೧
ಕೆಲಸ ಬೊಗಸೆ ಮುಗಿಸಿ ನಾನು
ಬಯಲ ಬೆಳಕ ಬಯಸಿ ನಾನು
ದೇವರೊಲುಮೆಗೆಳಸಿ ನಾನು
ದಿನವು ದಿನವು ಬೆಳಗಿನಲ್ಲಿ ಮನೆಯ ಬಿಡುವೆನು
ಕುಣಿವ ಕುಲಮನಗಳಿಂದ ತಣಿಯುತಿರುವೆನು
೨
ಮಾನ ಧನದ ಪ್ರಾಣಿಯೊಂದು
ಸೇನೆ ಸೇರಿ ಸರಗಿ ಒಂದು
ಶಿರದ ಮೇಲೆ ಸೆಣಸಿ ನಿಂದು
ಕಿರಿದು ನಾದ ಬೀರಿ ನನ್ನ ತಲುಬುತಿರುವುದು
ಬರಿದೆ ಬೆದರ ತೋರೆ ನಾನು ಬೆದರದಿರುವುದು
೩
ಮೈಲು ಮೈಲು ಮೈಲು ಮತ್ತೆ
ಮೈಲ ಮೂರ ಮುಗಿಸಿ ನಿಂದೆ
ಮೈಲನಾರ ಬಳಸಿ ಬ೦ದೆ
ತಲೆಯ ಬಳಿಸಿ ವಲಯಗಟ್ಟಿ ತೇಲುತಿರುವುದು
ಛಲದ ಪಂಥಪಾಡುಗಳನ್ನು ಪಾಡುತಿರುವುದು
೪
ಮಾಡಲೇನು ಮೊಟ್ಟ ಮೊದಲು
ಸಿಟ್ಟಿನಿ೦ದ ಬಿಟ್ಟು ಬಿಡದೆ
ಪೆಟ್ಟನಿತ್ತು ಬಟ್ಟೆಗೆಡಿಸೆ
ರೊಚ್ಚಿನಿಂದ ತುಚ್ಛಮಾಡಿ ಮುಚ್ಚಿಬರುವುದು
ಬಿಚ್ಚಿ ಬಿಚ್ಚಿ ಬೀರ ಸಿರಿಯ ಪೆರ್ಚಿ ತೋರ್ಪುದು
೫
ನಿಲ್ಲು ನಿಲ್ಲು ಬಲ್ಲೆ ನಿನ್ನ
ಭುಲ್ಲವಿಸುತಲೇರಿ ಬರುವ
ಮಲ್ಲಯುದ್ಧ ಹೊಲ್ಲೆನೆಂದು
ಕೊಡೆಯ ಕೋಲ ಕೈದಿನಿಂದೆ ಕಾದುತಿರ್ದೆನು
ಕದನದಿಂಪು ಕದಲದಂತೆ ತೋರಿಸೆಂದೆನು
೬
ಪ್ರಾಣಿ ಸಣ್ಣದಾದರೇನು
ಪ್ರಾಣ ತೊರೆವ ಸಿರಿಯನರಿಯೆ
ಕ್ಷೋಣಿಯಲ್ಲಿ ಎಣೆಯ ಕಾಣೆ
ನಾಣಿನಿಂದ ಶಿರವ ನಾನೆ ಮಣಿಸುತಿರ್ದೆನು
ಕಣದೆ ವೀರಜೋವಿ ಸಿರಿಯನರಿಯುತಿರ್ದೆನು
೭
ಹೆರರ ಸೀಮೆ ನರರು ಸೇರೆ
ಹರಿದು ಹಾಯ್ದ ಹದನವರಿಯೆ
ಹಿರಿದು ಕಿರಿದು ಮಾತದಲ್ಲ
ಸಣ್ಣ ನೊಣವು ಬಣ್ಣಗೆಡದೆ ತನ್ನ ಸೀಮೆಯ
ಸಾರಿ ದೂರಿ ಪೂರೆದ ಸಿರಿಯ ದಾಸನರಿವನೆ
೮
ದಾಸನಾದೆನೆಂತೊ ನಾನು
ನೀತಿ ಶಾಸ್ತ್ರ ಓದಿನೋಡೆ
ಮಾತೆ ಬಾರದಕಟ ದೇವ
ನಾಡವಾಭಿಮಾನರಾಜತೇಜವಡಗಲು
ನಾಡಿನಲ್ಲಿ ಹೇಡಿತನವು ಬೀಡುಗೊ೦ಡಿತು
೯
ಹನಿಯು ಬೀಳೆ ಹುಟ್ಟಿ ಬೆಳೆದು
ಮನೆಯ ಮಾಡಿ ಹುಲ್ಲಿನಲ್ಲಿ
ಜಡಿಯ ಮಳೆಯು ಜಡಿದು ಬೀಳೆ
ಬಿಸಿಯ ಬಿಸಿಲು ವಸುಧೆಗೇರ ನಶಿಸಿಪೋಪುದು
ಹಸರು ಹಸಿಯ ಹುಲ್ಲಿನೊಡನೆ ಬಸೆದು ಬರುವುದು
೧೦
ಬದುಕಿ ಬಾಳ್ವ ಕಾಲ ಕಡಿಮೆ
ಯಾಗಿ ಇಳೆಯೊಳಳಿದರೇನು
ಗಳಿಗೆ ಹೊತ್ತು ಬೆಳಕು ತೋರಿ
ತನುವ ಸದೆಗೆ ಸಾಟಿಮಾಡಿ ಮಡಿವುದೈಸಲೆ
ಜನಪದಸ್ಯ ಸೇವೆಗಿಂತ ಸಾವು ಲೇಸಲೆ
೧೧
ಹರೆಯ ರಕುತ ಹಾರಿ ಹರಿದ
ಧರೆಯ ಸಿರಿಯ ತರುಣರೆಲ್ಲ
ವೀರ ನರವ ಮಿಡಿಸಿ ನುಡಿಸೆ
ನಾಡ ಸಿರಿಯ ನಾಡಿನಲ್ಲಿ ಹಾಡಿ ಬರುವುದು
ನಾಡ ದಾಸತನದ ಬೇಡಿ ಹಾದಿ ಹಿಡಿವುದು
*****