ಅಧ್ಯಾಯ ಎಂಟು
ಪದ್ಮಿನಿ ಪಿಕ್ಚರ್ಸ್- ಭಾರತದ ಚಲನಚಿತ್ರೋದ್ಯಮಕ್ಕೆ ಕನ್ನಡ ಭೂಮಿ ಕೊಟ್ಟ ದೊಡ್ಡ ಕೊಡುಗೆ. ಸುಮಾರು ಎರಡೂವರೆ ದಶಕಗಳ ಕಾಲ ಈ ಸಂಸ್ಥೆಯ ಮೂಲಕ ಅಪ್ರತಿಮ ಚಿತ್ರರತ್ನಗಳನ್ನು ಕೊಟ್ಟವರು ಬಿ.ಆರ್.ಪಂತುಲು. ಅಸೀಮ ಸಾಹಸಿ, ವೃತ್ತಿಶೀಲ ನಿರ್ಮಾಪಕ, ಎಲ್ಲವನ್ನೂ ದೊಡ್ಡದಾಗಿಯೇ ಯೋಚಿಸುತ್ತಾ ಕಾರ್ಯರೂಪಕ್ಕಿಳಿಸುತ್ತಿದ್ದ ಕ್ರಿಯಾಶೀಲ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದರೂ ಕನ್ನಡ ಚಿತ್ರರಂಗದಲ್ಲಿ ಅನೇಕ ಸಾಹಸಗಳನ್ನು ಮಾಡಿದ ಪ್ರಯೋಗಶೀಲ. ಅವರ ಚಿತ್ರಗಳಲ್ಲಿ ಮನರಂಜನೆಯೇ ಪ್ರಧಾನವಾದರೂ, ಅಗ್ಗದ ತಂತ್ರಗಳನ್ನು ಅನುಸರಿಸಿದವರಲ್ಲ. ಆಕರ್‍ಶಕ ಸಂಭಾಷಣೆ, ಮುದ ನೀಡುವ ಸಂಗೀತ, ಸದಭಿರುಚಿ ಸಾಹಿತ್ಯ, ಮತ್ತು ಭಾವಾಭಿನಯಗಳಿಗೆ ಅವಕಾಶ ಕಲ್ಪಿಸುವ ದೃಶ್ಯ- ಇವು ಪದ್ಮಿನಿ ಪಿಕ್ಚರ್ಸ್‌ನ ಟ್ರೇಡ್‌ಮಾರ್ಕ್. ಕೇವಲ ನಿರ್ದೇಶನದಲ್ಲಷ್ಟೆ ಅಲ್ಲ ನಿರ್ಮಾಣದಲ್ಲೂ ಅಚ್ಚುಕಟ್ಟುತನ ತಂದವರು. ದೊಡ್ಡ ಸಂಸ್ಥೆಯೊಂದರ ಸ್ಥಾಪಕರಷ್ಟೆ ಅಲ್ಲ, ದೊಡ್ಡ ಪರಂಪರೆಯೊಂದನ್ನು ಕಾಪಾಡಿದವರು; ಮುಂದುವರೆಸಿದವರು. ತಮ್ಮ ಆದರ್ಶಗಳಿಗೆ ಉದ್ಯಮದಲ್ಲಿ ಪ್ರತಿಕೂಲ ಪರಿಸರ ಸೃಷ್ಟಿಯಾದಾಗ, ಚಿತ್ರ ನಿರ್ಮಾಣವನ್ನೆ ಸ್ಥಗಿತಗೊಳಿಸಿದ ವ್ಯಕ್ತಿ.
