ಅಧ್ಯಾಯ ಹದಿನೈದು
ಆಚಾರ್ಯರು ಪರಿವಾರದೊಡನೆ ಶ್ರೀಶೈಲವನ್ನು ತಲಪಿದರು. ದಾರಿಯಲ್ಲಿ ಪರಿವಾರದವರಿಗೆ ಯಾರಿಗೂ ಕುಡಿದ ನೀರು ಅಲ್ಲಾಡಲಿಲ್ಲ; ತಲೆಯ ಕೂದಲು ಚುಳ್ ಎನ್ನಲಿಲ್ಲ. ಪರ್ವತದ ಬುಡದಲ್ಲಿ ರಾಜಾಧಿಕಾರಿಗಳು ಆಚಾರ್ಯ ಪರಿವಾರವನ್ನು ಎದುರುಗೊಂಡರು. ಆ ರಾತ್ರಿ ಅಲ್ಲಿಯೇ ಬಿಡಾರವಾಯಿತು. ಮರುದಿನ ಬೆಳಗಿನ ಝಾವದಲ್ಲಿ ಪಲ್ಲಕ್ಕಿಗಳಲ್ಲಿ ಕುಳಿತು ಎಲ್ಲರೂ ಪರ್ವತಾ ರೋಹಹಣಮಾಡಿದರು.
ಶ್ರೀಶೈಲದಲ್ಲಿಯೂ ದೇವಸ್ಥಾನಕ್ಕೆ ಬಹು ಸಮೀಪವಾಗಿಯೇ ಆಚಾರ್ಯರ ಬಿಡಾರವು ಸಿದ್ದವಾಗಿತ್ತು. ಅಲ್ಲಿ ಮೂರುದಿನ ಇದ್ದು ಮಲ್ಲಿಕಾರ್ಜುನನ ಸೇವೆಯೆನ್ನು ಪೂರೈಸಿಕೊಂಡು ರಾಜಧಾನಿಗೆ ಪ್ರಯಾಣ ಮಾಡುವುದು ಎಂದು ಗೊತ್ತಾಗಿತ್ತು. ಏಕೋ ಚಿನ್ನಳಿಗೆ ಅಲ್ಲಿಂದ ಹೊರಡುವುದಕ್ಕೇ ಮನಸ್ಸಿಲ್ಲ. ಇನ್ನೂ ಅಷ್ಟು ದಿನ ಅಲ್ಲಿತಬೇಕೆಂದುಕೊಂಡಳು. ಅವಳು ಬೇಕು ಎಂದರೆ ಬೇಡ ಎನ್ನುವವರು ಯಾರೂ ಇರಲಿಲ್ಲ.
ದಿನವೂ ಸಂಜೆಯಾಗುವ ವೇಳೆಗೆ ಎಲ್ಲರೂ ಸ್ನಾನ ಮಾಡಿ ಮಡಿಯುಟ್ಟು ದೇವರ ದರ್ಶನಕ್ಕೆ ಬರುವರು. ದಿನವೂ ಸ್ವಾಮಿಗೂ, ಅಮ್ಮನವರಿಗೂ ಸುವರ್ಣ ವರಹಗಳಿಂದ ಸಹಸ್ರ ನಾಮವು ನಡೆಯುವುದು. ಗುರುಶಿಷ್ಯರಲ್ಲಿ ಯಾರಾದರೂ ದೇವರ ಮುಂದೆ ಭಜನೆಯನ್ನು ಮಾಡುವರು. ಮೊದಲನೆಯ ಝಾವವು ಮುಗಿಯುವವರೆಗೂ ದೇವಸ್ಥಾನದಲ್ಲಿದ್ದು ಎಲ್ಲರೂ ಹಿಂತಿರುಗಿ ಬರುವರು.
ಚಿನ್ನಳಿಗೆ ಆ ಬೆಟ್ಟ ಗಾಡುಗಳಲ್ಲಿ ರಾಯನೊಡನೆ ತಿರುಗಬೇಕೆಂದು ಆಸೆ. ಆದರೆ ರಾಜಾಧಿಕಾರಿಗಳು ದೇವಸ್ಥಾನದಿಂದ ಕೊಂಚ ದೂರ ಹೋದರೆ ಹಗಲೇ ಹುಲಿಗಳು ಅಡ್ಡಗಟ್ಟುವುವು ಎಂದು ಹೆದರಿಸಿದ್ದರು. ಅಲ್ಲದೆ, “ಹೋಗಕೂಡಡು. ತಾವು ಅತ್ತಕಡೆ ಹೋಗಿ, ಆಲ್ಲೇನಾದರೂ ಅಪಾಯ ಸಂಭವಿಸಿದರೆ ನಮ್ಮ ಪ್ರಾಣಕ್ಕೆ ಬರುವುದು” ಎಂದು ಅಧಿಕಾರಿಯು ಖಂಡಿತ ವಾಗಿ ಹೇಳಿದ್ದನು.
ಆದರೂ ಚಿನ್ನಳಿಗೆ ತನ್ನ ಆಸೆಯನ್ನು ವಿರೋಧಿಸುವುದು ಆಗಲಿಲ್ಲ.
