ಇದು ಜಯಂತ ಕಾಯ್ಕಿಣಿ ಹೇಳಿದ ಕಥೆ:
ಆದೊಂದು ಆತ್ಯಾಧುನಿಕ ಆಫೀಸು. ದೂಳಿನ ಕಣವೂ ಕಾಣದ ಹವಾ ನಿಯಂತ್ರಿತ ಕಟ್ಟಡ. ಜಗಮಗಿಸೊ ದೀಪಗಳು. ಅಧಿಕಾರಿಯೊಬ್ಬ ತನ್ನ ಚೇಂಬರ್‌ನಲ್ಲಿ ಕುಳಿತು ಕಂಪ್ಯೂಟರ್‌ನಲ್ಲಿ ಮುಳುಗಿಹೋಗಿದ್ದಾನೆ. ಆಷ್ಟರಲ್ಲಿಯೇ ಫೋನು. ‘ನಿಮ್ಮ ಗೆಳೆಯರಂತೆ. ನಿಮ್ಮನ್ನು ಕಾಣಬೇಕಂತೆ-’ ಎನ್ನುವ ಸ್ವಾಗತಕಾರಿಣಿಯ ಸಂದೇಶ. ಯಾವುದೋ ಧ್ಯಾನದಲ್ಲಿ ಒಳಗೆ ಕಳಿಸಿ ಎಂದ. ಒಳಗೆ ಬಂದ ವ್ಯಕ್ತಿ ಹಳ್ಳಿಯವನಂತಿದ್ದ. ಉಟ್ಟಿದ್ದ ಪಂಚೆ ಮಾಸಲು ಮಾಸಲು. ಬೆವರು ಮುಖವನ್ನು ಒರೆಸಿಕೊಳ್ಳುತ್ತಾ ನಿಂತವನು ಪರಿಚಯದ ನಗೆ ನಕ್ಕ. ಅಧಿಕಾರಿ ನಗಲಿಲ್ಲ. ತನ್ನ ನಗೆಗೆ ಉತ್ತರ ದೊರಕದ ಕಾರಣ ಮತ್ತೆ ಪೆಚ್ಚುನಗೆ ನಕ್ಕು- ‘ಯಾಕೆ ಗುರುತು ಸಿಗಲಿಲ್ಲವಾ?’ ಎಂದ. ಅಧಿಕಾರಿ ತಲೆ ಅಲ್ಲಾಡಿಸಿದ. ‘ನಾನು… ನಿ..ಮ್ಮ ಬಾಲ್ಯಸ್ನೇಹಿತ… ಒಂದೇ ಸ್ಕೂಲು, ಬೆಂಚು…. ಮಾವಿನ ತೋಪು… ಗೋಲಿ….’ ಹಳ್ಳಿಯವನು ನೆನಪಿಸುತ್ತಾ ಹೋದ. ನೆನಪಿಸಿಕೊಳ್ಳುವ ಗೋಜಿಗೆ ಹೋಗದ ಅಧಿಕಾರಿ ‘ಇಲ್ಲಿ ಎಲ್ಲಿಗೆ ಬಂದಿದ್ದೆ? ಏನು ವಿಷಯ?’ ಎಂದು ಪ್ರತ್ನಿಸಿದ. ‘ಇಲ್ಲೇ ಸ್ವಲ್ಪ ಕೆಲಸ ಇತ್ತು…’ ಮತ್ತೆ ಪಚ್ಚುನಗೆ. ‘ಹಳೆಯ ಪರಿಚಯ ಹೇಳಿಕೊಂಡು ದುಡ್ಡು ಕೀಳುವ ತಂತ್ರವಾ?’ ಅಧಿಕಾರಿ ಮತ್ತೆ ಕಂಪೂಟರ್‌ನಲ್ಲಿ ಕಣ್ಣು ನೆಟ್ಟ. ಅಷ್ಟರಲ್ಲಿ ಕರೆಂಟು ಹೋಯಿತು. ಒಮ್ಮಗೆ ನಿಶ್ಶಬ್ಬ, ಗಡಗಡ ಎನ್ನುವ ಯಂತ್ರಗಳೆಲ್ಲ ಸ್ತಬ್ದ ಜಗಮಗ ಬೆಳಗುವ ದೀಪಗಳಿಗೆ ನಿದ್ದೆ ಕತ್ತಲು. ಆದೇಕೋ ಜನರೇಟರ್ ಸದ್ದು ಕೇಳಿಸಲಿಲ್ಲ. ಹುಡುಗನೊಬ್ಬ ಮೇಣದ ಬತ್ತಿ ಬೆಳಗಿಸಿ ಹೋದ. ಚೇಂಬರ್‌ನ ತುಂಬಾ ಮೇಣದ ಬತ್ತಿಯ ಬೆಳಕು ತುಂಬಿಕೊಂಡಿತು. ಆ ಬೆಳಕಿನಲ್ಲಿ ಎದುರಿಗೆ ನಿಂತಿದ್ದ ವ್ಯಕ್ತಿಯ ಮುಖ ನೋಡಿದ ಆಧಿಕಾರಿ ಸಂತೋಷದಿಂದ ಕೂಗಿದ- ‘ಆರೆ ರಾಮು… ನೀನಿಲ್ಲಿ.. ಯಾವಾಗ ಬಂದೆ?’.
ಕಥೆ ಅಲ್ಲಿಗೆ ಮುಗಿಯುತ್ತದೆ. ಆಧುನಿಕತೆಯ ಸೆರಗು ನಮ್ಮ ಪ್ರಜ್ಞೆಯನ್ನು ಮಾಯಯಾಗಿ ಕವಿದುಕೊಂಡಿರುವ ದುರಂತವನ್ನು ಹೇಳುವುದು ಹಾಗೂ ಈ ಮಾಯೆಯಿಂದ ವಾಸ್ತವ ಪರಿಸರಕ್ಕೆ ಬರಲು ಅಗತ್ಯವಿರುವ ಮೇಣದ ಬತ್ತಿಯ ಬೆಳಕಿನ ಅಗತ್ಯವನ್ನು ಹೇಳುವುದು ಕಾಯ್ಕಿಣಿಯವರ ಉದ್ದೇಶ.
ಕಾಯ್ಕಿಣಿ ಆವರು ಮೇಲಿನ ಕಥೆ ಹೇಳಿದ್ದು ಜನವರಿ ೩೧, ೨೦೦೧ ರಂದು. ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದ ಸಭಾಂಗಣದಲ್ಲಿ ಜರುಗಿದ ಪುಟ್ಟ ಸಮಾರಂಭದಲ್ಲಿ. ವರಕವಿ ಬೇಂದ್ರೆ ಆವರ ಜನ್ಮದಿನದ ಅಂಗವಾಗಿ ಜರುಗಿದ ‘ಕವಿದಿನ’ ಆಚರಣೆಯ ಸಮಾರಂಭವದು. ಮಂಗಳೂರು, ಅರಸೀಕೆರೆ, ಕೋಲಾರ, ಶಿವಮೊಗ್ಗ, ಗುಲ್ಬರ್‍ಗ… ಹೀಗೆ ನಾಡಿನ ವಿವಿಧ ಭಾಗಗಳಿಂದ ಕಾರ್ಯಕ್ರಮಕ್ಕೆಂದೇ ಆಗಮಿಸಿದ್ದ ಯುವ ಲೇಖಕರು ಅಲ್ಲಿದ್ದರು. ಆತಿಥ್ಯ ‘ಸಂಚಯ’ ಬಳಗದ್ದು. ನೆರೆದಿದ್ದ ಯುವ ಬರಹಗಾರರನ್ನು ಉದ್ದೇಶಿಸಿ, ತಾವೆಲ್ಲೋ ಎಂದೋ ಓದಿದ ಕಥೆಯನ್ನು ಕಾಯ್ಕಿಣಿ ನೆನಪಿಸಿಕೊಂಡಿದ್ದು ‘ಸಂಚಯ’ ಸಾಂಸ್ಕೃತಿಕ ನಿಯತಕಾಲಿಕೆಯ ಕುರಿತು ಪ್ರಾಸಂಗಿಕವಾಗಿ ಮಾತನಾಡುವಾಗ.
