ಅರ್ಥವಾಗದ ಭಾಷೆಯ
ದಪ್ಪದಪ್ಪ ಧರ್ಮಗ್ರಂಥಗಳ
ಸುಮ್ಮನೆ ಒಟಗುಟ್ಟುವ ಅವನು
ಏನೋ ಸಾಧಿಸಿದಂತೆ ಬೀಗುತ್ತಾನೆ
ಸುಳ್ಳು ತೃಪ್ತಿಯ ಅಹಂಕಾರದ
ಮೂಟೆಯ ಅಂತ್ಯ ಅದರಲ್ಲೇ
ರೇಷ್ಮೆ ಹುಳುಕಟ್ಟಿದ ಗೂಡಿನಲ್ಲೇ
ದೊಡ್ಡ ದೊಡ್ಡ ಮಣ್ಣಹೆಂಟೆಗಳ
ದೂರ ದೂರಕೆ ಉರುಳಿಸಿ
ಸುಸ್ತಾಗುವುದು ಸುಮ್ಮನೆ
ಗುದ್ದಾಡಿ ಗಾಳಿಯೊಂದಿಗೆ
ಮೈ ನೋಯಿಸಿಕೊಳ್ಳುವ
ಸೆಗಣಿ ಹುಳುವಿನ ಸಾವು ನಿಶ್ಚಿತ.
ಬಳಿದು ವೈರಾಗ್ಯದ ಬೂದಿ
ಮೋಕ್ಷದ ಹಂಬಲದಲಿ
ಸಾಗಿ ಹೋದನು ಬಹುದೂರ
ಧರ್ಮ ಸನ್ನಿ ಹಿಡಿದ ಅಫೀಮು
ಏರಿದಂತೆ ವಾದಕ್ಕೆ ನಿಲ್ಲುವ
ಅವನ ಬರೀ ಮಾತು
ಪ್ರೀಯವಾಗುವುದಿಲ್ಲ ನನಗೆ
ಜಂಭದ ಕತ್ತಿಯಿಂದ
ತೊಟ್ಟಿಕ್ಕಿ ಹರಿದುಸೋರಿದ
ಮುಗ್ಧರ ಕೊರಳ ರಕ್ತ
ಸರಿಕಾಣುವುದಿಲ್ಲ ನನಗೆ
ಅವನ ಅರ್ಥವಾಗದ ನಡೆವಳಿಕೆ
ಕಠಿಣ ಬಂಡೆಯ ಹೃದಯ
ಕರಗಿ ನೀರಾಗಿ ಹರಿಯುವ ತನಕ
ತೊಟ್ಟಿರುವ ಅಹಂಕಾರದ ಪೊರೆ
ಕಳಚಿಟ್ಟು ಬರುವ ತನಕ
ಕಾಯುತ್ತೇನೆ ನಿನಗಾಗಿ
ಶುದ್ಧ ಮಾನವನಾಗುವ ತನಕ.
ಅಂಹಕಾರದ ಪೊರೆ
ಕಳಿಸುವ ತನಕ
*****


















