ನನ್ನ ಬಯಕೆಗಳ ಬಸಿರಲ್ಲಿ ಮೊಳೆದ,
ನನ್ನ ಒಸಿರಿನ ಬಯಕೆಯಲ್ಲಿ ಹೊಳೆದ ಮುದ್ದು ಮೊಗವೆ!
ಬಂದೆಯಾ ಇಂದು ಕಂದನಾಗಿ ನನ್ನೊಡಲಲಿ?
ನನ್ನ ಕೂಟದ ಕೋಣೆಯನ್ನು ತೆರೆದು,
ನನ್ನ ನೋಟದ ಬಯಲಿನಲ್ಲಿ ಮೆರೆದು
ನಿಂದೆಯಾ ಮುಂದೆ-ಮುದ್ದಿನ ತಿದ್ದಿದ ಮೂರುತಿಯಾಗಿ?
ಮಾತನ್ನಾಡದ ಮುಗುದಯ್ಯಾ!
ಮಿಕಿಮಿಕಿ ನೋಡುವ ಮರಿಯೆ!
ಪರದೇಶಿಯಾಗಿ ಬಂದ ಕೂಸೆ!
ಮಾಸದ ಮುಸುಕನ್ನು ಹೊತ್ತು ಬಂದಿದ್ದ ಮೂಸದ ಸೌಸವವೆ?
ಮಣ್ಣಿನ ಮನೆಯನ್ನು ಸೇರಿಬಂದ ಮಾಸದ ಸೊಬಗೆ!
ನನ್ನ ಮನಸಿನ ಹಂದರದಲ್ಲಿದ್ದ ಒಲವಿನ ಮಿಡಿಯೆ!
ನನ್ನ ಕನಸಿನ ಗುಡಿಯಲ್ಲಿ ನಲಿವಿನ ಕುಡಿಯೆ!
ನನ್ನ ನನಸಿನ ಬಸಿರಲ್ಲಿದ್ದ ಚೆಲುವಿನ ಕೈಪಿಡಿಯೆ!
ಕೈಗೆ ಬಂದು ‘ಕಂಡೆನು’ ಎನ್ನಿಸಿದ ಕಂದಯ್ಯಾ!
‘ಉಂಡೆನು’ ಎನ್ನಿಸುವೆಯಾ-ಬಾಯಿಗೆ ಬಂದು-ಮುದ್ದೆ?
*****