‘ಸಂಚಯ’ದಂಥ -ಕಿರು ಪತ್ರಿಕೆಗಳು ನಾಡಿನ ಸಾಂಸ್ಕೃತಿಕ ಪರಿಸರಕ್ಕೆ ಹಣತೆಯ ರೀತಿಯಲ್ಲಿ / ಮೇಣದ ಬತ್ತಿಯ ರೀತಿಯಲ್ಲಿ ಬೆಳಕು ಚೆಲ್ಲುತ್ತವೆ. ದೊಡ್ಡ ಪತ್ರಿಕೆಗಳದು ಪ್ರಜ್ಞೆಗೆ ಮಂಕು ಕವಿಸುವ ವಿದ್ಯುತ್ ದೀಪದ ಬೆಳಕು ಎಂದು ಕಾಯ್ಕಿಣಿ ಹೇಳಿದರು.
‘ಸಂಚಯ’ ಪತ್ರಿಕೆಯನ್ನು ನೋಡಿದಾಗಲೆಲ್ಲ ಕಾಯ್ಕಿಣಿ ಹೇಳಿದ ಮೇಣದಬತ್ತಿಯ ಕಥೆ ನನಪಿಗೆ ಬರುತ್ತದೆ. ಪ್ರತಿಯೊಂದು ಪುಟವನ್ನೂ ದುಡ್ಡಿನ ಲೆಕ್ಕಾಚಾರದಲ್ಲೇ ರೂಪಿಸುವ ನಂ. ೧,೨,೩ ಪತ್ರಿಕೆಗಳನ್ನು ನೋಡಿದಾಗಲೆಲ್ಲ ‘ಸಂಚಯ’ದ ಮಹತ್ವ ಕಣ್ಣಿಗೆ ಕಟ್ಟುತ್ತದೆ.
* * *
‘ಸಂಚಯ’ ಒಂದು ಸಾಂಸ್ಕೃತಿಕ ತ್ರೈಮಾಸಿಕ. ‘ಜೀವನ’, ‘ಸಾಕ್ಷಿ’, ‘ಸಂಕ್ರಮಣ’ಗಳ ಸಾಲಿನಲ್ಲಿ ಗುರ್‍ತಿಸಿಕೊಳ್ಳುವಂತ ಪತ್ರಿಕೆ. ವರ್ತಮಾನದ ಸಾಂಸ್ಕೃತಿಕ ತುರ್ತುಗಳಿಗೆ ಸ್ಪಂದನವಾಗಿ, ಯುವ ಅನ್ನಿಸಿಕೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿರುವ ಪತ್ರಿಕೆ- ‘ಸಂಚಯ’ ಶುರುವಾದದ್ದು ೧೯೮೭ ರಲ್ಲಿ ಸಾಮಾನ್ಯವಾಗಿ ಎಲ್ಲ ಸಾಂಸ್ಕೃತಿಕ ಪತ್ರಿಕೆಗಳು ಹುಟ್ಟುವಂತೆ ‘ಸಂಚಯ’ ಕೂಡ ಗೆಳೆಯರ ಗುಂಪಿನ ಸಂಜೆಯ ಮಾತಿನಮಂಟಪದಲ್ಲಿ ಹುಟ್ಟಿತು. ೧೯೮೬ ನೇ ಇಸವಿಯ ನವಂಬರ್ ೨೩ ರ ಸಂಜೆ, ಮಾತಿನ ಜೋರಿನಲ್ಲಿ ಪರಿಸರದ ತಂಪನ್ನು ಬಿಸಿ ಮಾಡುತ್ತಿದ್ದ ಗೆಳೆಯರ ಗುಂಪಿಗೆ- ತಾವೊಂದು ಬಳಗವನ್ನು ರೂಪಿಸಿಕೊಳ್ಳುವ ಯೋಚನೆ ಹೊಳೆಯಿತು. ಆ ಗೆಳೆಯರ ಆಸಕ್ತಿಗಳೋ ತರಾವರಿ. ಸಾಹಿತ್ಯ, ಸಂಗೀತ, ಚಿತ್ರಕಲೆ ಮುಂತಾದೆಡೆ ಹಸಿರು ಕಂಡಲ್ಲೆಲ್ಲ ಹರಿವ ಹುಮ್ಮಸ್ಸಿನ ವಯಸ್ಸು. ಆ ಉತ್ಸಾಹದಲ್ಲಿಯೇ ರೂಪುಗೊಂಡಿತು- ‘ಸಂಚಯ ಸಾಹಿತ್ಯಾಸಕ್ತರ ಬಳಗ’.
