ಕಡಲ ತಡಿಯಲ್ಲಿ ಕುಳಿತ
ಪ್ರೇಮಿಗಳಿಬ್ಬರ ಪಿಸುಮಾತು
ಕಡಲಿಗೆ ಕೇಳಿಸದಷ್ಟು ಸಣ್ಣಗೆ!
ಕಡಲಿಗಿಂತ ದೀರ್ಘ
ಪ್ರಿಯತಮನ ಭುಜದ ಆಸರೆಗೆ
ಒರಗಿ ಕುಳಿತ ಹುಡುಗಿ
ಕೆಂಪಾದ, ಗುಳಿಬಿದ್ದ ಕೆನ್ನೆ
ಬಯಕೆ ತುಂಬಿದ ತುಟಿಗಳು
ಕಡಲ ಅಲೆಯ ಬೋರ್ಗರೆತ
ಪ್ರೇಮಿಗಳ ಮನದ ಕಾಮನೆಯಂತೆ
ತಂಗಾಳಿಯ ಚಳಿಯನ್ನು ಕಿತ್ತೊಗೆದ
ಸಂಗಾತಿಯ ಬೆಚ್ಚನೆ ಸ್ಪರ್ಶ
ಅಲ್ಲಿ ಮಾತಿಲ್ಲ, ಕಥೆಯಿಲ್ಲ
ಬರೀ ಮೌನ
ನಡೆಯುತಿದೆ ಮೌನ-ಸಲ್ಲಾಪ
ಮನಸ್ಸು-ಮನಸ್ಸುಗಳ ನಡುವೆ
ಪಡುವಣ ದಿಗಂತದಲ್ಲಿ ಕಳೆದು
ಹೋಗುತ್ತಿರುವ ನೇಸರ
ಆಸೆಗಳ ಸಾಗರದಲ್ಲಿ ಮುಳುಗಿ
ಹೋಗಿರುವ ಪ್ರೇಮಿಗಳಿಗೆಲ್ಲಿಯ ಅರಿವು?
*****


















