾಗ್ತೇನೆ’ ಎಂದು ಸಾರಿದ. ಮಲ್ಲಿ ಮೌನವಾಗಿರಲಿಲ್ಲ. “ಮದ್ವೆ ಆಗಾಕ್ ಬಿಡ್ದಿದ್ರೆ?” ಎಂದು ಕಣ್ಣಬಾಣ ಬಿಟ್ಟಳು. ಸಂಗಪ್ಪ “ಯಾಕ್ ಬಿಡಲ್ಲ? ನಾನು ಆ ಮನೆ ವಂಶೋದ್ಧಾರಕ” ಎಂದು ಬೀಗಿದ. “ಅದುಕ್ಕೇಂಬ್ತಾನೆ ಮದ್ವೆ ಆಗಾಕ್ ಬಿಡ್ದಿದ್ರೆ?” ಎಂದಳು ಮಲ್ಲಿ. “ಏನೇ ಆದ್ರೂ ನಾನ್ ಮಾತ್ರ ನಿನ್ ಬಿಡಲ್ಲ” ಎಂದು ಆಶ್ವಾಸನೆ ಕೊಟ್ಟ. “ಮದ್ವೆ ಆದ್ರೂ ಈ ಊರಾಗೆಂಗ್ ಇರಾದಪ್ಪ. ನನಗಂತೂ ಬಯಾಗ್ತೈತೆ” ಎಂದಳು ಆಕೆ. “ನಿಂಗ್ಯಾಕೆ ನಾನಿದ್ದೀನಿ ಸುಮ್ಕಿರು” ಎಂದ ಈತ.

ತನ್ನ ಅಪ್ಪನ ಬಳಿ ಈ ವಿಷಯ ಪ್ರಸ್ತಾಪಿಸುವ ಧೈರ್ಯವನ್ನು ಸಂಪಾದಿಸಿ ಶೇಖರಿಸಿ ಸಜ್ಜಾಗುವ ಹೊತ್ತಿಗೆ ಅಪ್ಪನೇ ಮಗನನ್ನು ಕೇಳಿಬಿಟ್ಟ. ಈ ವೇಳೆಗೆ ಇದು ಒಳಗೊಳಗೇ ಸುದ್ದಿಯಾಗಿತ್ತು. ಇದು ಯಾರದೊ ಒಬ್ಬರ ವಿಷಯವಾಗದೆ ‘ಊರ ದೊಡ್ಡವರ’ ವಿಷಯವಾಯ್ತು. ‘ದೊಡ್ಡರ ಮಕ್ಳೇ ಹಿಂಗ್ ಮಾಡಿದ್ರೆ ಊರು ಉಳ್ಯುತ್ತಾ’ ಅಂತ ಹರೇಶಾನುಭೋಗರ ನೇತೃತ್ವದಲ್ಲಿ ಊರಿನ ಮರಿನಾಯಕರ ಗುಂಪು ಬಂದು ದೊಡ್ಡ ನಾಯಕರನ್ನು ಕೇಳಿಯೇಬಿಟ್ಟಿತು. ಇದರಿಂದ, ಕೋಪ ತಾಪಗಳಿಗೆ ತುತ್ತಾದ ‘ದೊಡ್ಡ ನಾಯಕರು’ ತಮ್ಮ ಮಗನನ್ನು ಜಗ್ಗಿಸಿ ಕೇಳಿದರು.

“ಏನೋ ನಿಂದು ಹಲ್‌ಕಟ್ ಕೆಲ್ಸ ?”

“ನಾನೇನು ಹಲ್‌ಕಟ್ಸಿಲ್ಲ. ನೀನೇ ಕಟ್ಟಿಸ್ಕೊಂಡಿರಾದು” – ಎಂದುಬಿಟ್ಟ ನಮ್ಮ ಕಥಾನಾಯಕ ಸಂಗಪ್ಪ.

ಮತ್ತಷ್ಟು ರೇಗಿದ ಅವರಪ್ಪ.

‘ಹಲ್ ಉದುರಿಸ್ಬಿಡ್ತೀನಿ’ – ಎಂದ.

“ಉದುರಿಸಿದ್ರೆ ನೀನೇ ಕಟ್ಟುಸ್ತೀಯ” – ಎಂದ ಮಗರಾಯ.

ಅಪ್ಪನಿಗೆ ತಡೆಯಲಾಗದೆ ಆರ್ಭಟಿಸಿದ – “ಯಾವ್ ಬೋಳೀಮಗ ಹೇಳಿದ್ನೊ ಮಾದಿಗ್ರ್ ಹುಡುಗಿ ಲವ್ ಮಾಡು ಅಂತ?”