ಬರಹಗಾರರ ಬಳಗ ಪತ್ರಿಕೆ ಹೊರತರಲಿಕ್ಕೆ ವಿಳಂಬವೇನಾಗಲಿಲ್ಲ ೧೯೮೭ ರ ಜೂನಿನ್ನಲ್ಲಿ ‘ಸಂಚಯ’ ಪತ್ರಿಕೆಯ ಮೊದಲ ಸಂಚಿಕೆ ಪ್ರಕಟವಾಯಿತು- ಝೆರಾಕ್ಸ್ ಪತ್ರಿಕೆಯಾಗಿ ಆರಂಭದಲ್ಲಿ ಕಾಣಿಸಿಕೊಂಡ ‘ಸಂಚಯ’, ಎರಡು ತಿಂಗಳಿಗೊಮ್ಮೆ ಪ್ರಕಟವಾಗುತ್ತಿತ್ತು. ಪತ್ರಿಕೆ ಬೆಳೆದಂತೆ, ಪತ್ರಿಕೆಯ ಹಿಂದಿನ ಮನಸ್ಸುಗಳು ಮಾಗಿದಂತೆ, ‘ಸಂಚಯ’ ಮುದ್ರಣ ರೂಪಕ್ಕೆ ಬದಲಾಯಿತು. ಪ್ರಸ್ತುತ ‘ಸಂಚಯ’ ಮೂರು ತಿಂಗಳಿಗೊಮ್ಮೆ ಪ್ರಕಟವಾಗುತ್ತಿದೆ.
ಸಮೃದ್ಧ ಇತಿಹಾಸ ಹೊಂದಿರುವ ಕನ್ನಡ ಸಾರಸ್ವತ ಲೋಕ ಹಾಗೂ ಪತ್ರಿಕೋದ್ಯಮಕ್ಕೆ ‘ಸಂಚಯ’ದಂಥ ಪತ್ರಿಕೆ ಹೊಸತೂ ಅಲ್ಲ ಅಚ್ಚರಿಯೂ ಅಲ್ಲ. ‘ಸಂಚಯ’ದ ಹಿಂದೆ ಅನೇಕ ಪತ್ರಿಕೆಗಳ ಹೆಜ್ಜೆಗುರುತುಗಳಿರುವುದೂ ನಿಜ. ‘ಸಂಚಯ’ದ ಅನನ್ಯತೆಯಿರುವುದು ಅದರ ಹದಿನಾರಾಣೆ ಸಾಹಿತ್ಯಪ್ರೀತಿ ಹಾಗೂ ಸ್ಪಂದನದಲ್ಲಿ. ‘ಸಂಚಯ’ ಮಡಿವಂತ ಸಾಹಿತ್ಯ ಪತ್ರಿಕೆಯಲ್ಲ, ಘೋಷಣೆಗಳ ಶಂಖವೂ ಅಲ್ಲ. ಯಾವುದೇ ಸಿದ್ಧಾಂತಗಳಿಗೆ ಕಟ್ಟುಬೀಳದ ‘ಸಂಚಯ’ ಪ್ರಯೋಗಶೀಲತೆಯಲ್ಲಿ ಪಕ್ವವಾಗುತ್ತಾ ಸಾಗಿರುವ ಪತ್ರಿಕೆ. ವರ್ತಮಾನದ ತವಕ ತಲ್ಲಣಗಳಿಗೆ ಸಾಹಿತ್ಯದ ಸ್ಪಂದನವನ್ನು ದಾಖಲಿಸುವುದು ‘ಸಂಚಯ’ದ ಮಹತ್ವದ ಕೆಲಸಗಳಲ್ಲೊಂದು. ಈ ನಿಟ್ಟಿನಲ್ಲಿ- ‘ಸಂಚಯ’ದ ಮಾಹಿತಿ ತಂತ್ರಜ್ಞಾನದ ಬಗೆಗಿನ ವಿಶೇಷ ಸಂಚಿಕೆ, ಜಾಗತೀಕರಣದ ಬಗೆಗಿನ ಲೇಖನಗಳು ಉಲ್ಲೇಖನೀಯ. ಹೆಚ್ಚು ಚರ್‍ಚೆಯಾಗದ ಬರಹಗಾರರ ಸಾಹಿತ್ಯದ ಕುರಿತು ‘ಸಂಕಿರಣ’ ಎನ್ನುವ ಶೀರ್‍ಷಿಕೆಯಲ್ಲಿ ‘ಸಂಚಯ’ ಪ್ರಕಟಿಸುತ್ತಿರುವ ವಿಮರ್ಶೆ ಮತ್ತೊಂದು ಕುತೂಹಲಕರ ನಡೆ. ‘ಸಂಚಯ’ದ ಪುಟಗಳನ್ನು ತಿರುವಿಹಾಕಿದರೆ, ಪ್ರತಿಪುಟದಲ್ಲೂ ತಾಜಾ ಮನಸ್ಸುಗಳ ಲವಲವಿಕೆಯನ್ನು ಕಾಣಬಹುದು. ನಾಡಿನುದ್ದಕ್ಕೂ ಪತ್ರಿಕೆ ತನ್ನದೇ ಆದ ಜೀವಂತ ಓದುಗ/ ಲೇಖಕ ಬಳಗವನ್ನು ಸೃಷ್ಟಿಸಿದೆ. ಅದು ಪತ್ರಿಕೆಯ ಸಾಧನೆ, ಗೌರವ.
‘ಸಂಚಯ’ ಪತ್ರಿಕೆಯ ಇನ್ನೊಂದು ವಿಶೇಷ ಅದರ ಸಾಹಿತ್ಯ ಸ್ಪರ್ಧೆಗಳು. ೧೯೯೪ ರಿಂದ ಪ್ರತಿವರ್ಷವೂ ನಡೆಯುತ್ತಿರುವ ‘ಸಂಚಯ’ ಸಾಹಿತ್ಯ ಸ್ಪರ್ಧೆಗಳದು ಎರಡು ಬಗೆಯ ಸಾರ್ಥಕತೆ. ಮೊದಲನೆಯದು ಸ್ಪರ್ಧೆಯ ಮೂಲಕ ಯುವ ಬರಹಗಾರರಿಗೆ ಪ್ರೋತ್ಸಾಹ. ಎರಡನೆಯದು, ಯುವ ಪ್ರತಿಭೆಗಳ ನಡುವೆ ಸ್ನೇಹ ಸಂಪರ್ಕದ ಬೆಸುಗೆ. ಕವನ, ಲೇಖನ ಹಾಗೂ ಸಣ್ಣಕಥೆ ಸ್ಪರ್ಧೆಗಳನ್ನು ನಡೆಸುತ್ತಿರುವ ಪತ್ರಿಕೆ, ಬಹುಮಾನಿತ ಬರಹಗಳ ವಿಶೇಷ ಸ೦ಚಿಕೆಯನ್ನು ಪ್ರಕಟಿಸುತ್ತದೆ. ಕೆಲವು ವರ್ಷಗಳಿಂದ ನಿಯಮಿತವಾಗಿ ಜನವರಿ ೩೧ ರಂದು ಬುಹುಮಾನ ಪ್ರದಾನ ಸಮಾರಂಭವನ್ನು ನಡೆಸುತ್ತಿದೆ. ಯುವ ಕವಿಗಳ ಸಮ್ಮಿಲನೊಂದಿಗೆ ಬೇಂದ್ರೆಯವರ ಜನ್ಮದಿನವನ್ನು ‘ಕವಿದಿನ’ವನ್ನಾಗಿ ಆಚರಿಸುವುದು ‘ಸಂಚಯ’ದ ಉದ್ದೇಶ.
