ಎನ್ನ ಮನವು ದಣಿದಿದೆ ಲೋಕ ರುಚಿಗೆ
ಇಂದ್ರಿಯಗಳ ಕುಣಿಸುತ್ತಿದೆ ತಾ ಕುಣಿದಂತೆ
ಲಗಾಮು ಇಲ್ಲದಂತೆ ಓಡುತ್ತಿದೆ ಗಗನಕ್ಕೆ
ತನುವು ಸೇವಕನಾಗಿದೆ ಮನವು ಧಣಿಯಂತೆ
ದೇವ ನಿಲ್ಲಿಸದಿರು ನೀ ಕಾಣದಂತೆ ಅಡ್ಡಗೋಡೆ
ಅದೇ ಕಾಮಕ್ರೋಧ ದುರಾಸೆಗಳೆನ್ನಲ್ಲಿ ನಿಬಿಡೆ
ಕ್ಷಣ ಕ್ಷಣವು ಚಂಚಲವು ಈ ಮನವು
ಹೊತ್ತು ಸಾಗಿದೆ ಬೇಸರದಿ ಎನ್ನ ತನುವು
ನಾ ಕಳೆದು ಕೊಂಡಿರುವೆ ನನ್ನವನ ಜಾತ್ರೆಯಲಿ
ಆದರೆ ಮರೆತಿರುವೆ ಜಾತ್ರೆಯ ಗಮತ್ತಿನಲಿ
ನನ್ನವನಿಗೆ ಅರೆಸುವವರೆಗೆ ಬೇರೆ ವಿಧಿ ಇಲ್ಲ
ಅವನ ಪಡೆಯದೆ ಹೊರತು ಇನ್ನೊಂದು ನಿಧಿ ಇಲ್ಲ
ಹಣ್ಣಾಗಲಿ ಮನವು ಪ್ರಪಂಚ ಅಗ್ಗಿಷ್ಟೆಗೆಯಲ್ಲಿ
ಬೆಂದು ಸುಣ್ಣವಾಗಲಿ ಅಹಂಕಾರ ತೊರೆದು
ಹಸಿ ಹಸಿ ಮನವು ಹುಳಿಯಾಗಿ ಕಾಡುವುದು
ಪಕ್ವವಾದಾಗ ಮನವು ತೃಪ್ತಿ ನೀಡುವುದು
ಚಿಂತನೆ ಪರಾಕಾಷ್ಠೆಯಲಿ ಬೆರೆಯಲಿ ಮನ
ಮಂಥನೆ ಸಾಮ್ರಾಜ್ಯದಲಿ ತೇಲಲಿ ಮನ
ತನ್ನ ಪದರಲಿ ತುಂಬಿಕೊಳ್ಳಲಿ ಆತ್ಮ ಬೆಳಕು
ಮಾಣಿಕ್ಯ ವಿಠಲನೇ ಇಹಪರಕು
*****















