ಅಧ್ಯಾಯ ಹದಿನಾಲ್ಕು
ಒಂದು ಮಧ್ಯಾಹ್ನ ಗವಾಯ್ ಸಾಹೇಬರು ಆಚಾರ್ಯರ ದರ್ಶನಕ್ಕಾಗಿ ಬಂದರು. ಆಚಾರ್ಯರೂ ಅವರನ್ನು ಸಮಾದರದಿಂದ ಬರಮಾಡಿಕೊಂಡರು. ಆಚಾರ್ಯರಿಗೂ ಗವಾಯ್‌ಗಳಿಗೂ ಸ್ನೇಹವು ಚೆನ್ನಾಗಿ ಬೆಳೆಯಿತು. ಒಬ್ಬರನ್ನೊಬ್ಬರು ಗೌರವಿಸುವರು. ಆದರಿಸುನರು. ಅಕೃತ್ರಿಮವಾದ ಸಹಜ ಸಮಾಚಾರಗಳಿಂದ ಒಬ್ಬರನ್ನೊಬ್ಬರು ಆರಾಧಿಸುವರು. ಆಚಾರ್‍ಯರು ಗವಾಯ್ ಸಾಹೇಬರನ್ನು ಆಗಾಗ ತಮ್ಮ ಸಂಗೀತದಿಂದೆ ತೃಪ್ತಿಪಡಿಸಿದರೆ, ಗವಾಯ್‌ಗಳೂ ಹಾಗೆಯೇ ಆಚಾರ್ಯರನ್ನು ತಾವೂ ಆರಾಧಿಸುವರು. ಹೀಗೆಯೇ ಇಬ್ಬರಿಗೂ ಬಹಳ ಹೊಂದಿಹೋಯಿತು.
ಚಿನ್ನಮನಿಗಂತೂ ಗವಾಯ್ ಸಾಹೇಬರನ್ನು ಕಂಡರೆ ಆಚಾರ್ಯರನ್ನು ಕಂಡಷ್ಟೇ ಗೌರವ. ಮೊದಲೊಂದೆರಡು ದಿನ ಅವರ ಎದುರು ಬರಲು ನಾಚುತ್ತಿದ್ದಳು. ಅವರ ಸಂಗೀತವು ಅವಳನ್ನು ಗೆದ್ದು ಬಿಟ್ಟಿತು. ಈಗ ಅಕ್ಕತಂಗಿಯರಿಬ್ಬರೂ ಅವರು ಬಂದರೆ ಸಮೀಪ ಬಂಧುವು ಬಂದಂತೆ ಸಹಜವಾಗಿ ಆದರ, ವಿಶ್ವಾಸ, ಗೌರವಗಳಿಂದ ನೋಡುವರು.
ರಾಯರದಂತೂ ಬಹಳ ವಿಚಿತ್ರ. ಗವಾಯ್ ಸಾಹೇಬರನ್ನು ರಾವ್ ಸಾಹೇಬರನ್ನು ಕಂಡರೆ, “ತಾವು ನಿಜವಾಗಿಯೂ ಅಮೀರ್ ಸಾಹೇಬರು. ತಮ್ಮಂಥಾವರು ಪ್ರತಿಯೊಂದು ದರ್ಬಾರಿನಲ್ಲಿಯೂ ಒಂದಿಬ್ಬರಾದರೂ ಇರಬೇಕು” ಎಂದು ಬಹಳ ಹೊಗಳುವರು. “ನಿಮ್ಮ ಹಂಗೆ ನಮಗೆ ಓದೋಕೆ ಬರೋಲ್ಲ.” ಎಂದು ಅವರ ಸಂಕಟ. “ಎಷ್ಟು ಚೆನ್ನಾಗಿ ಓದುತ್ತೀರಿ ! ” ಎಂದು ಸಂತೋಷ
ಅಂತೂ ಗವಾಯ್‌ಗಳು ಜಾತಿಯಿಂದ ಬೇರೆಯಾದರೂ ಮಿಕ್ಕೆಲ್ಲ ವಿಧದಿಂದಲೂ ಆಚಾರ್ಯರ ಸಂಸಾರದಲ್ಲಿ ಬೆರೆತುಹೋದರು. ಅವರು ಯಾವಾಗ ಬರಲಿ, ಅವರಿಗೆ ರುಚಿರುಚಿಯಾದ ತಿಂಡಿಗಳು, ಷರಬತ್ತುಗಳು ಸಿದ್ಧವಾಗಿರುವುವು. ಆಚಾರ್ಯರೂ ಜೊತೆ ಸೇರುವರು. ಅವರಿಗೆ, “ನಾನು ಪೂರಾ ದೇಶ ಸುತ್ತಿದ್ದೇನೆ. ಉಸ್ತಾದ್‌ಸಾಬ್, ಬೇಕಾದಷ್ಟು ಜನ ನಮಗೆ ಬೇಕಾದ್ದು ಕೊಟ್ಟಿದ್ದಾರೆ. ಆದರೆ ಇಲ್ಲಿ ತಿಂಡಿಗಿರುವ ರುಚಿ ಇನ್ನೆಲ್ಲೂ ಇಲ್ಲ. ನೋಡಿದರೆ, ತಿಂಡಿ ಕೊಡುವರ ಮನಸ್ಸು ತಿಂಡಿಯಲ್ಲಿ ಇರಬೇಕು. ಅಲ್ಲಾ!” ಎನ್ನುವರು. ಎಲ್ಲರೂ ಕಿಲಕಿಲ ನಗುವರು.
ಇಂದು ಗವಾಯ್‌ಗಳು ಆಚಾರ್ಯರನ್ನು ಒಂದು ವಿಚಿತ್ರಪ್ರಶ್ನೆ ಕೇಳಿದರು. “ಉಸ್ತಾದ್‌ಸಾಹೇಬ್, ನಮ್ಮ ಮೇಲೆ ತಮ್ಮ ಮೊಹಬತ್ ಬಹಳ ಆಗಿದೆ. ನಾವು ಹತ್ತಾರುಸಲ ಬಂದು ತಮ್ಮ ಹತ್ತಿರ ತಿಂಡಿಗಿಂಡಿ ತಿಂದು ಖುಷಿ ಆಗಿದ್ದೇವೆ. ತಾವೂ ಹೊರಟು ಹೋಗ್ತೀರಿ ಅಂತ ತಿಳೀತು. ನಮ್ಮ ಮೇಲೆ ವಿಶ್ವಾಸಮಡಗಿ, ತಾವು ಎಲ್ಲರನ್ನೂ ಕರೆದುಕೊಂಡು ಬರಬೇಕು. ತಮ್ಮ ಅಡುಗೆಯವರನ್ನು ಕಳುಹಿಸಿಕೊಡಿ. ಅವರು ಬೇಕಾದು ತೊಳೆದು ಗಿಳದು ಮಾಡಿ, ತಮಗೆ ಬೇಕಾದ ತಿಂಡಿ ಮಾಡುತ್ತಾರೆ. ನಮ್ಮ ಮಾತು ನಡೆಸಿಕೊಡಬೇಕು’ ಎಂದು ಕೈಹಿಡಿದುಕೊಂಡರು. ಆಚಾರ್ಯರಿಗೆ ಅವರ ವಿದ್ಯೆಯ ಮೇಲೆ ಬಹಳ ಗೌರವ… ಅವರು ವಿಜಾತಿಯಾದರೂ ಅವರು ಹೀಗೆ ಆಗಾಗ ಮುಟ್ಟಿದರೆ ಆವರಿಗೆ ಅಸಹನವಾಗು ತ್ತಿರಲಿಲ್ಲ. ಅಷ್ಟು ಒಗ್ಗಿ ಹೋಗಿತ್ತು. ಕೊನೆಗೆ ಏನೇನೋ ಚೌಕಾಶಿಯಾಗಿ ಆಚಾರ್ಯರು ಇಳಿದಿರುವ ಕಡೆಯೇ ಗವಾಯ್ ಸಾಹೇಬರ ಔತಣವೆಂದು ಗೊತ್ತಾಯಿತು.
ಆ ದಿನ ಮಾತು ದೀರ್ಘವಾಗಿ ನಡೆಯಿತು. ಗವಾಯ್‌ರು ಆಚಾರ್‍ಯರ ಎದುರಿಗೆ ಚಿನ್ನಮ್ಮನನ್ನು ಬೇಕಾದ ಹಾಗೆ ಹೊಗಳುವರು. ಅವರು ಮಕ್ಕಳ ಕೀರ್ತಿಯನ್ನು ಕೇಳಿ ಸಂತೋಷಸಡುವ ತಂದೆಯಂತೆ ಅದನ್ನು ಕೇಳಿ ಸಂತೋಷ ಪಡುವರು. ಚಿನ್ನಮ್ಮ ರತ್ನ, ರನ್ನಮ್ಮ ಅದಕ್ಕೆ ಕೊಟ್ಟಿರುವ ವರ್‍ತಿ ಎನ್ನುವರು.
