Home / ಕವನ / ನೀಳ್ಗವಿತೆ / ಕಲೋಪಾಸಕ

ಕಲೋಪಾಸಕ

“Imagination is the body of Thought
Be it for thee to find its harness out.”

ಕಲೋಪಾಸಕ
(ಮೊದಲು ಮಾತು)

ಕಲೋಪಾಸಕನ ಜೀವಿತದ ಇತ್ಯರ್ಥವೇನೆಂಬ ಪ್ರಶ್ನೆಯು ನನ್ನನ್ನು ಅನೇಕ ವರ್ಷಗಳಿಂದ ಕೆಣಕುತ್ತಿತ್ತು. ಅವನ ಆಂತರಿಕ ಜೀವನದ ಪ್ರಗತಿಯು ಕಲಾಸೇವೆಯಿಂದ ಎಷರಮಟ್ಟಿಗಾಗಬಹುದು? ಅಲ್ಲದೆ ಅಸಂಖ್ಯಾತ ಕವಿಗಳು ಕೃತಿಗಳನ್ನು ರಚಿಸಿರುವಾಗ ಹೊಸ ಕವಿಯು ಬರೆಯುವ ಅಗತ್ಯವೆಲ್ಲಿದೆ? ಇವೆರಡು ನನ್ನ ಜೀವಿತದ ಕೂಟಪ್ರಶ್ನೆಗಳಾಗಿದ್ದವು.

೧೯೩೨ನೆ ಇಸ್ವಿಯ ಡಿಸೆಂಬರ್‌ ೨೫ನೆಯ ತಾರೀಖಿನ ನಸುಕಿನಲ್ಲಿ ನನಗೊಂದು ಕನಸು ಬಿದ್ದಿತು. ಆ ಕನಸಿನ ದ್ವಾರವಾಗಿ ಒಂದು ಶ್ರುತಿಯೂ ಬಂದು ಮುಟ್ಟಿತು!

“Imagination is the body of Thought:
Be it for thee to find its harness out.”

ಈ ಶ್ರುತಿಯಿಂದ ದೊರೆತ ಆನಂದದಲ್ಲಿ ನನ್ನ ಕೂಟಪ್ರಶ್ನೆಗಳೆರಡೂ ಮುಳುಗಿ ಹೋದವು.

“ಆದ್ಯ ಭಾವನೆಯೆ ವಾಹನವೇ ಕಲ್ಪನಾಶಕ್ತಿ; ಈ ಕಲ್ಪನಾ ಶಕ್ತಿಯೆಂಬ ಕುದುರೆಯನ್ನೇರಲೆಂದು ಪಲ್ಲಣವನ್ನು – ಶಬ್ದಸಾಮಗ್ರಿಯನ್ನು – ದೊರಕಿಸು” ಎಂದು ನನ್ನ ಸ್ನೇಹಿತರಾದ ಒಬ್ಬ ಆಂಗ್ಲ ಭಾಷಾವಿಶಾರದರು ಹೇಳಿದಂತೆ ಇದರರ್ಥವನ್ನು ಮಾಡಲು, ಕಲಾಸೇವೆಯು ಆನಂದವೂ ದೈವವೂ ಕೂಡಿಯೇ ಇರಬಹುದೆಂಬ ಶ್ರದ್ಧೆಯು ನನ್ನಲ್ಲಿ ಉತ್ಪನ್ನವಾಯಿತು. ಆದರೆ ಕವಿತೆಯನ್ನು ಬರೆಯುವಾಗ, “ನನ್ನನ್ನು ಪೂರ್ಣವಾಗಿ ಹಿಡಿದ ಅರ್ಥವು ಇನ್ನೊಂದು: “ಕಲ್ಪನಾಶಕ್ತಿಯು ಆದ್ಯಭಾವನೆಯ ಶರೀರವು ಮಾತ್ರ. ಆ ಆದ್ಯಭಾವನೆಯೊಡನೆ ನಿನಗೆ ಬೆರೆಯಲು ಬೇಕಾಗಿದ್ದರೆ ಆ ಭಾವನೆಗೆ ಪಲ್ಲಣನಂತಿದ್ದ ಕಲ್ಪನಾಶಕ್ತಿಯೆಂಬ ಶರೀರವನ್ನು ನೀನು ಬದಿಗೆ ಸರಿಸು.” ಕಲ್ಪನೆಯ ಕಾಮನ ಬಿಲ್ಲು ಸವೆದಾಗ ಮಾತ್ರ ಸತ್ಯಪ್ರಕಾಶವು ದೊರೆತೀತು; ಕಲ್ಪನೆಯನ್ನು ಸವೆಸುವದೆಂದರೆ ಅದನ್ನು ಕಲೋಪಾಸನೆಯಲ್ಲಿ ಯೋಜಿಸಲೇಬೇಕು. ಹೀಗಾಗಿ ಕಲೋಪಾಸಕನ ಜೀವನಕ್ಕೂ ಆಂತರಿಕ ಪ್ರಗತಿಯಲ್ಲಿ ಒಂದು ಸ್ಥಾನವಿದೆ. ಮಾನವನು ಅನುಭಾವಿಯಾಗುವದಕ್ಕಿಂತ ಮೊದಲು ಕಲೋಪಾಸಕನ ಸ್ಥಿತಿಯೊಳಗಿಂದ ಹಾಯ್ದು ಹೋಗಬೇಕೆಂಬ ಭಾವನೆಯು ನನಗೆ ಸಮಾಧಾನವನ್ನು ತಂದಿತು.

ಇದನ್ನೆಲ್ಲ ಕಾವ್ಯರೂಪವಾಗಿ ಹೊರಹೊಮ್ಮಿಸದೆ ಮನಸ್ಸು ಶಾಂತವಾಗುವ ಲಕ್ಷಣವು ಕಾಣಲಿಲ್ಲ. ಮುಂದೆ ಮೂರು ನಾಲ್ಕು ದಿವಸಗಳಲ್ಲಿಯೇ ‘ಕಲೋಪಾಸಕ’ವನ್ನು ಬರೆದು ಮುಗಿಸಿದೆನು. ಅಲ್ಲಿದ್ದ ಕಥೆಯು ನಾನು ಕಟ್ಟಿದ್ದಲ್ಲ; ನಾನು ಅಸಹಾಯನಾಗಿ ಬರೆಯುತ್ತ ಹೋದ ಹಾಗೆ ತಾನಾಗಿಯೆ ಕಟ್ಟಿಕೊಂಡದ್ದು. ನನಗೆ ಬಂದ ಹೊಸ ಅನಿಸಿಕೆ-ತಿಳುವಳಿಕೆಗಳ ವ್ಯಾಪ್ತಿಯ ನಿರೂಪಣೆಯು ಸಮಾಪ್ತವಾಗುವ ತನಕ ತಾನಾಗಿಯೇ ಬೆಳೆದು ಬಂದಿತು. ಕವಿತೆಯನ್ನು ಬರೆದ ಮೇಲೆ ಇಲ್ಲಿ ಕಲೋಪಾಸಕನ ನಾಲ್ಕು ಸ್ಥಿತಿಗಳು ವರ್ಣಿತವಾಗಿವೆಯೆಂದು ನನಗೆ ಹೊಳೆದಿತು.

(೧) ಕರೋಪಾಸಕನಾಗದೆ ಅವನ ವೃತ್ತಿಯನ್ನು ಅನುಸರಿಸ ಬೇಕೆಂಬ ಹವಣಿಕೆ.
(೨) ನಿಜವಾದ ಕಲೋಪಾಸನೆ.
(೩) ಮುಂದಿನ ಮಾರ್ಗದ ಶೋಧನೆ.
(೪) ಕಲೋಪಾಸಕನು ಅನುಭಾವಿಯಾಗುವದು.

ಕಲೋಪಾಸಕನು ಮೂರನೆಯ ಸ್ಥಿತಿಯಲ್ಲಿದ್ದಾಗ ಅವನು ಮಾಡುವ ಸಂಚಾರವನ್ನು ವರ್ಣಿಸುವಲ್ಲಿ ನನಗೆ ಅಕಸ್ಮಾತಾಗಿ ಶೆಲ್ಲಿ ಕವಿಯ ‘ಎಲ್ಸಾಸ್ಟರ್‌’ ಎಂಬ ಕವನದ ನೆನಪಾಯಿತು. ಈ ನೆನಪಿನ ಪರಿಣಾಮವು ನನ್ನ ಕವಿತೆಯ ಮುಂದಿನ ಭಾಗದ ರಚನೆಯ ಮೇಲೆ ಎಷ್ಟರ ಮಟ್ಟಿಗಾಯಿತೋ ನಾನು ಹೇಳಲಾರೆ. ಶೆಲ್ಲಿಯ ನಾಯಕನೂ ಕಲೋಪಾಸಕನಂತೆ ದೇಶಾಟನವನ್ನು ಬೆಳೆಸುವನು. ಒಂದು ನದಿಯ ದಂಡೆಯ ಮೇಲೆ ಮಲಗಿದಾಗ ಅವನಿಗೂ ದಿವ್ಯಾನುಭವವು ಬರುವದು. ಕಾಶ್ಮೀರದ ಅಡವಿಯಲ್ಲಿ ಒ೦ದು ನದಿಯ ದಂಡೆಯ ಹತ್ತಿರ ಅವನೂ ತೀರಿ ಹೋಗುವನು. ತೀರುಗುವಾಗ ತನ್ನ ಧ್ಯೇಯದೊಡನೆ ಐಕ್ಯವಾಗುವೆನೆಂಬ ಸಂತೋಷವು ಅವನಲ್ಲಿಯೂ ಕಂಡು ಬರುವದು. ಆದರೂ ನನ್ನನ್ನು ಪ್ರೇರಿಸಿದ ತತ್ವದ ಹಾಗು ಅದನ್ನು ಒಳಗೊಂಡ ಕಥೆಯ ಹೊಳಹೇ ಬೇರೆಯೆಂದು ಓದುಗರಿಗೆ ಹೊಳೆಯದಿರಲಾರದು. ರಚನಾಕ್ರಮವು ಸಹ ಮೂಲತಃ ಭಿನ್ನವಾಗಿದೆ; ತೀರಿ ಹೋದ ಕಲೋಪಾಸಕನ ಜೀವವೆ ಈ ಕವಿತೆಯನ್ನು ಹೇಳುತ್ತಲಿದೆ.

ನಾನು ಹೇಳ ಬಯಸಿದ ಮಾತುಗಳಗೆ ಶೈಲಿಯು ಅಷ್ಟೊಂದು ಒಗ್ಗಿ ಬರಲಿಲ್ಲ. ಮೂರು ನಾಲ್ಕು ದಿನಗಳ ಭರದಲ್ಲಿ ಭಾವವು ತನಗೆ ಗೊತ್ತಿದಷ್ಟು ಶಬ್ದಗಳನ್ನು ತೂರಿಕೊಂಡಿತು. ಶೈಲಿಯಲ್ಲಿ ಕಾಣಬಹುದಾದ ಎಲ್ಲ ವೈಷಮ್ಯಗಳಿಗೆ ನಾನೇ ಹೊಣೆಗಾರನು.

