ಇರುಳು ಅಡಗಿ ಮೂಡು ಬೆಳಗಿ
ಕಮಲದಂತೆ ತೆರೆಯಿತು
ಹೃದಯದಿಂದ ಗೀತವೊಂದು
ಹೊಮ್ಮಿ ದೆಸೆಯ ತುಂಬಿತು.
ನಭದ ನೆಲದ ಕೆನ್ನೆಗಿತ್ತ
ಉಷೆಯ ಪ್ರೀತಿ ಚುಂಬನ
ಕೊನರಿಸಿತೈ ಮನಸಿನಲ್ಲಿ
ಕನಸು ಕಂಡ ನಂದನ!
ಬಾನ ಭಾಲದಲ್ಲಿ ಹೆಣೆದ
ಅರುಣ ಕಿರಣ ಗುಂಫನ
ಮನದ ಭಾವ ವಿಹಗಗಳಿಗೆ
ಆಯಿತೇನೊ ಮಧುವನ!
ನೂರುದಿನದ ಮರೆತ ಮಧುರ
ಸ್ವಪ್ನವೆಲ್ಲ ಕಲೆತವು
ಮೌನವಾಂತ ಅಧರದಿಂದ
ಹರುಷ ಹಾಡು ಸಿಡಿದವು.
ಶೃತಿಯ ತುಂಬಿ ಹೊಮ್ಮಿ ಹರಿದ
ವಿಹಂಗಮದ ಸುಸ್ವರ
ನನ್ನಿ ಜೊನ್ನ ಹನಿವ, ನಲ್ಲೆ,
ನಿನ್ನ ಲಲ್ಲೆ ಬಂಧುರ!
ಪವನ ವೀಣೆ ಮಿಡಿವ ಗಾನ
ವೇದದಂತೆ ಪಾವನ!
ಕೋಟಿ ಕೊರಳೊಳಿಳಿದ ಗೀತ
ಕರಳಿತೊಡನೆ ಮನ್ಮನ.
ಕಲೆತ ಜಗದ ಸಂಘಗೀತ
ದಿಕ್ತಟಾಕ ತುಂಬಿತು
ಮರೆತ ಮನದ ನೂರು ಸುಖದ
ಹಿಗ್ಗು ಹಾಡು ಹೊಮ್ಮಿತು
ತುಂಬಿ ತಳುಕಿತೆಲ್ಲವನ
ತುಂಬಿ ತುಳುಕಿತೆನ್ನ ಮನ
ಬಾನ ಬುವಿಯ ತುಂಬಿತೀ
ಪ್ರಭಾತ ಸುಭಗ ನಿಸ್ವನ.
*****



