ಇಂದೂ ಆ ಮಾತು ಈ ಮಾತು ಆಡುತ್ತ ಎಂದಿನಂತೆ ಹೊಗಳುವ ಮಾತಿಗೆ ಬಂತು. ಗವಾಯ್‌ಗಳು ಹೇಳಿದರು. “ಉಸ್ತಾದ್ ಸಾಬ್, ನಾವು ಮೆಕ್ತಾ ಮೆದೀನಾದಿಂದ ಹಿಡಿದು ಇರಾಕ್, ಇರಾನ್, ಎಲ್ಲಾ ಸುತ್ತಿದ್ದೇವೆ. ಡೆಲ್ಲಿಯಂತೂ ನಾವು ಹುಟ್ಟಿದ ಷಹರು. ನಾವೂ ಬಹಳ ಖಾನ್‌ಖುಷ್‌ನ ಜನ. ಆದರೆ, ತಮ್ಮಂಥಾವರನ್ನು ಕಾಣಲಿಲ್ಲ. ನಮಗೆ ಉಮ್ಮರ್ ಆಗಿಹೋಯಿತು. ಇಲ್ಲದಿದ್ದರೆ ತಮ್ಮ ಬಳಿ ಮತ್ತೆ ಸಾಪಾಸಾಷುರುಮಾಡುತ್ತಿದ್ದೆ.” ಆಚಾರ್ಯರು ಆ ಮಾತು ಪೂರ್‍ತಿಯಾಗುವುದಕ್ಕೆ ಬಿಡದೆ, “ಹಾ! ಹಾ! ಹಾಗೆಂದರುಂಟೆ ? ಈಶ್ವರ ತಮಗೇನು ಕಡಿಮೆ ಮಾಡಿದ್ದಾನೆ! ತಾವು ಹಾಡಿದಾಗ ಎಷ್ಟುಸಲ ನಾವು ಮೈಮರೆತು ಹೋಗಿ ದ್ದೇವೆ. ಉಂಟೆ? ತಾವು ಅದ್ಭುತವಾಗಿ ಹಾಡುತ್ತೀರಿ. ನೀವು ಹಾಡ ಬೇಕಾಗಿಲ್ಲ. ಆ ಶ್ರುತಿಯಲ್ಲಿ ಲೀನವಾಗುವಿರಲ್ಲ; ಆಗ ಜಗತ್ತೇ ನಾದದಲ್ಲಿ ಲೀನವಾಗುತ್ತದೆ ಬಲ್ಲಿರಾ? ಆಯಿತು. ನಮ್ಮ ಚಿನ್ನಮ್ಮನ ವಿಚಾರ ಹೇಳಿ” ಎಂದರು.
“ಚಿನ್ನಮ್ಮನ ವಿಚಾರವೆ ? ಈಕೆ ನಮ್ಮ ಮಗಳು ಹೇಗೋ ಹಾಗೆ. ನಿಜವಾಗಿ ಈಕೆಗೆ ನಾವು ನಮಸ್ಕಾರಮಾಡಬೇಕು. ಚಿನ್ನಮ್ಮ ಹೆಣ್ಣು ; ತಾವು ಗಂಡು. ಗಂಡಿನ ಸಂಗೀತ ಎಷ್ಟಾದರೂ ಬಿಟ್ಟದೆ ಮೇಲಿಂದ ಧುಮುಕುವ ನೀರಿನ ಹಾಗೆ, ಹೆಣ್ಣಿನ ಸಂಗೀತವು ಹೂವಿನ ಗಮನದ ಹಾಗೆ. ತಮ್ಮ ವಿದ್ಯೆಯೆಲ್ಲ ಇದೆ; ಜೊತೆಗೆ ಅಲ್ಲಾ ಕೊಟ್ಟಿರುವ ಗಲ್ಲಾ ಇದೆ. ತಾವು ಮಾತ್ರ ಈಕೆ ಕರೆದುಕೊಂಡು ಒಂದು ಸಲ ನಮ್ಮ ಬೀದರ್‌ಗೆ ಬಂದರೆ ಓಹೋಹೋ ? ಏನು ಹೇಳೋಣ, ನಮ್ಮ ನನಾಬರು ಏನು ಖುಷ್ ಆಗಿ ಹೋಗುತಾರೋ? ಈ ಸಾರೇದುನಿಯಕ್ಕೆ ಸವಾಲ್. ಇಂತಹ ಸಂಗೀತ ಈ ಅಭಿನಯ, ನಾವು ನೋಡಿಲ್ಲ.