ಪದ್ಮಿನಿ ಪಿಕ್ಚರ್ಸ್ ಒಂದು ಚಿತ್ರ ನಿರ್ಮಾಣ ಸಂಸ್ಥೆ ಮಾತ್ರವಲ್ಲ. ಅದೊಂದು ಉದ್ಯಮ. ಅಲ್ಲದೆ ಒಂದು ಕಲಾವಿಶ್ವವಿದ್ಯಾಲಯ. ಉದ್ಯಮ ಯಾಕೆಂದರೆ ಮದರಾಸಿನ ಎಸ್.ಎಸ್.ವಾಸನ್ ಮತ್ತು ಎವಿಎಂರವರಂತೆ ಪಂತುಲು ಅವರು ತಿಂಗಳ ವೇತನದ ಆಧಾರದ ಮೇಲೆ ತಂತ್ರಜ್ಞರನ್ನು ನೇಮಕ ಮಾಡಿಕೊಂಡಿದ್ದರು. ತಿಂಗಳ ಏಳನೇ ತಾರೀಖು ಎಲ್ಲರಿಗೂ ವೇತನ ವಿತರಣೆಯಾಗುತ್ತಿತ್ತು. ಅಲ್ಲಿಯೂ ಸಹನಿರ್ದೇಶಕರು, ಪ್ರಚಾರ ಕರ್ತರು, ತಂತ್ರಜ್ಞರಿದ್ದರು. ಸಹಾಯಕರಿದ್ದರು. ಕಥಾವಿಭಾಗವಿತ್ತು. ಆ ಸಂಸ್ಥೆಯು ಒಂದು ದೊಡ್ಡ ತರಬೇತು ಶಾಲೆ. ಅಲ್ಲಿ ತರಬೇತಿ ಪಡೆದವರು ಮುಂದೆ ದೊಡ್ಡ ತಂತ್ರಜ್ಞರಾಗಿ ಬೆಳೆದರು. ಅಲ್ಲಿ ಹೊರಹೊಮ್ಮಿದ ಪ್ರತಿಭೆಗಳಲ್ಲಿ ಅಗ್ರಗಣ್ಯರೆನಿಸಿಕೊಂಡವರು ದಿವಂಗತ ಪುಟ್ಟಣ್ಣ ಕಣಗಾಲರು. ಹಾಗಾಗಿ ಅದೊಂದು ಕಲಾವಿಶ್ವವಿದ್ಯಾಲಯ.
ಆಂಧ್ರಪ್ರದೇಶದ ಕುಪ್ಪಂನ ಬುಡುಗೂರು ಗ್ರಾಮದಲ್ಲಿ ಜನಿಸಿದ (೧೯೧೧) ಬುಡುಗೂರು ರಾಮಕೃಷ್ಣ ಮದರಾಸಿನಲ್ಲಿ ವ್ಯಾಸಂಗ ಮಾಡಿ ಕೆಲಕಾಲ ಶಿಕ್ಷಕ ವೃತ್ತಿ ನಡೆಸಿದರು. ಹಾಗಾಗಿ ಅವರ ಹೆಸರಿನ ಜೊತೆಯಲ್ಲಿ ಪಂತುಲು ಉಪನಾಮ ಸೇರಿಕೊಂಡಿತು. ನಾಟಕದ ಗೀಳಿನಿಂದಾಗಿ ಶಿಕ್ಷಕ ವೃತ್ತಿ ತೊರೆದು ಪೀರ್ ಸಾಹೇಬರ ನಾಟಕ ಮಂಡಲಿ ಚಂದ್ರಕಲಾ ನಾಟಕ ಸಮಾಜ ಸೇರಿದ ಅವರು ‘ಸಂಸಾರನೌಕ’, ‘ಸದಾರಮೆ’ ಮತ್ತು ‘ಗುಲೇಬಾಕಾವಲಿ ಕತೆ’ಯಂಥ ಜನಪ್ರಿಯ ನಾಟಕಗಳಲ್ಲಿ ಅಭಿನಯಿಸಿ ಪ್ರಖ್ಯಾತರಾದರು. ‘ಸಂಸಾರ ನೌಕೆ’ ನಾಟಕದ ಸುಂದರನ ಪಾತ್ರ ಅವರನ್ನು ಜನಪ್ರಿಯಗೊಳಿಸಿತು. ಅನಂತರ ಗುಬ್ಬಿ ನಾಟಕ ಕಂಪನಿ ಸೇರಿದರು.
‘ಸಂಸಾರ ನೌಕೆ’ ಚಿತ್ರರೂಪವಾದಾಗ ಬಿ.ಆರ್.ಪಂತುಲು ನಾಯಕನ ಪಾತ್ರಕ್ಕೆ ಆಯ್ಕೆಯಾದರು. ಸಿನಿಮಾ ಯಶಸ್ವಿಯಾದರೂ ಪಾತ್ರಗಳು ಅರಸಿ ಬರಲಿಲ್ಲ. ಆದರೆ ತಮಿಳು ಮತ್ತು ಇತರ ಚಿತ್ರಗಳಲ್ಲಿ ಅವರಿಗೆ ಅವಕಾಶಗಳು ದೊರೆತವು. ತೆಲುಗಿನ ‘ಭಕ್ತಿಮಾಲಾ’ (೧೯೪೧), ‘ತಹಸೀಲ್ದಾರ್’ (೧೯೪೪) ಚಿತ್ರಗಳ ನಂತರ ಜೆಮಿನಿಯವರು ನಿರ್ಮಿಸಿದ ‘ನಾಮ್ ಇರುವರ್’ (೧೯೪೭) ಚಿತ್ರದ ಎರಡನೇ ನಾಯಕ ಜಯಕುಮಾರ್ ಪಾತ್ರದಲ್ಲಿ ಅವರು ನೀಡಿದ ಅಭಿನಯ ಮನೆ ಮಾತಾಯಿತು. ಆ ಚಿತ್ರದ ನಿರ್ಮಾಣ ಕಾಲದಲ್ಲಿ ತಮಿಳಿನ ಪತ್ರಕರ್ತ, ನಾಟಕಕಾರ ಪ.ನೀಲಕಂಠನ್ ಪರಿಚಯವಾಯಿತು. ‘ನಾಮ್ ಇರುವರ್’ ಚಿತ್ರದಲ್ಲಿ ನಾಯಕರಾಗಿದ್ದ ಟಿ.ಆರ್.ಮಹಾಲಿಂಗಮ್ ಅವರ ಜೊತೆಗೂಡಿ ಸುಕುಮಾರ್ ಪ್ರೊಡಕ್ಷನ್ಸ್ ಅಡಿಯಲ್ಲಿ ‘ಮತ್ಸ್ಯರೇಖಾ’ ಎಂಬ ತಮಿಳು ಚಿತ್ರ ನಿರ್ಮಿಸಿದರು.
ಮೊಟ್ಟಮೊದಲ ಸಾಮಾಜಿಕ ಚಿತ್ರವಾದ ‘ಸಂಸಾರ ನೌಕೆ’ ಚಿತ್ರದ ನಾಯಕರಾಗಿದ್ದ ಬಿ.ಆರ್. ಪಂತುಲು ಅವರು ಆರೆನ್ನಾರ್, ಸುಬ್ಬಯ್ಯನಾಯ್ಡು ಅವರ ಜೊತೆಯಲ್ಲಿ ಆರಂಭದಲ್ಲಿ ಅಭಿನಯದ ಮಾದರಿಯೊಂದನ್ನು ರೂಪಿಸಿದರು. ಆರೆನ್ನಾರ್ ಅವರಷ್ಟು ಸಂಯಮ ಮತ್ತು ಸುಬ್ಬಯ್ಯನಾಯ್ಡು ಅವರಷ್ಟು ರಂಗಭೂಮಿಗೆ ಸಹಜವಾದ ಆವೇಶ ಅವರ ಅಭಿನಯದಲ್ಲಿರಲಿಲ್ಲ. ಎರಡರ ನಡುವಣ ಒಂದು ಸಮತೋಲನವನ್ನು ಕಾಯ್ದುಕೊಂಡಿದ್ದರು. ಹಾಗೆ ನೋಡಿದರೆ ಈ ಮೂವರು ನಟರು ರೂಪಿಸಿದ ಅಭಿನಯ ಮಾದರಿಗಳೇ ಹಲವಾರು ದಶಕಗಳ ಕಾಲ ಅನುಕರಣೀಯ ಶೈಲಿಗಳಾಗಿದ್ದವು.