ಪುಣೆ
೧೦-೧೧-೩೪ | ವಿನಾಯಕ

ಕಲೋಪಾಸಕ

(ಒಂದು ಕಬ್ಬಿಗರ ಕೈಪಿಡಿ)

ಕೇಳಿರೈ ನನ್ನ ಬಾಳ್ವೆಕೆಯ ಐತಿಹ್ಯವನು!
ನಿಮಗೆಲ್ಲ ತಿಳಿ ಹೇಳಿ ಬಳಲುತಿಹ ಮಾನವ್ಯ-
ಕರಿದಾದ ದಾರಿಯೊಂದಿರುವ ಗೂಢವ ತಿಳಿಸಿ
ನಿಮ್ಮ ಯಮಯಾತನೆಯ ಕಳೆಯಬೇಕೆಂದಿರುವೆ.
ನಾನಿಂದು ಮುಕ್ತಜೀವಿಯೆ ಅಹುದು. ಸ್ವಾತಂತ್ರ್ಯ-
ವಿತ್ತ ಮಾಧುರ್ಯವನು ಸವಿಯುತ್ತ ದೇಹವನು
ಪುಡಿಗೊಳಿಸಿದದಟನಿಹೆ. ಮನವನ್ನು, ಬುದ್ಧಿಯನು,
ಇಂದ್ರಿಯಗಳಿರ್ಕೆಯನು ಕಳೆದುಕೊಂಡಿರುವೆನಗೆ
ಮೇರೆಯಿಲ್ಲದ ಬಾಳ ಹೊನ್ನ ಕಣಿ ಲಭಸಿಹುದು.
ಮುನ್ನೊ೦ದು ಮನೆಯಲ್ಲಿ ಮಿನುಗುತಿಹ ಮಿಣುಕುಹುಳು,-
ಈಗ ತಾರೆಗಳಾಚೆ ನೆಲೆಸಿರುವ ರಾಜ್ಯದಲಿ
ನಲಿಯುವೆನು; ಪದ್ಮಾದಿಗೋಲಗಳನೊಳಕೊಂಡ
ಸ್ಥಾನಬ್ರಹ್ಮದ ಸುರಭಿವಾತದೊಳು ಉಸಿರಿಡುವೆ!
ಮುನ್ನೊಮ್ಮೆ ಬೆಕ್ಕಸವು ಮಿಗುವ, ಕರ್ಕಶವಿರುವ
ಚೀರುದನಿಯಲಿ ನುಡಿವ ಪರಿಪಾಠವನು ಮರೆತು
ಇಂದು ನುಣ್ದನಿಯಾಗಿ ತಿರುಗುವೆನು. ಒಳ್ನುಡಿಯ
ಸಾರವನು ಪಡಿನುಡಿಯುತಿಹರೆಲ್ಲ ಮಾರುತರು
ಮತ್ತಾ ವಿಹಂಗಮಗಳು!
ಆಯಸವದಿನಿತಿಲ್ಲ; ಕೋಟಲೆಯ ಕುರುಹಿಲ್ಲ;
ಧರಣಿಯೊಳು ಹಬ್ಬುಗೆಯ ಹೊಂದಿರುವ ಹೊಯ್ಮಾಲಿ
ತನದ ಸೋಂಕಿನತಿಲ್ಲ; ಕೊರಗಿಲ್ಲ; ಮರವಿಲ್ಲ.
ಗಿರಿನಿರ್ಝರದ ಸ್ವಚ್ಛಂದವಿರುತಿಹೆನು!
ಏಳು ಸುತ್ತಿನ ಕೋಟೆ ಹಬ್ಬಾಗಿಲವ ತೆರೆದು
ಬರಮಾಡಿಕೊಂಡಿಹುದು; ಕೂರತೆಯಾವುದಕಿಲ್ಲ.
ಆನಂದದಲಿ ಬಯಕೆ ಸುಳಿವುದುಂಟೆ?

ನಾನಾರು ತಿಳಿಯಬೇಕೆಂದು ಕಾತರರಾಗಿ
ದುಡುಕದಿರಿ ನೀವೆಲ್ಲ. ಹಿಂದೆ ರಾಮನು ಕೂರ್ತು
ಮೈಥಿಲಿಯನೊಂದೊಂದು ಹೂವಿನೊಳು ದೇಂಟಿನೊಳು
ಕಂಡಂತೆ ಭ್ರಾಂತರಾಗಿರುತ ಮೋಹಿಸಬಹುದು.
ನಾನು ಪಕಳೆಯ ದ್ಯುತಿಯು, ಹೊಸ ಕಾಲಕಿಹ ಒಸಗೆ,
ಪ್ರಾಚೀನವೆಂಬ ಪ್ರಾಚೀ ಸುಂದರಿಯ ನಗೆಯು!
ನನಗಿರುವ ಮರ್ತ್ಯರೂಪವನಳಿಸಿ ರೂಪರಾ-
ಶಿಯನು ತಳೆದಿಹೆನಿಂದು. ಇಂತೀ ಪವಾಡವನು
ಎಸಗಿಸದನುಕ್ರಮಗಳನು ನೆನೆಯುತಿಹೆನು.
ನಿಮ್ಮಂತೆ ಮಾನಿಸನು ನಾನಾಗಿ ಜನಿಸಿದೆನು.
ತಂದೆ ತಾಯಿಗಳೆನ್ನ ಸಲುಹಿದರು.
ನಿಮ್ಮಂಥ ಅಕ್ಕ-ತಂಗಿಯರೊಲವನ ಬಯಸಿದೆನು.
ಶೈಶವದ ಸರ್ಣಸ್ವಪ್ನದಿ ಮುಳುಗು ಹಾಕಿದೆನು.
ತಾರುಣ್ಯದಂತರಿಕ್ಷದ ಮೊಗವ ತೋರಿದೆನು.
ಅಳವಿಲ್ಲದಿಹ ಪ್ರತಿಭೆ, ಪ್ರಖರವಾಗಿಹ ತೇಜ
ಮಿಡಿಯಾಗಿ ನನ್ನೆದೆಯೊಳಂಕುರಿಸಿದವು. ಗಗನ-
ಸಂಚಾರಿಯಾದೆನ್ನ ಭಾವಗಳು ದಿಕ್ಕುಗಳ
ಪಕ್ಕದಲ್ಲಿ ಬೇರ್ವಿಟ್ಟು ಮರವಾಗಿ ತೋರಿದವು.
ಕವಿಗಳಿಗೆ ಕವಿಯಾಗಿ ಕವಿಶ್ರೇಷ್ಠರೆಂಬಾರು
ಸೇನಬುವರನು ಸಲುಹಿ ನನ್ನ ಹಿರಿಗವಿತೆಗಳ
ಪೇರೋಲೆಯನು ಬರಯಿಸುವ ಬಯಕೆ ಮಿಗಿಲಾಯ್ತು
ಪಕ್ಷಿಸ೦ಕಲದಂತೆ ಕವಿಯ ನಡೆ-ನುಡಿಯೆಂದು
ಸರಸರನೆ ಮರಮರಗಳನ್ನೇರಿ ಕುಣಿಕುಣಿದು
ಕುಕಿಲಿದೆನು. ನವಯುಗದಿ ಕವಿಯು ಮುನಿಯಹುದೆಂದು
ದೀರ್ಘಜಟೆಗಳ ಬಿಟ್ಟು ಕಾಡುಗಳ ಸುತ್ತರಿದು
ಪಟ್ಟಣದಿ ಮದುವಣಿಗನಂತೊಮ್ಮೆ ಮುಂಬರಿದು
ದಿಕ್ಕೆಟ್ಟು ದಿಗ್ಭ್ರಮಿಸಿ ಮುಂದುಗಾಣದೆ ಕಡೆಗೆ
ದೇಶದುಂದುಭಿಯ ನೆರೆ ಮೊಳಗಿಸಲು ಕಾವ್ಯವದು
ಬೆಳಗಬಹುದೆಂದೆಣಿಸಿ ಸೆರೆಯಲ್ಲಿ ತೊಳಲಿದೆನು.
ನನ್ನ ಶತಕೃತ್ಯಗಳ ಕಂಡ ತಾಯ್ತಂದೆಗಳು
ಮನದಿ ಮಲ್ಲಳಿಗೊಂಡು ಮೂದಲಿಸಿ ಬಿರುನುಡಿದು
ಸಂಸಾರಕೆನ್ನನಣಿ ಮಾಡಿದರು. ಒರ್ವಳನು,
ಕನ್ನೆವೇಟವನರಿಯದಿಹ ಕನ್ನೆಯನು, ತಂದು
ನನ್ನೊಡನೆ ಮದುವಣಿಯ ಮೇಲೆ ಕುಳ್ಳಿರಿಸುತ್ತ
“ಮೂರ್ಖರ ಶಿರೋಮಣಿ”ಯ ಬಿರುದುಗಾಣಿಕೆಯಿತ್ತು
ತಿಳಿಗೇಡಿಯೊಲವೆಂಬ ಬೊಗಸೆ ಸೇಸೆಯ ತೂರಿ
ಹೊಸತೊಂದು ಜನ್ಮದ ವಿವಾಹ ಕಾರ್ಯಗಳನ್ನು
ಕೊನೆಗಾಣಿಸಲು ಮುಂದೆ ನಡೆದರಾಗ!

ಒಮ್ಮೆ ಸಿಡಿಮಿಡಿಗೊಳ್ಳುವೆನು ಮನದಿ; ಮತ್ತೊಮ್ಮೆ
ಮನೆಯವಳ ಮೋರೆಯನು ನೋಡಿ ವಿುಡುಕುತಲಿಹೆ‌ನು.
“ಕಡೆಗೆ ಪೆಣ್ಮಣಿಯ ಕಣಿಯಿಂದ ಕವಿತಾರತ್ನ-
ವನು ಕಸದುಕೊಳಬಹುದು-” ಎಂಬಾ ಮನೊಬಲವು
ಆಮಮ! ನಮ್ಮವಳ ಬಣ್ಣದ ತಿಮಿಂಗಿಲತಿಮಿರ-
ದೊಳು ಮುಳುಗು ಕಂಡಿತೆಲೆ! ಪ್ರೇಮಕಲಹಗಳೆಸಗಿ
ರಸಿಕತೆಯ ಪಡೆಯಬೇಳಕೆಂಬಾಸೆ ಕಲಹಗಳ
ಮೇಲವಳಿಗಿಹ ಪ್ರೇಮದಲಿ ಲಯವ ಹೊಂದಿತದು.
ಬಡತನವ ಹೊಸ್ತಿಲದ ಹೊರಗಿಡಲು ಹೆಣಗಿದರು
ಪ್ರತಿಸಲವು ಕೂಸೊಂದರೊಡನೆ ಹೆಜ್ಜೆಯನಿಕ್ಕಿ
ಕಳ್ಳ ತನದಲಿ ಬಂದು ಮನೆಯೊಳಗೆ ವಾಸಿಸಿತು.
ಆಗ ಕಲೆ-ಕಾವ್ಯಗಳು ಪಾತಾಳಕೈದಿದವು;
ದೂರ ಪರ್ವತಗಳಿಗೆ ಶಿಖರವಿಟ್ಟಿತು ನೋವು!