“ನೀನೆ”

“ಏನೊ ಅಂದಿದ್ದು?”

“ನೀನೇ ಅಂದೆ. ಆಗ ಹೇಳ್ತಾ ಇದ್ದಲ್ಲ – ಹರಿಜನರು ಅಂದ್ರೆ ಪ್ರೀತಿ ಪ್ರೇಮ ಇರ್ಬೇಕು. ಗಾಂಧಿ ಮಹಾತ್ಮರ ಮಾತ್ನ ನಾವೆಲ್ಲ ಪರಿಪಾಲುಸ್ಬೇಕು – ಅಂತ. ಅದ್ಕೇ ನಾನು ಹರಿಜನರನ್ನ ಪ್ರೇಮಿಸ್ದೆ.”

ಅಪ್ಪ ಚಡಪಡಿಸಿದ. ಕೈ ಕೈ ಹಿಸುಕಿಕೊಂಡ. ಮನಸ್ಸಿನೊಳಗೆ ಗಾಂಧೀಗೆ ಹಿಡಿಶಾಪ ಹಾಕಿದ. ಆಮೇಲೆ ಹೇಳಿದ:
“ಅದು ಅವತ್ತಿಗೆ, ಅವಾಗಿನ್ನು ಸ್ವತಂತ್ರ ಬಂದಿಲ್ಲ.”
“ಇವತ್ತು ನಂಗ್‌ ಸ್ವತಂತ್ರ ಬಂದೈತೆ”
-ಮಗ ಉತ್ತರಿಸಿದ.
“ಹಂಗಾದ್ರೆ ನನ್ ಆಸ್ತೀಲಿ ನಿಂಗೆ ಚಿಕ್ಕಾಸೂ ಸಿಕ್ಕಲ್ಲ.”

“ನಿನ್ ಆಸ್ತೀನೂ ಬ್ಯಾಡ ಯಾತ್ರುದೂ ಬೇಡ” ಎಂದು ಹೇಳಬೇಕೆಂದು ಬಾಯಿಗೆ ಬಂತಾದರೂ ಚಿಕ್ಕಂದಿನಿಂದ ಸುಖ ಸುಪ್ಪತ್ತಿಗೆಯ ರುಚಿ ಕಂಡಿದ್ದವನಿಗೆ ಹಾಗೆನ್ನಲು ಸಾಧ್ಯವಾಗಲಿಲ್ಲ. ಅದರ ಬದಲು “ಸಿಟ್ಟನಾಗ್ ನೀನಂದಿದ್ದೆಲ್ಲ ನಿಜ ಎಲ್ಲಾಗ್ತೈತೆ” ಎಂದು ಗೊಣಗಿದ. “ಹರೇದ್ ಮತ್ತಿನಾಗ್ ಮಾಡಿದ್ದೆಲ್ಲ ಸರಿ ಹೆಂಗಾಗ್ತೈತೆ?”- ಎಂದು ಅಪ್ಪ ಪ್ರಶ್ನೆ ಹಾಕಿದ.

“ಮತ್ತು ಇಲ್ಲ ಏನೂ ಇಲ್ಲ. ಎಲ್ಲಾ ಗೊತ್ತಾಗೇ ಲವ್ ಮಾಡಿದ್ದೀನಿ”
-ಮಗ ಉತ್ತರಿಸಿದ.
“ಬರಿ ಲವ್ ಮಾಡಿದ್ದೀಯೊ ಅಥವಾ…”
“ಬರೀ ಲವ್ ಹೆಂಗ್ ಮಾಡೋದು?”
– ಮಗ ಸಲೀಸಾಗಿ ಪ್ರಶ್ನೆ ಹಾಕಿದ. ಅಪ್ಪನಿಗೆ ಆಕಾಶ ಬಿದ್ದಂತಾಯ್ತು. ಕೂಡಲೆ ಮಾತು ನಿಲ್ಲಿಸಿದ.