ರಾಯರಿಗೆ ಹೇಳಿದಳು. ರಾಯರು ಆಗಲೇಳು. ಅದಕ್ಕೇನು ಎಂದು ಒಂದು ದಿನ ಕಾಡಿಗೆ ಹೋಗಿ ಬರುವುದು ಎಂದು ಗೊತ್ತುಮಾಡಿದರು. ಸುಮಾರು ನೂರು ಗಜ ದೂರದಲ್ಲಿ ಇಬ್ಬರು ಆಯುಧಧಾರಿಗಳು ಮುಂದೆ ಹಿಂದೆ ಇರುವುದು. ತಾವೂ ಆಯುಧಧಾರಿಗಳಾಗಿ ಹೋಗುವುದು ಎಂದು ಗೊತ್ತಾಯಿತು. ಆಚಾರ್ಯರೂ, ರನ್ನಳೂ ಹಿಂದೆಯೇ ಉಳಿದರು
ಪ್ರೇಮಿಗಳಿಬ್ಬರೂ ಕಾಡಿಗೆ ನುಗ್ಗಿದರು… ಯಾವುದೋ ಹೂವು, ಯಾವುದೋ ಚಿಗುರು, ಚಿನ್ನಳಿಗೆ ಬೇಕೆನ್ನಿಸುವುದು. ರಾಯನು ಲಕ್ಷ್ಯವಿಲ್ಲದೆ ನುಗ್ಗಿ ತರುವನು. ಏನೋ ಹರಟೆ, ಏನೋ ಮಾತು, ಏನೋ ಚೇಷ್ಟೆ, ತಮ್ಮನ್ನು ಕೇಳುವವರು ಯಾರೂ ಇಲ್ಲವೆಂದು ಮನವರಿಕೆಯಾದಾಗ ಇಬ್ಬರೂ ಮಕ್ಕಳು ಕುಣಿದಾಡುವಂತೆ ಸಂತೋಷದಿಂದ ಅವೊತ್ತಿನ ಸಂಜೆಯವರೆಗೂ ಅವರಿಬರೂ ಆ ಕಾಡಿನಲ್ಲಿ ಅಲೆದರು.
ಅವೊತ್ತು ಚಿನ್ನಳಿಗೆ ಸಂತೋಷನೋ ಸಂತೋಷ. ವಿಜಯನಗರದಲ್ಲಿ ಭಾರಿಯ ಭವನದಲ್ಲಿದ್ದರೂ ಪಂಜರದಲ್ಲಿನ ಹಕ್ಕಿಯಂತೆ ಮರೆಯಲ್ಲಿದ್ದವಳು ಇಂದು ಸ್ವೇಚ್ಚೆಯಾಗಿ ತಿರುಗುತ್ತಿದ್ದಾಳೆ. ಅಂಕೆ ಶಂಕೆಯಿಲ್ಲದೆ ತಾನೇ ತನ್ನ ಮನೋಹರನೊಡನೆ ಏಕಾಕಿಯಾಗಿ ತಿರುಗುತ್ತಿರುವುದೇ ಅವಳಿಗೆ ಸ್ವರ್ಗಕ್ಕೆ ಹೋಗಿಬಂದಷ್ಟು ಸಂತೋಷವಾಗಿದೆ.
ಬಿಸಿಲು ಹೊತ್ತಾಯಿತು. ಹೊತ್ತು ನೆತ್ತಿಗೆ ಬರುತ್ತಿರುವಾಗ ಎಲ್ಲಿಯೋ ಯಾವುದೋ ಮರದಬುಡದಲ್ಲಿ ತಾವು ತಂದಿದ್ದ ಬುತ್ತಿ ಯನ್ನು ಇಬ್ಬರೂ ತಿಂದಿದ್ದಾರೆ. ಜೊತೆಯಲ್ಲಿ ತಂದಿದ್ದ ನೀರು ಕುಡಿದಿದ್ದಾರೆ. ಈವರೆಗೆ ಚಿನ್ನಳು ಎಂಜಲು ಎತ್ತಿದವಳಲ್ಲ. ಎಂಜಲು ಎಲೆ ತೆಗೆದು ತಾನೇ ಬಿಸಾಟರೆ ಅವಳಿಗೆ ಏನೋ ಸಂತೋಷ. ಎಷ್ಟೋದಿನ ತೊಳೆದಿರುವ ರಾಯನ ಕೈಯನ್ನು ತಾನೇ ತೊಳೆದಿದ್ದಾಳೆ. ಆದರೆ ಈ ದಿನ ಆಗಿರುವ ಸಂತೋಷ ಇದುವರೆಗೆ ಆಗಿರಲಿಲ ಆ ಸಂತೋಪದಲ್ಲಿ ಇಬ್ಬರೂ ಅಡಕೆಲೆ ಹಾಕಿಕೊಳ್ಳುತ್ತ ಕುಳಿತು ಕೊಂಡರು. ಚಿನ್ನಳು ಕೇಳಿದಳು. “ಗೋಪಾಲ, ನಿನಗೊಂದು ಗುಟ್ಟು ಬೇಕೇನೋ?”
“ನೀನು ಹೇಳುವುದೆಲ್ಲ ಗುಟ್ಟೆ ? ನಿನ್ನ ಗುಟ್ಟು ನಾನು ಕಾಣೆನೆ? ರಾಯರ ಅಂತರಂಗ ಮೂರು ಬೆಳ್ಳುಳ್ಳಿ ಗಡ್ಡೆ, ಅಷ್ಟೇ ತಾನೇ?”