ಪಂತುಲು ಅವರು ೧೯೫೫ರಲ್ಲಿ ಸ್ವಂತ ನಿರ್ಮಾಣ ಸಂಸ್ಥೆ ‘ಪದ್ಮಿನಿ ಪಿಕ್ಚರ್ಸ್’ ಆರಂಭಿಸಿದರು. ಪ.ನೀಲಕಂಠನ್ ಅವರು ಪಂತುಲು ಜೊತೆಯಾದರು. ನೀಲಕಂಠನ್ ಆ ವೇಳೆಗಾಗಲೇ ಅನೇಕ ತಮಿಳು ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸು ಪಡೆದಿದ್ದರು. ಪದ್ಮಿನಿ ಪಿಕ್ಚರ್ಸ್ ತಯಾರಿಸಿದ ಮೊದಲ ಚಿತ್ರ ‘ಮೊದಲ ತೇದಿ’ (೧೯೫೫), ನಿರ್ದೇಶಕರು ಪ.ನೀಲಕಂಠನ್. ಅದೇ ವರ್‍ಷ ಮತ್ತೆ ಪ. ನೀಲಕಂಠನ್ ನಿರ್ದೇಶನದಲ್ಲೇ ‘ನಂಬೆಕ್ಕ’ ಚಿತ್ರವನ್ನು ನಿರ್ಮಿಸಿದರು. ಆದರೆ ಅದ್ದೂರಿ ತಾರಾಗಣ, ನಿರ್ಮಾಣ ಶ್ರೀಮಂತಿಕೆಯಿದ್ದರೂ ‘ನಂಬೆಕ್ಕ’ ಗಳಿಕೆಯಲ್ಲಿ ವಿಫಲವಾಯಿತು. ಅದೇ ವರ್‍ಶ ಮಹಾತ್ಮಾ ಪಿಕ್ಚರ್ಸ್‌ನ ಡಿ.ಶಂಕರಸಿಂಗ್‌ರವರು ಇದೇ ಕಥಾವಸ್ತುವನ್ನು ಆಧರಿಸಿ ಚಿತ್ರ ನಿರ್ಮಿಸುತ್ತಿದ್ದರು. ಸುಮಾರು ಮೂರು ವಾರದಲ್ಲೇ ಚಿತ್ರ ನಿರ್ಮಿಸಿ ‘ಶಿವಶರಣೆ ನಂಬಿಯಕ್ಕ’ ಎನ್ನುವ ಹೆಸರಿನ ಚಿತ್ರವನ್ನು ಬಿಡುಗಡೆ ಮಾಡಿದರು. ಅಲ್ಪವೆಚ್ಚದ ಈ ಚಿತ್ರ ಯಶಸ್ವಿಯಾಯಿತು. ಪಂತುಲು ಅವರ ಚಿತ್ರ ಸೋತಿತ್ತು. ಸೋಲಿನ ನಂತರ ಪ.ನೀಲಕಂಠನ್ ತಮಿಳು ಚಿತ್ರರಂಗಕ್ಕೆ ಮರಳಿದರು. ಅನಂತರ ಪಂತುಲುರವರೇ ತಮ್ಮ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸತೊಡಗಿದರು.
ಪಂತುಲುರವರು ೧೯೫೫ ರಿಂದ ೧೯೭೨ರವರೆಗೆ ಒಟ್ಟಾರೆ ಇಪ್ಪತ್ತು ಕನ್ನಡ ಚಿತ್ರಗಳನ್ನು ನಿರ್ಮಿಸಿ ಹದಿನೆಂಟು ಚಿತ್ರಗಳನ್ನು ನಿರ್ದೇಶಿಸಿದರು. ಇವುಗಳಲ್ಲಿ ಎರಡು ಐತಿಹಾಸಿಕ, ಎರಡು ಪೌರಾಣಿಕ, ಒಂದು ಜಾನಪದ ಹಾಗೂ ಒಂದು ಮಕ್ಕಳ ಚಿತ್ರವನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಸಾಮಾಜಿಕ ಚಿತ್ರಗಳೇ! ಅವರ ಮೊದಲನೆಯ ನಿರ್ಮಾಣದ ಚಿತ್ರ ‘ಮೊದಲ ತೇದಿ’ ಸರ್ಕಾರಿ ನೌಕರನ ಬದುಕು ಬವಣೆಯನ್ನು ಕುರಿತದ್ದು. ಸಮಸ್ಯೆಯಲ್ಲಿ ಸಿಕ್ಕ ಸರ್ಕಾರಿ ನೌಕರ ತನ್ನ ಕುಟುಂಬದವರ ಬದುಕಾದರೂ ನೆಮ್ಮದಿಯಿಂದಿರಲಿ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆದರೆ ಪರಿಸ್ಥಿತಿಗಳು ಅವನ ನಿರೀಕ್ಷೆಯನ್ನು ಹುಸಿಗೊಳಿಸುತ್ತವೆ. ಅವರ ಕೊನೆಯ ಚಿತ್ರ ‘ಒಂದು ಹೆಣ್ಣಿನ ಕತೆ’ ಟಾಲ್ಸ್‌ಸ್ಟಾಯ್‌ರವರ ಕಾದಂಬರಿ ‘ರಿಸರಕ್ಷನ್’ ಕೃತಿಯನ್ನು ಆಧರಿಸಿತ್ತು. ಸಾಮಾಜಿಕ ಚಿತ್ರಗಳಲ್ಲಿ ಕೌಟುಂಬಿಕ ವಿಘಟನೆಯನ್ನು ಕುರಿತು ಹೇಳುವುದು ಅವರಿಗೆ ಪ್ರಿಯವಾಗಿತ್ತು. ಹಾಗೆ ನೋಡಿದರೆ ಅವರ ಆರಂಭದ ಚಿತ್ರಗಳಲ್ಲೊಂದಾದ ‘ಸ್ಕೂಲ್ ಮಾಸ್ಟರ್’- ಸ್ವಾತಂತ್ರ್ಯಾನಂತರದ ಸಾಮಾಜಿಕ ಪರಿಸ್ಥಿತಿಗೆ ತೋರಿದ ಪ್ರತಿಕ್ರಿಯೆಯೇ ಆಗಿತ್ತು. ಹಳ್ಳಿಗಾಡಿನ ಶಿಕ್ಷಣ ಪರಿಸ್ಥಿತಿ, ಗುರುವಿನ ಸ್ಥಾನ, ಕಲಿತ ಮಕ್ಕಳು ನಗರ ಜೀವನಕ್ಕೆ ಹೊಂದಿಕೊಂಡಂತೆ ಹಳೆಯ ಪರಂಪರೆಗೆ ತೋರುವ ತಿರಸ್ಕಾರ, ಆಗತಾನೇ ಪಿಡುಗಾಗಿ ಬೆಳೆಯುತ್ತಿದ್ದ ವರದಕ್ಷಿಣೆಯ ಅವಾಂತರ, ನಗರವಾಸಿಗಳಾದ ಮಕ್ಕಳು ಮತ್ತು ತಂದೆತಾಯಿಗಳ ಪರಿಸ್ಥಿತಿ- ಹೀಗೆ ಸಾಮಾಜಿಕ ವಿಘಟನೆಯನ್ನು ಹಿಡಿದ ದೊಡ್ಡ ಹಂದರವನ್ನೆ ಅದು ಹೊಂದಿತ್ತು. ಕೌಟುಂಬಿಕ ಸದಸ್ಯರ ನಡುವಣ ಸಂಬಂಧಗಳ ಎಳೆಗಳನ್ನು ಬಿಡಿಸಿ ತೋರುವುದರಲ್ಲಿ ಪಂತುಲು ಒಲವುಳ್ಳವರಾಗಿದ್ದರು. ‘ಗಾಳಿ ಗೋಪುರ’, ‘ಚಿನ್ನಾರಿ ಪುಟ್ಟಣ್ಣ’, ‘ಚಿನ್ನದ ಗೊಂಬೆ’, ‘ದುಡ್ಡೇ ದೊಡ್ಡಪ್ಪ’, ‘ಒಂದು ಹೆಣ್ಣಿನ ಕತೆ’, ‘ಸಾಕು ಮಗಳು’- ಆ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳು.
ಮದರಾಸಿನಲ್ಲೇ ನೆಲೆಯೂರಿ ತಮಿಳು ಚಿತ್ರರಂಗದ ಜೊತೆ ಹೆಚ್ಚು ಒಡನಾಟವಿಟ್ಟುಕೊಂಡಿದ್ದ ಪಂತುಲು ಅವರ ಚಿತ್ರಗಳಲ್ಲಿ ತಮಿಳು ಚಿತ್ರಗಳ ನಿರೂಪಣಾ ಕ್ರಮ ಹಾಗೂ ಕಥಾವಸ್ತುಗಳ ಪ್ರಭಾವ ಗಾಢವಾಗಿರುವುದನ್ನು ಕಾಣಬಹುದು. ತಮಿಳಿನ ಎಂಜಿಆರ್ ಮತ್ತು ಶಿವಾಜಿ ಗಣೇಶನ್ ನಾಯಕರಾಗಿದ್ದ ಚಿತ್ರಗಳನ್ನು ನಿರ್ದೇಶಿಸಿದ ಪಂತುಲು ಅವರು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗುವ ಕೆಲವು ಸೂತ್ರಗಳನ್ನು ನಂಬಿ ಚಿತ್ರ ಮಾಡಿದ್ದರು. ರಾಜ್ ಅಭಿನಯದ ‘ಗಾಳಿಗೋಪುರ’, ‘ಸಾಕು ಮಗಳು’, ‘ಎಮ್ಮೆ ತಮ್ಮಣ್ಣ’, ‘ಬೀದಿ ಬಸವಣ್ಣ’, ‘ಅಮ್ಮ’, ‘ಗಂಡೊಂದು ಹೆಣ್ಣಾರು’ ಆ ಕಾಲದ ಸಿದ್ಧ ಸೂತ್ರಗಳನ್ನಿಟ್ಟುಕೊಂಡು ರೂಪಿಸಿದ ಚಿತ್ರಗಳು. ತಮಿಳು ಚಿತ್ರಗಳಲ್ಲಿರುವಂತೆ ತಮ್ಮ ಚಿತ್ರಗಳಲ್ಲಿಯೂ ಪ್ರತ್ಯೇಕ ‘ಕಾಮಿಡಿ ಟ್ರ್ಯಾಕ್’ ಅಳವಡಿಸುತ್ತಿದ್ದರು. ಈ ರೀತಿಯ ಹಾಸ್ಯದ ಸಮಾನಾಂತರ ಟ್ರ್ಯಾಕ್ ನಂತರ ಎಲ್ಲ ಕನ್ನಡ ಚಿತ್ರಗಳಲ್ಲೂ ಕಾಣಿಸಿಕೊಂಡಿತು. ಹಾಗಾಗಿ ಪಂತುಲು ಅವರ ‘ಸ್ಕೂಲ್ ಮಾಸ್ಟರ್’ನಿಂದ ಆರಂಭಿಸಿ ‘ಒಂದು ಹೆಣ್ಣಿನ ಕತೆ’ವರೆಗಿನ ಚಿತ್ರಗಳಲ್ಲಿ ನರಸಿಂಹರಾಜು ಅವರು ಶಾಶ್ವತ ನಗೆನಟರಾಗಿ ಕಾಣಿಸಿಕೊಂಡರು.
ಅವರು ಚಿತ್ರಗಳನ್ನು ನಿರ್ವಹಿಸುತ್ತಿದ್ದ ರೀತಿಯಿಂದಾಗಿಯೇ ಬೇರೆ ಭಾಷೆಗಳಿಗೆ ಸುಲಭವಾಗಿ ರೂಪಾಂತರಿಸಲು ಸಾಧ್ಯವಾಯಿತು. ಪಂತುಲು ಅವರು ತಮಿಳಿನಲ್ಲಿ ತೆಗೆದ ‘ತೇಡಿ ವಂದ ಮಾಪಿಳ್ಳೆ’, ‘ರಾಮನ್ ತೇಡಿಯ ಸೀತೈ’, ‘ಮಾಟ್ಟುಕ್ಕಾರ ವೇಲನ್’ ಕ್ರಮವಾಗಿ ಕನ್ನಡದ ‘ರತ್ನಗಿರಿ ರಹಸ್ಯ’, ‘ಬೀದಿ ಬಸವಣ್ಣ’, ‘ಗಂಡೊಂದು ಹೆಣ್ಣಾರು’ ಮತ್ತು ‘ಎಮ್ಮೆ ತಮ್ಮಣ್ಣ’ ಚಿತ್ರದ ರೀಮೇಕುಗಳು.
