ಕಣ್ಣೆದುರೇ ನಡೆವ ಎಷ್ಟೊಂದು ಘಟನಗೆಗಳಿಗೆ
ತಲಸ್ಪರ್ಶಿ ಸ್ಪರ್ಶ, ನೋಟ, ಸಂಶೋಧಕಳಾಗುವವಳೇ
ಹೊಸದನ್ನು ಹುಡುಕಿ ಹೆಕ್ಕಿ ಉಣಬಡಿಸುವವಳೇ
ಮೃದು ಸೌಮ್ಯ ಮಾತಿನ ಮನಸು ಗೆದ್ದವಳೇ
ಇಂದೇಕೆ ಮೌನವಾಗಿ ಮಾತನಾಡದೇ ಮಲಗಿರುವೆ.
ನಿಂತ ನೀರಾಗದೇ ಸದಾ ಹರಿವ ಹೊಳೆನೀರೆ
ಎಡಪಂಥೀಯರ ನಡುವಿನ ಜನಪರದ ಮನಸೇ
ಸ್ತ್ರೀವಾದಿ, ಮಾನವೀಯ ನೆಲೆಯ ಮಾತೇ
ಕಳ್ಳುಬಳ್ಳಿಯ ಸಂಬಂಧಗಳ ದೂರ ಸರಿಸಿ
ಬಾರದ ದಾರಿಗೆ ಹೀಗೇಕೆ ಎದ್ದು ನಡೆದೆ ವಸು?
ಕನ್ನಡ ಸಾಹಿತ್ಯ ಚರಿತ್ರೆಗೆ ಹೊಸ ಭಾಷ್ಯ ಬರೆಯಲು
ನನ್ನೊಂದಿಗೆ ನಿನ್ನ ಒಪ್ಪಂದವಾಗಿತ್ತಲ್ಲವೆ?
ನೀನು ಕೇಳಿದ ಲೇಖನ ನಾನಿನ್ನೂ ಮುಗಿಸಿಲ್ಲ
ಅರ್ಧಕ್ಕೇ ನಿಂತ ಲೇಖನ ಪೂರ್ಣವಾಗುವ ಮುನ್ನ
ಎಲ್ಲರನ್ನಗಲಿ ಹೋಗುವುದು ಸರಿಯೇ ಹೇಳು ವಸು.
ಬೇಡ ಮಾರಾಯ್ತಿ ಹೀಗೆ ಮಾಡಬೇಡ
ನಿನ್ನ ಅಸಂಖ್ಯಾತ ಗೆಳತಿ, ವಿದ್ಯಾರ್ಥಿನಿಯರಿದ್ದಾರೆ
ನಿನ್ನ ಎಷ್ಟೊಂದು ಯೋಜನೆಗಳು ಅಪೂರ್ಣವಾಗಿದೆ
ಚಲನಶೀಲ ಗತಿಯೇ ಜೀವನೋತ್ಸಾಹದ ಚಿಲುಮೆಯೇ
ಮನೆಯಲ್ಲಿ ಮಗಳು ಕಾಯುತ್ತಿದ್ದಾಳೆ ಬೇಗ ಬಾ ವಸು.
ಅರ್ಧಕ್ಕೆ ನಿಂತ ನಿನ್ನ ಶಸ್ತ್ರ ಚಿತ್ರ ಮುಗಿಸಿ
ಪೂರ್ಣಗೊಂಡು ತೆರೆಕಾಣುವ ಮುನ್ನವೇ
ಅವನಿಗೆ ವಿದಾಯ ಹೇಳುವ ಮೊದಲೇ
ನಿನ್ನ ನೂರಾರು ಕನಸುಗಳ ಮನಸಿನಲ್ಲೇ ಮುಚ್ಚಿಟ್ಟು
ಹೀಗೆ ಮರೆಯಾಗುವುದು ನ್ಯಾಯವೇ ಹೇಳು ವಸು?
*****
(ಅವನಿ ಎಂಬುದು ಡಾ.ವಸು ಅವರ ಮಗಳ ಹೆಸರು)

