“ನಾನು ಹೇಳಬೇಕೆಂದಿರುವುದು ರಾಯರ ಅಂತರಂಗ. ಹೌದು. ಆದರೆ ಆದು ಮೂರು ಬೆಳ್ಳುಳ್ಳಿ ಗಡ್ಡೆ ಅಲ್ಲ. ಆಷ್ಟೆ!
“ನೀನು ಏನು ಹೇಳಿದರೂ ಕೇಳುವುದಕ್ಕೆ ಸಿದ್ದವಾಗಿದ್ದೇನೆ. ಅದೇನು ಇಷ್ಟವಸರ? ಗುಟ್ಟು ಹೇಳುವುದಕ್ಕೇ ಶ್ರೀಶೈಲಕ್ಕ ಕರೆದುಕೊಂಡು ಬಂದೆಯೇನು ? “
“ನಿಜವಾಗಿ, ಗೋಪಾಲ, ಈ ಶ್ರೀಶೈಲಕ್ಕೆ ಬಂದಾಗಲಿಂದ ನನಗೆ ಏನೋ ಇಲ್ಲಿಂದ ನಾನು ಹಿಂತಿರುಗಿ ಹೋಗುವುದಿಲ್ಲ ಎನ್ನಿಸಿಬಿಟ್ಟಿದೆ. ಅದರಿಂದಲೇ ಇವೊತ್ತು ನಿನಗೆ ಆ ಮಾತು ಹೇಳಬೇಕು ಎಂತಲೇ ಈ ಕಾಡಿಗೆ ನಿನ್ನನ್ನು ಎಳಕೊಂಡು ಬಂದೆ.”
“ಹಾಗೆಂದರೆ ? “
“ನಿಜವಾಗಿ ನಾನಿನ್ನು ಬಹಳ ದಿನ ಬದುಕುವುದಿಲ್ಲ. ಹಾಗೆ ನಾನು ಹೋದರೂ ನಿನ್ನ , ಸೌಭಾಗ್ಯ ಎಷ್ಟು ದೊಡ್ಡದು ಎನ್ನುವುದು ನಿನಗೆ ಗೊತ್ತಿರಲಿ ಎಂದು ಇವೊತ್ತು ಹೇಳುತ್ತೇನೆ.“
ರಾಯನು ನಡುವೆ ಏನೋ ಮಾತನಾಡುವುದಕ್ಕೆ ಹೊರಟನು. ಚಿನ್ನಳು ಮೆತ್ತಗೆ ಬಾಯಮೇಲೆ ಒಂದೇಟು ಹೊಡೆದು,“ಬಾಯಿಮುಚ್ಛಿಕೊಂಡು ಕೇಳೋ ಎಂದರೆ ?”ಎಂದಳು. ರಾಯನೂ ಒಪ್ಪಿಕೊಂಡನು.
“ನಾವು ಗೋಲ್ಕೊಂಡಕ್ಕೆ ಹೋಗಬೇಕು. ಎಂದು ಅರಮನೆಯಲ್ಲಿ ಅಪ್ಪಣೆಯಾಯಿತಲ್ಲ. ಆವೊತ್ತು ನಾನು ಎರಡನೆಯ ಸಲ ತಿರುಗಿಹೋಗಿ ರಾಯರನ್ನು ಕಂಡು ಶ್ರೀಶೈಲಕ್ಕೆ ಹೋಗಿಬರಲು ಅಪ್ಪಣೆಯನ್ನು ಕೇಳಿಕೊಂಡು ಬಂದೆನಲ್ಲ. ಅವೊತ್ತೇನಾಯಿತು ಗೊತ್ತೇ?”
“ಗೊತ್ತಿಲ್ಲದೆ ಏನು? ಚಿನ್ನಾಸಾನಿಯವರು ರಾಯರ ವಿಶೇಷಾನುಗ್ರ ಹಕ್ಕೆ ಪಾತ್ರರಾದರು. ಅಷ್ಟೇ ತಾನೇ?”
“ಹೋಗೋ ! ಆದೊಂದು ದೊಡ್ಡ ಗುಟ್ಟೇನೋ ? ಅದಕ್ಕೆ ಮುಂಚೆ ರಾಯರೊಂದು ಮಾತನಾಡಿದರು.?
“ಏನು?
“ನಾನು ರಾಯರ ಅಪ್ಪಣೆಯನ್ನು ಕೇಳಲು ಹೋದವಳು ಅವರ ಪಾದ ಮುಟ್ಟ ಕಣ್ಣಿಗೊತ್ತಿಕೊಂಡು, “ನನ್ನ ದೇವರ ಅಪ್ಪಣೆಯಾದರೆ ಶ್ರೀಶೈಲದ ದೇವರ ದರ್‍ಶನಮಾಡಿಬರುತ್ತೇನೆ ‘ ಎಂದು ಕೈಮುಗಿದೆ. ಆಗ ಅವರು ಎನು ಮಾಡಿದರು ಬಲ್ಲೆಯಾ?”
“ಹೇಳು.”
