ನೀನೇಕೆ ಆಸೆಗೆ ದಾಸನಾಗಲಿಲ್ಲ?
ಮೀಸೆಯ ತಿರುವಿ ಮೆರೆಯಲಿಲ್ಲ?
ಕಾಮದ ಜ್ವಾಲೆಯ ತಾಪಕ್ಕೆ ಮಣಿದು
ಇನ್ನಷ್ಟು ತುಪ್ಪವ ಎರೆಯಲಿಲ್ಲ?
ಅಧಿಕಾರದ ಗದ್ದುಗೆಯೆಂಬ ಗುದ್ದಿಗೂ
ತಲೆಬಾಗಲಿಲ್ಲ ನೀನು
ಅಪ್ಪನ ಅತಿಮೋಹದ ಉರಿಯ
ಗುರಿಗೆ ನೀನಾದೆಯಾ ಜೇನು?
ಹಂಗಿನ ಗುಂಗು ಬದಲಾಯಿಸಿತು
ನಿನ್ನ ಧರ್ಮದ ಹಾದಿಯನ್ನು
ಏನೆನ್ನಲಿ, ಕೆಡುಕಿನಲ್ಲೇ ಇದ್ದು
ಕೆಡುಕಿಗೇ ಕೆಡುಕು ಬೇಡಿದ ನಿನ್ನನ್ನು?
ರಣದ ಕಣಕಣದಲ್ಲೂ ಧರ್ಮವೆಂಬ
ಮರಣಮೃದಂಗ ಬಾರಿಸಿದೆ
ಶರದ ಹಾಸಿಗೆಯಲ್ಲೇ ನಿನ್ನ ಶಯನ
ಕಂಡೂ ಕಾಣದಾದ ನಿನ್ನ ಬದುಕಿನ ಹೂರಣ
ಭೋಧಿಸಿದೆ ನೀತಿಮಾರ್ಗವನ್ನು ಈರ್ವರಿಗೂ
ಒಬ್ಬರಿಗೆ ಪಥ್ಯವಾದದ್ದು ಮತ್ತೊಬ್ಬರಿಗೆ ಮಿಥ್ಯವಾಯಿತು
ಕೇಳಿದವರು ಗೆದ್ದರು, ಕೇಳದವರು ಬಿದ್ದರು
ಆಗಲೂ ನಿನ್ನದು ಸಮಾಧಾನ ಚಿತ್ತ
ಹರಿದು ತಿಂಬವರ ನಡುವೆ
ಕರಿದು ಉಂಬವರ ಮಧ್ಯೆ
ಸರಿದು ಶಾಂತನಾಗಿ ಕುಳಿತೆ
ಚಿಂತೆಯೆಂಬ ಚಿತೆ ನಿನ್ನ ಸುಡಲಿಲ್ಲ
ಸಂಘರ್ಷದ ಬದುಕಿನ ತೋಟದಲ್ಲೂ
ಧರ್ಮವೆಂಬ ಹೂವನ್ನು ಅರಳಿಸಿದೆ
ಮನಸ್ಸನ್ನು ಹೊರಳಿಸುವ, ಕೆರಳಿಸುವ
ಮೋಹ ಪಾಶವ ಸುಟ್ಟ ಬದುಕಾಯಿತು ನಿನ್ನದು.
*****


















