ಮೂಲ: ರವೀಂದ್ರನಾಥ ಠಾಕೂರ್
ಗೀತಾಂಜಲಿ (The rain has held back… ಎಂಬ ಕಾವ್ಯಖಂಡ)
ಕಾಲ ಬರಿದೆ ಸರಿಯುತ್ತಿದೆ,
ಮಳೆ ಬೀಳದೆ ಬಿರಿಯುತ್ತಿದೆ
ನನ್ನೆದೆ ಬೆಂಗಾಡು;
ಕಂಡ ಕಣ್ಣು ಬೆಚ್ಚುವಂತೆ
ಉರಿಯುತ್ತಿದೆ ಬರಿಮೈಯಲಿ
ಮಳೆಗಾಲದ ಬಾನು.
ಮಿದುಮುಗಿಲಿನ ತಿಳಿಪರದೆಯ
ಮರೆಯು ಇಲ್ಲ, ಕಡೆಯಲಿ
ತಣ್ಸೋನೆಯ ತರುವ ಭಾವ
ಕೂಡ ಇಲ್ಲ ಮುಖದಲ್ಲಿ.
ನಿನ್ನಿಚ್ಛೆಯೆ ಮಾನ್ಯವೆನಗೆ
ಹೇಗೇ ಅದು ಬರಲಿ.
ನಿನ್ನ ಕೋಪ ಕಾಳಾನಿಲ-
ವಾಗಿ ಬೀಸಿ ಬಡಿಯಲಿ,
ಬಾನ ಬಯಲ ಸೀಳಿ ಮಿಂಚು
ಬಗೆಗೇ ಗರ ಹೊಡಯಲಿ,
ಆದರೊಂದ ಬೇಡುವೆ ದೊರೆ
ಸಲಿಸು ಅದನು ಕೃಪೆಯಲಿ.
ಚಲನೆ ಸತ್ತು ದುಮುದುಮಿಸುವ
ನೀರವ ಉರಿಸೆರೆಯ,
ಕಟುನಿರಾಶೆಯಲ್ಲಿ ಎದೆಯ
ಸುಡುವೀ ಬಿರುಬೇಗೆಯ
ತೆಗೆ ಹಿಂದಕೆ ಬೇಯಲಾರೆ
ತೆಗೆ ಹಿಂದಕೆ ಒಡೆಯ,
ಉರಿಕಾರುವ ಬಿರುಮೌನವ
ಪರಿಹರಿಸೋ ಜೀಯ
ಮೇಲಿನಿಂದ ಕವಿದು ಬರಲಿ
ನಿನ್ನ ಕೃಪೆಯ ಮುಗಿಲು
ತಂದೆ ಕೋಪಗೊಳಲು ನೀರು
ಹನಿವ ತಾಯ ಮುಖದೊಲು.
*****
