“ಆ ಮೊಕ ಕೆಂಪಗೆ ಮಾಡಿಕೊಂಡು, ಒಳಗಿದ್ದ ಹೊಟ್ಟಯಕಿಚ್ಚನ್ನೆಲ್ಲಾ ಮೊಕದಿಂದ ಅಲ, ಕಣ್ಣಿನಿಂದಲೇ ಕಾರುತ್ತ, “ದೇವರು, ದೇವರು, ಆದರೆ ನಿನ್ನ ಪೂಜೆಯೆಲ್ಲಾ ಇನ್ನಾವುದೋ ದೇವರಿಗೆ ‘ ಎಂದುಬಿಟ್ಟರು.”
ರಾಯನು “ಗಹಗಹಿಸಿ ನಕ್ಕನು. ಚಿನ್ನಳು, “ನೋಡಿದೆಯೇನೋ? ವಿಜಯನಗರದ ಚಕ್ರವರ್ತಿಗಳು ಬೇಕುಬೇಕು ಎನ್ನುವ ಹೆಣ್ಣು ನಿನ್ನ ಚರಣ ದಾಸಿ. ಆದರೂ ನನಗೆ ಅವಳ ಮೇಲೆ ಅಭಿಮಾನವಿಲ್ಲ. ಲೋ, ಗೋಪು, ಈ ಜನ್ಮ ನಿನಗೆ ಹೆಂಡತಿಯಾಗಿ ನಿನ್ನ ಜೊತೆಯಲ್ಲಿ ಸಂಸಾರಮಾಡಿ ಕೊಂಡಿರುವ ಭಾಗ್ಯ ಇಲ್ಲದೆ ಹೋಯಿತು. ಇನೊಂದು ಜನ್ಮಕ್ಕಾದರೂ ಬರಲಿ ಕಣೋ. ಆ ಭಾಗ್ಯ ಕೊಡೋ“ಎಂದು ಅವನಿಗೆ ತೆಕ್ಕೆ ಬಿದ್ದಳು. ರಾಯನು ಕಣ್ಣುತುಂಬಾ ನೀರಿಟ್ಟುಕೊಂಡು ಅವಳ ಮುಖದತುಂಬಾ ಮುತ್ತಿಡುತ್ತ “ಚಿನ್ನಾ, ನೀನು ತಪ್ಪು ತಿಳಿದುಕೊಂಡೆ. ನನ್ನ ಮೇಲಿರುವ ಅಭಿಮಾನದಲ್ಲಿ ನೂರರ ಒಂದು ಪಾಲು ಹೆಂಡತಿಯ ಮೇಲೆ ಇಲ್ಲ. ಆದರೂ ಕೈ ಹಿಡಿದವಳು : ಅದರಿಂದ ಅವಳಿಗೆ ದ್ರೋಹಮಾಡಲಾರದೆ ಇದ್ದೇನೆ. ಇವೊತ್ತು ನಾನೂ ಒಂದು ಗುಟ್ಟು ನಿನಗೆ ಹೇಳುತ್ತೇನೆ ಕೇಳು. ನೀನು ನಿನ್ನ ರವಿಕೆಯ ಗಂಟಿನಲ್ಲಿ ಕಟ್ಟದ್ದೀಯಲ್ಲಾ ಆ ಗಂಧದಬಿಲ್ಲೆ. ನಾನು ಅದಾಗಬೇಕು. ಯಾವಾಗಲೂ ನಿನ್ನ ಎಡೆಯ ಮಗ್ಗುಲಲ್ಲಿ ಸ್ತನಗಳ ನಡುವೆ ಇದ್ದುಬಿಡಬೇಕು ಎಂದು ನನ್ನ ಆಸೆ. ನಾನು ಮನೆಯಲ್ಲಿ ಹೆಂಡತಿಯೊಡನಿದ್ದರೂ ನನ್ನ ಹೃದಯ ವನ್ನು ಬಿಚ್ಚಿದರೆ ಅಲ್ಲಿ ಕಾಣುವುದೇನು ಬಲ್ಲೆಯಾ ? ನಿನ್ನ ಮೂರ್ತಿ. ನಮಗೆ ಕುಲದೇವರು, ಇಷ್ಟದೇವರು, ಎಂದು ಅಲ್ಲವೆ? ಕುಲದೇವರಿಗೆ ಮೊದಲನೆಯ ಪೂಜೆಯಾದರೂ ಉಪಚಾರಾದಿಗಳೆಲ್ಲ ಯಾರಿಗೆ? ಇಷ್ಟ ದೈವಕ್ಕಲ್ಲವೇ? ಹಾಗೆ ಚಿಮ್ನಾ ನನ್ನ ಹೆಂಡತಿ ಕುಲದೈವ್ಯ ನೀನು ಇಷ್ಟದೈವ. ನೀನು ಇನ್ನೊಂದು ಜನ್ಮಕ್ಕಾದರೂ ಹೆಂಡತಿಯಾಗಬೇಕೆಂದೆ. ಇನ್ನೊಂದು ಜನ್ಮದವರೆಗೂ ಏಕೆ? ಇದೋ ಇಂದೇ, ಪ್ರಮಾಣ ಮಾಡುವೆನು. ಇಗೋ ಈ ಆಕಾಶ, ಈ ಭೂಮಿ, ಈ ವನದೇವತೆ ಎಲ್ಲರೂ ನಾನಾಡುವ ಮಾತಿಗೆ ಸಾಕ್ಷಿ ಯಾಗಿರಲಿ. ಇನ್ನು ಮುಂದೆ ನಿನ್ನಲ್ಲಿ ಮದುವೆಯಾದ ಹೆಂಡತಿಯಲ್ಲಿ ಹೇಗಿರ ಬೇಕೋ ಹಾಗಿರುವೆನು. ಇದಕ್ಕೆ ತಪ್ಪಿದರೆ ನೀನಿಟ್ಟ ಆಣೆ.”
