ಭೂಗೋಲದ ಮೇಲೆ ಅವ ಎದ್ದು ನಿಂತು
ಆಚೀಚೆ ವಾಲುತ್ತಾನೆ
ಕೆಲವು ಆಧುನಿಕ ಆಟಿಕೆಗಳಂತೆ
ಕುಸಿದು ಬಿದ್ದರು ಮತ್ತೆ ಎದ್ದು ನಿಲ್ಲುತ್ತಾನೆ
ಭೂಮಿ ಸುಮ್ಮನಿದೆ ನೀನೆಲ್ಲಿ ಹೊದರು ಹೋಗುವಿ ಎಷ್ಟು ದೂರ
ಎಂಬಂತೆ
ಅವ ಮೆಟ್ಟಲೇರುತ್ತಾನೆ ಮೆಟ್ಟಲಿಳಿಯುತ್ತಾನೆ
ಎತ್ತರ ಸ್ಥಳದಿಂದ ಕೆಳಗೆ ನೋಡುತ್ತಾನೆ
ಕೆಳಗಿನ ಸ್ಥಳದಿಂದ ಮೇಲೆ ನೋಡುತ್ತಾನೆ
ಆವರ್ತನೆಗೆ ಅವನು ವಿಧಿತ
ಎಲ್ಲ ಪಾತ್ರಗಳೂ ಬಂದು ಹೋಗಿವೆ
ಕೊನೆ ಪಾತ್ರ ನೀನು ಏನು ತಂದಿರುವೆ
ಅರ್ಥಾತ್ ಹೊಸತೇನು ತಂದಿರುವೆ
ಎಲ್ಲ ಮುಖಭಾವಗಳ ಅಭಿನಯಿಸಿ ಆಗಿದೆ
ಎಲ್ಲ ಸಂದರ್ಭಗಳೂ ಮುಗಿದುಹೋಗಿವೆ
ಜನ ಮುಖ ತಿರುಗಿಸಿ ಕುಳಿತಿದ್ದಾರೆ
ತಿರ್ಯಕ್ ಮುಖಿಗಳು ಅವರು
ಕಳಚು ಕಳಚು
ಇದೋ ಕಣ್ಣು
ಇದೋ ಕಿವಿ
ಇದೋ ಮೂಗು
ಇದೋ ತುಟಿ
ಇದೋ ಮಾತು
ಈಗಾಗಲೇ ಕಳಚಿದವರು ನಿರ್ಭಾವದಲಿ ಇದ್ದಾರೆ
ಕಳಚುವುದಕ್ಕೆ ಇದೂ ಒಂದು ಪರಿ
ನಮಗೆ ಗೊತ್ತಿರಲಿಲ್ಲ ಈ ಯುಗದ ಮೊದಲು
*****

















