
ಹರಿದಾರಿ, ಹರಿದಾರಿ,
ಹರಿದಾರಿ ಮುಂದೆ,
ಮೃತ್ಯುವಿನ ಪಂಜರಕೆ
ನುಗ್ಗಿದರು ಮುಂದೆ.
“ನುಗ್ಗಿ ಮುಂದಕೆ, ಕುದುರೆ!
ಕೊಚ್ಚಿ ಗುಂಡನು!” ಎಂದ
ಆರ್ನೂರು ರಾವುತರು
ಮೃತ್ಯುವಿನ ಪಂಜರಕೆ
ನುಗ್ಗಿದರು ಮುಂದೆ.
“ನುಗ್ಗಿ ಮುಂದಕೆ, ಕುದುರೆ!”
ಕುಗ್ಗಿದವನೊಬ್ಬುಂಟೆ?
ಯಾರೊ ತಪ್ಪಿದರೆಂದು
ಧೀರರವರರಿದೂ?
ಹೇಳುವುದಕವರಲ್ಲ,
ಕೇಳುವುದಕವರಲ್ಲ,
ಮಾಡಿ ಮಡಿವುದಕವರು-
ಆರ್ನೂರು ರಾವುತರು
ಮೃತ್ಯುವಿನ ಪಂಜರಕೆ
ನುಗ್ಗಿದರು ಹರಿದು.
ಅವರ ಬಲಗಡೆ ಗುಂಡು,
ಅವರ ಎಡಗಡೆ ಗುಂಡು,
ಅವರ ಮುಂಗಡೆ ಗುಂಡು
ಕಾರಿದುವು ಚೀರಿ.
ಸಿಡಿಮದ್ದು ಚೆರೆ ಬಿದ್ದು ,
ಜಗ್ಗದೆಯೆ ನುಗ್ಗಿದರು.
ಮೃತ್ಯುವಿನ ದಾಡೆಯಲಿ,
ನರಕದುರಿಬಾಯಿಯಲ್ಲಿ,
ಆರ್ನೂರು ರಾವುತರು
ನುಗ್ಗಿದರು ತೂರಿ.
ಬೀಸಿ, ಝಳಪಿಸಿ ಕತ್ತಿ,
ನೆಗೆದು, ಕೈ ಮೇಗೆತ್ತಿ,
ಗುಂಡಿನವರನು ಕೆತ್ತಿ,
ಕೊತ್ತಿದರು ಪಡೆಯೊತ್ತಿ-
ಲೋಕ ಬೆರಗಾಯ್ತು!
ಮದ್ದು ಹೊಗೆಯಲಿ ಮುಳುಗಿ,
ಸಾಲು ಮುರಿದರು ನುಗ್ಗಿ;
ಕಾಸಕರು, ರಷ್ಯನರು,
ಕತ್ತಿಹೊಯ್ಲಿಗೆ ಹೊರಳಿ,
ಬೆದರಿ ಧೂಳಾಯ್ತು.
ಆಗ, ಹಿಂದಿರುಗಿದರ-
ಇಲ್ಲ, ಆರ್ನೂರಿಲ್ಲ,
ಹಿಂದಿರುಗಿದವರು!
ಅವರ ಬಲಗಡೆ ಗುಂಡು,
ಅವರ ಎಡಗಡೆ ಗುಂಡು,
ಅವರ ಹಿಂಗಡೆ ಗುಂಡು,
ಕಾರಿದುವು ಚೀರಿ.
ಸಿಡಿಮದ್ದು ಚೆರೆ ಬಿದ್ದು,
ಆಳು ಕುದುರೆಗಳುರುಳಿ,
ನುಗ್ಗಿದಾ ಧೀರರಲಿ,
ಮೃತ್ಯುವಿನ ಬಸಿರಿಂದ,
ನರಕದುರಿಬಾಯಿಂದ,
ಮರಳಿ ಬಂದರು ಕೆಲರು,
ಆರ್ನೂರು ರಾವುತರು
ಅಳಿದುಳಿದ ಕೆಲರು.
ಮಾಸದವರದು ಹೆಸರು!
ಬೀಸಿ, ಏನ್ನುಗ್ಗಿದರು!
ಲೋಕ ಬೆರಗಾಯ್ತು!
ನುಗ್ಗಿ ಹೊಯ್ದುದ ಹೊಗಳು!
ಜಗ್ಗದೆದೆಗಳ ಹೊಗಳು!
ಆರ್ನೂರು ರಾವುತರ ಶೌರ್ಯ ಹೊಗಳು!
*****
TENNYSON (1809 -1892) : Charge of the Light Brigade














