೧
ಜೀವಕ್ಕೆ ಕಳೆ ಕಡಮೆ ಇರುವದುಂಟು
ಭಾವಕ್ಕು ಹುಸಿಬಣ್ಣ ಬರುವದುಂಟು.
ಜೀವಭಾವಕ್ಕೊಂದು ಸಾಂಗತ್ಯವಿಲ್ಲದಿರೆ
ಅಪಸರದ ಮಾಲೆಯನು ತರುವದುಂಟು.
ಹೀಗಿಹುದ ನೋಡಿಹೆನು-ಎಂದಮೇಲೆ,
“ಹಾಳಿಗೂ ಬಾಳುಂಟೇ?”
ಉಂಟು, ಉಂಟು!
೨
ನಾಲಗೆಗೆ ನಿಲುಕದಾ ನುಡಿಗಳುಂಟು
ನುಡಿಗಳಿಗು ನಿಲುಕದಾ ಭಾವವುಂಟು.
ಭಾವಗಳ ಬೀಸುಬಲೆಯಲ್ಲಿ ದೊರೆಯದೆ ನುಸುಳಿ
ದಾಟಿರುವ ನೈಜ ಬೇರೊಂದು ಉಂಟು
ಹೀಗೆಂದು ಕೇಳಿದೆನು-ಎಂದ ಮೇಲೆ
“ಮೌನಕ್ಕೆ ಮಾತುಂಟೆ?”
ಉಂಟು, ಉಂಟು!
*****


