ಊರ ಮರಿನಾಯಕರಿಗೆ ಕರೆಹೋಯ್ತು. ದೊಡ್ಡ ನಾಯಕರು ಮಾದಿಗರ ಮಲ್ಲಿ ಮತ್ತು ಅವಳಪ್ಪ ಹನುಮನನ್ನು ಊರು ಬಿಡಿಸುವ ಮಾತಾಡಿದರು. ಆದರೆ ಕೆಲವರು “ನಿಮ್ಮ ಮಗ ಮನಸ್ ಮಾಡ್ದಿದ್ರೆ ಅವ್ಳಿಗೆಂಗ್ ಧೈರ್ಯ ಬರ್ತೈತೆ ಇಂಥಾದುಕ್ಕೆಲ್ಲ?” ಎಂದರು. ಇನ್ನು ಕೆಲವರು “ಏನೊ ಸುಮ್ಕೆ ಜೊತಿಗಿತಿ ಮಾಡ್ಕಂಡವ್ರೆ ಅಂದ್ರೆ ಆಟೇ ಅಲ್ಲ, ಮದ್ವೆ ಆಗ್ತಾರಂತೆ ಎಲ್ಲಾನ ಉಂಟಾ? ಮುಂದೆ ಊರ ಹರೇದ್ ಹುಡುಗ್ರೆಲ್ಲ ಹಿಂಗೇ ಆದ್ರೇನ್ ಗತಿ?” ಎಂದರು.

ಒಟ್ಟಿನಲ್ಲಿ ಇಷ್ಟು ತೀರ್ಮಾನ ಆಯ್ತು – ಹನುಮ ಮತ್ತು ಅವನ ಮಗಳಿಗೆ ಬೆದರಿಕೆ ಹಾಕೋದು. ಅಷ್ಟಕ್ಕೇ ನಿಲ್ಲದೆ ಅವಳಿಗೊಂದು ಗಂಡುನೋಡಿ ಮದ್ವೆ ಮಾಡೋದು. ಆ ಖರ್ಚನ್ನೆಲ್ಲ ದೊಡ್ಡನಾಯಕರೇ ವಹಿಸಿಕೊಳ್ಳೋದು. ದೂರದೂರಲ್ಲಿ ಎಲ್ಲಾದ್ರೂ ಗುಟ್ಟಾಗಿ ಮದುವೆ ಮುಗಿಸಿ ಆಮೇಲೆ ಹೇಳಿದ್ರೆ ಸಂಗಪ್ಪ ಇನ್ನೇನು ಮಾಡಬಲ್ಲ? ಇದಾದ ಮೇಲೆ ಸಂಗಪ್ಪನನ್ನೂ ಸರಿಯಾಗಿ ನಡಕೊಳ್ಳೋ ಹಾಗೆ ಹೇಳಬೇಕು ಅಂತಲೂ ಒತ್ತಾಯ ಬಂತು. ಅದಕ್ಕೆ ತಕ್ಷಣ ದೊಡ್ಡ ನಾಯಕರು ಉತ್ತರಿಸಿದರು; “ಅವ್ನ್ ಸರ್ಮಾಡಾದೇನ್ ಮಹಾದೊಡ್ಡ ಕೆಲ್ಸನೇನ್ರಿ? ನನ್ನ ಮಗುನ್ನ ಹಂಗಿಟ್ಟಿರ್ಬೇಕೊಂಬ್ತ ನಂಗೊತ್ತು. ಆ ಮಲ್ಲಿ ಮದ್ವೇನೂ ಗುಟ್ಟಾಗಾಗೋದ್ ಬೇಡ. ನನ್ ಮಗುನ್ನೇ ಎಲ್ಲಾನ ಕಲ್ಲಾನ ಕಳ್ಸಿ ಅವಳ ಮದ್ವೇನ ರಾಜಾರೋಷವಾಗಿ ಮಾಡ್ತೀನಿ. ನಾನೇ ಮುಂದೆ ನಿಂತು ಹರಿಜನ ಸೇವೆ ಮಾಡ್ತೀನಿ. ಈಗೇನೊ ಹೀಗಿದ್ದೀವಿ ಅಂತ ಗಾಂಧಿ ಹೇಳಿದ್ದು ಪೂರ್ತಿ ಬಿಡುಕಾಗ್ತೈತ?” ಎಂದರು.

ಅಂದದ್ದಷ್ಟೇ ಅಲ್ಲ, ಹಾಗೇ ಮಾಡಿಬಿಟ್ಟರು. ಹನುಮನನ್ನು ಕರೆಸಿ ಚೆನ್ನಾಗಿ ಬಯ್ದರು.

“ಮಗಳನ್ನ ಹುಟ್ಟಿಸ್ದಲ್ಲ, ಹದ್ದುಬಸ್ತಿನಾಗ್ ಇಡಾಕ್ ಬರಲ್ವೇನೂ ಬಡ್ತಿ ಮಗ್ನೆ” ಎಂದು ಜಗ್ಗಿಸಿದರು. ಇದೇ ಮಾತನ್ನು ಇವರಿಗೆ ಅವನೂ ಕೇಳಬಹುದಾಗಿತ್ತಾದರೂ ಬಾಯಿಲ್ಲದ ಬದುಕು ಅವನದು.