ಒರ್ವನಿದ್ದನು ಕವಿಯು, ಜ್ಞಾನವೃದ್ದನು; ಶ್ರೇಷ್ಠ
ಕವಿತೆಗಳನೊರೆಯುವನು. ಕಾಡನಂಡಲೆಯೆದೆಯೆ
ಅಂಡಜನ ಸೃಷ್ಟಿಯ ರಹಸ್ಯವನು ತಿಳಿದಿರುವ
ಹೊಸಬಿಗನು, ಕಬ್ಬಿಗನು. ಅವನಡಿಗೆ ಪೊದಮಟ್ಟು
ಹೊಲಬುಗೆಡುತಿಹ ನನ್ನ ವೇದನೆಯ ವಿವರಿಸಲು
ಮುದುಕ ಮುಗುಳ್ನಗೆ ನಕ್ಕು ಉಸುರಿದನು: “ಎಲೆ ಕುವರ!
ಇರುವದೆಲ್ಲವ ಭೋಗಿಸುತ್ತ ಮೀರಿರಬೇಕು.
ಇದುವೆ ಯೋಗದ ಪರಮ ಸಾಧನೆಯು. ನಿನ್ನವಳ
ಕಾರಿರುಳ ರೂಪವನು ಕಂಡು ಒಲಿಯಲು ಬೇಕು.
ಮಕ್ಕಳನೆ ಮಾಣಿಕಗಳೆಂದು ಮುತ್ತಿಡಬೇಕು.
ಬಡತನವೆ ಭಾಗ್ಯವೆಂದೆಣಿಸಬೇಕಿಂತಿರಲು
ನಿನಗೆ ಲಭಿಸುವದು ದೇವನ ಕರುಣೆ, ಕವಿಹೃದಯ
ನಿನ್ನ ಸೊತ್ತಾಗುವದು.” ಈ ನಿವೇದನೆಗೇಳಿ
ಖತಿಗೊಂಡು ಮರುಳಿದೆನು. ತಾಪವನು ಹಿ೦ಗಿಸಲು
ದಾರಿ ತೋರದೆ ಅದನು ವೇದಾಂತವೆಂದು ಪರಿ
ಗ್ರಹಿಸುತಿಹ ಬುದ್ದಿಮಂತಿಕೆಯನೇಳಿಸಿ, ಮುಂದೆ
ಮನೆಯಲೆನ್ನಯ ಚಿನ್ನರತಿ ಹಸಿದು ಕಂಗೆಡುವ-
ದನು ಕಂಡು ಕನಿಕರಿಸಿ, ಕರ್ಗಿ ಕಳೆಗುಂದಿರುವ
ಸತಿಯ ಮೊಗವನು ನೋಡಿ ಮನದಿ ಕಳವಳವಾಗಿ:-
“ಕಲೆಯು ಹಾಳಾಗಿರಲಿ; ಕವಿತೆಯಸಿಮಿಸಿಗೊಂಡು
ತಾನೆ ಬಾಯ್ಬಿಡುತಿರಲಿ! ಮೊದಲು ಜೀವಂತವಹ
ಕವಿತೆಗಳ ರಕ್ಷಿಪುದು” ಎಂದು ಸಲೆ ನಿರ್ಧರಿಸಿ
ನಾದಾಡಿಗಳ ತೊರೆದು ಹುಟ್ಟಿದೂರನು ತ್ಯಜಸಿ
ಗುರುತಿನವರಾರಿರದ ಪಟ್ಟಣವನೊಳಸೇರಿ
ಕೀಳುಗಯ್ತವನು ಸಹ ಮಾಡಿಯಾದರು ಮುಂದೆ
ಜೀವಿಸಲು ಹಾತೊರೆದು ಯತ್ನಿಸಿದೆನು.

ಪಾಲುಗಾರಳು ತನ್ನ ಅರಿಪಾಲುಗೆಲಸವನು
ಮಾಡೆಲೆಸಗುವಳೀಗ. ಹಸಿದ ಮಕ್ಕಳನುಣಿಸಿ
ಮಜ್ಜನಂಬುಗಿಸುತ್ತ ಮನೆವಾಳ್ತೆಯನು ನೋಡಿ-
ಕೊಳುತಿಹಳು. ದಣಿದು ಬಂದೆನ್ನನಾರೋಗಣೆಯ
ನೀಡಿ ಸಂತೈಸುವಳು. ಬೆಳಗುಬೈಗಿನ ವರೆಗೆ
ಕೇರಿಕೇರಿಯ ತಿರುಗಿ ಧನಿಕರಿರವನು ಕಾದು
ಅವರ ಹೂರೆಯನು ಹೊತ್ತ ದುಡಿಮೆಯಾದಾಯವನು
ಅನ್ನೋದಕಕೆ ಬಳಸಿಕೊಳಲೆಂದು ತರುತಿರಲು
ಮೇಲ್ವಾಯ್ದು ಬರ್ಪ ಕುವರರ ನೋಡಿ, ಕಳೆದುಂಬಿ
ನಿಂತಿರುವ ನೀಟುಗಾತಿಯ ನಗೆಮೊಗವ ಕಂಡು
ಕಳೆಯುತಿದ್ದವು ನನ್ನ ಕಳವಳಗಳು!

ಬಡತನವದೆಂಥ ನೇಹಿಗನೊ! ಪಾಡುಂಗಾರ-
ನಾಗ ಬಯಿಸಿದ ನಾನು ರತಿಕಾರನಾಗಿರಲು
ಜೀವನದೆ ರಸವಾಯ್ತು. ಚಿಂತೆ ಮಾಣ್ದಿಹುದೆನ್ನ.
ಮೇರವರಿಯುವ ಚಲುವ ವಾರಿಧಿಯ ತೆರನಾಗಿ,
ಕಾಂತಿವೆತ್ತುದು ಬಾಳು. ಬಿಸಿಲ ತಿರುಗಾಟದಲಿ
ಭುವಿಯ ಭವ್ಯತೆ ತಿರುಳುದುಂಬಿ ಬೆಸಲಾಗಿರಲು
ಪರಿಕಿಸಿದೆ ಪಾಣ್ಬರನು, ರಸಿಕರನು, ಮತ್ತರನ್ನು
ವಿರಹಿಗಳ, ಯೋಗಿಗಳ, ಕುನಸಿಗರ, ವಂಚಕರ,
ಪರರ ದುಡಿಮೆಯ ನುಂಗಿ ಕೊಬ್ಬುವರ ಅನ್ಯರಪ-.
ಯಶದಲ್ಲಿ ಮುಕ್ತಿಯನು ಕಾಂಬುವರ, ಇನ್ನೊರ್ವ
ಬರೆದ ಕವಿತೆಯನೊರೆದು ಮಾನವನು ಗಳಿಸುವರ!
ಬೆರಗುಗೊಂಡೆನು ಇವರ ಮಲ್ಲಳಿಗಳನು ಕಂಡು
ಆಗ ಬಾಳಿನ ಒಗಟು ಪೂರ್ತಿಯಾಯಿತು. ನನ್ನ
ಕನಸು ಕೊನರಿತು ಮತ್ತೆ. ಭೂಮಿತಾಯಿಯ ಸುತರು
ಅವಳನೀಪರಿ ಕ್ಲೇಶಪಡಿಸುತಿಹುದನು ತಿಳಿದು
ಅವಳ ಲಾಲನೆಯಲ್ಲಿ ಲೀನನಾಗಿಹುದೊಂದು
ಭಾಗ್ಯವೆಂದೆಣಿಸಿದೆನು. ಈ ಪರಿವ್ರಾತವಿಂ-
ತಿರ್ಕೆಲದಿ ಹೋರಾಡಿ ಮೂಲಧನವನು ಮರೆವ
ಸಾಹಸಕೆ ನೆರೆ ನಕ್ಕು ನೋಂತೆನೆನ್ನಯ ಮನದಿ
ಆದರ ನಂದಾದೀಪವನು ಬೆಳೆಗಲೆಂದು.

ಪರಿತ್ಯಕ್ತಳಾದ ಕಲೆಯೆಂಬ ಕನ್ಯೆಯು ಮತ್ತೆ
ಬೇಟವನು ಬೆರೆಸಿದಳು. “ಇನಿತು ದಿನ ವಲ್ಲಯಿಸಿ,
ಒಲ್ಲೆನಲು ಬಳಿ ಸುಳಿವ ಬಳಿಕೆವೆಣ್‌! ಎನಗುಸಿರು
ಕಚ್ಚಿವೇನಿಹುದಿಲ್ಲಿ?” ಎನಲು ಕ್ಷಮೆ ಬೇಡಿದಳು.
ಮೂಡವೆಟ್ಟದಿ ನಸುಕು ಅಡಿಯಿಡುವ ಮುನ್ನೆದ್ದು
ಸಿರಿವಂತರರಸಂಜೆಯಾಸನದಿ ಪವಡಿಸಿರೆ
ನಿಶ್ಯಬ್ದವಿಹ ಕೇರಿಗಳೊಳು ಧೇನಿಸುವೆನ್ನ
ಮನದ ಕನ್ನಡಿಯಲ್ಲಿ ತಮ್ಮ ಪಡಿನೆಳಲುಗಳ
ಕಂಡು ಕಳಕಳಿಸಿದವು ನೂರಾರು ಚಿತ್ರಗಳು.
ಊರ್ವಸಿಯ ನಾಚಿಸುವ ಲಲನೆಯರು ಮೇಳವಿಸಿ
ವಿದ್ಯುನ್ನಟಿಯ ತೆರದಿ ಮಾಯವಾದರು. ಮತ್ತೆ
ಕಾಳಗದ ಬಂಟರೆನೆ ಕರವಾಳಗಳ ಕೊಡಹಿ
ಮೈದೋರಿದರು. ನಂದನದ ನಂದರೆಂದೆನಲು
ಆಸಮವಾದೋಜೆಯನು ತಳೆದ ಶಿಶುಗಳು ಕಣ್ಣ
ಕುಣಿಕೆಯಲಿ ಕುಣಿದೋಡಿ ನಕ್ಕು ನಲಿದಾಡಿದರು.
ಗೋವಳನು ಸಾಕಿ ಸಲುಹಿದ ಪ್ರಪಂಚವಿದೆನಲು
ಚಿಗರೆ ಸಾರಂಗಗಳು, ಧೇನುಗಳು, ನವಿಲುಗಳು,
ಇಂದ್ರನೈರಾವತವು, ವಿಧವಿಧದ ಪ್ರಾಣಿಗಳು
ಮನದೆಡೆಗೆ ಸಂಚರಿಸಿ ಮುಗಿಲೆಡೆಗೆ ಮರುಳಿದವು.
ಸರಸತಿಯ ಪರಿವಾರವಿಳೆದು ಬಂದಿರುವಾಗ
ಗೊರವಂಕ, ಪರಪುಟ್ಟ, ಆರಸುಗಿಳಿ, ಟಿವ್ವಕ್ಕಿ,
ಪಾರಿವಾಳಗಳಲ್ಲಿ ಸೊನವಿನಿದುಗರೆದಿಹವು.
ಚೆಲುವಿಗಿಹ ಸಾಮರ್ಥ್ಯಕಳವಿಲ್ಲವೆಂದೆನಲು
ನಕ್ಷತ್ರರಂಗವನು ಹೊಯ್ದ ನಭಗಳು, ಉಷೆಯ
ಹೊನ್ನಗೆಂಪಿನೊಳೆಲ್ಲ ನಾಂದ ದಿಗ್ವನಿತೆಯರು,
ರಜನಿಯಂಜನದಲ್ಲಿ ತೊಯ್ದು ಬಹ ವನಭೃತರು,
ಹೂವುಗಳ ಭೂರುಹಗಳೊಡೆಯನಿಹ ಚಂದಿರನು,
ಇನ್ನೆನಿತೊ ದೃಶ್ಯಗಳು,-ಕೊನೆಗಿವುಗಳೆಲ್ಲವನು
ಉರಿಗಣ್ಣಿನಲಿ ಮೀರಿ ಬಹ ಚಂಡ ಭಾಸ್ಕರನು
ನನ್ನ ಮುನದೋಲಗಕೆ ಸುಣ್ಣ-ಬಣ್ಣವನಿಟ್ಟು
ಅನುಪಮಾಲಂಕಾರದಿಂದದನು ಶೃ೦ಗರಿಸಿ
ಬಗೆದರದು ತಮ್ಮ ಮೊಗಸಾಲೆಯೆಂದು!