ಚಿನ್ನಳು ಏನೋ ಒಂದು ದುರ್ಭರವಾದ ದುಃಖದಿಂದ ಭಾರಿಯ ನಿಟ್ಟುಸಿರು ಬಿಟ್ಟು ಹೇಳಿದಳು. “ಇಲ್ಲಾಪ್ಪ, ಈ ಜನ್ಮ ಎನ್ನಬೇಡ, ಇದು ಸೂಳೆಯ ಜನ್ಮ. ಅರಮನೆ ಉಪ್ಪು ತಲೆತಲಾಂತರದಿಂದ ತಿಂದು ಇಂದು ರಾಯರಿಗೆ ಸೆರಗು ಹಾಸದಿದ್ದರೆ ಆದೀತೆ? ಇನ್ನೊಬ್ಬನಿಗೆ ಹಾಸಿ ಎಂಜಲಾದ ಸೆರಗು ನಿನಗೆ ಹಾಸಿ, ನೀನು ನನಗೆ ಮೀಸಲಾಗಿರು ಎಂದರೆ ನ್ಯಾಯ ? ನೀನು ಗಂಡು, ಗಂಡು ಮೀಸಲಾದರೆ ಹೆಣ್ಣಿಗೆ ಸಂತೋಷ. ಆದರೂ ನನಗೆ ಮೀಸಲಾಗಬೇಕು ಎನ್ನುವುದು ನಾನು ನಿನಗೇ ಹೊರತು ನೀನು ನನಗಲ್ಲ. ದೇವರಿಗೆ ಮಡಿಯಲ್ಲಿ ಮಾಡುವ ನೈವೇದ್ಯದ ಅಡುಗೆಯಂತೆ ನಾನು ಒಂದು ಜನ್ಮವಾದರೂ ನಿನಗೆ ಮೀಸಲು ಮಾಡಬೇಕು ಗೋಪಾಲ. ಅದಕ್ಕಾಗಿ ಏನು ಮಾಡಬೇಕಾದರೂ ಮಾಡಲು ಸಿದ್ಧವಾಗಿದ್ದೇನೆ.”
“ಚಿನ್ನಾ ನಾನೇನಾದರೂ, ಪುಣ್ಯ ಮಾಡಿದ್ದರೆ ನಿನ್ನ ಇಚ್ಛೆ ಫಲಿಸುತ್ತದೆ. ಈ ಜನ್ಮದಲ್ಲಿಯೇ ನಿನ್ನನ್ನು ಹೆಂಡತಿಯೆಂದು ಒಪ್ಪಿಕೊಳ್ಳುವುದಕ್ಕೆ ಸಿದ್ದ ವಾಗಿರುವೆನು. ನೀನು ಇನ್ನೂ ಶುದ್ದಳಾಗಿ ಬರುವೆನೆಂದರೆ ಬೇಡನೆನ್ನುವೆನೆ? ಇಗೋ, ಈ ಪ್ರಮಾಣದಿಂದ ನಿನಗೆ ತೃಪ್ತಿಯಾಗುವಹಾಗಿದ್ದರೆ, ತಕೋ, ನೀನು ಹೆಂಡತಿಯಾದರೆ ಅನನ್ಯಲಭ್ಯನಾಗುನ ಪತಿಯಾಗಿ ಸಂತೋಷವಾಗಿ ನಿನ್ನೊಡನೆ ಬಾಳುವ ಭಾಗ್ಯ ನನಗಾಗಲಿ” ಎಂದು ಕೈಯಲ್ಲಿ ಕೈಯಿಟ್ಟನು.
ಚನ್ನಳು ರಾಯನನ್ನು ತಬ್ಬಿಕೊಂಡಳು. ಮುತ್ತಿಟ್ಟು ಕೊಂಡಳು. ಆ ಪ್ರೌಢಾಂಗನೆಯ ವಿಶ್ವಾಸದ ಚೇಷ್ಟೆ ಗಳಲ್ಲಿ ರಾಯನು ಶುದ್ಧವಾಗಿ ಕರಗಿ ಹೋದನು. ಅವಳು ಒಂದು ಗಳಿಗೆ ಆ ಗಾಢಾಲಿಂಗನದ ಸೌಖ್ಯವನ್ನು ಅನುಭವಿಸಿ “ಗೋಪಾಲ, ಈ ಜನ್ಮ ಇಲ್ಲಿಗೆ ಸಾಕು ಕಣೊ. ಹೀಗೇ ನಿನ್ನನ್ನು ತಬ್ಬಿಕೊಂಡು ನಿನ್ನ ತೋಳು ತೆಕ್ಕೆಯಲ್ಲಿ ಪ್ರಾಣಬಿಟ್ಟರೆ ನನ್ನಂಥಾ ಪುಣ್ಯ ವಂತಳಿಲ್ಲ ಎಂದಳು.
