ಏಳು ಮಾತೆ
ಜನ್ಮದಾತೆ
ಹೇ ಸ್ನೇಹದ ಮೂರುತಿ |
ಕೇಳಿ ಬಂದೆ
ತಾಯೆ, ನಿನ್ನ
ಮೊಲೆ ಹಾಲಿನ ಕೀರುತಿ |
(೨)
ತನ್ನ ರಕ್ತ ತಾನೆ ಹೀರಿ
ತನ್ನ ಮಾಂಸ ತಾನೆ ಸವರಿ
ನಿಂತಿರುವಳು ಪೃಥ್ವಿಗೌರಿ
-ಬರಿ ಎಲುಬಿನ ಹಂದರ !
ಚೀರುತಿಹುದು ಜೀವ ಹಲುಬಿ
-ನಾ ಕಂಬನಿ ಕಂದರ
(೩)
ಬುವಿಯೆದುರಿಗೆ ಬಾನಗುವರಿ
ನುಂಗಿ ತನ್ನ ಕಿರಣಲಹರಿ
ಮಂಗಲವನು ಮುರಿದ ಮಾರಿ
-ಅದೊ ಭೀಕರ ಶರ್‍ವರಿ |
ಕಣ್ಣಿಂಗಿರೆ ನಿಂತಿರುವಳು
ಯಮರಾಜನ ಸೋದರಿ!
(೪)
ಭೀತ ವಿಶ್ವಕೇಳುತಿಹುದು
ನಿನ್ನ ಸೆರಗಿನಾಸರೆ
ಎದೆ ಹಸಿದಿದೆ ಹರಿದು ಬರಲಿ
ಮೊಲೆ ಹಾಲಿನ ಸವಿದೊರೆ
ನಿನ್ನ ವಿನಾ ಜೀವೆವೆಲ್ಲಿ
ನಿನ್ನ ವಿನಾ ಭಾವವೆಲ್ಲಿ
ನೀ ಕಾಯುವ ಕಲ್ಪವಲ್ಲಿ
ನಂಜುಂಡನ ಕಂಗಳು
ಉರಿಯುತಿಹವು; ಬಾರೆ, ನೀನೆ
ಗೌರಿ ಗಂಗೆ ತಿಂಗಳು !
*****



















