Home / ಕವನ / ಕವಿತೆ / ಕಾಡುಗೊಲ್ಲತಿಯರ ಪಾಡು

ಕಾಡುಗೊಲ್ಲತಿಯರ ಪಾಡು

ಗೊಲ್ಲರ ಹಟ್ಟಿಯಾಚೆಗಿನ ಕಾಡಿನಲ್ಲಿ
ಬೀಡು ಬಿಟ್ಟಿವೆ ಗೊಲ್ಲತಿಯರ ಕುಟೀರ
ಶಿಲುಬೆಗೇರುವ ಯಾತನಾ ಶಿಬಿರ
ತಿಂಗಳಿಗೊಂದಾವರ್ತಿ ಊರ ಹೊರಗೆ ನಲುಗುವ
ಗೊಲ್ಲತಿಯರ ಹೆಣ್ಣು ಸಂವೇದನೆಗಳು
ಊರೊಳಗಿದ್ದರೆ ಬಾಣಂತಿ, ಮುಟ್ಟಾದ ಹೆಣ್ಣು
ಮನೆಯಲ್ಲಿ ಹಾವು ಚೇಳು ಬರುವವಂತೆ.

ಗೊಲ್ಲರ ಹಟ್ಟಿಯಲಿ ಸೂತಕದ ಮನೆ
ನಾಗರೀಕ ಲೋಕದ ನಿರ್ಲಜ್ಜತೆಗೆ ಪ್ರತೀಕ
ಸರ್ಕಾರವೂ ಕಟ್ಟಿಸಿದೆ ಸೂತಕದ ಮನೆಗಳು
ಹುಲ್ಲ ಗುಡಿಸಲು ಬದಲಿಗೆ ಇಟ್ಟಿಗೆ ಗಾರೆ
ನೀರಿಲ್ಲ, ಬೆಳಕಿಲ್ಲ, ಕಿಟಕಿ, ಬಾಗಿಲುಗಳಿಲ್ಲ
ಶೌಚಾಲಯಗಳೂ ಇಲ್ಲದ ಗೂಡು
ಎದ್ದು ನಿಂತವು ಊರಾಚೆ ಕೃಷ್ಣಕುಟೀರಗಳು
ಮೌಡ್ಯದ ಆಚರಣೆಗೆ ಕೊನೆಯೇ ಇಲ್ಲವೇ?

ಗೊಲ್ಲರ ಹಟ್ಟಿಯ ಆ ಹೆಣ್ಣು
ಗೊಡ್ಡು ಸಂಪ್ರದಾಯ, ಕಟ್ಟಳೆಗೆ ತಲೆಬಾಗಿ
ಹಿರಿಯರ ಮಾತಿಗೆ ಬೆಲೆ ಕೊಟ್ಟು
ಮಳೆ, ಚಳಿ, ಗಾಳಿ, ಬಿಸಿಲು, ಕಾಡುಪ್ರಾಣಿ
ಹುತ್ತ – ಹಾವಿನ ಹರಿದಾಟ ಸರಪರ
ಇನ್ನೆಷ್ಟು ದಿನ ಸಹಿಸಬೇಕಿದೆಯೋ
ಅನಿಷ್ಟಗಳ ಅಳಿಸುವ ಸಂತರ ಆಗಮನಕ್ಕೆ
ಇನ್ನೆಷ್ಟು ದಿನ ಕಾಯಬೇಕಾಗಿದೆಯೋ ಅವಳು ?

ನೂರಾರು ಆವಿಷ್ಕಾರ, ವಿಜ್ಞಾನ, ಸಾಧನೆ
ಮೆಟ್ಟಿಲ್ಲ ಅವಳು ನಾಗರೀಕ ಮೆಟ್ಟಿಲು
ಮುಟ್ಟು, ಬಸಿರು, ಬಾಣಂತನಗಳ ಮಧ್ಯೆ
ಗೊಲ್ಲರ ಹಟ್ಟಿಯ ಹೆಣ್ಣಿನ ಬದುಕು
ಬೆಂಕಿಯಲಿ ನಲುಗುವ ಕಾಡ ಹೂಗಳು
ಅರಣ್ಯದ ಭಯಂಕರ ಪ್ರಾಣಿಗಳ ಮಧ್ಯೆ
ಕಾಡುಗೊಲ್ಲತಿಯರ ಅಘೋರಿ ವಾಸ.

ಆಗಲೇ ಹುಟ್ಟಿದ ಹಸಿ ಮಾಂಸದ ಮುದ್ದೆಗೆ
ಹೊಕ್ಕಳ ಬಳ್ಳಿಯನ್ನು ಕಚ್ಚಿ ಇಲಿ, ಬೆಕ್ಕು
ಜನರಿಲ್ಲ, ದೀಪವಿಲ್ಲ, ವಿಷಜಂತುಗಳ ಹರಿದಾಟ
ಕಾಡಿನ ಕ್ರೂರ ಮೃಗಗಳ ಘರ್ಜನೆ, ಸದ್ದು, ಸಪ್ಪಳ
ತಾಯಿ ಮಗುವಿನ ಮೌನ ರೋದನದ ಬಿಕ್ಕು
ಅರಿವಿನ ಸೂರ್ಯ ಗೊಲ್ಲರ ಗುಡಿಸಲಿಗೆ ಬರಲಿಲ್ಲ.
ಬೆಳೆದ ನಾಗರೀಕತೆ ಕಿವಿಗೆ ತಟ್ಟಲಿಲ್ಲ.

ದಿನ ದಿನದ ಹಿಂಸೆಗೆ ಕೊನೆ ಹೇಳಿ
ಗರ್ಭಕೋಶಕೇ ಕತ್ತರಿ ಹಾಕಿ ಗೊಲ್ಲತಿ
ಮೌಡ್ಯಕ್ಕೆ ಗರ್ಭವೇ ಬಲಿ
ಮುಟ್ಟಿನ ಕಟ್ಟು ಬಿಡಿಸಿಕೊಂಡಳು
ಮುಕ್ತಿ ಹಾಡಿದಳು ಕೃಷ್ಣ ಕುಟೀರಕೆ
ಮುಟ್ಟು ನಿಂತು ಹುಟ್ಟಿದ….
ಪಿಂಡಗಳಿಗೆ ಹಿಡಿ ಶಾಪ ಹಾಕುತ್ತ
ಕಳಂಕ ಕಳಚಿ ಯಾತನೆಗೆ ಕೊನೆ
‘ಹೆಣ್ಣು ಸಂತಾನವೇ ಪ್ರಾಪ್ತವಾಗದಿರಲಿ’
ಹಿಡಿ ಶಾಪ ಹಾಕಿದಳು ಮೌಡ್ಯಕ್ಕೆ
ಗರ್ಭವನ್ನೇ ಕಿತ್ತು ಬಿಸಾಕಿದಳು.
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...