“ಏಕೆ ಹಾಗೆ ಹೇಳುತ್ತೀ? ಇನ್ನು ಮುಂದೆ ನಿನ್ನ ಜೀವನ ಬಹಳ ಸುಖ, ಚಿನ್ನಾ. ಅಂತಹ ಸುಖದಿಂದ ವಂಚಿತಳಾಗಬೇಕೆಂದು ಮೃತ್ಯುವನ್ನು ಕೋರುತ್ತಿದ್ದೀಯಾ?”
“ಇಲ್ಲ. ಗೋಪಾಲ, ನಾನು ಮೃತ್ಯುವನ್ನು ಕೋರುತ್ತಿಲ್ಲ. ತಾನಾಗಿ ಬಂದಿದೆ… ಸ್ವಾಮಿಕಾರ್ಯವಾಯಿತು. ಸ್ವಕಾರ್ಯವಾಯಿತು. ಇನ್ನೆಷ್ಟುದಿನ ಇದ್ದರೂ ಚರ್‍ವಿತಚರ್‍ವಣ….“ ಚಿನ್ನಳು ಏನು ಹೇಳಬೇಕೆಂದಿದ್ದಳೋ? ಅಷ್ಟರಲ್ಲಿ ಅವುಗೆಯ ಸದ್ದು ಕೇಳಿಸಿತು. ಮೈಮರೆತು ಬಿದ್ದಿದ್ದ ಆವರಿಗೆ ಕೂಡ ಕೇಳಿಸಿ, ಅವರು ಥಟ್ಟನೆದ್ದರು. ಇಬ್ಬರಿಗೂ ಮೈಮೇಲೆ ಬಟ್ಟೆಗಳು ಜಾರಿವೆ. ಎದ್ದು ಬಟ್ಟೆ ಗಳನ್ನು ಎಳೆದುಕೊಳ್ಳುವುದರೊಳಗಾಗಿ ಯಾರೋ ಯತಿಗಳು ಬಂದು ಎದುರ ನಿಂತಿದ್ದರು.
ಇಬ್ಬರೂ. ನಮಸ್ಕಾರ ಮಾಡಿದರು ಯತಿಗಳಿಗೆ ಅವರ ಮೇಲೆ ಲಕ್ಷ್ಯವೇ ಇಲ್ಲ. ಕಾಲಿಂದ ತಲೆಯವರೆಗೆ ದುರದುರನೆ ನೋಡುತ್ತಿದ್ದರೂ ಅವರಿಗೆ ಚಿನ್ನಳ ಸ್ತ್ರೀತ್ವದ ಮೇಲೆ ಅಷ್ಟು ಲಕ್ಷ್ಯವಿದ್ದಂತೆ ತೋರಲಿಲ್ಲ. ಯತಿಗಳು ಸಂತೋಷ ನಿರ್ಭರಚಿತ್ತರಾಗಿ, ಭಕ್ತಿಯ ಆವೇಶದಿಂದ “ಜಯಸರ್ವಗತೇ ದೇವಿನಾರಾಯಣಿ ನಮೋಸ್ತುತೇ” ಎಂದು ನಮಸ್ಕಾರ ಮಾಡಿದರು. ಅವರಿಗೆ ಮಗ್ಗುಲಲ್ಲಿ ನಿಂತಿರುವ ಗೋಪಾಲರಾಯನ ಇರಿವಿನ ಅರಿವೇ ಇರಲಿಲ್ಲ.
ಚಿನ್ನಳಿಗೆ ಬಲು ನಾಚಿಕೆಯಾಯಿತು. ಎಷ್ಟುದರೂ ತಾನು ಸೂಳೆ. ತನಗೀ ಯತಿಯು ನಮಸ್ಕಾರ ಮಾಡಿದನಲ್ಲಾ ಎಂದು ಬಹಳ ಸಂಕೋಚ ವಾಗಿ, “ದೇವ, ಮನ್ನಿಸಬೇಕು ಈ ದಾಸಿಯು ನಮಸ್ಕಾರಕ್ಕೆ ಅರ್ಹಳ್ಗೇ” ಎಂದಳು.
