ನಿನ್ನೆಗಳೆಲ್ಲಾ ನಾಳೆಗಳಾಗುತ್ತಿದ್ದರೆ
ಎಷ್ಟುಚಂದ ಇರುತ್ತಿತ್ತು!
ನಿನ್ನೆ ಮಾಡಿದ ತಪ್ಪುಗಳನ್ನು
ನಾಳೆ ಸರಿಮಾಡಬಹುದಾಗಿತ್ತು
ಓಡುವ ಕಾಲದ ಕಾಲಿಗೆ
ತಡೆ ನೀಡುವವರ್ಯಾರು?
ಕಾಲದ ಮೇಲೆ ಅಂಕುಶವ ಹೇರಿ
ಹೇಳಿದಂತೆ ಕೇಳಿಸುವವರಾರು?
ನಾಳೆ ಬೇಡವೆಂದು ನಿನ್ನೆ ಬಯಸಿದ್ದರೆ
ಇಂದು ಇರುತ್ತಿರಲಿಲ್ಲವೇನೋ?
ನಿನ್ನೆಯ ಕೆಲಸವ ನಾಳೆಗೆ ವಹಿಸಿ
ಇಂದು ಆರಾಮವಾಗಿರಬಹುದಿತ್ತೇನೋ?
ನಿನ್ನೆಯ ಯೋಚನೆಯ ಸೆಳೆಗೆ
ಸಿಲುಕಿದರೆ ನಾಳೆ ಹಾಳು
ಇಂದಿನ ನೋವನು ಕಳೆದು
ಎದ್ದರೆ ಮಾತ್ರವೇ ನಾಳೆಯ ಬಾಳು
ನಿನ್ನೆಯೆಂಬ ಹಳೆ ಹಾಳೆಯ ತಿರುವಿ
ಇಂದಿನ ಪುಟವ ತೆರೆದು
ನಾಳೆಯೆಂಬ ಆಶಾಭಾವವ ತಳೆದಾಗ
ಜೀವನವೆಂಬ ಪುಸ್ತಕದಲ್ಲಿ ಮೂಡೀತು ಸಹಿ.
*****

