ಅದ್ದೂರಿತನ ಪಂತುಲು ಅವರ ಚಿತ್ರಗಳ ಮತ್ತೊಂದು ವೈಶಿಷ್ಟ್ಯ. ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೆಯಲು ದೃಶ್ಯಗಳು ವೈಭವವಾಗಿರಬೇಕೆಂದು ಅವರು ನಂಬಿದ್ದರು. ಭಾರತದ ಸೆಸಿಲ್ ಡೀ ಮಿಲೆ ಎಂದು ಹೇಳಿಸಿಕೊಳ್ಳುವ ಬಯಕೆ ಅವರಿಗಿತ್ತು. ‘ಶ್ರೀಕೃಷ್ಣದೇವರಾಯ’ ಚಿತ್ರದ ಚಾರಿತ್ರಿಕ ವಾಸ್ತವವನ್ನು ಲೆಕ್ಕಿಸದೆ ವಿಜಯನಗರ ಸಾಮ್ರಾಜ್ಯದ ಕತೆಯನ್ನು ಜೈಪುರದ ಅರಮನೆ, ಕೋಟೆಕೊತ್ತಲಗಳ ಹಿನ್ನೆಲೆಯಲ್ಲಿ ಚಿತ್ರೀಕರಿಸಿದರು. ತಮಿಳಿನಲ್ಲಿ ತೆಗೆದ ‘ಕರ್ಣನ್’ ಚಿತ್ರದ ಕ್ಲೈಮಾಕ್ಸ್ ದೃಶ್ಯಕ್ಕೆ ಎಂಬತ್ತು ಆನೆ ಮತ್ತು ೪೦೦ ಕುದುರೆಗಳನ್ನು, ಸಾವಿರಾರು ಸಹ ಕಲಾವಿದರನ್ನು ಬಳಸಿದ್ದರು. ‘ರತ್ನಗಿರಿ ರಹಸ್ಯ’ ಚಿತ್ರದಲ್ಲಿ ಹತ್ತಾರು ಆನೆ, ನೂರಾರು ಸೈನಿಕರು, ವೈಭವದ ಸೆಟ್ಟುಗಳನ್ನೂ ಬಳಸಿದ್ದರು. ‘ಮಕ್ಕಳ ರಾಜ್ಯ’ ಚಿತ್ರದಲ್ಲಿ ಅವರು ಬಳಸಿರುವ ಸೆಟ್ ಮತ್ತು ಉಡುಗೆ ತೊಡುಗೆ ಇಂದಿಗೂ ರೋಮಾಂಚನ ನೀಡುತ್ತವೆ. ಇತರ ಭಾಷೆಗಳಲ್ಲಿ ಇರುವ ಅದ್ದೂರಿತನ ಕನ್ನಡ ಚಿತ್ರಗಳಲ್ಲಿ ಕೊರತೆಯಾಗಬಾರದೆಂಬ ಹಂಬಲ ಅವರದಾಗಿತ್ತು.
ಸದಾ ಚಿತ್ರಗಳನ್ನೆ ಉಸಿರಾಡುತ್ತಿದ್ದ ಪಂತುಲು ಅವರು ಕನ್ನಡ ಚಿತ್ರರಂಗ ಕಂಡ ಮೊದಲ ಷೋಮ್ಯಾನ್. ಅವರ ಚಿತ್ರಗಳಲ್ಲಿ ತಂತ್ರಜ್ಞರು ಬದಲಾಗುತ್ತಿದ್ದದ್ದು ಕಡಿಮೆ. ‘ರತ್ನಗಿರಿ ರಹಸ್ಯ’ ಚಿತ್ರದಿಂದ ಹಿಡಿದು ಅವರ ಕೊನೆಯ ಚಿತ್ರದವರೆಗೆ ಟಿ.ಜಿ.ಲಿಂಗಪ್ಪನವರು ಸಂಗೀತ ನಿರ್ದೇಶಕರಾಗಿದ್ದರು. ನರಸಿಂಹರಾಜು ಅವರಿಲ್ಲದೆ ಯಾವ ಚಿತ್ರವೂ ಸೆಟ್ಟೇರುತ್ತಿರಲಿಲ್ಲ. ‘ಶ್ರೀಕೃಷ್ಣದೇವರಾಯ’ ಚಿತ್ರದ ಮಹಾಮಂತ್ರಿ ತಿಮ್ಮರಸು ಪಾತ್ರಕ್ಕಾಗಿ ಅವರಿಗೆ ರಾಜ್ಯ ಚಲನಚಿತ್ರ ಶ್ರೇಷ್ಟ ನಟ ಪ್ರಶಸ್ತಿ ಬಂದಾಗ ಅದು ನಾಯಕ ಪಾತ್ರ ವಹಿಸಿದ್ದ ರಾಜ್‌ಗೆ ಸಲ್ಲುವುದು ಸೂಕ್ತವೆಂದು ಪ್ರಶಸ್ತಿಯನ್ನು ತಿರಸ್ಕರಿಸಿದರು.