ಹೀಗೆಯೇ ಎಷ್ಟೋ ಮಾತುಗಳಾಯಿತು. ಅವರಿಗೆ ಇನ್ನು ಕೆಲವು ದಿನ ದಲ್ಲಿ ಆಚಾರ್ಯರು ಹೋಗುವರಲ್ಲ ಎಂದು ಬಹಳ ಚಿಂತೆ. ಕೊನೆಗೆ ಆಚಾರ್ಯರ ದರ್ಶನಕ್ಕೆ ಗವಾಯ್ ಸಾಹೇಬರು ಬರುವ ಚೈತ್ರಮಾಸದಲ್ಲಿ ಬರಬೇಕು. ರಾಮನವರಾತ್ರಿಯಲ್ಲಿ ಹಾಡಬೇಕೆಂದು ಗೊತ್ತಾಯಿತು. ಗವಾಯ್‌ಗಳು ಬಹು ಸಂತೋಷವಾಗಿ ಒಪಿಕೊಂಡರು. “ನಾವು ಕಾಖಾ ಸಾಹೇಬರ ಬಳಿ ಹಾಡಿದಾಗ ಎಷ್ಟು ಸಂತೋಷವಾಗಿ ಹಾಡಿದೆನೋ ಅಷ್ಟೇ ಸಂತೋಷವಾಗಿ ಹಾಡುತ್ತೇವೆ” ಎಂದರು. ಈಗ ಆಚಾರ್ಯರ ಬಿಡಾರಕ್ಕೆ ಸೆಟ್ಟರು ಪದೇಪದೇ ಬರುತ್ತಾರೆ. ಅವರಿಗೂ ಆಚಾರ್ಯರ ವಿಚಾರವಾಗಿ ಅಪಾರ ಗೌರವ, ವಿಜಯನಗರದಲ್ಲಿ ಇಷ್ಟು ಸಮೀಪವಾಗಿ ಒಬ್ಬರನ್ನೊಬ್ಬರು ನೋಡುವುದಕ್ಕೆ ಅವಕಾಶವಿರಲಿಲ್ಲ. ಅಲ್ಲಿ ಇಲ್ಲದ ಅವಕಾಶವು ಇಲ್ಲಿ ದೊರೆತು ಇಬ್ಬರಿಗೂ ದೃಢವಾದ ಸ್ನೇಹೆವೇರ್‍ಪಟ್ಟಿದೆ. ಜೊತೆಗೆ ಗೋಪಾಲರಾಯರ ಮೇಲೆ ಅವರಿಗಿದ್ದ ಸಂಶಯವು ದೂರ ವಾಗಿದೆ. ನಿರಾಧಾರವಾದ ಸಂಶಯವು ತಮಗೆ ಬಂದಿತ್ತಲ್ಲಾ ಎಂದು ತಾವೇನೋ ಪಾಪ ಮಾಡಿರುವಂತೆ, ಅದಕ್ಕಾಗಿ ಅವರಲ್ಲಿ ವಾಚಾ ಕ್ಷಮಾಯಾಚನ ಮಾಡದಿದ್ದರೂ ಕೃತಿಯಿಂದ ನಿರ್ವಹಿಸುವಂತೆ, ರಾಯರಲ್ಲಿ ಸೆಟ್ಟರು ಅಕೃತ್ರಿಮವಾದ ಸ್ನೇಹವನ್ನು ದೃಢವಾಗಿ ಬೆಳೆಸಲು ಯತ್ನಿಸುತ್ತಿ ದ್ದಾರೆ. ದೃಢವಾದ ರಾಜಭಕ್ತಿಯುಳ್ಳ ಸೆಟ್ಟರಿಗೆ ಅಂದು ಚಕ್ರವರ್ತಿಗಳ ಸಮ್ಮುಖದಲ್ಲಿ ರಾಯರ ಸಾಹಸವನ್ನು ಚಕ್ರವರ್ತಿಗಳ ಮುಖದಿಂದಲೇ ಕೇಳಿದ ದಿನ ಹುಟ್ಟದ ಸೌಹಾರ್ದವು ಗೋಲ್ಕೊಂಡದಲ್ಲಿ ಪಕ್ವವಾಗಿ ಸ್ನೇಹವಾಗಿದೆ.