ಇದಾದ ಮೇಲೆ ಒಲ್ಲದ ಮಲ್ಲಿಗೆ ಮದುವೆಯೂ ಆಯ್ತು: ದೂರದೂರಿಗೆ ಕಳಿಸಲ್ಪಟ್ಟಿದ ಸಂಗಪ್ಪ ವಾಪಸ್ ಬಂದದ್ದೂ ಆಯ್ತು. ಬಂದಾಗ ವಿಷಯ ಗೊತ್ತಾಯ್ತು. ಸಂಗಪ್ಪ ಹೌಹಾರಿದ. ಅಪ್ಪನ ಬಳಿ ಜಗಳಾಡಿದ. ಅಪ್ಪ “ಇದಕ್ಕಿಂತ ಅಪರಂಜಿ ಹೆಣ್ಣುಗಳ ತಂದು ಸಾಲು ಸಾಲು ನಿಲ್ಲುಸ್ತೀನಿ ಸುಮ್ಕಿರು” ಎಂದ. ಆದರೂ ಸಂಗಪ್ಪ ಸುಮ್ಮನಿರಲಿಲ್ಲ; ಗಡ್ಡ ಬಿಡಿಸಿದ. ಗುಡ್ಡ ಹತ್ತಿದ. ಕೂತು ಚಿಂತಿಸಿದ. ಹೊಲವೆಲ್ಲಾ ತಿರುಗಾಡಿದ. ಭಗ್ನ ಪ್ರೇಮಿಯ ಎಲ್ಲ ಲಕ್ಷಣಗಳನ್ನೂ ಪ್ರಕಟಿಸಿದ. ಇನ್ನೇನೂ ಹೊಳೆಯದಿದ್ದಾಗ ಮೊದಲಿನಂತಾಗ ಹತ್ತಿದ. ಕೂಡಲೆ ಅವರಪ್ಪ ರಂಗು ರಂಗಿನ ಹೆಣ್ಣುಗಳನ್ನು ತೋರಿಸಿ, ಹುಚ್ಚು ಹತ್ತಿಸಿ ಒಂದು ಅದ್ದೂರಿ ಮದುವೆ ಮಾಡಿಬಿಟ್ಟ.

ಮದುವೆಯಾದ ಮೇಲೆ ಇವನ ಮನಸ್ಸಿನ ಬೀಗದ ಕೈ ಹೆಂಡತಿಯ ಕೈಗೆ ಬಂತು. ಅಪ್ಪ-ಹೆಂಡತಿ ಇಬ್ಬರೂ ಸೇರಿ ಸಂಗಪ್ಪನನ್ನು ತಮ್ಮ ಪ್ರತಿಷ್ಠೆಯ ಹಾದಿಗೆ ಹಚ್ಚಿದರು. ಊರಿನ ಯುವರಾಜನಂತೆ ಮೆರೆಯಲು ಸಿದ್ಧಗೊಳಿಸಿದರು. ಊರಲ್ಲಿ ಯಾರೆಂದರೆ ಅವರ ಜೊತೆ ಓಡಾಡುವುದನ್ನು ತಪ್ಪಿಸಿದರು. ಆಸ್ತಿ-ಪಾಸ್ತಿಯ ಉಸ್ತುವಾರಿ ಕೊಟ್ಟರು. ಚನ್ನಾಗಿ ರುಚಿ ಹತ್ತುತ್ತ ಬಂದ ಸಂಗಪ್ಪ ಯಾವ ಸ್ಥಿತಿಗೆ ಬಂದನೆಂದರೆ ಅಪ್ಪ ಇರುವಾಗಲೇ ಮಹಾರಾಜನಾದ. ಅಪ್ಪ ಹೋದ ಮೇಲಂತೂ ಏಕೈಕ ವೀರನಾದ, ಈಗ ಎದುರಾಗ ಯಾರೂ ಸೈಕಲ್ ಹತ್ತಿ ಹೋಗಬಾರದೆಂಬ ಹದ್ದುಬಸ್ತು ಹಾಕುವ ಮಟ್ಟ ಮುಟ್ಟಿದ್ದ. ಸದ್ಯಕ್ಕೆ ಮಣ್ಣು ಮುಕ್ಕಿದ್ದ.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...