ಅ೦ದು ಮನದುತ್ಸವಕೆ ಎಣೆಯಿಲ್ಲ. ಚಿಂತೆಯಲಿ
ಮುಳುಗಿರುವ ಜೀವವನು ಎತ್ತಿ ಹಿಡಿದಾಡಿಸಿದೆ.
ಉಷೆಯ ಸಮಯದಿ ಪೂರ್ವದಿಗ್ವಧುಲಲಟಾದಲಿ
ಸಲೆ ಸನಾತನ ಬ್ರಹ್ಮ ಬರೆವ ತೇಜೋರೇಷೆ-
ಗಳನೊಂದು ಕಾಂಡಪಟದಳತೆಯಲಿ ಮೂಡಿಸಲು
ನಾನಾದೆ ಕುಸುರಿಗನು, ಚಿತ್ರಕಾರನ, ಬಣ್ಣ-
ಗಳ ಶಿಲ್ಪಿ! ಒಂದೊಂದೆ ಮನದಲರಳಿಹ ನೋಟ-
ಗಳನು ತೆರೆಯಲಿ ಬರೆದು ತೂಗು ಹಾಕಿರುವದನು
ಮನೆಯ ಮುಂದಲೆಯುತಿಹ ದಾರಿಹೋಕರು ನೋಡಿ
ಬೆರಳಿಟ್ಟು ಕೊಂಡರೆಲೆ! ಅಳಿದಿರುವ ಸಾಮ್ರಾಜ್ಯ,
ಮರೆತು ಹೋಗಿಹ ಸ್ವರ್ಗ, ದುರ್ಗಮವಿರುವ ದುರ್ಗ,
ಆಹವಕೆ ಮಲ್ಲರಾಗಿರುವ ಬಲ್ಲರ ಯುದ್ಧ,
ಅಂದಿರುವ ಧೀರ ಸಮುದಾಯಗಳ ಗಾಂಭೀರ್ಯ,-
ಇವುಗಳಿಗೆ ಮತ್ತೆ ಸಿರಿವನೆಯಾದ ನನ್ನಿರ್ಕೆ-
ವೀಡನರೆ ನೋಡುವ ಗತಾನುಗತಿಕರ ಲೋಕ-
ವೆಲ್ಲ ವಿಸ್ಮಯಗೊಳಲು, ಮತ್ತೆ ಗುಬ್ಬಿಯ ಬಾಳು,
ಗುಬ್ಬಿಮಾನವರು ಪಡೆದಿರುವ ಮಸಣದ ಬಾಳು,
ಅವರ ಕೂರ್ಮೆಗಳವರ ದುಗುಡಗಳ ಬಿಂಬಿಸಲು
ಮೋಹಿಸಿದರುಳಿದವರು. ಇನ್ನು ಕೆಲವರು ಬಂದು
ಉದಯಾಸ್ತಗಳ ರಮ್ಯತೆಯ ಬಣ್ಣನೆಯ ನೋಡಿ
ಮೆಚ್ಚಿ ತಲೆದೂಗಿದರು; ಕಳಮೆಗಳ ತೆನೆಗಳಿಗೆ,
ಮುಳ್ಳುಗಂಟೆಯ ಹೂವುಗಳಿಗಿರುವ ಸೌಂದರ್ಯ-
ವನು ಕಂಡು ಬಾಷ್ಪವಾರಿಯ ಸುರಿಸಿ ತೆರಳಿದರು!

ನಗರದೊಳಗಿಂತು ಕಲಕಲವಾಗೆ ದುಷ್ಕವಿಗ-
ಳೆಲ್ಲ ನೆರೆದರು ಚಿತ್ರಗಳ ಕುಂದನರಸಲೆನೆ.
ದೀರ್ಘನಿದ್ರಾಲಂಗಿತ ಕುವಿಮರ್ಶಕರೆಲ್ಲ
ಮೇಲ್ವಾಯ್ದು ಮಕ್ಷಿಕಗರಂತೆ ಬಂದರು. ಒರ್ವ-
ನಂದನು; “ಕುರೂಪಿ ಭಾರ್ಯೆಯ ಪಕ್ಕದಲಿ ಕುಳಿತು
ಕಾಮುಕನು ಕಂಡ ಸವಿಗನಸುಗಳು ನೋಡಿರಿವು
ರಂಭೆಯರ ಚಿತ್ರಗಳು!” ಜಾಣನೊರ್ವನು ನುಡಿದ:
“ಕಾಣಿರಲ! ನೀವಿವನ ಹಂಚಿಕೆಯ. ಸೋಮಾರಿ
ತನ್ನ ನಿತ್ಯದ ದುಡಿಮೆಯುಳಿದು ಚಿತ್ರವ ಬರೆದು
ಜೀವಿಸಲು ಹವಣಿಸುವ.” ಪೋರನೋರ್ವನ ಮಾತು;
“ಕೂಲಿ ಬರೆದಿಹ ಚಿತ್ರಗಳನೇಕೆ ನೋಡುವಿರಿ?
ಕಲೆಯ ಶಾಲೆಯಲಿದಕು ಹಿರಿದಾದ ಕೆಲಸವಿದೆ.”
ತೂಣಗೊಂಡಿಹನೊರ್ವ; ಸ್ವಗತಪರ ಭಾಷಣವ
ಮಾಡಿದನು: “ಜೀವಾಳವಿದೆ ಚಿತ್ರದೆಸಕದಲಿ.
ಯಾವ ಮಾರ್ಗದ ಕಲೆಯು? ಆನೆಗವಿಗಳದಲ್ಲ.
ಕೈಲಾಸದಾಚೆಗಿನ ಜನರು ತಂದಿಹುದಲ್ಲ.
ಕ್ಷತ್ರಿಯರ ಮೈತ್ರಿಯಿದೆ, ಆದರದ ಮೀರಿಹುದು.
ಬಿಳಿಜನರ ಶೋಭೆಯಿದೆ; ಆದರನುದೇಶಿಕವು.
ಅರ್ಥಪೂರ್ಣತೆಯಿಹುದು; ವಂಗ ಭಂಗಿಯದಿಲ್ಲ.
ಇನ್ನು ಮೇಲೆನ್ನ ತಿಳುವಳಿಕೆ ಬದಲಿಸಬೇಕು.
ಕಲೆಗೊಂದು ಬೇರೆಯಭಿಧಾನವನು ಕಲ್ಪಿಸುತ
ಇದನು ಸೇರಿಸಬೇಕು.” ಎಂದು ಕಳವಳೆಗೊಂಡ.

ಈ ದಿವ್ಯ ಮಾನವರ ಸಂದಣಿಯ ಸರಿಸುತ್ತ
ವ್ಯಾಕುಲಮನಸ್ಕನಾಗಿರುವ ವೃದ್ಧನದೊರ್ವ
ಪಳಪಳನೆ ಕಣ್ಣೀರುವುಗುತಿರಲು ಅಶ್ರುಜಲ
ಬಂದೆನ್ನ ಪಾದಗಳ ತೊಳೆದು ಅಭಿವಂದಿಸುತ:-
“ಚಿತ್ರಮಾಲೆಯನಿಂತು ದಿಶೆದಶೆಗೆ ಬೆಳಗಿಸುವ
ನನ್ನ ದೀಕ್ಷಾಚಾರ್ಯ! ನಿನ್ನ ಕೃತಿಗಳ ನೋಡಿ
ಮೇರೆವರಿವುದು ಭಕ್ತಿ. ಆಜನ್ಮ ಹವಣಿಸಿದೆ
ಅಮರವಾದೊಂದು ಕೃತಿಯನು ಬರೆಯಬೇಕೆಂದು.
ನನಗೆ ಸಾಧಿಸಲಿಲ್ಲ. ಬಣ್ಣಗಳ ಸಮ್ಮಿಲನ-
ವೊಮ್ಮೆ ಕೈಬಿಡುತಿತ್ತು. ಒಮ್ಮೆ ಕುಂಚಕೆ ಕೇಡು-
ಗಾಲ ತಾ ಬರುತಿತ್ತು. ಕಲೆಯೆ೦ಬ ಲಲನೆಗಿಹ
ನಗೆಮೊಗವ ನಾ ನೋಡಿದವನಲ್ಲ. ಹಿಂದಣದಿ
ಅವಳ ಕುಂತಳವಿಹಾರವ ದೂರ ಕಂಡಿಹೆನು.
ಆದರೆನ್ನಯ ಕುಶಲ ಕೃತಿಗಳನು ಜನರೆಲ್ಲ
ಕಾವಣದಿ ಕಾದಿಟ್ಠು ಬೆಲೆಗೆ ಕೊಳುವದ ನೋಡಿ
ಜನಸ್ತೋಮಸ್ತುತಿಗೆನ್ನಲಿಹ ಪ್ರತಿಭೆಯನು ಮಾರಿ
ಕಡೆಗೆ ಕಬ್ಬಿಗರೊಡತಿ ತೊರೆದ ಕಾಪುರುಷನಿರೆ
ಮೊರೆಯುವೆನು. ನಿನ್ನ ಕೈವಾಡವನು ತೋರೆನಗೆ,
ಶರುಣನಿರೆ ಬರೆದ ದುಷ್ಕೃತಿಯ ಸ್ಮೃತಿಯಿಂದಳಿಸಿ
ಜೀವನದ ಜ್ವಾಲೆಯೆಲ್ಲವನೊಂದರಲಿ ಮುಚ್ಚಿ
ಕೃತಕೃತ್ಯನಾಗುವೆನು” ಎಂದು ಹಲುಬಿದನು.

ಮರುಳಿ ವೃದ್ಧನ ಪದಕೆ ವಿನಯದಿ ನಮಸ್ಕರಿಸಿ
ನಾ ನುಡಿದೆ: “ಅಲ್ಲ! ನಾ ಕಲೆಯ ಮಾರ್ಮಿಕನಲ್ಲ!
ಅರಿತಿಲ್ಲವದರ ಮೂಲವ ನಾನು. ಚಿತ್ರಗಳು
ಮನದಿ ಸುಳಿಯಲು ಜೀವವದು ರಮಿಸಿಕೊಳಲೆಂದು
ಅವುಗಳನೆ ಬರೆದಿಹೆನು. ವಿದಿತವಿಹ ವಚನವದು
ನನಗೊರ್ವ ಕವಿವರನು ಹೇಳಿದುದು; “ಎಲೆ! ಕುವರ!
ಇರುವದೆಲ್ಲವ ಭೋಗಿಸುತ್ತ ಮೀರಿರಬೇಕು.
ಇದುವೆ ಯೋಗದ ಪರಮ ಸಾಧನೆಯು. ಇಂತಿರಲು
ನಿನಗೆ ಲಭಿಸುವದು ದೇವನ ಕರುಣೆ. ಕವಿಹೃದಯ
ನಿನ್ನ ಸೊತ್ತಾಗುವದು.’ ನಾನಿದನು ಬಳಿಸದಯೆ
ಬಳಲಿದೆನು. ಇಷ್ಟವಿರಲಿಂತು ನೀವ್‌ ನಡೆಯಬಹು-
ದೆ”ನೆ ವೃದ್ಧ ಹುಟ್ಟಿದಾಸೆಗೆ ತಿಲಾಂಜಲಿಯಿತ್ತು
ಮುಂದೆ ದೈವವನರಸಲೆಂದು ಸಾಗಿದನು!

ಆಸಕ್ತನಿರಲಿಂತು ಚಿತ್ರಕಲೆಯುದ್ಯಮದಿ
ಮತ್ತೆ ಮನೆಯೊಳಗಾಯ್ತು ದುರ್ಭಿಕ್ಷೆ. ಆತ್ಮಜರ
ಕಿರಿಕಿರಿಯು ಹಿರಿದಾಯ್ತು. ಹಾಲುಬೋನವನುಂಡ
ಅವರ ರಸನೆಗೆ ನೀರುಗಂಜಿ ರುಚಿಸದೆ ಹೋಯ್ತು.
ಮನೆಯವಳು ಚಿತ್ರಗಳ ನರೆಗಣ್ಣಿನಿಂದೊಂದು
ಸಲ ನೋಡಿ ಸುಮ್ಮನಾದಳು. ಇಂಥ ಸಮಯದೊಳು
ಪರದನೊರ್ವನು ಬಂದ ವಿಬುಧರೊಡನೊಡಗೂಡಿ.
ನಾ ಬರೆದ ಚಿತ್ರಗಳ ನೋಡಿ ಶ್ಲಾಘಿಸಿ ರಮಿಸಿ
ದೀಟವನು ನಿರ್ಣಯಿಸಿ ನನ್ನೆ ಕುವರರ ಕರೆದು
ದೀನಾರಗಳ ಕೊಟ್ಟು ಎರಡು ಪಟಗಳನೆತ್ತಿ
ಇವುಗಳೆಮಗಿರಲೆಂದು ಸೂಚಿಸುವದನು ಕಂಡು
ಮಂಜು ಮುಸುಕಿತು ನನ್ನ ಬುದ್ದಿಯನು. ಮನದೊಲವು
ಮೈದಾಳ್ದ ಚಿತ್ರಗಳು ಪಣ್ಯ ವಸ್ತುಗಳೇನು?
ಕಬ್ಬಿಗನ ಮನೆಯಹುದೆ ಪಣ್ಯವಿಕ್ರಯಶಾಲೆ?
ಇತ್ತಲೀ ಕುವರರನು ಕರೆದು? ದೀನಾರಗಳ
ಕಸಿದಿಸಿದು ಮುಟ್ಟಿಸುವದೆಂತು? ತೊಳಲಾಡಿರುವ
ವೃದ್ಧ ಶಿಲ್ಪಿಯ ಗತಿಯ ನೆನೆಸಿ ಮೆಯ್ನವಿರೆದ್ದು
ನೊಂದು ಬೆಂದೆನು ಮನದಿ. ಕೊನೆಗೆ, “ಜೀವಂತವಹ
ಚಿತ್ರಗಳ ರಕ್ಷಿಪುದು ಪರಮಧರ್ಮವು” ಎಂಬ
ಮಾತು ಮಿಂಚುತ ಬರಲು ಚಿತ್ರಗಳನೆದುರಿಟ್ಟು
ಕೊನೆನೋಟವನು ನೋಡಿ ಕಣ್ಮುಚ್ಚಿ ವಿಬುಧರೆಡೆ
ನೂಕುತವುಗಳಿಗಿಂತು ಎರವಾದೆನು!