ಪತ್ರಿಕೆಯಾಗಿ ಮಾತ್ರವಲ್ಲದೆ ಪ್ರಕಾಶನ ಕ್ಷೇತ್ರದಲ್ಲೂ ‘ಸಂಚಯ’ ತನ್ನ ಅಳಿಲು ಕರ್ತವ್ಯ ಮಾಡುತ್ತಿದೆ. ಸಂಚಯದ ಬಹುಪಾಲು ಪ್ರಕಟಣೆಗಳು ಯುವ ಕವಿಗಳ ಕವನ ಸಂಕಲನಗಳೆನ್ನುವುದು ಪ್ರಕಟಣೆಯಲ್ಲಿನ ಬದ್ಧತೆಗೆ ಸಾಕ್ಷಿ. ಕಾವ್ಯಕ್ಷೇತ್ರದಲ್ಲಿ ಜಿ.ಕೆ.ರವೀದ್ರಕುಮಾರರಿಗೆ ಹೆಸರು ದೊರಕಿಸಿಕೊಟ್ಟ ‘ಸಿಕಾಡ’ ಸಂಚಯದ ಪ್ರಕಟಣೆ. ಕನ್ನಡದ ಪ್ರಸಿದ್ದ ಲೇಖಕರೊಂದಿಗಿನ ಸಂದರ್ಶನ ಬರಹಗಳ ‘ಬಗೆ ತೆರೆದ ಬಾನು’, ಸು.ರಂ. ಎಕ್ಕುಂಡಿಯವರ ಅನುವಾದಿತ ಕವಿತೆಗಳ’ ‘ಮೌನದ ಹೊತ್ತು’, ಚಿ.ಶ್ರೀನಿವಾಸರಾಜು ಅವರ ‘ಎರಡು ಏಕಾಂಕಗಳು’, ಶಾಂತಿನಾಥ ದೇಸಾಯಿ ನೆನಪಿನ ಸಂಪುಟ ‘ಮುಕ್ತಚಂದ’, ಲೇಖನಗಳ ಸಂಗ್ರಹ ‘ಎ.ಕೆ.ರಾಮಾನುಜನ್ ಹೆಜ್ಜೆ ಗುರುತು’- ಸಂಚಯದ ಇತರೆ ಪ್ರಮುಖ ಪ್ರಕಟಣೆಗಳು. ಈ ಎಲ್ಲ ಪ್ರಕಟಣೆಗಳಿಗೆ ಶಿಖರಪ್ರಾಯದಂತೆ ಸು. ರಂ. ಎಕ್ಕುಂಡಿಯವರ ಸಮಗ್ರ ಕಾವ್ಯವನ್ನೂ ‘ಸಂಚಯ’ ಹೊರತಂದಿದೆ.
* * *
‘ಸಂಚಯ’ ಪತ್ರಿಕೆಯ ಹಿಂದಿನ ಶಕ್ತಿ ಪತ್ರಿಕೆಯ ಸಂಪಾದಕ ಡಿ.ವಿ.ಪ್ರಹ್ಲಾದ್. ಪತ್ರಿಕೆ ಶುರುವಾದಾಗ ಜೊತೆಗಿದ್ದ ಗೆಳೆಯರ ಗುಂಪು ಕರಗಿ ಒಂಟಿಯಾದರೂ ‘ಸಂಚಯ’ದ ನಂಟು ಉಳಿಸಿಕೊಂಡವರು ಪ್ತಹ್ಲಾದ್. ಸಂಚಯ ಪತ್ರಿಕೆಯ ಕುರಿತ ಪ್ರತಿ ಮಾತೂ ಪ್ರಹ್ಲಾದ್ ಅವರನ್ನು ಕುರಿತ ಮಾತೇ ಆಗುವುದು- ಪತ್ರಿಕೆ ಹಾಗೂ ಸಂಪಾದಕನ ನಂಟಿಗೆ ಸಾಕ್ಷಿ.
