ಹಾಗಾದರೆ ನಾನೇನೂ ಅಲ್ಲ
ಒಂದಿಷ್ಟು ಆಕಾಶ, ಒಂದಿಷ್ಟು ನೆಲ
ಹನಿ ನೀರು, ಚೂರು ಇಟ್ಟಿಗೆ, ಮಣ್ಣು ಎಲ್ಲ,
ನಾನು ಕಟ್ಟ ಕಡೆಯ ನ್ಯಾಯ,
ಮೊಟ್ಟ ಮೊದಲ ಶೋಷಿತೆ.
ದಮ್ಮುಗಟ್ಟಿ ಉಸಿರು ಬಿಗಿ ಹಿಡಿದ
ಸೆಗಣಿ ಹುಳುವಿನ ದುಡಿಮೆ ನಿರಂತರ
ಪೀಡಿತ ಲೋಕದ ಧ್ವನಿಯಿಲ್ಲದ
ನಾನು ಕಟ್ಟ ಕಡೆಯ ನ್ಯಾಯ,
ಮೊಟ್ಟ ಮೊದಲ ಶೋಷಿತೆ.
ಸಮೃದ್ಧ ಭೋಜನ ಸಿದ್ಧಪಡಿಸಿ ಬಡಿಸುವೆ
ರಸ್ತೆಯಂಚಿನ ಬದುಕು ಹಸಿದ ಹೊಟ್ಟೆ
ಎಲ್ಲಿಯೂ ಸ್ವಂತ ಮನೆಯಿಲ್ಲದವಳು
ನಾನು ಕಟ್ಟ ಕಡೆಯ ನ್ಯಾಯ,
ಮೊಟ್ಟ ಮೊದಲ ಶೋಷಿತೆ.
ಎಲ್ಲರಿಗೂ ಬಡಿಸಿ, ಉಪವಾಸ ಬದುಕುವ
ಹಿಂಸೆಯನ್ನುಂಡು ಮುಗುಳು ನಗುವ
ಮಾರುಕಟ್ಟೆಯ ಬಿಕರಿ ಮಾಲು
ನಾನು ಕಟ್ಟ ಕಡೆಯ ನ್ಯಾಯ,
ಮೊಟ್ಟ ಮೊದಲ ಶೋಷಿತೆ.
*****