ಸತಿಸುತರಿಗಹುದೀಗ ಬಾಳುವೆಯು ಸುಖಮಯವು
ಚಲ್ಲವರಿಯುವ ಕಲೆಯು ತನಿವಣ್ಣುಗಳ ಕೊಡಲು
ಒ೦ದು ದೃಶ್ಯವು ಪಟದ ಮೇಲೆ ಪರ್ವಳಿಸಲಿ-
ನ್ನೊಂದು ಪರಿಧಾನದೊಳು ಮಸಗಿ ಬರುತಿರೆ, ಮನೆಗೆ
ಸಿರಿವಂತರೈದಿ ತಮ್ಮಳ್ಕರಿನ ಚಿತ್ರವನು
ಕೊಂಡು ಬೀಳ್ಕೊಳುತಿದ್ದರಿತ್ತ ಮನಸಿನ ಚಪಲ-
ವೊಮ್ಮೆ ಒಗುಮಿಗುತಲಿರೆ, ಅವರ ಮನೆಮಾಡಗಳ-
ನೊಳಸೇರಿ ಚಲ್ಲವಾಡುತ, ರತ್ನ ಖಚಿತವಿಹ
ಕಟ್ಟಿನೊಳು ಶುಳಿತಿರುವ ನನ್ನ ಕೃತಿಗಳ ನೋಡಿ
ಆನಂದವನು ಹೊಂದಿ ಖಿನ್ನಮಾನಸನಾಗಿ
ಮತ್ತೆ ನಿಜ ಗೃಹಕೆಂದು ಮರುಳುತಿಹೆನು.

ಮುಂದೆ ಬಂತೆನಗೆ ಕೊಳೆಪ್ರಾಣವಾಗುವ ಸಮಯ.
ನೋವಿನಿಂದೀ ಸುಖಕೆ ಉಯ್ಯಾಲೆಯಾಡಿರುವ
ವಿಧಿಯ ಕೊಲ್ಲಟಗಿತ್ತಿ ತನ್ನ ಕೊಲ್ಲಣಿಗೆಯನು
ನಿಲ್ಲಿಸಿದಳೆಂದುಸಿರುವನಿತರೊಳು ಸಲಿಸಿದಳು
ಮರೆಯಲಾಗದ ತರದ ಬನ್ನ ಗಾಣಿಕೆಯೊಂದ!
ಪಿಡುಗು ಹಬ್ಬಿರುವಂಥ ಪಟ ಪಟ್ಟಣದೊಳಾವ ಮನೆ-
ಯಿಲ್ಲದರ ಹಾವಳಿಯನುಳಿದಿಹುದು; ಧನವಂತ,
ಪುತ್ರವಂತರ ಮನೆಯೊಳುರಿಶೀತವೆಲ್ಲೆಡೆಗೆ.
ನೋಡಿದತ್ತೆಲ್ಲ ಸಾಯುವ ಜನರ ದೊಂದಣಿಯು,
ಉರಿವ ಹೆಣಗಳ ರಾಶಿ. ಮೃತ್ಯುವಿನ ಪರಿವಾರ
ನೆಲೆಯೂರಿತೂರೊಳಗೆ. ಮಕ್ಕಳೊಂದಿಗಳೆನ್ನ
ಅಳ್ತಿಕಾರ್ತಿಯು ಒಣಗಿಲಂತುರಿದು ತೊಲಗಿದಳು.
ಅರಿಯಲಾರದ ದೇಶಕಿನ್ನು ಪಯಣವ ಬೆಳೆಸ-
ಲೇಕಾಂಗಿಯಿಹೆನೆಂದು ಕೊಂಡೊಯ್ದಳಾತ್ಮಜರು
ಬಳಿಕ ಹಸುಮಕ್ಕಳನು ರಮಣಿಯನು ತಿಂದುಂಡು
ಕೊಬ್ಬಿರುವ ಘಟಿಸರ್ಪ,-ಮೃತ್ಯುವೆನ್ನೆಡೆ ಸುಳಿದು
ಕೊಸರಿತದು. ಪ್ರಜ್ಞೆಯಿಲ್ಲದ ನನ್ನ ಗುಡಿಗಟ್ಬಿ
ಪ್ರಳಯನೃತ್ಯವನೆಸಗತೊಡಗಿದವು ಚಿತ್ರಗಳು.
ಚಿಲ್ಲಾಣವನು ಹಿಡಿದ ನಾಯಕರು ಮುತ್ತಿದರು.
ನನ್ನ ಕಲೆಯಾಗರದೊಳಿನಿತು ದಿನ ಸೆರೆಸಿಕ್ಕ
ಚಲ್ಲಣದ ಜಟ್ಟಿಗಳು ನಿಂತು ಹೂಂಕರಿಸಿದರು.
ಮೃತ್ಯುರಾಗವ ಗೆಯ್ಯಲೆಸಗಿದವು ಪಕ್ಷಿಗಳು.
ಗುಮ್ಮುಗಟ್ಟಿದವಂದು ಬರೆದ ಆಕಾಶಗಳು.
ಎಲ್ಲೆಡೆಗೆ ತನ್ನ ರೆಂಕೆಗಳನೆತ್ತಿಹ ಗಿಡುಗ
ಮರಿಪಾರಿವಾಳಗಳ ನುಂಗುತ್ತ, ಕಡೆಗೆನ್ನ
ಗೂಡುಗೊಳಿಸುವರೊಂದೆ ಕಜ್ಜವಿರೆ, ಬದುಕಿದೆನು.
ಏಕೆ ಬದುಕಿದೆನೇನೊ ನಾನರಿಯೆ; ಬದುಕಿದೆನು.
ಮನೆಯಲ್ಲಿ ಕಳೆಗುಂದಿ ಬಿದ್ದಿರುವ ತನಯರಾ
ಜಡದೇಹಗಳನೊಯ್ದು ಒಮ್ಮೆ ನನ್ನೊಡನಾಡಿ
ಈಗ ಕಾಡುಗಳೊಡತಿಯಾದವಳ ಬಳಿಗಿರಿಸಿ
ತನಗೆ ಪ್ರಿಯತಮರಾದವರನು ಕೊಲಬೇಕಾಗಿ
ಬಂದಿರುವ ಗಿಡಗಾರನಂತೆ ಬಲು ಕನಲಿದೆನು.
ನಗರದೊಳು ತಿರುಗಿದೆನು. ತಿಂತಿಣಿಸಿ ನಿಂತಿರುವ
ಜನರಿಲ್ಲ, ಸಿಂಗರಿಸಿದಾಟನೋಟಗಳಿಲ್ಲ.
ಜೋಲ್ವ ನಾಯ್ಗಳ ಸಂತೆ ನೆರೆಯುತಿರೆ ಮನೆಗಳಲಿ
ನರಳಾಟವಿರಿಯುತಿರೆ, ಅಗಲಿದರ ಮೂಕು ಕರೆ-
ಯೇಳುತಿರೆ;-ಈ ಭಯಂಕರ ದೃಶ್ಯವನು ಕಂಡು
ಸಹಿಸಲಾರದೆ ಮಬ್ಬುವರಿಯುತಿರೆ ಕಣ್ಣುಗಳು,
ನಿಲ್ಲಲರಿಯದ ನಿಗ್ಗೆಡಿಯ ತೆರದಿ ತೆರಳಿದೆನು.

ಅಲ್ಲಿ ಮನೆಯಲ್ಲೇನು ನಿಃಸತ್ವ ನಿಕುರಂಬ-
ವಾದಂತೆ ಚಿತ್ರಗಳ ಗುಂಪು ಕಾಣಿಸುತಿತ್ತು.
ಮಕ್ಕಳಿನಿದನಿಯಿಲ್ಲ; ಕಾದಲಳ ನಗೆಯಿಲ್ಲ.
ಸರ್ವಜನಪರಿತ್ಯಕ್ತನಾಗಿ ವ್ಯತ್ಯಯರಹಿತ
ಪರಮಾತ್ಮ ಕುಳಿತಂತೆ ನಾನೊರ್ವ ಕುಳಿತಿಹೆನು.
ನಾನು ಕಟ್ಟಿದ ಕನಸುಗಳು ಬಿದ್ದು ಬಿದಿರಿರುವ
ಮನಸಣವಟ್ಟೆಯೊಳಂತೆ ಕುಳಿತು ಯೋಚಿಸುತಿಹೆನು.
ಶೂನ್ಯವಾಯಿತು ಜಗವು; ಶೂನ್ಯವಾಯಿತು ಮನವು;
ಅತಿ ಶೂನ್ಯವಾದವೈ ಮಾನವರ ಮಾಳ್ಕೆಗಳು!
ಒಂದುಸಲ ಬಿಮ್ಮನೆಯೆ ಬಿಗಿದೆನ್ನ ಚಿತ್ರಗಳ,
ಒಂದುಸಲ ರಣಗುಟ್ಟುತಿಹ ಮನೆಯ ಸಾಲುಗಳ,-
ಹಾಗೊಮ್ಮೆ ಹೀಗೊಮ್ಮೆ ಇರ್ಕೆಲದಿ ನೋಡುವೆನು.

ಮುಂದೊಮ್ಮೆ, ಪಟ್ಟಣದಿ ಕೇಡುಗಾಲವು ದಾಟಿ
ಶಾಂತಿ ನೆಲೆಸಿಹುದೆಂದು ಸುಖಿಗಳಿಹ ಜನರೆಲ್ಲ
ಹೊಸತಾದ ಕೃತಿಗಳಿವೆಯೇನೆಂದು ಬೆಸಗೊಳಲು
ಬಂದರನುದಿನ ಮನೆಗೆ ವಿಬುಧರೊಡನೊಡಗೂಡಿ.
ಪಡಿನಡದಿವುದೇನವರ್ಗೆ? ನನ್ನ ಸತಿಸುತರೆಲ್ಲ
ತೊಲಗಿದರು. ನೀವ್‌ ತೆರಳಿರೆಂದು ಬಿರುನುಡಿಯುವುದೆ?
ದೇಹದಾರ್ಢ್ಯವದಿಲ್ಲ. ಬೇನೆಯಿಂದೊರಲಿಹುದ
ಕಾಣಲಾರಿರ! ಎಂದು ಬಿನುಗುನುಡಿ ನುಡಿಯುವದೆ?
ನುಣ್ಣ ಮಾತನು ನುಡಿದೆ. “ಅಣ್ಣದಿರೆ! ಬಣ್ಣಗಳ
ಬಯಕೆಯದು ಪೂರ್ತಿಯಾಯ್ತೆನಗಿಂದು, ಸತ್ಯವಿದು.
ಈಗದರ ಹಂಬಲವೆ ನನಗಿಲ್ಲ. ಬೇರೊಂದು
ಕಾರ್ಯವಿದೆ ಸನಿಯದಲಿ. ನನ್ನ ಬಿನದವನಿಲ್ಲಿ
ಸಾಗುವಳಿಸಿದ ಕೀರ್ತಿ ಕಡೆಗು ನಿಮಗಿರಲೆಂದು
ಬೀಳ್ಕೊಂಡೆನರಿತವರನು.

