ಸ್ವಚ್ಛಂದ ಛಂದದಲ್ಲಿ
ಜಲಕ್ರೀಡಾವೃತ್ತದಲ್ಲಿ
ಅನುದಿನವು ತೆರೆಗಳು ಹಿಡಿವ ತಾಳಲಯದಲ್ಲಿ
ಗೀತವನೊರೆದೆನೆಂದು ಗೀಳ್ ಮಾಡಬೇಡ!
ಸಮುದ್ರವ ಸೆರೆಹಿಡಿದವರುಂಟೆ?
ಬಾವಿಯ ತೋಡಿ ಮುನ್ನೀರ ಬತ್ತಿಸಬಹುದೆ?
ಅಬ್ಜ ಶಬ್ದಗಳ ಪ್ರಾರಬ್ಧದಲ್ಲಿ ಸಹ
ಮಹಾಬ್ಧಿಯ ಕಣವೊಂದು ಸೆರೆಸಿಕ್ಕದಯ್ಯ!
ಕೊಡದಿರು ಶರಧಿಗೆ ಷಟ್ಟದಿಯ ದೀಕ್ಷೆಯನು!
ನೀರುನೀರಾಗಿ ಬೆಳಗು.
ನಾದಮಯವಾಗು ಹೊರಗು ಒಳಗು.
ಹಿಗ್ಗುಹಿಗ್ಗಾಗಿ ಹರಿ, ತಗ್ಗುತಗ್ಗಾಗಿ ಸರಿ.
ತೆರೆತೆರೆಯಾಗಿ ತೆರೆದರೆ
ನೊರೆನೊರೆಯಾಗಿ ಹರಿದೀತು.
ಉಕ್ಕಲಿ-ಚಿಮ್ಮಲಿ ಸಮುದ್ರದ ಸ್ವಾತಂತ್ರ್ಯ!
ಮಿಕ್ಕಲಿ-ಮೀರಲಿ ಮುನ್ನೀರ ನಿರ್ವಯಲು.
ಜರ್ಜರವಾದುದೆಲ್ಲ ಮುಳುಗಿ ಹೋಗಲಿ,- ಜಲಸಮಾಧಿಯಲ್ಲಿ.
ಹೊಸದೆಲ್ಲ ಹುಟ್ಟಿ ಬರಲಿ-ಹೃದಯದಾಳದಲ್ಲಿ!
ಬೇಡಯ್ಯ! ಬಂಧಗಳ ಬಂದಿವಾಸ;
ಬರೆದದ್ದೇ ಬ೦ಧುರವಾಗಬಹುದು.
ಸಾಕಯ್ಯ! ವೃತ್ತಗಳಾವರ್ತ:
ನಿನ್ನ ಮಣಿತವಿರಲಿ ಸಮುದ್ರದ ಕುಣಿತದಂತೆ!
ತರಂಗತ್ತರಂಗಗಳನೊಳಕೊಂಡ
ನವರಂಗ ವಾರಿಧಿಯಂತೆ
ವೃತ್ತಬಂಧಗಳು ಸಂಧಿಸಿ ಬಂದ
ಸಮುದ್ರವಾಗು, ಕವಿಯೆ!
ಕವಿಗಳ ಸಮುದ್ರಗುಪ್ತನಾಗು!
*****



