ಪ್ರಪ್ಲಾದ್ ವೃತ್ತಿನಿರತ ಪತ್ರಕರ್ತರಲ್ಲ; ಪ್ರವೃತ್ತಿಯಿಂದ ಪತ್ರಕರ್ತರು. ಕಥೆಗಾರರು ಕೂಡ. ಕವಿತೆಯನ್ನೂ ಬರೆದಿದ್ದಾರೆ. ‘ಡ್ರೀಮರ್’ ಹಾಗೂ ‘ನಾಳೆಯಿಂದ’ ಎನ್ನುವ ಚಂದದ ಕವನಗಳ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಸಾಂಸ್ಕೃತಿಕ ವ್ಯಾಕರಣದ ವರ್‍ಣಮಾಲೆ ಬಲ್ಲ ಯಾರು ಸಿಕ್ಕರೂ ಸಾಹಿತ್ಯ ಹಾಗೂ ಸಾಹಿತ್ಯ ಸಂದರ್ಭದ ಬಗ್ಗೆ ಮಾತಿಗೆ ನಿಲ್ಲುತ್ತಾರೆ. ‘ಸಂಚಯ’ದ ಹೊಸ ಸಾಧ್ಯತೆಗಳು-ಕನಸುಗಳನ್ನು ಹಂಚಿಕೊಳ್ಳುತ್ತಾರೆ. ನೀವೊಂದು ಲೇಖನ/ಕವಿತೆ ಕೊಡಿ ಎಂದು ಜೋಳಿಗೆಗೆ ಕೈಹಾಕುತ್ತಾರೆ. ಬೀಳ್ಕೊಡುವ ಮುನ್ನ ಸಂಚಯದ ಹೊಸ ಪ್ರತಿ ಕೈಗಿಡುತ್ತಾರೆ. ಓದಿ ಪತ್ರ ಬರೆಯಿರಿ ಎನ್ನುತ್ತಾರೆ.
ಒಂದು ಸಾಂಸ್ಕೃತಿಕ ಪತ್ರಿಕೆಯನ್ನು ನಡೆಸುವುದು ತಮಾಷೆಯ ಮಾತಲ್ಲ. ಮೂರ್ಖರು ಅಥವಾ ಅಂಗಳದಲ್ಲಿ ದುಡ್ಡಿನ ಗಿಡ ನೆಟ್ಟವರು ಮಾತ್ರ ಸಾಂಸ್ಕೃತಿಕ ಪತ್ರಿಕೆಯನ್ನು ನಡೆಸುತ್ತಾರೆ. ಪ್ರಹ್ಲಾದ್ ಮೂರ್ಖರೂ ಅಲ್ಲ, ಅವರ ಮನೆಯಂಗಳದಲ್ಲಿ ದುಡ್ಡಿನ ಗಿಡವೂ ಇಲ್ಲ. ಪತ್ರಕರ್‍ತನ ವೇಷದಲ್ಲಿ ಕಂಗೊಳಿಸುವ ‘ಸಂಭಾವಿತ’ ಪತ್ರಕರ್ತರ ಯಾದಿಯಲ್ಲಿ ಮಿಂಚುವ ಚಪಲವೂ ಅವರದಲ್ಲ. ಸಣ್ಣದೊಂದು ಮಾರ್ಕೆಟಿಂಗ್ ಕಂಪನಿ ನಡೆಸುತ್ತಿರುವ ಮೂವತ್ತು ಪ್ಲಸ್ ವಯಸ್ಸಿನ ಪ್ರಹ್ಲಾದ್ ಬೆಂಗಳೂರಿನ ಮಧ್ಯಮ ವರ್ಗದ ಪ್ರಜೆ. ಹೆಂಡತಿ ಮಕ್ಕಳುಳ್ಳ ಸಂಸಾರಸ್ಥ. ಹಗಲಿಡೀ ಕಾರ್ಯಕಾರಣ ಕಂಪನಿಯಿಂದ ಕಂಪನಿ ಸುತ್ತುವ ಪ್ರಹ್ಲಾದ್, ರಸ್ತೆಯಲ್ಲಿ ಗಾಡಿ ಓಡಿಸುವಾಗಲೂ ಯೋಚಿಸುವುದು ಸಾಹಿತ್ಯದ ಕುರಿತೇ. ಈ ಪ್ರೀತಿಯಿಂದಾಗಿ ಹಾಗೂ ಕನಸು ಕಾಣುವ ಗುಣದಿಂದಾಗಿ ಪ್ರಹ್ಲಾದ್ ‘ಸಂಚಯ’ದಂಥ ಪತ್ರಿಕೆ ರೂಪಿಸಲು ಸಾಧ್ಯವಾಗಿದೆ. ಪತ್ರಿಕೆ ಅವರ ಪಾಲಿಗೊಂದು ಬದ್ಧತೆ. ಈ ಬದ್ಧತೆಯಿಂದಾಗಿ ಲಾಭನಷ್ಟದ ಯೋಚನೆ ಮರೆತು ಇಪ್ಪತ್ತು ವರ್ಷಗಳಿಂದ ಪತ್ರಿಕೆ ನಡೆಸಲು ಪ್ರಹ್ಲಾದ್‍ಗೆ ಸಾಧ್ಯವಾಗಿದೆ.
‘ಸಂಚಯ’ ಪತ್ರಿಕೆಯಾಗಿ ಮಾತ್ರ ಉಳಿದಿಲ್ಲ; ನಾಡಿನ ಭರವಸೆಯ ಬರಹಗಾರರ ಹಾಗೂ ಸಹೃದಯಿ ಓದುಗರ ‘ಸಂಚಯ’ವಾಗಿ ಬೆಳೆದಿದೆ. ಸಂಘಟನಾ ಶಕ್ತಿಯಾಗಿಯೂ ಸಂಚಯ ಕ್ರಿಯಾಶೀಲವಾಗಿದೆ. ಜಾಹಿರಾತಿಲ್ಲದ, ದಾನಿಗಳ-ಪೋಷಕರ ಮುಲಾಜಿಲ್ಲದ ‘ಸಂಚಯ’ ಸಾಂಸ್ಕೃತಿಕ ಲೋಕದ ಒಳ್ಳೆಯತನದ ಪ್ರತೀಕದಂತಿದೆ. ಪ್ರಣಾಳಿಕೆಗಳ ಆಳದಲ್ಲಿ ಮುಳುಗಿಹೋಗಿರುವ, ಸಾಹಿತ್ಯವನ್ನು ಕೂಡ ಕೊಳ್ಳುಬಾಕತನದ ಒಂದಂಗವಾಗಿ ಭಾವಿಸಿರುವ ಮಾಧ್ಯಮಗಳ ನಡುವೆ ಕಾಯ್ಕಿಣಿಯವರ ರೂಪಕ ಮೇಣದ ಬತ್ತಿಯಂತೆ ‘ಸಂಚಯ’ ಬೆಳಕು ಚೆಲ್ಲುತ್ತಿದೆ. ಊರ ಜನರ ದಾಹ ತಣಿಸುವ ಹಾಗೂ ಕೊಳೆ ಕಳೆಯುವ ಕೆರೇಕಟ್ಟೆಬಾವಿಗಳಂತೆ ‘ಸಂಚಯ’ ದಂಥ ಕಿರುಪತ್ರಿಕೆಗಳು ಸಾಂಸ್ಕೃತಿಕ ಬಾಯಾರಿಕೆ ತಣಿಸುವ ಸಾಧನಗಳಾಗಿವೆ.
*****



















