ಕವಿಯ ಪ್ರಥಮ ಕವನ
ಮಗುವಿನ ಮೊದಲ ತೊದಲಿನಂತೆ
ಗೀಚಿದ್ದೇ ಕಾವ್ಯ; ಆಡಿದ್ದೇ ಮಾತು
ಅಪ್ಪು-ತಪ್ಪುಗಳೆಲ್ಲವೂ ಇಲ್ಲಿ ಒಪ್ಪು
ಪುಳಕದ ಭಾವನೆ ತುಳುಕಿಸುವ
ಕವನದ ಮೊದಲ ಸಾಲು
ಮೊದಲ ಸಾಲಿನ ಜೊತೆ ಸಾಲು ಸಾಲಾಗಿ
ತಳಕು ಹಾಕಿಕೊಂಡವದೆಷ್ಟೋ ಸಾಲು
ನವ ಜನಿತ ಕವಿಯ ಮನಸ್ಸಿಗೆ
ಪರಿಧಿಯ ಅಂಕುಶವಿಲ್ಲ; ಸೀಮೆಯ ಮಿತಿಯಿಲ್ಲ
ಹಿಡಿತ ಬಿಟ್ಟರೆ ಮನಕ್ಕೆ ಬಂದದ್ದೆಲ್ಲವ
ದೋಚಿ, ಗೀಚುವ ಹುಮ್ಮಸ್ಸು
ನಿಧಾನವಾಗಿ ಹಬ್ಬುತ್ತಿರುವ
ಪ್ರೌಢತೆಯ ಗಾಢತೆ; ಗಾಂಭೀರ್ಯತೆ ಕವಿಯಲ್ಲಿ
ಬಿದ್ದು, ಎದ್ದು ನಡೆಯುತ್ತಿರುವ
ಮಗುವಿನ ರೀತಿ
ಬರೆದಷ್ಟೂ ಸಾಲದು ಕವನದ ಸಾಲು
ಸಮಯವ ಸಾಲ ಕೇಳಿ ಬರೆಯುವ ಹಂಬಲ
ಬರೆದದ್ದನ್ನು ಮತ್ತೊಮ್ಮೆ, ಮಗದೊಮ್ಮೆ
ಓದಿ ಸುಖಿಸುವ ಕವಿಮನಸ್ಸು
ಬರೆದ ಮೊದಲ ಕವನ
ಓದುಗರ ಹೃದಯ ತಟ್ಟೀತೆಂಬ ಆಸೆ ಕವಿಗೆ
ಮನದ ಕದವ ಕದಲಿಸಿ
ಜೋಡಿಸುವಿರೇ ಸ್ನೇಹದ ಬೆಸುಗೆ?
*****