ನಮ್ಮ ಸಾವ್ಕಾರ್ ಸಂಗಪ್ಪ ಅಂದ್ರೆ ಸಾಮಾನ್ಯನಲ್ಲ. ಆತ ಸಾಮಾನ್ಯ ಅಲ್ಲ ಅನ್ನೋದು ‘ಸಾವ್ಕಾರ್’ ಅನ್ನೊ ಶಬ್ದದಲ್ಲೇ ಗೊತ್ತಾಗುತ್ತಾದ್ರೂ ಈ ಮಾತನ್ನು ಒತ್ತಿ ಹೇಳೋಕೆ ಕಾರಣವಿದೆ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಿಜವಾಗ್ಲೂ ಸಂಗಪ್ಪ ಅಂದ್ರೆ ಸರ್ವಾಂತರ್ಯಾಮಿ ಅಂತ್ಲೆ ಅರ್ಥ. ನಾನು ನಿಮಗೆ ಪರಿಚಯ ಮಾಡ್ಸೊ ಸಂಗಪ್ಪನ ರೂಪರೇಷೆ ಬೇರೆ ಇರಬಹುದು. ಸಾಹಸಗಳ ಸ್ವರೂಪ ಭಿನ್ನವಾಗಿರಬಹುದು. ಆದ್ರೆ ಅವನು ಮಾತ್ರ ‘ಎಲ್ಲೆಲ್ಲೂ ನಾನೇ’ ಅಂತ ಆವರಿಸಿಕೊಂಡಿದ್ದಾನೆ. ನಿಮಗೆ ನಿಮ್ಮದೇ ಪರಿಸರದ ಬೇರೆ ಯಾವುದೋ ರೂಪದಲ್ಲಿ, ಸಾಹಸಗಳ ದಾಖಲೆ ನಿರ್ಮಾಣ ಮಾಡ್ತ ಕಾಣಿಸ್ಕೊಬಹುದು: ಹೆಸರು ಬೇರೆ ಇರಬಹುದು. ಮಾತಿನ ಧಾಟಿ ಹಾಕೊ ಪಟ್ಟು ಇತ್ಯಾದಿ ಇತ್ಯಾದಿ ಬೇರೆ ಇರಬಹುದು. ಆದರೆ ಹುಷಾರ್! ಅವನು ಮಾತ್ರ ನಮ್ಮ ಸಂಗಪ್ಪನೇ. ಎಲ್ಲಾ ಕಡೆ ಒಂದೇ ಕಾಲ್ದಲ್ಲಿ ಅದು ಹ್ಯಾಗೆ ಇರ್ತಾನೆ ಅಂತ ನಿಮಗೆ ಆಶ್ಚರ್ಯವಾಗಿರಬೇಕು. ಇಲ್ಲವೆ ಇವನೇನೋ ಬಿಡ್ತಾ ಇದಾನೆ ರೈಲು ಅಂತ ನಗು ಬಂದಿರ್ಬೇಕು – ನನ್ನ ಮಾತಿಗೆ. ಒಂದು ಮಾತು ಹೇಳ್ಲಾ ನಿಮಗೆ? ನಾನು ಅವತಾರಗಳನ್ನು – ಅಂದ್ರೆ ದೇವರು ದುಷ್ಟರನ್ನು ಶಿಕ್ಷೆ ಮಾಡೋಕೆ ಅವತರಿಸ್ತಾನೆ ಅನ್ನೊ ಮಾತನ್ನ – ನಂಬೊಲ್ಲ. ಆದ್ರೆ ಸಂಗಪ್ಪನ ಬಗ್ಗೆ ಹೇಳ್ತಿರೋದನ್ನ ನೋಡಿದರೆ ಇವನ್ಯಾರೊ ದೇವರ ಅವತಾರವೇ ಇರ್ಬೇಕು ಅನ್ನೊ ಗುಮಾನಿ ನಿಮಗೆ ಬಂದಿದ್ದರೆ, ನನ್ನನ್ನ ಸ್ವಲ್ಪನಾದ್ರೂ ನಂಬಿರ್ತೀರಿ; ಈ ನಮ್ಮ ಮಹಾನ್ ಸಾಹಸಿ ಸಂಗಪ್ಪ ಎಲ್ಲೆಲ್ಲೂ ಇದ್ದಾನೆ ಅನ್ನೋದರ ಅರ್ಥ ಆತ ದೈವಾವತಾರಿ ಅಂತ ಏನೂ ಅಲ್ಲ. ಆದರೆ ಪುರಾಣಕತೆಗಳಲ್ಲಿ ಬರೋ ದೈವದ ರೀತಿ ಎಲ್ಲೆಲ್ಲೊ ಯಾವ್ಯಾವುದೊ ರೂಪದಲ್ಲಂತೂ ನಮ್ಮ ಸಂಗಪ್ಪನ ‘ಆತ್ಮ’ ಸಂಚಾರ ಮಾಡ್ತಿರುತ್ತೆ. ಆದ್ದರಿಂದ ಇವನು ‘ಒಂಥರಾ ಅವತಾರಿ’ ಅನ್ನಬಹುದು. ಹಾಗಾದ್ರೆ ಆತ್ಮಸಂಚಾರ ಮಾಡುತ್ತೆ ಅಂದ್ರೇನು ಅರ್ಥ? ಇದೇನು ಒಗಟು? ಎಲ್ಲಾ ಕಡೆ ‘ಆತ್ಮ’ ಸಂಚರಿಸುತ್ತೆ ಅಂದ್ರೆ ಅವನು ಸತ್ತು ದೆವ್ವ ಗಿವ್ವ ಆಗಿರ್ಬೇಕು ಅಂತ ಆತಂಕವಾಗಿರ್ಬೇಕಲ್ಲವೆ ನಿಮಗೆ? ನಿಜ, ಅವನು`ಒಂಥರಾ ದೆವ್ವ’, ಹಿಡಿದ ಅಂದ್ರೆ ಮುಗೀತು. ಬೇರೆ ದೆವ್ವಗಳು ಇದಾವೋ ಇಲ್ಲವೋ ಹಿಡೀತಾವೋ ಇಲ್ಲವೊ ಇವ್ನಂತೂ ಸಿಕ್ಕಸಿಕ್ಕವ್ರನ್ನೆಲ್ಲ ಹಿಡೀತಾನೆ; ಹಿಂಡ್ತಾನೆ. ಆದರೆ ಇವನು ಸತ್ತಿಲ್ಲ; ದೆವ್ವವೂ ಆಗಿಲ್ಲ. ಸತ್ತವರು ದೆವ್ವ ಆಗ್ತಾರೆ ಅನ್ನೋದನ್ನು ನಾನಂತೂ ನಂಬಿಕೊಂಡಿಲ್ಲ; ಅದು ಬೇರೆ ವಿಷಯ; ಆದರೆ ಇದೇನು ಇವನ ವಿಷಯ ಇಷ್ಟು ರಹಸ್ಯ! ಇಷ್ಟು ನಿಗೂಢ! ಹಾಗಾದರೆ ಯಾವ್ದಾದ್ರೂ ಬಾಬಾ ಇರಬಹುದೆ? ಕೈಯಲ್ಲಿ ಲಾಡು ಸೃಷ್ಟಿಸಿ ಹಂಚಬಹುದೆ? ಸಾಹಿತ್ಯ ಸಾಮ್ರಾಟರು ಕಂಠಿ ಹಾರಾನೇ ಕೊಡಬಹುದೆ? ಸಾಹಿತ್ಯ ಸಾಮ್ರಾಜ್ಞೆಯರು ಸಿಕ್ಕಿದ್ರೆ ಸೀರೆ ಕೊಡಬಹುದೆ? ಅಥವಾ ಅಪಹರಿಸಬಹುದೆ? ಇಲ್ಲವೆ ವಸ್ತ್ರಾಪಹರಣ ಪ್ರಸಂಗವೊಂದನ್ನು ಪುನರ್ ಸೃಷ್ಟಿಸಿ ತಾನೇ ದುಶ್ಯಾಸನ ಮತ್ತು ಕೃಷ್ಣರ ದ್ವಿಪಾತ್ರಗಳನ್ನು ನಿರ್ವಹಿಸಬಹುದೆ? ಒಂದು ವೇಳೆ ಹಾಗಾಗೋದಾದರೆ ನಮಗೂ ಆಸ್ಥಾನದಲ್ಲೊಂದು ಸ್ಥಾನ ಕೊಡುವುದರ ಮುಖಾಂತರ ಸೌಂದರ್ಯೋಪಾಸನಾ ವ್ರತಕ್ಕೆ ನಿಷ್ಠೆ ತೋರುವ ಸದವಕಾಶವನ್ನು ಸದರೀ ಸ್ವಾಮಿಗಳು ಕಲ್ಪಿಸಿ ‘ಬಾ ಬಾ ಭಕ್ತನೆ’ ಅನ್ನಬಹುದೆ? ಹೀಗೆಲ್ಲ ನೀವು ಕನಸು ಕಟ್ತಾ ಇದ್ರೆ ಅದೂ ಕುಸಿಯುತ್ತೆ; ಹಾಗೆ ನೋಡಿದರೆ ನಮ್ಮ ಸಂಗಪ್ಪ ಒಬ್ಬ ಉಪಾಸಕ; ಇಂಥವರನ್ನು ತನಗೆ ಬೇಕಾದಂತೆ ಒಲಿಸಿಕೊಳ್ಳಬಲ್ಲ, ತಾನು ಬಲವಾಗಬಲ್ಲ. ಹಾಗಾದರೆ ಇವನಿನ್ನೆಂಥ ಉಪಾಸಕ? ಕಾಳಿಕಾದೇವಿಯ…? ಛೇ! ಛೇ! ವಾಮಾಚಾರಿಯಂತೂ ಅಲ್ಲ. ಹಾಗೆಲ್ಲ ಮಕ್ಕಳನ್ನು ಬಲಿಕೊಟ್ಟು ತನ್ನ ಆಸೆಯನ್ನು ಪೂರೈಸಿಕೊಳ್ಳೊ ಗುಹಾವಾಸಿ ಅಲ್ಲ; ನರಬಲಿ ಅನ್ನೋ ಮಾತು ಕಂಡರೆ ಮಾರುದ್ದ ಇರ್ತಾನೆ. ಅಂದಾಕ್ಷಣ ಈತ ರಕ್ತ ಹೀರೊಲ್ಲ ಅಂತಲೂ ಅಲ್ಲ. ಖಂಡಿತ ಹೀರ್ತಾನೆ… ಇದೇನಿದು ಸುತ್ತಿ ಬಳಸೊ ಜಾಲ ಅಂತ ನಿಮಗೆ ಬೇಸರವೊ – ಇಲ್ಲ – ಕುತೂಹಲವೊ ಉಂಟಾಗಿರಬೇಕು. ನೋಡಿ, ಈ ಆಸಾಮಿ ಯಾರನ್ನೂ ಬಿಡೋಲ್ಲ; ಸುಲಿದೇ ಸುಲೀತಾನೆ. ಲೂಟಿ ಮಾಡ್ತಾನೆ; ಬೇರೆಯವರನ್ನು ಕರಗಿಸಿ ತಾನು ಬೆಳೀತಾನೆ ಪೋಲೀಸ್ಕೋಸ್ನೋರಿಗೂ ಗೊತ್ತು; ಸರ್ಕಾರಕ್ಕೂ ಗೊತ್ತು. ಆದರೆ ಹಿಡಿಯೋಕಾಗಿಲ್ಲ; ಅಥವಾ ಹಿಡ್ಯೋದು ಬೇಕಿಲ್ಲ. ಯಾಕೆ ಹೀಗೆ ಅಂತೀರಾ? ಇಂಥ ಕೇಡೀನ, ದರೋಡೆಗಾರನ್ನ, ಖದೀಮನ್ನ ಯಾಕೆ ಹಿಡಿದಿಲ್ಲ ಅಂತೀರಾ? ಅದೇ ನೋಡಿ ನಿಮ್ಮ ತಪ್ಪು ಕಲ್ಪನೆ. ಅವನು ಕೇಡೀನೂ ಅಲ್ಲ, ದರೋಡೆಗಾರನೂ ಅಲ್ಲ.