ಆದರೆ ಒಂದು ವಿಚಾರದಲ್ಲಿ ಮಾತ್ರ ಅವರಗೆ ಇನ್ನೂ ಸಂದೇಹ. ಅಕ್ಕ ತ೦ಗಿಯರಿಬ್ಬರೂ ಒಟ್ಟಾಗಿ ಬಂದು ನಿಂತುಕೊಂಡರೆ, ಅದರಲ್ಲಿ ರಾಯರ ಸ್ವತ್ತು ಯಾವುದು ? ತಮ್ಮದು ಯಾವುದು ? ಎಂಬುದನ್ನು ವಿಂಗಡಿಸಲಾರರು. ಆದರೆ ಅದರಿಂದ ಅವರ ಸಂತೋಷಕ್ಕೆ ಹಾನಿಯಾಗಿರಲಿಲ್ಲ.
ಸುಲ್ತಾನರ ಅಪ್ಪಣೆಯಂತೆ ವಿಜಯನಗರದ ಸಂಗೀತಗಾರರು ಅರಮನೆಗೆ ಬಂದರು. ಸುಲ್ತಾನರು ತಮಗಾದ ಆನಂದವನ್ನು ಬಾಯಿಬಿಟ್ಟು ಹೇಳಿದರು. ಖಲ್ಲತ್ತುಗಳ ಮೇಲೆ ಖಿಲ್ಲತ್ತುಗಳನ್ನು ಕೊಟ್ಟು, ತಮ್ಮ ವರ್ಧಂತಿಯ ವೇಳೆಗೆ ಮತ್ತೆ ಬರಬೇಕು ಎಂದು. ಆಹ್ವಾನಿಸಿದರು. “ತಮ್ಮೆಲ್ಲರಿಗೂ ಒಬ್ಬೊಬ್ಬರಿಗೆ ಒಂದೊಂದು ಬಿರುದು ಕೊಡಬೇಕು ಎಂದು ಗೊತ್ತು ಮಾಡಿದ್ದೇವೆ. ಆದರೆ ಏನೋ ರಾಜಕೀಯದಿಂದ ಈಗ ಸಧ್ಯದಲ್ಲಿ ನಾವು ಆ ಕೆಲಸ ಮಾಡುವ ಹಾಗಿಲ್ಲ. ಆದು ಮಾಡದೆ ಇದ್ದರೆ ನಾವು ಸುಲ್ತಾನರು, ಸಂಗೀತಪ್ರೇಮಿಗಳು ಎನ್ನಿಸಿಕೊಂಡು ಫಲವೇನು? ಅದರಿಂದ ಬರುವ ವರ್ಧಂತಿಯ ವೇಳೆಗೆ ತಾವೆಲ್ಲರೂ ದಯಮಾಡಿಸಬೇಕು. ನಮ್ಮ ದರ್ಬಾರಿನಲ್ಲಿ ಬಿರುದುಗಳನ್ನು ಪಡೆದುಕೊಂಡು ನಮ್ಮ ಮೇಲೆ ವಿಶ್ವಾಸವಿಟ್ಟು ಕೊಂಡಿರಬೇಕು “ಎಂದು ದಿವಾನರ ಮುಖವಾಗಿ ಹೇಳಿಸಿದರು.
ಆಚಾರ್ಯರಿಗೆ ಒಂದು ವಜ್ರದ ಕಂಠಿ ರಾಯರಿಗೆ ಒಂದು ಥೋಡ್ಕಾ ಕೊಟ್ಟು ಚಿನ್ನಾ ಸಾನಿ ಸೋದರಿಯಗೆ ಮೈತುಂಬಾ ವಜ್ರಗಳನ್ನು ಕೆತ್ತಿರುವ ಕುಂದಣದ ಬೊಂಬೆಯನ್ನು ಕೊಟ್ಟರು. ನಗದಾಗಿ ಅವರಿಗೆಲ್ಲ ಸೇರಿ ಕೊಟ್ಟುದು ಎಂಟುಲಕ್ಷ ಎಂದು ಆವೊತ್ತಿನ ಭಂಡಾರಿಯ ಲೆಕ್ಕದಲ್ಲಿ ಬರೆದಿತ್ತು.
