ದಿನಾಂಕ ೦೩-೦೮-೨೦೧೫ ರಂದು ಕರ್ನಾಟಕದ ಭಾರತೀನಗರದ ಹತ್ತಿರ ತೊರೆಚಾಕನ ಹಳ್ಳಿಯಲ್ಲಿ ಜನಜಂಗುಳಿ ಸೇರಿತ್ತು! ಜನಾನೇ ಹಾಗೆ ದನಗಳ ಹಾಗೆ…
ಬೆಳ್ಳಂಬೆಳಿಗ್ಗೆ ಎಷ್ಟೊಂದು ಜನವೋ ಜನ! ಕಾರಣ ಹಂದಿಯೊಂದು ಕಾಡಿನಿಂದ ನಾಡಿಗೆ ಬಂದು ಬಿಟ್ಟಿದೆ. ಜನ ಮುಗಿಬಿದ್ದು ನೋಡತೊಡಗಿದ್ದರು!
ಹೌದು! ಎಲ್ಲರೂ ಊರ ಹಂದಿ ನೋಡಿದ್ದರು. ಅಪರೂಪಕ್ಕೆ ಕಾಡು ಹಂದಿ ನೋಡಿದವರುಂಟು. ಇನ್ನು ಮುಳ್ಳು ಹಂದಿಯಂತೂ ಕಂಡಿರುವ ಜನರೂ ಕಡಿಮೆ. ಅದರಲ್ಲಿಯೂ ಚಿಪ್ಪು ಹಂದಿಯನ್ನು ಕಂಡವರು ವಿರಳ.
ಅಂದು- ಮಹದೇವು ಎಂಬುವರ ಮನೆಗೆ ಚಿಪ್ಪು ಹಂದಿ ನುಗ್ಗಿತ್ತು ಹಜಾರದಲ್ಲಿ ಬಂದಿತ್ತು. ಮನೆಯವರೇನು… ಎಲ್ಲರೂ ಗಾಬರಿ ಬಿದ್ದು ಓಡಿದರು!
ಅಲ್ಲೇ ಒಬ್ಬ ವ್ಯಕ್ತಿ ಪಂಜರ ತಂದು ಚಿಪ್ಪು ಹಂದಿಯನ್ನು ಸುರಕ್ಷಿತವಾಗಿ ಬಂಧಿಸಿದ. ಎಲ್ಲರೂ ಶಹಭಾಶ್ ಎಂದರು. ನಿಟ್ಟೂಸಿರು ಬಿಟ್ಟರು. ಅರಣ್ಯ ಇಲಾಖೆಗೆ ಮಾಹಿತಿ ಹೋಯಿತು. ಮೊಬೈಲ್ ಇರುವುದು ಅನುಕೂಲವಾಯಿತು!
ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿತು. ಜನರಿಗೆ ಧೈರ್ಯ ಹೇಳಿದರು. “ಚಿಪ್ಪು ಹಂದಿ ಈ ಭಾಗದಲ್ಲಿ ಇದೇ ಮೊದಲ ಭಾರಿಗೆ ಕಾಣಿಸಿಕೊಂಡಿದೆ. ಇದು ಮನುಷ್ಯರಿಗೆ ತೊಂದರೆ ಮಾಡದ ಪ್ರಾಣಿ. ಇದು ಇರುವೆ, ಕೀಟಗಳು, ಶೇಂಗಾ, ಗಡ್ಡೆಗೆಣಸು, ಕಂದ ಮೂಲಗಳ ತಿಂದು ನೀರು ಕುಡಿಯುವುದು, ಆಹಾರ ನೀರು ಅರಿಸಿ ನಾಡಿಗೆ ಆಕಸ್ಮಿಕವಾಗಿ ಹಾದಿ ತಪ್ಪಿ ಬಂದಿದೆಯೆಂದು ಹೇಳಿದರಲ್ಲದೆ, ಅಲ್ಲೇ ಪಕ್ಕದೂರಾದ ಅಂತರ ಹಳ್ಳಿಯ ಗುಡ್ಡಕ್ಕೆ ಅದನ್ನು ಸುರಕ್ಷಿತವಾಗಿ ಬಿಟ್ಟು ಬಂದರು.
ಶಾಲಾ ಮಕ್ಕಳಿಗೆ, ಊರು ಕೇರಿ ಜನರಿಗೆ ಚಿಪ್ಪು ಹಂದಿ ಗಾತ್ರ ಅದರ ಕಣ್ಣು ಬಣ್ಣ ಆಕಾರ ವಿಶೇಷವಾಗಿ ಚಿಪ್ಪಿನಿಂದ ಕೂಡಿದ ಶರೀರ ಕಂಡು ವಿಸ್ಮಯಗೊಂಡರು. ಜನರೇ ಹಾಗೆ ಎಂದೂ ನೋಡದವರ ಹಾಗೆ…
ಹೌದು! ಶತ್ರುಗಳಿಂದ ರಕ್ಷಿಸಿಕೊಳ್ಳಲು ಅದಕ್ಕೆ ಚಿಪ್ಪು ವರವಾಗಿದೆ. ಏಕೆಂದರೆ ಚಿಪ್ಪು ಮಿರಮಿರ ಮಿಂಚುತ್ತಿದ್ದು ನೋಡಲು ಸೋಜಿಗವೆನಿಸುವುದು. ಇಲ್ಲಿನ ಜನರ ನಾಲಿಗೆ ಮೇಲೆ ಎರಡು ಮೂರು ದಿನ ಚಿಪ್ಪು ಹಂದಿ ನಲಿನಲಿದು ಹೋಯಿತು! ಚಿಪ್ಪು ಹಂದಿಯ ಅದೃಷ್ಟವೋ… ಜನರ ಅದೃಷ್ಟವೋ… ಅಂತೂ ಇಂತೂ ಕಾಲ ಜಿಗಿಯಿತು!
*****


