“ದೇವಿ, ಹಾಗೆನ್ನದಿರು. ನೀನು ಜನ್ಮದಿಂದ ಏನೇ ಆಗಿರಲೊಲ್ಲೆಯೇಕೆ? ನಿನ್ನೆಯ ರಾತ್ರಿ ನನ್ನ ಇಷ್ಟ ದೇವತೆಯು ಕನಸಿನಲ್ಲಿ ಬಂದು ನಾನು ಇಲ್ಲಿರುವೆನು ಎಂದು ವಚನನನ್ನು ಕೊಟ್ಟಳು. ನಾನು ಅದರಂತೆ ಬಂದೆ. ಇದೋ, ಇದೇ ಹಲಸಿನ ಮರ. ನೋಡು. ಅಗೋ ಅಲ್ಲಿ ಕಾಣುತ್ತಿರುವ ಆಲದ ಮರ. ಇದೋ ಕೆಳಗೆ ಹರಿಯುತ್ತಿರುವ ನಿರ್ಝರಿಣಿ. ಅಗೋ ಅಲ್ಲಿ ಗುಹೆಯ “ಮಗ್ಗುಲಲ್ಲಿರುವ ಬಂಡೆ. ಆ ಗುಹೆಗೆ ಹುಲಿಯ ಗುಹೆ ಎಂದು ಹೆಸರು. ಅಲ್ಲಿ ಯಾವಾಗಲೂ ಹುಲಿಗಳು ಇದ್ದೇ ಇರುತ್ತವೆ. ಅಗೋ ನೋಡು. ಅಲ್ಲೊಂದು ಹುಲಿಯು ಬಂದು ಆ ಬಂಡೆಯ ಮೇಲೆ ನಿಂತುಕೊಂಡು ಆಕಳಿಸುತ್ತಿದೆ. ಹೆದರಬೇಡ. ಈ ಜಂತು ಇಲ್ಲಿರುವಾಗ ಯಾವ ವನ್ಯಜಂತುವೂ ನಿಮಗೆ ಏನೂ ಮಾಡುವುದಿಲ್ಲ. ಬೇಕಾದರೆ, ಅದು ಬಂದು ನಿನ್ನನ್ನು ಬೆನ್ನಿನಮೇಲೆ ಕೂರಿಸಿಕೊಂಡು ಹೋಗಿ, ಬಿಡಾರಕ್ಕೆ ಬಿಟ್ಟುಬರುವುದು. ಅದಿರಲಿ ಇಗೋ ನನ್ನ ಮಾತು ಕೇಳು. ತಾಯೇ, ಜಗನ್ಮಾತೆ, ನೀನು ಯಾರೇ ಆಗಿದ್ದರೂ ದಿವ್ಯಾಂಶ ಸಂಭೂತಳು. ಇಲ್ಲದಿದ್ದರೆ, ನನ್ನ ತಾಯಿಯ ಅಪ್ಪಣೆ ಯಿಂದ ತಾಯಿಯನ್ನು ಕಾಣುವುದಕ್ಕೆ ಬಂದಿದ್ದೇನೆ. ನನ್ನ ತಾಯಿಯು
ಹೇಳಿದ ಲಕ್ಷಣಗಳೆಲ್ಲ ನಿನ್ನಲ್ಲಿವೆಯಾಗಿ ನೀನು ನನಗೆ ಜಗನ್ಮಾತೆಯ ಸ್ವರೂಪಳು. ನೀನು ಬಂದು ನನ್ನ ಪೂಜೆಯನ್ನು ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡು. ಮಹಾದೇವಿ, ಶಿವವಲ್ಲಭೆ, ಇನ್ನು ಉಳಿದಿರುವ ಈ ಮೂರು ದಿನಗಳಲ್ಲಿ ದಿನವೂ ಪೂಜೆಯನ್ನು ತೆಗೆದುಕೊಂಡು ನನ್ನ ಜನ್ಮವು ಸಾರ್ಥಕವಾಗುವಂತೆ ಅನುಗ್ರಹಿಸು. ಇಲ್ಲವೆನ್ನಬೇಡ. ತೇಜೋಮಯಿ ಯಾಗಿ, ತೇಜೋದೇಹಿಯಾದ ನಿನ್ನನ್ನು ಪೂಜೆ ಮಾಡುವ ಭಾಗ್ಯವನ್ನು ಕೊಟ್ಟಿರುವ ಹೇ ಲಲಿತಾಮಾತೆ, ನನ್ನ ಬಾಲ್ಯದಲ್ಲಿ ಮಾಡಿದ್ದ ಸಂಕಲ್ಪವೂ ಫಲಿಸಿಹೋಗಲಿ. ಮತ್ತೊಂದು ಜನ್ಮಕ್ಕೆ ಶೇಷವುಳಿಯದಂತೆ ಈಗಲೇ ರಕ್ತ ಮಾಂಸದ ದೇಹದಲ್ಲಿ ಬಂದು, ಪಾರ್‍ಥಿವದೇಹದಲ್ಲಿ ಪೂಜೆಗೊಂಡು ಅನುಗ್ರಹ ಮಾಡು” ಎಂದು ಮತ್ತೆ ನಮಸ್ಕಾರ ಮಾಡಿದರು.
ಚಿನ್ನಳಿಗೆ ಮೈಮೇಲೆ ಪ್ರಜ್ಞೆ ತಪ್ಪಿತು. ಏನೋ ಆವೇಶಬಂದವಳಂತೆ ದಿಟ್ಟವಾಗಿ ನಿಂತಳು. ಮಾನವಿಯರಿಗೆ ಸಾಧ್ಯವಲ್ಲದ ಅನುಗ್ರಹಭಾವವೊಂದು ಆಕೆಯ ಮುಖದ ಮೇಲೆ ವಿರಾಜಿಸಿತು ಮನೋಹರವಾದ ದೃಢವಾಗಿ ಗಂಭೀರವಾದ ಸಣ್ಣ ಗುಡುಗಿನಂತಹ ದನಿಯಿಂದ ಮಾತನಾಡಿದಳು ಗೋಪಾಲರಾಯನಿಗೆ ಚಿನ್ನಳು ಅಂತಹ ದನಿಯಿಂದ ಮಾತನಾಡಿದ ನೆನಪೇ ಇಲ್ಲ.