ಇನ್ನೊಂದು ದಿನ ಮತ್ತೆ ಚಿನ್ನಾಸಾನಿಯ ಬೈಠಕ್ ಕಚೇರಿ ನಡೆಯಿತು. ಸುಲ್ತಾನರ ಕೋರಿಕೆಯಂತೆ ಮೊದಲಿನಿಂದ ಕೊನೆಯವರೆಗೂ ಕ್ಷೇತ್ರಯ್ಯನವರ ಪದಗಳು ಆದುವು. ಮರುದಿನ ಆಚಾರ್ಯರ ಸಂಗೀತವಾಯಿತು. ಅಂದು ಕೇವಲ ದಾಸರ ಪದಗಳೇ ಆದುವು. ಮೂರನೆಯದಿನ ರಾಯರ ಕಾವ್ಯವಾಚನ ವಾಯಿತು. ಸುಲ್ತಾನರು ಇಷ್ಟವಿಲ್ಲದೆ, ಇಷ್ಟವಿಲ್ಲದೆ ಅಪ್ಪಣೆಕೊಟ್ಟರು. ಸೆಟ್ಟರನ್ನು ಕೆಯಿಸಿಕೊಂಡು “ಸೆಟ್ಟಿ ಸಾಹೆಬ್, ತಾವು ಗೋಲ್ಕೊಂಡ, ವಿಜಯನಗರ ರಾಜ್ಯಗಳಿಗೆ ಸ್ನೇಹಮಾಡಿಸಿದಿರಿ. ಇದು ಭದ್ರವಾಗಿರುವಂತೆ ವರ್ಷವರ್ಷವೂ ಇವರನ್ನು ಕರೆದು ತರುವುದು ತಮಗೆ ಸೇರಿದ್ದು” ಎಂದು ವಜ್ರದ ಕಂಠಿ ಹಾರವನ್ನು “ಅವರಿಗೆ ಹಾಕಿದರು.
ಆಚಾರ್ಯರು ಶ್ರೀಶೈಲದ ಕಡೆ ಹೋಗಿ ಮತ್ತೆ ಗೋಲ್ಕೊಂಡದ ಗಡಿ ಸೇರುವವರೆಗೆ ತಮ್ಮ ಅಂಗರಕ್ಷಕ ದಳವೊಂದು ಅವರ ಜೊತೆಯಲ್ಲಿಯೇ ಇರತಕ್ಕುದು. ಆಚಾರ್‍ಯರು ತಮ್ಮ ದೇಶದಲ್ಲಿ ಇರುವವರೆಗೂ ತಮ್ಮ ದರ್ಬಾರಿನ ಪ್ರಥಮ ವರ್‍ಗದ ಅಮಿರರಿಗೆ ಸಲ್ಲುವಮರ್ಯಾದೆಗಳು ಅವರಿಗೆ ಸಲ್ಪತಕ್ಕುದು. ಅವರ ಬಿಡಾರಕ್ಕೆ ಬೇಕಾಗುವ ಸಮಸ್ತವೂ ತಮ್ಮ ಸರಕಾರದಿಂದ ಸರಬರಾಜು ಆಗಬೇಕು ಎಂದು ನಿರೂಪವು ಹೊರಟಿತು.
ವಿಜಯನಗರದ ರಾಯಭಾರಿಯು ಗೋಲ್ಕೊಂಡದಲ್ಲಿ ನಡೆದುದೆಲ್ಲವನ್ನೂ ರಾಜಧಾನಿಗೆ ವರದಿ ಕಳುಹಿಸಿದನು. ಆದರೆ ಸೆಟ್ಟರಿಗೂ ಸಂಗೀತಗಾರರಿಗೂ ಬಹಳ ಹತ್ತಿರದ ಸಂಬಂಧ ಬೆಳೆದಿದೆಯೆಂಬ ಸುದ್ದಿ ತಮಗೆ ಖಚಿತವಾಗಿ ಗೊತ್ತಿದ್ದರೂ ಬರೆಯಲಿಲ್ಲ.
*****
ಮುಂದುವರೆಯುವುದು


















