ಹೌದು!
ಅಲ್ಲೀಗ ಸಾವಿನದೇ ಸುದ್ದಿ
ಸ್ತಬ್ಧವಾಗಿದೆ ಬದುಕು
ಮಳೆಯ ಅಬ್ಬರದ್ದೇ ಸದ್ದು
ಸಿಡಿಲು ಮಳೆಗೆ ಬಿದ್ದ ಗೋಡೆ
ಕೆಳಗೆ ಸಿಲುಕಿದವರೆಷ್ಟು?
ಸತ್ತವರ ಸಂಖ್ಯೆ ಲೆಕ್ಕವಿಟ್ಟವರಾರು?
ಕಡಲ ತಟದ ಅಲೆಗಳು
ಮುನಿದು ರೊಚ್ಚಿನಿಂದ ಅಪ್ಪಳಿಸಿ
ಕೊಚ್ಚಿಹೋದ ಮನೆಗಳೆಷ್ಟು?
ಕೆರೆಕೋಡಿ ಒಡೆದು ರಭಸದಿಂದ
ನುಗ್ಗಿದ ನೀರು ಉರುಳಿಸಿದ
ಗುಡಿಸಲುಗಳ ಲೆಕ್ಕವಿಟ್ಟವರಾರು?
ಬರದ ನಾಡಲಿ ಸುರಿದ
ಸಾವಿನ ಮಳೆ ಅರ್ಭಟಕ
ಬಡವರ ಬದುಕು ಅಸ್ತವ್ಯಸ್ತ
ಮನೆಯೊಳಗೆ ಮಲಗಿದ ಮಗು
ತಣ್ಣನೆಯ ಕ್ರೂರ ಸಾವಿಗೆ
ಕೊಚ್ಚಿ ಹರಿದು ಹೋದದ್ದು
ಅರಿವಿಗೆ ಬಂದಾಗ ಕೈಮೀರಿತ್ತು
ಊರು ಕೇರಿಗಳೀಗ
ಚಿಕ್ಕ ಚಿಕ್ಕ ದ್ವೀಪಗಳು, ಅಲ್ಲೀಗ
ಮಸಣ ಮೌನದ್ದೇ ಕಾರುಭಾರು
ನಾಳೆಯ ಭರವಸೆಯಿಲ್ಲ
ಅನ್ನ ನೀರಿಲ್ಲದೆ ನಡುಗಡ್ಡೆ ಊರಲ್ಲಿ
ಸಾಂಕ್ರಾಮಿಕ ರೋಗಗಳದ್ದೇ ಕೈಮೇಲು
ನಡುಗಡ್ಡೆಯಲಿ ನರಳುವವರ
ಕೈಹಿಡಿದು ಮೇಲೆತ್ತಲಾರದ?
ವಿಧೀಯ ಅಟ್ಟಹಾಸ.
ಮಳೆರಾಯನ ಮುನಿಸಿಗೆ
ಪ್ರಕೃತಿಯ ರೌದ್ರಾವತಾರ
ನಲುಗಿದ ಜನಜೀವನ ತಲ್ಲಣ.
ಕಿತ್ತುಹೋದ ಸಂಪರ್ಕ ಸೇತುಗಳು,
ಸರ್ಕಾರದ ಪರಿಹಾರವಿನ್ನೂ
ಕನ್ನಡಿಯೊಳಗಿನ ಗಂಟು
ಸಂತ್ರಸ್ಥರ ಕೈಗೆ ಹೇಗೆ ಸಿಕ್ಕೀತು?
ಭರವಸೆಯ ಮಾತುಗಳು
ಬಿದ್ದಗೋಡೆಗಳಡಿಯಲ್ಲಿ ಶವವಾದವರು
ಅವರೆಂದೂ ಬಾರದ ದಾರಿಯಲಿ.
*****



