ಹಾಗಾದ್ರೆ ಯಾರು? ಎಲ್ಲೆಲ್ಲೂ ಇದಾನೆ ಅಂದ್ರೆ ಏನರ್ಥ? ಹೌದು; ಅವನು ಎಲ್ಲೆಲ್ಲೂ ಇದ್ದಾನೆ. ಬಡವರ ಬದುಕಿನ ಭಯಂಕರ ರೂಪವಾಗಿ ಇದಾನೆ. ನಾವು, ನೀವು ಬದುಕುತ್ತಿರುವ ಸಂದರ್ಭದಲ್ಲಿ ಬಯಲಾಗಿದ್ದಾನೆ. ಹಾಗಾದ್ರೆ ನಿರಾಕಾರನೆ? ಅಲ್ಲ, ಬಹುರೂಪಿ, ಒಟ್ಟು ವ್ಯಾಪಿಸಿರುವ ಈ ನಾಢ ಬದುಕಿನಲ್ಲಿ, ನಮ್ಮ ವಿಷಾದದ ಹಿಂದೆ ವ್ಯಂಗ್ಯದಂತೆ ನಿಲ್ತಾನೆ; ನಮ್ಮ ಗೋಳಿನ ಹಿಂದೆ ನಗೆ ಚಿಮ್ಮಿಸಿ ಕೂರ್ತಾನೆ; ನಮ್ಮ ವಿಸ್ಮಯಗಳ ಹಿಂದೆ ದೊಡ್ಡ ಪ್ರಶ್ನೆಯಾಗಿ ಬೆಳೀತಾನೆ. ನಮ್ಮ ಬೆವರಿನ ಮುಂದೆ ಬಯಲನ್ನೆಲ್ಲ ಭಯಂಕರವಾಗಿ ವ್ಯಾಪಿಸಿ ಹೆಬ್ಬಾವಿನ ಬಾಯಿಯಾಗ್ತಾನೆ; ನಮ್ಮ ನಿಯತ್ತಿನ ತಳದಲ್ಲೆ ಬಾಯ್ದೆರೆದ ತೋಳವಾಗಿರ್ತಾನೆ…
ಹಾಗಾದ್ರೆ ಯಾರಿವನು?… ಮತ್ತದೇ ಪ್ರಶ್ನೆ, ನಾನು ಹೇಳೋ ಸಂಗಪ್ಪ ನಿಮ್ಮ ಪರಿಸರದಲ್ಲಿ ಯಾರು, ಎಂಥ ರೂಪಿ ಅನ್ನೋದನ್ನು ಗುರುತಿಸ್ಕೊಬೇಕಾದವರು ನೀವೇ. ಈಗ ಸದ್ಯಕ್ಕೆ ನಾನು ಕಂಡ ಸಂಗಪ್ಪನನ್ನು ಪರಿಚಯ ಮಾಡ್ಕೊಡೋಣ, ಅವನ ಅದ್ಭುತ ಸಾಹಸಗಳನ್ನು ತಿಳಕೊಂಡು ಖುಷಿಪಡೋಣ. ಆದರೆ ಈ ಖುಷಿಗೆ ಮೈಮರೆವು ಬೇಡ. ತಿಳುವಳಿಕೆಯ ಖುಷಿ ಇದಾಗಿರ್ಲಿ. ಯಾಕೆಂದ್ರೆ ಖುಷಿಯಲ್ಲಿ ಕ್ಷಣ ಮಾತ್ರ ನಾವು ಮೈಮರೆತರೂ ಸಂಗಪ್ಪನ ಕಬಂಧ ಬಾಹು ನಮ್ಮನ್ನು ಬಿಡೋಲ್ಲ. ಬಾಹು ನಮ್ಮನ್ನು ಹಿಡಿಯುತ್ತೆ; ಗೊತ್ತೇ ಆಗದಂಗೆ, ಪತ್ತೇನೆ ಇಲ್ದಂಗೆ ಬಾಯಿ, ರಕ್ತಹೀರುತ್ತೆ ಮೂಳೆಗಳ ಮೇಲೆ ಚರ್ಮ ಅಂಟಿಸಿದಂತೆ ‘ಮೈ’ ಅಂತ ಒಂದು ರೂಪಾನೇ ಬಿಟ್ಟು, ಮರುಕ್ಷಣದಲ್ಲೇ ಸಹಾನುಭೂತಿ ತೋರಿಸೊ ಸಂಗಪ್ಪನಾಗಿ ನಮ್ಮ ಮುಂದೆ ಒಂದು ಮ್ಲಾನ ಮುಖ ಕಾಣಿಸುತ್ತೆ. ಹಾಗಾದ್ರೆ ಈತ ರಾಕ್ಷಸನೆ? ಅಲ್ಲ, ರಾಕ್ಷಸನಂತೆ ಕಾಣೋಲ್ಲ. ಕೆಲಸ ಮಾಡ್ತಾನೆ; ಮಾಡುಸ್ತಾನೆ; ಏನೂ ಆಗದ ನಗೆ ಚೆಲ್ತಾನೆ. ಯಾವ ಭಾವ ಭಂಗಿ ಬೇಕು? ರೆಡಿಮೇಡ್ ಇರುತ್ತೆ. ಹೀಗೆ ನಿರಾಯಾಸವಾಗಿ ಭಾವ ಬದಲಾಯಿಸಿ, ಮುಟ್ಟದೆಯೂ ಮೈ ಮೆತ್ತಗೆ ಮಾಡುವ ಕಲಾ ನೈಪುಣ್ಯತೆ ನಮ್ಮ ಹೀರೋಗೆ ಇದೆ. ಅಂದ ಮೇಲೆ ಈತ ನಿಜವಾಗಿಯೂ ಚಿತ್ರರಂಗದ ಅತ್ಯದ್ಭುತ ನಟನೇ ಇರಬೇಕೆಂದು ತೀರ್ಮಾನವೆ? ಯಾಕೆಂದರೆ ನಟನಿಗೆ ಭಾವ ಬದಲಾವಣೆ ಸುಲಭ. ಮುಟ್ಟದೆಯೂ ಮೈ ಮೆತ್ತಗೆಯೂ ಮಾಡಬಲ್ಲನೆಂದರೆ – ಡ್ಯೂಪ್ ಹಾಕಿದ್ದಾರೆ ಅಂತ ತಾನೆ ಅರ್ಥ. ನಾಯಕ ನಟ ಮುಟ್ಟೋದೆ ಇಲ್ಲ. ಸಾಹಸಗಳಿಗಾಗಿಯೇ ಸಿದ್ಧವಾದ ‘ಡ್ಯೂಪ್ ನಟ’ನನ್ನು ಬಳಸಿ ‘ತಂತ್ರ’ ಮಾಡಲಾಗಿದೆ ಎಂಬುದೇ ಸರಿ.. ಸ್ವಲ್ಪ ಇರಿ; ನಮ್ಮ ಹೀರೋಗೆ ಡ್ಯೂಪ್ ಬೇಕಾಗಿಲ್ಲ. ಸಾವಿರಾರು ಜನರನ್ನು ಡ್ಯೂಪ್ ಮಾಡಬಲ್ಲ ಸಾಹಸಿ ಈತ… ಹಾಗಾದ್ರೆ ನಿಜವಾಗೂ ಸಾಹಸಿ ನಾಯಕ ನಟ ಈತ; ಹೌದಲ್ಲವೆ ಎಂದು ಪ್ರಶ್ನಿಸಬೇಡಿ, ಅವನು ಯಾವ ಸಿನಿಮಾ ನಟನೂ ಅಲ್ಲ, ನೂರಾರು ಜನ ನಟರನ್ನು ಸಾಕಬಲ್ಲ; ತನಗೆ ಬೇಕಾದಂತೆ ನಟಿಸೋಕೆ ವ್ಯಕ್ತಿಗಳನ್ನು ಸಾಕ್ತಾನೆ, ಸಾಕಿದ್ದಾನೆ. ಹಾಗಾದರೆ ದೊಡ್ಡ ನಿರ್ಮಾಪಕ? ಮನಸ್ಸು ಮಾಡಿದರೆ ಆಗಬಹುದು, ಆದರೆ ಆತ ನಿರ್ಮಾಪಕನಲ್ಲ. ಅಂದ್ರೆ ನಾಟಕದ ಕಂಪನಿ ಮಾಲಿಕನೆ? ಅದೂ ಅಷ್ಟೆ, ಮನಸ್ಸು ಮಾಡಿದರೆ ಕ್ಷಣದಲ್ಲಿ ಆಗಬಹುದು. ಆದ್ರೆ ದುಡ್ಡಿನ ದಡ್ಡನಲ್ಲ, ದಡ್ಡನನ್ನು ಮಾಡ್ಬೇಡ ದೇವ್ರೆ ಅಂತ ಗಂಟೆಗಟ್ಟಲೆ ಪೂಜೆ ಮಾಡ್ತಾನೆ, ಕಣ್ಮುಚ್ಚಿ ಕೂತರೆ ಮುಗೀತು; ಬಳೆಯ ಸದ್ದು ಕೇಳುಸ್ಬೇಕು, ಇಲ್ಲ ಅಂದ್ರೆ ಹಣದ ಸದ್ದು ಕೇಳಿಸಬೇಕು; ಆಗ ಮಾತ್ರ ಕಣ್ಣು ತೆಗೀತಾನೆ; ಹಲ್ಲು ಗಿಂಜ್ತಾನೆ; ಅಂಥ ಆಸಾಮಿ ಈತ. ಈಗ ಗೊತ್ತಾಯ್ತು ಬಿಡಿ, ಆತ ಮತ್ತಾರೂ ಅಲ್ಲ, ಯಾವುದೋ ದೇವಸ್ಥಾನದ ಪೂಜಾರೀನೆ ಸರಿ ಎನ್ನಿಸಿತೆ ನಿಮಗೆ? ನಿಜ ಇತ್ತೀಚೆಗೆ ನಮ್ಮ ಪೂಜಾರಿಗಳಿಗೆ ‘ಡ್ರೈ ದೇವರು’ಗಳನ್ನು ಪೂಜೆ ಮಾಡಿ ಗಂಟೆ ಆಡಿಸಿ ಸಾಕಾಗಿ ಹೀಗಾಗಿರಬಹುದು. ಅದೇ ಗಳಗಳ ಸ್ನಾನ, ಅದೇ ಒಣೊಣ ಮಂತ್ರ, ಅದೇ ಗಣಗಣ ಗಂಟೆ, ಅವರದೂ ಉಪ್ಪು ಹುಳಿ ತಿಂದ ದೇಹ ಅಲ್ಲವೆ? ಹೀಗೇ ಬಾಯಿ ಚಪ್ಪರಿಸಿ, ನಾಯಿ ಬಾಲದ ಪ್ರತೀಕವಾದ ಪೂಜಾರಿಗಳೆಷ್ಟೊ ಇರಬಹುದು. ಆದ್ರೆ ನಮ್ಮ ಸಂಗಪ್ಪ ಮಾತ್ರ ಪೂಜಾರಿ ಅಲ್ಲ. ಕಣ್ಣುಮುಚ್ಚಿ ದೇವರ ಮುಂದೆ ತನ್ನ ಆಸೆಗಳನ್ನು ಹೇಳಿಕೊಳ್ಳೋದು ಗೊತ್ತೇ ಹೊರ್ತುತು ಮಂತ್ರಗಿಂತ್ರ ಒಂದೂ ಗೊತ್ತಿಲ್ಲ. ಹಾಗೇನಾದ್ರೂ ಇಷ್ಟವಾದಲ್ಲಿ ಜನಾನ ಮೆಚ್ಚುಸ್ಬೇಕು ಅನ್ನಿಸಿದ್ರೆ ಹಣಕೊಟ್ಟು ಹಿಂದ್ಗಡೆ ಮಂತ್ರ ಹೇಳಿಸಿ ಮುಂದುಗಡೆ ತಾನು ಬಾಯಿ ಪಿಟಿಪಿಟಿ ಮಾಡೋಕೂ ತಯಾರು ಈ ನಟ ಭಯಂಕರ! ಛೆ!ಮತ್ತೆ ನಟನೆಯ ವಿಷಯಕ್ಕೇ ಬಂತು.
ಅಂದಹಾಗೆ ಸಂಗಪ್ಪ ನಾಟಕದ ಅಥವಾ ಸಿನಿಮಾದ ನಟ ಅಲ್ಲ ಅಂತ ಹೇಳಿದ್ದಾಗಿದೆ. ಆದರೆ ಅವನಂಥ ನಟ ಬೇರೊಬ್ಬ ಸಿಕ್ಕಲ್ಲ. ಸಿಕ್ಕಿದರೂ ಅಲ್ಲಿ ಸಂಗಪ್ಪನ ‘ಆತ್ಮ’ ಇರಲೇಬೇಕು. ಇವನ ಜೀವನದಲ್ಲಿ ಅದೆಂಥ ನಾಟಕೀಯ ಘಟನೆಗಳು ನಡೆದಿವೆ ಏನು ಕತೆ! ಇವನೆಂಥ ಮಾಯಾವಿ ಅನ್ನೋದು ಅನುಭವಿಸಿದವರಿಗೇ ಗೊತ್ತು. ಒಂದು ಸಾರಿ ಹೀಗಾಯ್ತು…
ಸಂಗಪ್ಪ – ಅಂದ್ರೆ ನಾನು ಹೇಳ್ತಾ ಇರೋ ನಮ್ಮ ಸಂಗಪ್ಪ – ತುಂಬಾ ಕುಳ್ಳು. ಅವನಿಗೆ ಹೆಣ್ಣು ಹುಡುಕೋದೇ ಒಂದು ಕಷ್ಟ ಆಗಿತ್ತಂತೆ. ನಿಮ್ಮಲ್ಲಿರೋ ಸಂಗಪ್ಪ ಕುಳ್ಳೋ ಉದ್ದಾನೊ ನಂಗೊತ್ತಿಲ್ಲ: ಅವ್ನಿಗೆ ಹೆಣ್ಣು ಸಿಗೋದು ಕಷ್ಟವಾಯ್ತೊ ಇಲ್ಲವೂ ಗೊತ್ತಿಲ್ಲ. ಆದ್ರೆ ನಮ್ಮ ಈ ಸಂಗಪ್ಪನಿಗೆ ಹೆಣ್ಣು ಸಿಕ್ಕಿದ್ರೂ ಉದ್ದದವರು ಬೇಡಾಂತ ಹುಡುಕಿದ. ಹುಡುಕಿದ, ಹುಡುಕೇ ಹುಡುಕಿದ. ಶ್ರೀರಾಮ ಬಂಗಾರದ ಜಿಂಕೆಯ ಬೆನ್ನ ಹತ್ತಿದಂಗೆ ಹೊರಟ; ಒಂದು ಜಿಂಕೆಯ ಬೆನ್ನು ಹತ್ತಿದ. ಏನೊ ಮೋಡಿಗೆ ಒಳಗಾದಂಗೆ ಹೋದ; ಉದ್ದವೂ ಗಿಡವೂ ಒಂದೂ ಯೋಚನೆ ಮಾಡದೆ, ಅದೇನು ಮಾಯವೊ ಹೊರಟೇಬಿಟ್ಟ. ಸಿಕ್ಕಿತು ಅನ್ನೋದ್ರಲ್ಲಿ ಆ ಜಿಂಕೆ ಚಂಗಂತ ಎಗರಿ ಅಷ್ಟು ದೂರ ಇರ್ತಾ ಇತ್ತು. ಆದರೆ ಇವನು – ಈ ಶ್ರೀರಾಮ – ಬಿಡಲೇ ಇಲ್ಲ. ಏಳು ಸಮುದ್ರದಾಚೆ ಕೀಳು ಸಮುದ್ರ ಹೊಕ್ಕರೂ ಬಿಡೊಲ್ಲ. ಅದರಾಚೆ ಬೆಟ್ಟ, ಗುಡ್ಡ, ಗುಹೆ, ಎಲ್ಲಿ ಹೋದರೂ ಬಂದೇ ಬರ್ತೀನಿ ಅಂತ ಬೆನ್ನು ಬಿದ್ದೇ ಬಿಟ್ಟ. ಕಡೆಗೆ ಆ ಬಂಗಾರದ ಜಿಂಕೆಗೆ ಬಾಣ ಬಿಟ್ಟ; ಹಿಡ್ದೇ ಬಿಟ್ಟ. ಇದರ ಫಲವಾಗಿ ಅದು ಇವನ ಜೊತೆ ಸಂಸಾರಿ ಆಯ್ತು. ಆ ಶ್ರೀರಾಮನ ಜಿಂಕೆ ಥರಾ ಸತ್ತು ಹೋಗಿಲ್ಲ. ಆದರೂ ಒಂದು ಹೋಲಿಕೆ ಇದೆ. ಶ್ರೀರಾಮನ ಜಿಂಕೆ ಬಾಣದ ಪೆಟ್ಟು ತಿಂದು ಬಿದ್ದು ಮಾರೀಚನ ರೂಪ ಕಂಡ್ತು. ಸಂಗಪ್ಪ ಬಾಣ ಬಿಟ್ಟಾದ್ಮೇಲೆ ಗೊತ್ತಾಯ್ತು ತನಗಿಂತ ಆಕೆ ಸಾಕಷ್ಟು ಎತ್ತರ ಅಂತ. ಆದರೇನು, ಸಂಸಾರಿ ಆದ; ‘ಏನೇ ಬರಲಿ ಈ ಲಂಬೂ ಇರಲಿ’ ಅಂತ ಘೋಷಿಸಿದ. ಆದರ ಫಲವಾಗಿ ಅವನು ಪಟ್ಟ ಪಾಡೇನು ಸಾಮಾನ್ಯವೆ? ತನ್ನ ಹೆಂಡತೀನ ಮುದ್ದಾಡೋದೂ ಕಷ್ಟಸಾಧ್ಯವಾದ ಸಂಗತಿಯಾದಾಗ ತೀರಾ ತಳಮಳಕ್ಕೀಡಾದ. ಹಿಂದೆ ಪುರಾಣದಲ್ಲಿ ಧರ್ಮರಾಜ ನಾರದನನ್ನು ಕೇಳಿ ಆಮೇಲೆ ರಾಜಸೂಯ ಯಾಗ ಮಾಡಿದ್ದು, ಮಯನಿಂದ ವಿಶೇಷ ಗೃಹ ನಿರ್ಮಿಸಿದ್ದು ಕೇಳಿದ್ದ. ಈತನೂ ಧರ್ಮರಾಯ ಅನ್ನೊ ‘ನಾಮ’ದಿಂದ ಪ್ರಸಿದ್ಧ. ಕೆಲವೊಮ್ಮೆ ಆರ್ಜುನ, ಇನ್ನೊಮ್ಮೆ ಭೀಮ – ಹೇಗೆ ಏನು ಬೇಕಾದ್ರೂ ಆಗಬಲ್ಲ. ಈಗಂತೂ ಧರ್ಮರಾಯನಂತೆ ಯಾರನ್ನೋ ಕೇಳಿದ: “ಏನ್ ಮಾಡ್ಲಿ ನನ್ನ ಕಷ್ಟಕ್ಕೆ ? ನನ್ನ ಏಕೈಕ ಗೃಹಪತ್ನಿ’ (ಆಂದ್ರೆ ಅರ್ಥವಾಯ್ತಲ್ಲ ?) – ನಿಮ್ಮಿಂದ ಸರ್ಯಾಗಿ ಸುಖವಿಲ್ಲ. ನನ್ನ ಗ್ರಹಚಾರಕ್ಕೆ ಒಂದು ಮುತ್ತು ಬೇಕು ಅಂದ್ರೂ ಎಗ್ರಿ ಬ್ಯಾಲೆನ್ಸ್ ತಪ್ಪಿ ಬಿದ್ದು ಬಿಡ್ತೀರಿ – ಅಂತೆಲ್ಆಲ ಗೋಳಾಡ್ತಾಳೆ. ಅವಳು ಹೇಳೋದು ನಿಜ, ಅವಳ ಗೋಳು, ಸಿಡಿಮಿಡಿ ಸಹಿಸಲಾರದೆ ಕೆನ್ನೆಗೆ ಎರಡು ಬಾರುಸ್ಲಾ ಅಂತ ಎಗರಿ ಒಂದು ಕೊಟ್ಟೆ ನೋಡಿ, ಅಷ್ಟು ದೂರ ಹೋಗಿ ಬಿದ್ದ! ಇಂಥ ಅನಾಹುತಗಳಿಂದ ಹೇಗಾದ್ರು ಪಾರು ಮಾಡಿ” – ಹೀಗೆ ಮೊರೆಯಿಟ್ಟ. ಬಿದ್ದು ಸೊಂಟ ಉಳುಕಿರೋದನ್ನು ಸಾಬೀತು ಮಾಡೋದಿಕ್ಕೆ ಹತ್ತು ಹೆಜ್ಜೆ ನಡಿಗೆಯ ಡೆಮಾನ್‌ಸ್ಟ್ರೇಷನ್ ಸಹ ನಡೆಸಿದ. ಆ ಹಿತೈಷಿಗೆ
ಕರುಣೆ ಉಕ್ಕಿತು.