ಇಂಥ ಸಂಸ್ಥೆಯು ‘ಶ್ರೀಕೃಷ್ಣದೇವರಾಯ’ ಚಿತ್ರದ ನಂತರ ತೆಗೆದ ‘ಅಳಿಯ ಗೆಳೆಯ’, ‘ಮಾಲತಿ-ಮಾಧವ’ ಮತ್ತು ‘ಒಂದು ಹೆಣ್ಣಿನ ಕತೆ’ ಚಿತ್ರಗಳು ವಿಫಲವಾದಾಗ ನಿರಾಶೆಗೊಂಡರು. ‘ತಮಿಳು ಚಿತ್ರಗಳಲ್ಲಿ ದುಡಿದದ್ದನ್ನು ಕನ್ನಡ ಚಿತ್ರಗಳಲ್ಲಿ ಕಳೆದುಕೊಳ್ಳುತ್ತಿದ್ದ’ ಹತಾಶಭಾವ ಅವರನ್ನು ಕಾಡಿತು. ತಮ್ಮ ಶಿಷ್ಯ ಪುಟ್ಟಣ್ಣನವರಿಂದ ಚಿತ್ರವೊಂದನ್ನು ಮಾಡಿಸಬೇಕೆಂಬ ಅವರ ಬಯಕೆ ಬದುಕಿದ್ದಾಗ ಕೈಗೂಡಲಿಲ್ಲ. ಕನ್ನಡ ಚಿತ್ರರಂಗದ ಬಗ್ಗೆ ಒಂದು ಬಗೆಯ ವಿರಕ್ತಿ ಭಾವವನ್ನೆ ಇಟ್ಟುಕೊಂಡು ಅವರು ೧೯೭೪ರಲ್ಲಿ ವಿಧಿವಶರಾದರು. ಪುಟ್ಟಣ್ಣ ಕಣಗಾಲರು ೧೯೭೬ರಲ್ಲಿ ‘ಕಾಲೇಜು ರಂಗ’ವನ್ನು ಪದ್ಮಿನಿ ಪಿಕ್ಚರ್ಸ್‌ಗಾಗಿ ನಿರ್ದೇಶಿಸಿದರೂ, ಸೋಲುಕಂಡಿತು. ಅಲ್ಲಿಗೆ ಪದ್ಮಿನಿ ಪಿಕ್ಚರ್ಸ್ ಎಂಬ ಕಲಾ ವಿಶ್ವವಿದ್ಯಾಲಯ ಕೊನೆಗೊಂಡಿತು.
ಎರಡೂವರೆ ದಶಕಗಳ ಕಾಲ ವರ್‍ಶಕ್ಕೊಂದರಂತೆ ಚಿತ್ರಗಳನ್ನು ನಿರ್ಮಿಸಿದ ಪದ್ಮಿನಿ ಪಿಕ್ಚರ್ಸ್ ಕನ್ನಡಿಗರಿಗೆ ಸದಭಿರುಚಿಯ ಚಿತ್ರಗಳನ್ನು ನೀಡಿ ಸಿನಿಮಾ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಾರ್ಥಕ ಕಂಡುಕೊಂಡಿತು.
*****



















