ಮೂಲ: ರವೀಂದ್ರನಾಥ ಠಾಕೂರ್ ಗೀತಾಂಜಲಿ (If thou speakest not ಎಂಬ ಕಾವ್ಯಖಂಡ)
ನುಡಿಯದಿದ್ದರೇನು ನೀನು
ನಿನ್ನ ಮೌನವನ್ನೆ ನಾನು
ಹೃದಯದಲ್ಲಿ ತುಂಬಿ,
ವಿರಹದಲ್ಲಿ ಬೇಯುತಿರುವೆ
ಅಲುಗದಲೆಯೆ ಕಾಯುತಿರುವೆ
ನಿನ್ನನ್ನೇ ನಂಬಿ.
ಚುಕ್ಕಿಗಣ್ಣ ಬಿಚ್ಚಿ ಇರುಳು
ತಲೆ ತಗ್ಗಿಸಿ ತಾಳಿ
ಕಾಯುವಂತೆ ಬಾಳುವೆನು
ನನ್ನ ನೋವ ಹೂಳಿ.
ಬೆಳಗು ಬಂದೆ ಬರುವುದು,
ಇರುಳು ಹರಿದೆ ಹರಿವುದು;
ನಿನ್ನ ದನಿಯ ಸ್ವರ್ಣವರ್ಷ
ಆಗಸವನೆ ಭೇದಿಸಿ
ಜುಳಜುಳನೆಯೆ ತಿರೆಗಿಳಿವುದು
ವಿಶ್ವವನ್ನೆ ತೋಯಿಸಿ.
ನನ್ನ ಹಕ್ಕಿಗೂಡಿನಿಂದ
ಹರಿವ ಹಾಡುಗಳಲಿ
ನಿನ್ನ ನುಡಿಗೆ ರೆಕ್ಕೆ ಬಂದು
ವನದ ತುಂಬ ಹೊರಳಿ,
ನನ್ನ ತೋಟದಲ್ಲಿ ಮೂಲೆ
ಮೂಲೆಯಲ್ಲು ಗಿಡಗುಂಪಲಿ
ನಿನ್ನ ಮಧುರ ದನಿ ಪುಟಿವುದು
ಹೂ ಮೈಯನು ತಾಳಿ.
*****
