“ಹೀಗೆ ಮೊದ್ಲೇತ ಹೇಳಿದ್ರೆ ನಿನ್ನ ಹೆಂಡ್ತಿ ಗೋಳಾಡ್ದಂಗೆ ಮಾಡ್ತಾ ಇದ್ನಲ್ಲ. ನಾನು ಖಂಡಿತ ಸಹಕಾರ ಕೊಡ್ತಿದ್ದೆ” ಎಂದ.
ಸೂಕ್ಷ್ಮಮತಿ ಸಂಗಪ್ಪ ಬೆಚ್ಚಿಬಿದ್ದು ಕಣ್ಣಿಂದ ಹಿತೈಷಿಯ ಎತ್ತರ ಆಳೆದ. ತನ್ನ ಹೆಂಡತಿಯ ಎತ್ತರವೇ ಇದ್ದಾನೆನ್ನಿಸಿ ಇವನಿಗೊಂದು ಕೆನ್ನೆಗೆ ಬಾರಿಸಲೆ ಎಂದುಕೊಂಡ. ಕೂಡಲೆ ಸೊಂಟದ ನೋವು ನೆನಪಿಗೆ ಬಂದು ತಪ್ಪಗಾದ. ಕೇಳಿದ: ‘ಸಹಕಾರ ಅಂದ್ರೆ? ಹೆಂಗೆ ಅಂತ?”
“ಇನ್ನು ಹೆಂಗಯ್ಯ, ಏನಾದ್ರೂ ಉಪಾಯ ಹೇಳ್ತಿದ್ದೆ” – ಅಂದಾಗಲೇ ಸಂಗಪ್ಪನಿಗೆ ಸಮಾಧಾನ. ಹಿತೈಷಿ ಮುಂದುವರೆಸಿದ: “ನೋಡು ಈಗೇನು ಹೆದರಬೇಡ: ನಿನ್ನ ಮಲಗೊ ಮನೇನ ಅತ್ಯಾಧುನಿಕಗೊಳಿಸಿದರಾಯ್ತು; ಇತ್ತೀಚೆಗೆ ನೀನು ಸಿನಿಮಾಗಳ್ನ ನೋಡಿಲ್ವ? ಅದ್ರಲ್ಲಿ ಎಂತೆಂಥ ಮೆಕ್ಯಾನಿಸಂ ಇರುತ್ತೆ ಗೊತ್ತ” ಎಂದು ಹೇಳಿದವನು ಪಟ್ಟಣಕ್ಕೆ ಕರೆದೊಯ್ದ.
ಪಟ್ಟಣದಿಂದ ಸಂಗಪ್ಪನೊಂದಿಗೆ ಒಂದು ತಂಡವೇ ಬಂದಿತು. ಅದು ಆತನ ಮಲಗುವ ಮನೆಯನ್ನು ಸುಸಜ್ಜಿತಗೊಳಿಸುವ ಕೆಲಸ ಕೈಗೊಂಡಿತು. ಅವರೆಲ್ಲ ಏನೇನೋ ಮಾಡುತ್ತಿರುವುದನ್ನು ಕಂಡು ಸಂಗಪ್ಪನ ಪತ್ನಿಗೆ ಸಂತೋಷಕ್ಕಿಂತ ದಿಗಿಲಾಯ್ತು. ಇದೇನೇನೋ ಮಾಡ್ತಿದ್ದಾರೆ; ತನ್ನನ್ನು ಎನ್ ಮಾಡ್ತಾರೋ ಇಲ್ಲಿ ಅಂಥ ಭಯಗ್ರಸ್ತಳಾದಳು.