ಸೊಗಸಾದ ಚಿತ್ರಗಳ ಬರೆಯುವದದಿನ್ನಾರ್ಗೆ?
ಚಿತ್ರಗಳ ಬರೆವುದಕೆ ಸೊಗಸು ಬಹುದೆಲ್ಲಿನ್ನು?
ತಡೆಯೆಲವೊ! ಮೃತ್ಯು ಬಂದೆದುರು ಬಾಯ್ದೆರೆದಾಗ
ಮರೆತೆಯಾ ಚಿತ್ರಗಳು ಅಣಕುವಾಡಿದ ಪರಿಯ?
ಇಂತು ಕೆರಳಿತು ಮನವು ಸವಿಗಾರನಾಗಿರುವ
ದಿನವಳಿದು ಸೀಕರಿಗೊಳುವ ಸಮಯ ಬಂದಿತೆನೆ
ಬಣ್ಣಗಳನಲ್ಲಗಳೆಯುವ ನವಾಂಕುರವೊಂದು
ಮನದಿ ಬಿತ್ತರಿಸಿತ್ತು. ರಸದೇವಿ ನನ್ನೊಡತಿ-
ಯೆಂದು ನಲಿದಾಡಿದೆನು. ಅವಳ ಭ್ರೂವಿಭ್ರಮವ
ಬಣ್ಣಿಸುವ ಬಾಳೆ ಜೀವಿತವೆಂದು ಸೂಗುರಿಸಿ
ಉಳಿದರ ವಿಧಾನಗಳನೆಲ್ಲ ನಗೆಯಾಡಿದೆನು.
ಈ ಮಹಾದಾಸ್ಯವತಿ ವಿಫಲವಾಗಿಹುದೆಂಬ
ತಿಳಿವು ತಂದಿರುವಿರಿತವನು ತಾಳಲಾರೆನೆಲೆ!
ನನ್ನಿಗಳ ಕೂಸಿನಂತಿರುವ ಕಲೆಯೊಡನಾಡಿ
ಸತ್ಯವನೆ ಮರೆಯುವ ಮಹಾಪಾಪವೆನ್ನದಿದು!
ಹರುಷಕಿಹ ಪರಿಸಗಲ್ಲೆಂದು ತೆಗೆದಪ್ಪಿರುವ
ಕಲೆಯು ಜೀವದ ದಾಸಿ. ಕಾಲಗತ್ತಲೆ ಬಂದು
ಕವಿವಾಗ ಕಾಯುವಳೆ? ಎದೆಯೆಲ್ಲ ಕುದಿಗೊಂಡು
ಬಿರಿವಾಗ ನಿಃಸಹಾಯಿತೆಯಾಕೆ. ಬೇರೊಂದು
ಸೌಖ್ಯ ನೆಲೆಸಿರಬೇಕು. ತೊರೆಯಿದನು. ಸಾಕಿನ್ನು
ರನ್ನದೊಟ್ಟಿಲದಾಟ; ರನ್ನದೊಪ್ಪಲ ಮೇಲೆ
ಗುರಿಯಿಲ್ಲದಲೆದಾಟ. ಭೂಮಿತಾಯಿಯ ಕಂಡು
ಮರೆಹೊಕ್ಕು ಮನಶಾಂತಿಯನು ಪಡೆಯಬೇಕೆನಲು
ಬಹು ವಿಧದಿ ಚಿಂತಿಸುತ ಜೀವಿಸಿದೆನು.

ಕರ್ರಗಿಹ ಮೆಯ್ಯ, ಕುಸಿವಂಥ ಕಾಲ್ಗಳ, ಮಂದ-
ವಿಹ ನನ್ನ ಕಣ್ಣುಗಳ ನೋಡಿ ಬಲು ಮರುಗಿದೆನು.
ಮೇಲ್ವಾಯ್ದ ಬಿರುಗಾಳಿ ಸೆಳೆತವನು ಜ್ಞಾಪಿಸುತ
ಮಾನವ್ಯದವನತಿಗೆ ತ್ವೇಷಗೊಂಡಿತು ಮನವು.
ಕಲೆಯಿರಲಿ, ಧನವಿರಲಿ, ಕೊಳುಗುಳದ ಮದವಿರಲಿ,
ವ್ಯಾಧಿಗಳ ಬಳಲಿಕೆಯು ತಪ್ಪಿಹುದೆ? ಇಂತಿರಲು
ಮಾನವನಿಗಾವ ಗೌರವವೇನು? ಮೋಸಗಳ
ತವರಿನಂತಿಹ ದುರ್ಗೆ–ಯಕ್ಷಿಣಿಯು–ಎಲ್ಲರನು
ಮುನಿಸಿನಿಂದಾಳುತಿರೆ, ಬಂದ ದುಗುಡವ ಸಹಿಸಿ
ಸುಖವಿಲ್ಲದಳಿಯುವೆವು, ನೆರವಣಿಗೆಯಿಲ್ಲದಿಹ
ಸೃಷ್ಟಿಯಿದು ಮಲಿನತೆಯ ಘನಮೂಲವಾಗಿಹುದು.
ಗಾಳಿದೇರಿನೊಳೇರಿ ಕುಳಿತು ಭುವನೈಕತೆಯ
ಕಾಣುತಿಹ ನರರೆಲ್ಲ ಮತ್ತೆ ಕೆಳಗಿಳಿಯುವರು.
ವಿಹಗಗಳು ಗೂಡುಗೊಳುವವು. ತುಂಬುಜವ್ವನದ
ರತಿಕಾರರೊಲುಮೆಗಳು ನುಚ್ಚು ನೂರಾಗುವವು.
ಲಲನೆಯರ ನುಣ್ಗದಪುಗಳ ಬೆಳಕು ಕಳೆಯುವದು.
ಕಲೆಯೊಳೆಸೆದಿರುವ ನುಡಿಜಾಣರಿಳೆಯಾಹತದಿ
ನುಡಿಗೆಟ್ಟು ಕೊಳೆಯುವರು. ಇದುವೆ ರೂಹಿನ ದಾಸ್ಯ.
ಈ ಮರ್ತ್ಯದೇಹವನು ಬಿಸುಟೊಗೆದು ನಿಂತಿರಲು
ಧರಣಿಯಾಳಿಕೆ ತಪ್ಪಿ ಸ್ವಾತಂತ್ರ್ಯ ಲಭಿಸುವದು.
ಗಾಳಿದೇರೊಂದೇಕೆ? ಗಾಳಿಯಾಗಲುಬಹುದು.
ಗಗನದಿಂದಿಳಿಯದಿಹ ಹಕ್ಕಿಯಾಗಿರಬಹುದು.
ಅಮರವಿಹ ಪ್ರೇಮದುತ್ಸವ ಕುವರರಾವಾಗಿ
ಚೆಲುವತಿಯ ಕೊನೆವರೆಗು ಕೂರ್ತು ಹೊಂದಿರಬಹುದು.
ಕುಂದುವರಳಲ್ಲ, ಸೌಸವವಾಗಿ ಪರಿಣಮಿಸಿ
ಆಕಾಶವಾಣಿಯೆನೆ ನುಡಿಯ ಚಮಕಿಸಬಹುದು.
ಅದಕೆ ರೂಹಿನ ದಾಸ್ಯವಳಿವ ಬಗೆಯೇನೆಂದೆ.
ಆನಂದ ಪ್ರೀತಿದಾಯಿನಿಯಾದ ಕಲೆಗಿರುವ
ಮೂಲ ತಿರುಳನು ತಿಳಿದು ಮೆಚ್ಚಿ ಬೆರೆಯುವ ರೀತಿ
ಎಲ್ಲ ಕಾಣ್ವುದು, ಎಂದು ಕಾಣ್ವುದೆಂದೆ!

ಇನ್ನಿಲ್ಲ ತರವಲ್ಲ! ಮುಂದೆ ಬಹ ಸಾಧನೆಯ
ರಂಗಸ್ಥಲವನು ಶೋಧಿಸುವ ಕಾರ್ಯ ನಿಂತಿರುವ-
ದೆಂದು. ನೆರೆಹೊರೆಯವರ ತೊರೆದು, ಸಲುಹಿದ ನಗರ-
ದಧಿದೇವತೆಯ ನಮಿಸಿ ಸೀಮೆಯನು ದಾಟಿದೆನು.
ಸತಿಸುತರೊಡನೆ ಬಾಳ್ದ ಮನೆಯ ಮೃತ್ತುವನಷ್ಟು
ಗಂಟಿನಲಿ ಕಟ್ಟಿದೆನು. ಅಗಲ್ವ ಮನಸಿಲ್ಲದಲೆ
ಪೂರ್ವಾಶ್ರಮದ ನಾಲ್ಕು ಕುರುಹುಗಳು ಬೇಕೆಂದು
ಚಿತ್ರಗಳನುಳಿಸಿದೆನು. ಈ ಸಣ್ಣ ಸಂಸಾರ-
ದೊಡನೆ ಪಯಣಿಗನಾಗಿ, ಹುಟ್ಟಿದೂರನು ತ್ಯಜಿಸಿ
ಪಟ್ಟಣಕೆ ಬಂದಂತೆ, ಪಟ್ಟಿಣವನೋಸರಿಸಿ
ಗೊತ್ತಿಲ್ಲದಾಸರೆಯನರಸಲೆಳಸಿದೆನು!

ಹಿಂದೊಮ್ಮೆ ಪೆರ್ಮೆವೆತ್ತಿಂದು ಮಳೆಬಿಲ್ಲಂತೆ
ನೆರೆ ನಾಚಿ ಕಾಣದಾಗಿರುವ ಕನ್ನಡ ನಾಡ
ಬೀಳ್ಕೊಂಡು ಮಹರಾಷ್ಟ್ರದೇಶದುರ್ಕೆಯ ನೋಡಿ
ಅದರ ದೊಡ್ಡಿತೆಯಲವಿರಳವಾಗಿ ಬೆರೆತಿರುವ
ದಬ್ಬಾಳಿಕೆಯ ಕಂದು ಕಳವಳಿಸಿ, ತಳಿರಂಬು-
ವಂತೆ ಚಿತ್ತವ ಸೆಳೆವ ಗುರ್ಬರಾಂಗನೆಗೊಲಿದು,
ಭಾರತಿಗೆ ತಳಿರ್ದೋರಣವ ಕಟ್ಟಲಿಹ ಹಿಂದು-
ನುಡಿಗಾರರನು ಪ್ರೀತಿವಿಸ್ಮಯದೊಡನೆ ಕಂಡು
ಪುಣ್ಯಪುರುಷರ ಜನ್ಮದಾತೆಯಾಗಿಹ ವಂಗ-
ದೇವಿಯಡಿಯಲಿ ನಿಂತು ಧೇನಿಸುತ ಬಾಳಿದೆನು.
ತುಂಗಭದ್ರೆಯ ಹಸಾದವ ಪಡೆದು ಕೃಷ್ಣೆಗಿಹ
ಸವಿನೀರ ಸವೆಸುತಿಹ ಯೋಗಿಗಳ ನಮಿಸಿದೆನು.
ಗೋದಾವರಿಯ ಚರಣದಾವರೆಯನಶ್ರಯಿಸಿ
ಧ್ಯಾನಪರರಾಗಿರುವ ಯತಿಗಳನು ಕೇಳಿದೆನು.
ನರ್ಮದೆಯ ಬದಿಗಿರುವ ಪೊದೆನಾಡಿನಲಿ ನಿಂತ
ಸನ್ಯಾಸಿಗಳನು ಸಲುಹುವದೆನುತ ಬೇಡಿದೆನು.
ತಂಗುವನೆಯಲಿ ತಳುವ ಮುನಿವೇಷಧಾರಿಗಳ-
ನೀ ಸಮಸ್ಯೆಯ ಬಿಡಿಸಿರೆಂದು ಬಿನ್ನವಿಸಿದೆನು.
ಎಲ್ಲ ನಿಷ್ಫಲವಾಯಿತೀ ಕರ್ಣರಂಧ್ರಗಳು
ಪ್ರವಚನಗಳನು ಕೇಳಿ ಬಧಿರತೆಯನೆಯ್ದಿದರು
ಕಾಣಲಿಲ್ಲವು ಕನಸು; ಮನವೊ೦ದು ದೂನಿಸಿತು.
ಕೆಲವರೆಂದರು ತಮ್ಮ ದೇವನವಿದಲ್ಲೆಂದು.
ದೇಹತ್ಯಾಗೇಚ್ಛೆ ದುಷ್ಕಾಮವೆಂದರು ಕೆಲರು.
ದುರ್ನೆವವನರಿಯದವರೆಂದರಿಲ್ಲಿಹ ಗೂಢ
ತಮ್ಮ ಬೋಧನೆಗೆ ದುರ್ವಹವೆಂದು. ತಿಳಿದವರು
ತಮ್ಮ ತಿಳುವಳಿಕೆಯೆನು ಕರುಣಿಸಲು ಬಾರದೆಯೆ
ಕೊರಗಿದರು. ಇಂತಿರಲು ಜೀವದಾಸೆಯ ನೊಂದ
ನಿಗ್ರಹಿಸಲರಿಯದೆಯೆ ಮನದೊಳಗೆ ಕನಲಿದೆನು.

