ಇಳೆಗೆ ಬಂದಳದೋ ಲಕ್ಷ್ಮಿ
ಮಧುಮಾಸದ ಅಮೃತ ರಶ್ಮಿ!
ಮಿಂದು ಬಂತು ನೆಲಜಲ
ಸ್ವಾಗತಿಸಿತು ಭೂತಲ
ದಿಸೆ ದಿಸೆಯೂ ಹೊಳೆವ ಹವಳ
ಸ್ವಸ್ತಿ ಲಿಖಿತ ಹೊಸ್ತಿಲ!
ಗಗನ ಕರದ ನೀಲಕಮಲ
ಅರ್ಘ್ಯವೀಯೆ ಕಿರಣ ಸುಜಲ
ಕೈ ಮುಗಿಯಿತು ಜೀವಕುಲ
ಭಾವ ಪಕ್ವ ಫಲವಲ!
ಪುರೂರವನ ಎದುರು ನಿಂತ
ಇವಳಪ್ಸರೆ ಊರ್ವಶಿ!
ಬಾನ್ನೆಲದಲಿ ಬೆಳದನಂತ
ಮತ್ತಧವಳ ಸುಖಶಶಿ!
ಜನ ಬನಗಳ ಅಂತರಂಗ
ಮಥಿಸಿ ಬಂತು ಹೃತ್ತರಂಗ
ವಿಶ್ವವಾಯ್ತು ನೃತ್ಯರಂಗ
ಈ ವಸಂತ ಲಕ್ಷ್ಮಿಗೆ!
ಹಸುರಿನ ಕೊನೆ ಕೆಂಪೊಡೆಯಿತು
ಎಡೆಯೆಡೆಯಲಿ ಕಂಪಡರಿತು
ಹಸಿದೆದೆಯಲಿ ಕಂಡರಸಿತು
ಕನಸಿನ ಕಮನೀಯತೆ!
ಸುಳಿದಾಡಿತು ಗಂಧಪವನ
ಸ್ಫೂರ್ತಿಸಿರಲು ಪ್ರೇಮ ಕವನ
ತುಂಬಿತುಟಿಯು ನುಡಿಸಿಯದನ
ಬನ ಬನವನು ಕುಣಿಸಿತು!
ಅದೊ ಕೋಕಿಲ ಮತ್ತಗೀತ
ವನಮೋದದಿ ರೋಮಾಂಚಿತ
ಹೆಣ್ಣುಗಂಡು ಕಾಮವ್ಯಥಿತ
ಸುಖ ಝೇಂಕೃತ ಭಾವವು!
ವೈರಾಗ್ಯದ ಬಗೆ ಚೆದರಿತು
ಅನುರಾಗದ ತಪ ಕೊನರಿತು
ನಂಜುಂಡನ ತುಟಿ ಅದುರಿತು
ಅಶುಭದ ವಿಷ ನೆಕ್ಕಿತು!
ಯುಗ ಯುಗಗಳ ಸೃಜನಗೀತ
ಹೊಮ್ಮಿ ಬರಲು, ವಿಶ್ವ ಪ್ರೀತ
ಈ ಲೋಕವು ಪುಣ್ಯ ತೀರ್ಥ
ಹೃನ್ನದಿಗಳು ಬೆರೆಯಲು!
ಸಂಸಾರದ ಕಟು ಬಂಧನ-
ವಾಯ್ತು ಇಂದು ನವನಂದನ
ಎದೆಯೆದೆಯಲಿ ಮಧು ನರ್ತನ
ನಗೆ ಕೊನರಿತಕಾರಣ!
ಬಾರೆ ಬಾರೆ ಭಾಗ್ಯಲಕ್ಷ್ಮಿ
ನಾಕ ತೊರೆದ ಪುಣ್ಯರಶ್ಮಿ
ಜಗ ಕೋರಿದೆ ಸುಸ್ವಾಗತ
ಬಾರೊಲವಿನ ಅಭ್ಯಾಗತ!
*****



