“ಎಚ್ಚರಿಕೆ, ಯತೀಂದ್ರ, ಈ ದೇಹ ಸೂಳೆಯದು. ಇವಳು ಯಾರು ಎಂಬುದನ್ನು ಈ ಬೆಟ್ಟದಲ್ಲಿರುವವರೆಲ್ಲ ಬಲ್ಲರು. ಇಂಥವಳಿಗೆ ಪೂಜೆಯನ್ನು ಮಾಡಿದರೆ ಎಲ್ಲರೂ ನಿನ್ನನ್ನು ತೆಗಳುವರು. ಎಲ್ಲರ ಬಾಯಿಗೂ ಗುರಿಯಾಗುವೆಯಾ? ನೀನು ಆಜನ್ಮವೂ ಮಾಡಿದೆ ತಪಸ್ಸನ್ನೆಲ್ಲ ಈ ವ್ಯಭಿಚಾರಿಣಿಯ ಪೂಜೆಯಿಂದ ಕಳೆದುಕೊಳ್ಳುವೆಯಾ ? ಪಾರ್ಥಿವ ದೇಹಕ್ಕೆ ಪೂಜೆ ಮಾಡ ಬೇಕೆಂಬ ಹಂಬಲದಿಂದ ಅಪೂಜ್ಯ ವಸ್ತುವನ್ನು ಪೂಜಿಸಿ ಮೋಘಕರ್ಮನಾಗು ವೆಯಾ ? ಯೋಚಿಸಿ ನೋಡು.”
ಯತಿಗಳು ನಿಶ್ಚಲರಾಗಿ ನುಡಿದರು. “ದೇವಿ, ಅಹರ್ನಿಶಿಯಿರಲಿ, ಶ್ವಾಸ ಶ್ವಾಸಗಳಲ್ಲಿಯೂ ಈ ದೇಹದಲ್ಲಿ ನಿಂತು ಪೂಜೆಯನ್ನು ತೆಗೆದುಕೊಳ್ಳುತ್ತಿರುವ ನೀನ್ನು ನಿನ್ನೆಯ ಕನಸಿನಲ್ಲಿ ಅಪ್ಪಣೆ ಕೊಟ್ಟೆ. ಅದರಂತೆ ನಾನು ಇಲ್ಲಿಗೆ ಬಂದೆ. ನೀನು ಯಾವ ರೂಪಿನಿಂದ ದರ್‍ಶನ ಕೊಡುವೆಯೆಂದು ಅಪ್ಪಣೆ ಮಾಡಿದೆಯೋ ಅದೇ ರೂಪಿನಲ್ಲಿಯೇ ದರ್ಶನ ಕೂಟ್ಟಿರುವೆ. ಆ ದೇಹವು ಯಾರದು ಎಂಬ. ಯೋಚನೆ ನನಗೇಕೆ? ಇದರ ಮೇಲೆ ಅಣುರೇಣುತೃಣಕಾಷ್ಟಗಳಲ್ಲಿಯೂ ನೀನೇ ಅಲ್ಲವೆ ಇರುವವಳು? ನೀನಿರುವೆಡೆ ಪಾಪವಾಗಲಿ, ಪುಣ್ಯವಾಗಲಿ. ಅದು ನನಗೆ ಪರಮಮಿತ್ರ. ಇದು ವ್ಯಭಿಚಾರಿಣಿಯ ದೇಹವೆಂದೆ. ಅಲ್ಲಿರುವ ನಿನಗೆ ನನ್ನ ಪೂಜೆ ತಾಯಿ. ಅದನ್ನೇ ಒಪ್ಪಿಕೋ. ನನಗೆ ಮಾಯೆಯನ್ನು ಹಾಕಬೇಡ. ಕೃಪೆಮಾಡು”ಎಂದು ಮತ್ತೆ ನಮಸ್ಕಾರ ಮಾಡಿದರು.
ತಾಯಿಯು “ಆಗಲಿ. ನಿನ್ನ ಭಕ್ತಿಯು ನಿನಗೆ ಫಲವಾಗಲಿ“ ಎಂಳು. ಚಿನ್ನಳು ಜ್ಞಾನತಪ್ಪಿ ಬಿದ್ದು ಹೋದಳು. ರಾಯನೂ ಯತಿಗಳೂ ಉಪಚಾರ ಮಾಡಿದರು. ಒಂದು ಅಷ್ಟು ಹೊತ್ತು ಆದಮೇಲೆ ಮತ್ತೆ ಪ್ರಜ್ಞೆ ಬಂತು. ಅವಳು ಕಣ್ಣು ಬಿಟ್ಟಳು. ಆ ವೇಳೆಗೆ ಕಾವಲಿನವರು ಬಂದಿದ್ದರು. ಅಲ್ಲಿ ಇದ್ದ ಮರಗಳ ಕೊಂಬೆಗಳನ್ನು ಕಡಿದು ಸಣ್ಣದೊಂದು ಪಲ್ಲಕ್ಕಿಯ ಹಾಗೆ ಮಾಡಿಕೊಂಡು ಚಿನ್ನಳನ್ನು ಮಲಗಿಸಿ ರಾಯನು ಯತಿಗಳ ಅಶ್ರಮಕ್ಕೆ ಕರೆದುಕೊಂಡು ಹೋದನು.
*****
ಮುಂದುವರೆಯುವುದು

