ಮನೆಯನೊಂದನು ನೋಡಿ ಒಳಸೇರಲನುದಿನವು
ಯತ್ನಿಸುತ ಕೊನೆವರೆಗೆ ದಾರಿತೋರದೆ ಬಳಲ್ದ
ಮನುಜನಂತೆನ್ನ ಪಾಡಾಗಿರಲು ಕಡೆಗೊಮ್ಮೆ
ಹಿಮಗಿರಿಯ ಪದಗಳಲಿ ದೇಹವರ್ಪಿಸಲೆಂದು
ಸಂಚರಿಸಿ ಗಂಗೋತ್ರಿಯಂದವನು ತಲುಪಿದೆನು.
ಧವಲಗಿರಿಯನು ನೋಡಿ ಬೆಪ್ಪುಗೊಂಡಿಹ ಮನಕೆ
ಗಂಗೋತ್ರಿಯುದಕವನು ಕಂಡು ಸಂಭ್ರಮವಾಯ್ತು.
ಆ ನೀರಿಗಿಹ ಮಿನುಗ, ತೀವ್ರತೆಯ, ತೀಕ್ಷ್ಣತೆಯ,
ಸುಪ್ರಸನ್ನತೆಯ ನೆರೆ ನೋಡಿ ಸಂತಸಗೊಂಡ
ಜೀವಕೆನಿಸಿತು; ಇಲ್ಲಿ ಜನರ ದುಮದುಮವಿಲ್ಲ;
ಪ್ರಕೃತಿ ತನ್ನಂತರಂಗವ ತೆರೆದು ನಿಂತಿಹಳು;
ಹಿಮರಾಜ ಯುಗಯುಗದ ಜ್ಞಾನವನು ಕೊಡಲಿಹನು;
ಅವನೊಲವು ಸಂತತದಿ ಹರಿಯುತಿದೆ. ಆರ್ಯಕುಲ-
ದಾಚಾರ್ಯ ಪುರುಷರಿಗೆ ಜ್ಞಾನದಾನವ ಗೆಯ್ದ
ರಾಮಾಭಿರಾಮೆಯಿವಳೆನಗೆ ಕರುಣಿಸದಿಹಳೆ?
ಅಲ್ಲಿ ವಿಶ್ರಮಿಸುವದು ವಿಹಿತವದು, ಸತ್ಯವದು.

ಆಗ ಜೋಳಿಗೆಯಲ್ಲಿ ಕೈಯಿಕ್ಕಿ ನೋಡಿದೆನು.
ನಾಲ್ಕು ಚಿತ್ರಗಳಲ್ಲಿ. ಕಣ್ಣೀರು ಪಳಗಿದವು.
ಸರ್ವಾನುಪರಿತ್ಯಾಗಕಣಿಗೊಂಡ ನನಗೇಕೆ
ಈ ಚಿತ್ರ, ಈ ಹಾಸ, ಈ ರಾಮಣೀಯಕತೆ?
ಸೂರ್ಯನಾರಾಯಣನು ನಡುಬಾನೊಳೆಸಗಿದನು-
ಅವನ ಬಿಂಬವು ನೀರ ಮೇಲೆ ಥಳಥಳಿಸಿರಲು.
ನಾಲ್ಕು ಕೃತಿಗಳನಾಗ ನಾಲ್ಕು ಚೆನ್ನಿಗರಂತೆ
ಅಪ್ಪುಗೆಯ್ದತ್ತು, ಮುದ್ದಾಡಿ ಹೊನಲಿನಲಿರಿಸಿ:
“ತಾಯಿ! ಗಂಗೆಯೆ ನಿನ್ನ ಸೇವೆಗೆಂದಿರಿಸಿಹೆನು
ವಾತ್ಸಲ್ಯದಣುಗರನು. ಈಡಾಡು, ಕಾಪಾಡು.
ನಿನ್ನಿಂದ ಜನಿಸಿದವು; ನಿನ್ನನ್ನೆ ಸೇರುವವು.
ಹಿಂದೆನ್ನ ಸತಿಸುತರ ಮೃತ್ಯುವಪಹರಿಸುತಿರೆ
ಮೌನವನು ತಾಳಿದೆನು ಮುಂದುಗಾಣದೆ. ಇಂದು
ಎದೆಯು ಭೇದಿಸಿದರೇನಹುದು? ಸ್ವೀಕರಿಸಿವನು.
ನಿನ್ನ ಜೊತೆಯಲ್ಲಿರಲು ನನಗಾವ ಭಯವಿಲ್ಲ.”
ಎ೦ದಂಬೆಯುಡಿಯಲಂದಬಿಗರ ಗುರಿಯಿಲ್ಲದಿಹ,
ಹಸುಳರಾಟದಿ ಕೂಡಿ ತೇಲ್ವಿಡುವ, ದೋಣಿಗಳ
ತೆರದಿ ಬಿಟ್ಟೆನು. ಒಡನೆ ತಾಯಿ ಸ್ವೀಕರಿಸಿದಳು.
ಧಾವಿಸುತ ಚಿತ್ರಗಳು ನಡೆದವೆಲ್ಲಿಗೊ ಮುಂದೆ.
ಈಗೆನಗೆ ತೊಡರ್ದ ಸಂಸಾರದೆಸಳಡಗಿದವು.
ಗೊತ್ತಿಲ್ಲದೀಗಾದೆ ನಾನೊರ್ವ:-ಸನ್ಯಾಸಿ.

ಈ ತಪ್ಪಲಡಿಯನ್ನು ನನ್ನ ನೆಲೆವೀಡೆಂದು
ತಿರುಗಾಡಿ ತಂದಿರುವ ತನಿವಣ್ಣುಗಳ ತಿಂದು
ಕೊಲ್ಲೆಗಳ ನೋಡುತ್ತ ಕೊನೆಗೊಂದು ರಮ್ಯವಿಹ
ಸ್ಥಾನವನು ನಿರ್ದೇಶಿಸಲ್ಲೆನಗೆ ಶಯ್ಯೆಯೆನೆ
ತಿಂಗಳಿನ ಬೆಳಕಿನಲಿ ನಗುತಲಿದ್ದಳು ತಾಯಿ.
ಆವಳ ಮಂಜುಳ ನಿನದವೆನ್ನ ಕಿವಿವೊಗುತಿತ್ತು.
ಆವಗಲೊ ನಿದ್ರಿಸಿದೆ, ಗೊತ್ತಿಲ್ಲ. ಜುಮ್ಮೆನಲು
ಮೆಯ್ನವಿರು, ನಿಮಿರಿ ನಿಂತಿರಲು ತಲೆಗೂದಲವು,
ಈ ಮೂಗು, ಈ ಕಣ್ಣು, ಈ ಬಾಯಿ ಮೇಳವಿಸಿ
ಕಣ್ಣಾಗಿ ನಿಂತಿರಲು, ಒರ್ವ ತೇಜಃಪುಂಜ
ಯತಿವರನು ರಾಜತೇಜವನು ಬೀರುತ ಬಂದ!
ಎಳೆಗೆ೦ಪು, ಬಿದಿರಾಳು, ನಸು ಎತ್ತರದ ನಿಲುವು;
ಬಿರಬಿರನೆ ನೇತ್ರಗಳು; ಚಂದಿರನ ಅರಳುಮೊಗ;
ಬಂದು ಬಳಿಯಲಿ ನಿಂತು ಕರ್ಣಗಳ ಹಿಡಿದೆತ್ತಿ
ನನ್ನ ಕಣ್ಬೆಳಕನೆಲ್ಲವ ತನ್ನ ಕಂಗಳಲಿ
ಸೆಳೆದಿರಿಸಿ ಸಾಯುಜ್ಯಮಂತ್ರಗಳನೂದಿದನು.

ನೂರು ಮೆಲ್ಲಡಿಯಿಟ್ಟ ನೂಪುರದ ಮೆಲ್ದನಿಯಲಿ
ಕರ್ಣಗಳ ಸೇರುವಂತಾಗಿರಲು ತಡವರಿಸಿ
ಪ್ರಜ್ಞೆ ಬರುವನಿತರೊಳು ಮುಗಿಲೆಣಿಗೆ ಕೈನೀಡಿ
ದಿಶೆಗಳುಲಿವಾಲಿಸುವ ನನ್ನ ರೂಪವ ನೋಡಿ
ನನಗೆ ತುಸು ಭಯವಾಯ್ತು; ದೂರ ಪರ್ವತದಡಿಯ-
ನಾರೊ ಸೇರುವದರಿತು ಮಿತಿಯಿಲ್ಲದೋಡಿದೆನು
ಯಾರಿಲ್ಲ; ಧವಲಗಿರಿ; ಚಂದ್ರ; ಗಂಗಾಮಾತೆ;
ನಾನು; ಮತ್ತೆಲ್ಲೆಡೆಗೆ ಗುಣಿಸುತಿಹ ಮಂತ್ರಗಳು!
ತಂಗಾಳಿ ಮೆಲ್ಲಡಿಯನಿಡುತ ಸಾಗುತಲಿತ್ತು.
ಉಷೆಯ ಚಿನ್ಹಗಳೆಸೆಯೆ ಚ೦ದಿರನ ಕಾಂತಿ ತುಸು
ಕೇದಗಿಯ ಬಿಳುಪೇರಿ ಕಾಲ್ದೆಗೆಯುತಿತ್ತು; ನಸು-
ಕಿಲ್ಲಿ ನಸುಕಲ್ಲಿ ನಸುಕೆಲ್ಲೆಡೆಗೆ ನಸುಕೇರಿ
ಬೆಳ್ಳ ಬೆಳಗಾಯಿತ್ತು ಕಡೆಗೊಮ್ಮೆ! ನದಿಗೋಡಿ,
ತಾಯ ನೊರೆವಾಲ ನೆರೆ ಬಾಯ್ದೆರೆಯು ಸವಿಯುತಿರೆ,
ನೀರ್ಮುತ್ತುಗಳ ನೋಡಿ ಕಣ್ಣು ಕಣ್‌ ಕಣ್‌ ಬಿಡಲು,
ಅವಳ ನೀರ್ನಿಂತೊಮ್ಮೆ ಈ ನೊಸಲು ಬೆಸಲಾಗೆ
ಪಾಪಗಳ ಮೊಟ್ಟೆಯಾಗಿರುವ ದೇಹವನದ್ದು-
ತಾ ಪರಮ ಸಲಿಲದೊಳು, ಉದಿಸುತಿಹ ಭಾಸ್ಕರನ
ಪಾದಗಳನರ್ಘ್ಯದಿಂ ತೊಳೆದು ಪೂಜೆಯ ಗೆಯ್ದು
ಈಚೆ ದಂಡೆಗೆ ಬಂದು ಭುವಿಗೆ ನಮಿಸುತ ಕುಳಿತೆ
ಧ್ವನಿಸುತಿರರೊಂದು ಗುರುಮಂತ್ರ ಹೃದಯಾಂತರದಿ:
“Imagination is the body of Thought
Be it for thee to find its harness out”