ಎಲ್ಲಾ ಆದ್ಮೇಲೆ ತಾವಿಬ್ಬರೇ ಇರುವಾಗ ಸಂಗಪ್ಪ ಪತ್ನೀನ ಕರೆದ. “ಬಾರೇ ಇಲ್ಲಿ. ಏನ್ ಗೋಳಾಡಿದ್ದೂ ಆಡಿದ್ದೆ. ಮಹಾ ಊರ್ವಸಿ ಕೇಳಾಕಿಲ್ಲ. ನಾನು ಮೋಟ ಇದ್ದೀನಿ ಅಂತ ಅದುನ್ನೆ ಅಣಕುಸ್ತಾ ಇದ್ಎಯಲ್ಲ, ಧೈರ್ಯ ಇದ್ರೆ ಬಾರೆ ಇವತ್ತು” – ಈತನ ಮಾತಿನ ವೈಖರಿಗೆ ಅವಳು ಅದುರಿದಳು. ಆದ್ರೆ ಹೋಗದೆ ಇದ್ದರೆ ಮತ್ತೇನೋ ಅಂತ ಮೆಲ್ಲಗೆ ಬಂದಳು. ಅವಳು ಭಯದಿಂದ ತಲೆ ತಗ್ಗಿಸಿ ಬರ್ತಾ ಇರೊ ದೃಶ್ಯ ಕಂಡು ಸಂಗಪ್ಪ ತನ್ನ ಮೊದಲ ರಾತ್ರಿ ಇದೇ ಎಂಬ ಭ್ರಮೆಗೆ ಬಂದುಬಿಟ್ಟ; ಅತ್ಯಂತ ನಾಚಿಕೆಯಿಂದ ತನ್ನ ಹೆಂಡ್ತಿ ಬರ್ತಿದಾಳೆ ಅಂತ ಪುಳಕಿತನಾದ. ರೋಮಾಂಚನಗೊಂಡ ಆಕೆ ಹತ್ತಿರಕ್ಕೆ ಬಂದಾಗ ತಲೆ ಎತ್ತಿ ನೋಡಿದ; ತಗ್ಗಿದ ತಲೆಯ ಅವಳ ನೋಟದಲ್ಲಿ ಏನೇನೋ ಕಂಡ.
ಆಕೆ ಹಾಗೇ ನೋಡುತ್ತಿರುವಾಗ, ಇವನು ತಲೆ ಎತ್ತಿ ನೋಡಿ ನಸು ನಕ್ಕು ತನ್ನ ಕೈಯನ್ನು ಮೆಲ್ಲಗೆ ಗೋಡೆಯ ಕಡೆ ಚಾಚಿದ. ಪಟ್ಟಣದಿಂದ ಬಂದವರು ಆದೇನು ಮಾಡಿದ್ದಾರೋ, ಇವನೇನು ಮಾಡುತ್ತಾನೋ ಅಂತ ಆತಂಕದಿಂದ ಆಕೆ ಕಂಪಿಸುತ್ತಿದ್ದಾಗ ಪತಿಸನಿಹದ ಕಂಪನ ಅಂತ ಈತ ಭಾವಿಸಿ, ಉದ್ರೇಕಗೊಂಡು ತಟಕ್ಕನೆ ಗೋಡೆಯಲ್ಲಿದ್ದ ಒಂದು ಸ್ವಿಚ್ ಅದುಮಿದ. ಏನಾಶ್ಚರ್ಯ! ಸಂಗಪ್ಪ ನಿಂತ ನೆಲದಷ್ಟು ಭಾಗ ಮಾತ್ರ ಚಕ್ಕನೆ ಮೇಲೆದ್ದಿತು. ಈಗ ಈತನ ಮುಖ ಅವಳ ಮುಖಕ್ಕೆ ನೇರ! ಎಂಥ ಅದ್ಭುತ! ಯಾವ ಸ್ಪಂಟ್ ಸಿನಿಮಾ ಸೆಟ್‌ಗಿಂತ ಇದು ಕಡಿಮೆ?…
ಸ್ವಲ್ಪ ಹೊತ್ತಾದ ಮೇಲೆ ಸ್ವಿಚ್ ಆಫ್ ಮಾಡಿದಾಗ ಸಂಗಪ್ಪ ನಿಂತಿದ್ದ ನೆಲದ ಭಾಗ ಒಳಕ್ಕೆ ಹೋಯಿತು. ಮತ್ತದೇ ಮೊದಲ ರೀತಿಯ ನೆಲ; ಗುರುತೇ ಕಾಣದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಇದು ನಮ್ಮ ಸಂಗಪ್ಪನ ಖಾಸಗೀ ಜೀವನದ ಒಂದು ಸಾಹಸ. ಅದರೆ ಇಲ್ಲೀವರೆಗೆ ಈತ ಎಲ್ಲೆಲ್ಲೂ ಇರಬಹುದೆಂದು ಹೇಳಿದ್ದು ಈ ಖಾಸಗೀ ಘಟನೆಯನ್ನು ಗಮನದಲ್ಲಿಟ್ಟುಕೊಂಡಲ್ಲ. ನಮಗೆ ಮುಖ್ಯವಾದ್ದು ಅವನ ಸಾರ್ವಜನಿಕ ಜೀವನ ಮತ್ತು ಅಲ್ಲಿಯ ಸಾಹಸಗಳು. ಸಾರ್ವಜನಿಕ ಬದುಕಿನ ದೃಷ್ಟಿಯಿಂದಲೇ ಅವನನ್ನು ಸರ್ವಾಂತರಾಮಿ ಅಂದದ್ದು; ಒಂಥರಾ ದೆವ್ವ. ಒಂದು ರೀತಿಯ ಅವತಾರ. ನಟನಲ್ಲದಿದ್ದರೂ ನಟ, ಮಂತ್ರವಾದಿಯಲ್ಲದಿದ್ದರೂ ಮಾಯಾವಿ – ಮುಂತಾಗಿ ಕರೆದದ್ದು. ಹಾಗಾದರೆ ಸಂಗಪ್ಪ ನಿಜವಾಗಿ ಯಾರು? ನಟನೆ? ಮಂತ್ರವಾದಿಯೆ? ದೈವಾವತಾರಿಯೆ? ದೆವ್ವವೆ?
*****
ಮುಂದುವರೆಯುವುದು


















