
ತಂಬಟೆಹೊಯಿಲಿಲ್ಲ, ವಾದ್ಯದ ಹಲುಬಿಲ್ಲ,
ಹೆಣವ ಕೋಟೆಗೆ ನಾವು ತ್ವರೆಯಲೊಯ್ದಾಗ;
ಒಬ್ಬ ಸಿಪಾಯಿಯ ಕಳುಹುವ ಸುರುಟಿಯಿಲ್ಲ,
ನಮ್ಮ ನಾಯಕನನು ಹೂಳುತಿದ್ದಾಗ.
ಹೂಳಿದೆವವನನು ಸರಿಹೊತ್ತಿನಿರುಳಲಿ,
ಮಣ್ಣ ಬಂದೂಕದ ಮೊನೆಯಿಂದ ತಿರುವಿ;
ನುಸುಳಿ ಬರುವ ಬೆಳದಿಂಗಳ ಮಂಜಲ್ಲಿ
ಮಂಕಾದ ಬೆಳಕಿನ ಲಾಂದರದಲ್ಲಿ.
ಒಡಲ ಪೇಳಿಗೆಯಲಿ ಒಪ್ಪ ಮಾಡಲು ಇಲ್ಲ,
ಬಟ್ಟೆ ದುಪ್ಪಟಿಯಲಿ ಸುತ್ತಲು ಇಲ್ಲ;
ನಿದ್ದೆಹೋಗುವ ವೀರನಂದದಿ ಬಿದ್ದಿದ್ದ
ಯುದ್ಧದ ನಿಲುವಂಗಿ ಮುಚ್ಚಿ ಮೈಯೆಲ್ಲ.
ಬೇಗ, ಒಂದೆರಡು ಪ್ರಾರ್ಥನೆಯನ್ನು ಹೇಳಿ.
ಉಕ್ಕುವ ದುಃಖವನೊಳಗೆಯೆ ಅದುಮಿ,
ಸೆಳೆಯಲಾರದೆ ಕಣ್ಣ , ಸತ್ತ ಮುಖವ ನೋಡಿ,
ನೆನೆದೆವು ರೋಷದಿ ನಾಳೆಯ ಪಾಡ.
ನೆನೆದೆವು, ಕಿರಿದು ಹಾಸಿಗೆಯನು ತೋಡುತ,
ಒಬ್ಬನೆ ಒರಗುವ ದಿಂಬನು ಸವರಿ-
ನಾಳೆ ಹೆರರು ಹಗೆಗಳು ತಲೆ ತುಳಿವರೆ!
ತೆರೆಯ ಮೇಲಿರುವೆವೆ ಬಲುದೂರ ನಾವು!
ಹೋದ ಜೀವವ ಜರೆದಾಡಿಕೊಳುವರಾಹ!
ತಣ್ಣಗಾದುರಿಯನು ಮೂದಲಿಸುವರು!
ಎಣಿಸುವನೇ? ತನ್ನ ಮುಟ್ಟದೆ ಬಿಟ್ಟರೆ
ಬ್ರಿಟನನಿಟ್ಟೀ ಕುಳಿಯಲಿ ಮಲಗಿರಲು
ನಮ್ಮ ಸಂಕಟದಲಿ ಕ್ರಿಯೆಯರೆಯಾಯಿತು;
ತುತ್ತುರಿಯಾಯಿತು ಹಿಮ್ಮೆಟ್ಟಿ ಬರಲು.
ಕೇಳಿತು ಕೋಪಿಸಿ ವೈರಿಗಳೊಮ್ಮೊಮ್ಮೆ
ಹಾರಿಸುತ್ತಿದ್ದುದು ದೂರದ ಗುಂಡು.
ಮೆಲ್ಲಗೆ, ಮರುಗುತ, ಮಣ್ಣಿನಲಿಟ್ಟೆವು
ರಣದ ರಕ್ತದ ಚೆಲುವಿನ ಚೆಲುವಿನಲಿ.
ಕಲ್ಲ ನೆಡದೆ ಒಂದು ಪಂಕ್ತಿಯ ಕೆತ್ತದೆ,
ಅವನ ಕೀರ್ತಿಯಲವನೆ ಬಿಟ್ಟೆವಲ್ಲಿ!
*****
C WOLFE (1791- 1823) : Burial of Sir John Moor