ಸೂಕ್ತವನ್ನುನ್ನಿಸುತ ಉಲಿಸುತ ಕುಳಿತೆ.
ಆಗ ಸರಿಯಿತು ಜ್ಞಾನಪಲ್ಲಟದ ತೆರೆಮರೆಯು.
“ಮೂಲಸತ್ಯದ ತಿಳಿವು ಎಲ್ಲದರ ಮೂಲವದು.
ಅವರ ವಾಹನವಾದ ಕಲ್ಪನೆಯನಣಿಗೊಳಿಸು!”
ಎ೦ಬ ಮಾತನು ಮೀರಲಾರದೆಯೆ ನುಡಿಯುತಿಹೆ
ನಿಮಗಿದರ ಗೂಢವನು, ದೇಹವನು ತ್ಯಜಿಸಿದರು!
ಮತ್ತೆ ಧ್ಯಾನವ ಬೆಳೆಸಲಾ ಮಂತ್ರವನು ಕುರಿತು
ಹೊಚ್ಚ ಹೊಸ ಮರಿಗಳಂತಿರುವೆನ್ನ ಭಾವಗಳು
ರೆಕ್ಕೆಗೊಳುತಲ್ಲೆಡೆಗೆ ತಾವೆ ಸಂಚರಿಸಿದವು.
ಕಲೆಯನತಿ ದೂಷಿಸಿದೆ; ಕಲೆಯನರಿಯದಲಿಂತು
ಮೂಲವನು ತಿಳಿಯಬಹುದೇನೆಂದು ಮರುಗಿದೆನು.
ಅಳವಿಲ್ಲದಿಹ ಚೆಲುವಿನೇಕಮೇವತೆಯದರ
ಬಹುವಿದತೆಗಿಹ ಪೆಂಪು-ಸೊಂಪುಗಳ ಕೂರದಲೆ
ಕಾಣುವದು ದುಃಸಾಧ್ಯವೆಂದೆನಿಸಿ ರಸದೇವಿ-
ಯನು ಚಿತ್ತದೊಳು ನಮಿಸಿ ಅವಳ ಕ್ಷಮೆ ಬೇಡಿದೆನು.
ಕಾಣ್ಕೆಯನು ತುಂಬ ನೆರೆಯಂತೆ ಬಂದಿಹ ಕಣಸು-
ಗಳ ಕೂಟವನು ಕರೆದು ಮನ್ನಿಸಿದೆನರ್ತಿಯಲಿ.
ಚಲುವತಿಯ ರೂಹುಗಳಿಗಿರುವ ಚ೦ದವ ತಿಳಿದು
ಅದನೊಂದಿ ಬಾಳ್ದ ಸಮರಸದ ಬಾಳ್ಕೆಯು,-ಅದನು
ಕಲೆಯಾಗಿ ಜೀವಂತಗೊಳಿಸಿ ನಿಲಿಸಿದ ಕೂರ್ಮೆ
ಸುಮುಹೂರ್ತದೊಳು ಫಲಿಸಿ ಮೂಲಸತ್ವವು ತಳೆದ
ದೇಹವಾವರಣವದು-ಮಾಯೆ, ಕಲ್ಪನೆಯೆಂಬ
ರನ್ನವಲ್ಲಣ-ಹೋಗಿ, ಆಕೃತಿಯನಡಿಗಿಸಿಹ
ಚೆಲುವೆಂಬ ಸತ್ಯವನು ಬೆರೆವ ಸಂತಸವುಕ್ಕಿ,
ದೇಹದೀ ಸೆರೆ ಕಳೆವುದೆಂಬ ನಂಬಿಗೆಯೂರಿ
ಕಡೆಗೊಮ್ಮೆ ಶಾಂತಮಾನಸನಾದೆ ಭುವನದೊಳು.

ತಪ್ಪಲಡಿ ಶಯ್ಯೆಯದು; ಗಂಗೆ ಸಲಹುವ ಮಾತೆ;
ಈ ರನ್ನದೊಟ್ಟಿಲಕೆ ಮುಗಿಲೆ ಮುತ್ತಿನ ಚಂಡು!
ಸಿಕ್ಕಿದಿನಿದಿನಸುಗಳ ಬಿದ್ದಣವು ಹಿರಿದಾಯ್ತು.
ಗಿರಿಯಡಿಗೆ, ಮುಗಿಲಡಿಗೆ, ಮನದಡಿಗೆ ಚಿರಶಾಂತಿ.
ಸುತ್ತಲಿಹ ಚೆಲುವೆಲ್ಲ ಚೆಲುವತಿಯ ತಲೆದುಡಿಗೆ,
ಅಲ್ಲಿ ಸಂಚಲಿಸುತಿಹ ಕಡ್ಡಿಯಾನೊಂದೆಂದೆ!
ಹೊಂಗಿರಿಯ ಮೇಲೆ ತೇಜಗಳ ಜೋಗಿರಲಲ್ಲಿ
ಮಳೆಬಿಲ್ಲ ವ್ಯೂಹಗಳಿಗೊಂದು ಬಣ್ಣದ ಮಿಣುಕು
ನಾನೆಂದೆ. ಇನಿತು ದಿನ ಹೇಗೆ ಮರೆತೆನೊ ಕಾಣೆ!
ಭೃ೦ಗಕೇಲಿಯಲಿ ಸುರಕನ್ಯೆಯರ ನುಣ್ಚರವ,
ತಳಿರ್ದೊಂಗಲಲ್ಲಿ ಮುಗಿಲ್ಗೆ೦ಪ ತರಹವನೊಂದ,
ಬಯಲಿನೊಳು ಸಿರಿದಾಣವನು, ತಾಣದಲಿ ಬಯಲ-
ನನುಭವಿಸಿದಾಢ್ಯತೆಯು ಮಿಗಿಲಾಯ್ತು. ಹೂವುಗಳ
ಮುತ್ತಿಟ್ಟೆ. ನೀರ ತನಿದಂಪಿನಲಿ ಮನವಾರೆ
ಮುಳುಗಿದೆನು. ತಣ್ಬಿಸಿಲ ತನಿವೇಟವನು ತಳೆದು
ನಿಮಿರಿದೆನು. ವಿಶ್ವವನು ತುಂಬಿರುವ ಸತ್ಯವೇ!
ಎಂದು ಕುಣಿದಾಡಿದೆನು, ಕುಲಿಕಿದೆನು, ಗುಡುಗಿದೆನು!

ಸತ್ಯವದು ಕಣ್ಣೊಳಗೆ ಸ್ಥಿರವಾಗಿ ನೆಲಿಸುತಿರೆ
ಒಂದೆ ಬೆಳಕೆಲ್ಲೆಡೆಗೆ ಅರಳಿ ನಿಲ್ಲುತ ಮುಗಿಲಿ-
ನೊಳಗಿಂದ ಸುರಿದಿತ್ತು; ನೀರಿನೆದೆಯನು ತೆರೆದು
ಸರಸವಾಡುತಲಿತ್ತು; ಗಿರಿಗಳನು ಹೊಂದಿತ್ತು;
ಹುಲ್ಲು, ಮರ, ಹೂವುಗಳ ನಿರತೆಯಲಿ ತೋರಿತ್ತು.
ಹೊಟ್ಟೆ;-ಹಸಿವೆನಲಿಲ್ಲ; ಗಾಳಿಯನು ಸೇವಿಸಿತು.
ಆವಯವಗಳಲುಗಾಡಲಿಲ್ಲ; ಕುಳಿತಿರುವಲ್ಲಿ
ಕೂರ್ತದನು ಕೊಳುತಿಹವು; ಉಸಿರು ಮೆಲ್ಲುಲಿದಿತ್ತು.
ನೀರವತೆ, ಆನಂದ, ಅರ್ಥಪೂರ್ಣತೆ, ಬೆಳಕು.

ಪೂರ್ಣಯೋಗವದಿಂತು ಬಂದು ಮೈಮರೆಸಿರಲು
ಯಾವ ದಿನವದು ಕಾಣೆ, ಒಮ್ಮೆ ತಾವೆಯೆ ಕಣ್ಣು
ನೀಟಾಗಿ ತೆರೆದಿಹವು; ಸುತ್ತು ನೆರೆ ನೋಡಿದೆನು.
ನಡುಗತ್ತಲಾಗಿತ್ತು; ಚಿಕ್ಕೆಗಳ ತಿಂತಿಣಿಯು
ಬಾಂದಳವ ಕಿಕ್ಕಿರಿದು ನರೆದಿತ್ತು. ಹಿಮಜಾತೆ
ಧ್ಯೇನಿಸುತ ಸಾಗಿಹಳು; ಅವಳನಾಗಸಗಂಗೆ
ಕರೆಯಲನುವಾಗಿಹಳು. ಎಲ್ಲಿಹೆನೊ ನೆನಪಿಲ್ಲ,
ಕಡೆಗೊಮ್ಮೆ ಮೌನಗೊಂಡಿರುವ ತಾರಾವಲಯ-
ವನ್ನೊಡೆಡು ಧಾವಿಸುತ ಬಂತೊಂದು ದಿವ್ಯಪ್ರಭೆ.
ಎಲ್ಲ ಬೆಳಕಿಗೆ, ಎಲ್ಲ ಇರುವಿಕೆಗೆ, ಗರುವಿಕೆಗೆ
ಮೂಲಕಾರಣವಾದ ಹಿರಿ ಬೆಳಕು ನಿರಿಮುಗಿಲಿ-
ನಂತೆ ಇಳಿಯುತ ಬಂತು. ಅದರೋಜೆಗಳಿಸಿದವು
ತಾರೆಗಳು. ಬಾನಿಳೆಯ ಗಂಗೆಯರು ಸಂಗಮಿಸಿ
ಶೋಭಿಸಿದರದರ ನಗೆಯಾಗುತ್ತ. ಬೇರೊಂದ-.
ದಾವುದುಳಿದಿರಲಿಲ್ಲ: ನಾನು, ನೀಳ್ಬೆಳಕೊಂದು.
ಆ ಜೀವಚುಂಬಕವ ಕಂಡೊಡನೆ ಸಂಭ್ರಮಸಿ
ಮನವೆಂಬ ರನ್ನವಟ್ಟಿಗೆಯೊಡೆದು ಮೃತ್ತಿಕೆಯ
ಮೇಲ್ಮಾಡವನು ತೆರೆದು ಕಿಡಿಯೊಂದು ನೆಗೆದಂತೆ
ಅಂಗುಲಿಯ ನಖದುದ್ದ ಕುಡಿದೀಪ ಮಸುಳ್ದಂತೆ
ಮುಗಿದು ಹೋದೆನು ಲೀನನಾಗಿ ತನಿವೆಳಕಿನೊಳು.
ದೇಹವದು ನೆಲಕುರಳಿ ನದಿಯ ನೀರೊಳು ಮುಳುಗಿ
ಕಣಕಣದಿ ಪುಣ್ಯವನು ಹೊಂದಿತ್ತು. ಮನ, ಬುದ್ಧಿ,
ಇಂದ್ರಿಯಗಳೆಂದಿಗೋ ಭೋಗಿಸಿದ್ದುವು ಲಯವ.

ಇಂತು ಕಥೆ ಮುಗಿದಿಹುದು. ಎನ್ನನಾಲಿಸಲಿನ್ನು
ಮನವಿರಲು ಮರೆಹೋಗುವದಾ ವಿಹಗಗಳ ದನಿಯ,
ಇನಿಯರಿನಿವಾತುಗಳ, ಸಂಜೆಮುಂಜಾವುಗಳ,
ತನಿವಣ್ಣದೈಸಿರಿಯ, ಎದೆಯೊಲವ, ಈ ಧರೆಯ!
*****
ಡಿಸೆಂಬರ ೧೯೩೨

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...