ಎಂಥಾ ಚಂದ್ರಾಮ
ಇವನೆಂಥಾ ಚಂದ್ರಾಮ

ಪಡುಮನೆ ಇಳಿಯಲು ಹೋಗಿ
ಇವ ನೀರಿಗೆ ಬಿದ್ದಾನ
ನೀರ ತರುವವರ ಸೆರಗಿಗೆ ಬಿದ್ದಾನ
ಎಂಥಾ ಚಂದ್ರಾಮ

ಮೂಡಲ ಮನೆ ಏರಲು ಹೋಗಿ
ಮುಗಿಲಿಗೆ ಮೆತ್ಯಾನ
ಮನೆಯವಳ ಹೆಗಲಿಗೆ ಸುತ್ಯಾನ
ಎಂಥಾ ಚಂದ್ರಾಮ

ಮಲ್ಲಿಗೆ ಹೂಗಳ ಕೊಯ್ಯಲು ಹೋಗಿ
ಬಳ್ಳಿಗೆ ಸುತ್ಯಾನ
ಮುಡಿದವರ ಕುರುಳಿಗೆ ಸಿಕ್ಯಾನ
ಎಂಥಾ ಚಂದ್ರಾಮ

ಹಾಲು ಕುಡಿಯಲು ಹಟ್ಟಿಗೆ ಹೋಗಿ
ಹಾಲಿಗೆ ಬೆರಗಾದಾನ
ಕರೆವವಳ ಕಾಲಿಗೆ ಮರುಳಾದಾನ
ಎಂಥಾ ಚಂದ್ರಾಮ

ಕಬ್ಬಿನ ಹೊಲಗಳ ಕದಿಯಲು ಹೋಗಿ
ಮಬ್ಬಿಗೆ ಮರೆಯಾದಾನ
ಕೆಲವರ ಹುಬ್ಬಿಗೆ ಸೆರೆಯಾದಾನ
ಎಂಥಾ ಚಂದ್ರಾಮ

ಊರ ಹುಡುಗೀರ ವಯ್ಯಾರ ನೋಡಿ
ಕೇರಿಲಿ ಹೆಚ್ಚೇ ನಿಂತಾನ
ತಾನಾರೆ ಕೈಯಾರ ಸೋತಾನ
ಎಂಥಾ ಚಂದ್ರಾಮ

ಪೇಟೆ ಹುಡುಗೀರ ಬಿನ್ನಣ ನೋಡಿ
ಪೇಟೆಲೆ ತಳವೂರಿ ನಿಂತಾನ
ಪೇಟೆಯೆ ಚಂದಾಂತ ಅಂತಾನ
ಎಂಥಾ ಚಂದ್ರಾಮ
*****