ಕಲೆಯಲಿ ಅರಳಿದ ಶಿಲೆಗಳು ಉಸುರಿವೆ
ತಮ್ಮೊಳಗಿನ ದನಿಯ
ಬಂಡಾಯದ ಈ ಬೆಳಕಲಿ ಮೂಡಿದೆ
ಚರಿತೆಯ ಹೊಸ ಅಧ್ಯಾಯ ||
ಬೆವರನು ಸುರಿಸಿ ರಕ್ತವ ಹರಿಸಿ
ಕಣ್ಣಲಿ ಕಣ್ಣನು ಕೂಡಿಸುತ
ಶಿಲೆಯಲಿ ಶಿಲ್ಪವ ಬಿಡಿಸಿದ ಶಿಲ್ಪಿಯು
ತಳ ಸೇರಿದ ನಿಜ ಕಥೆಯ
ಹಾಡಿವೆ ಮೌನದಿ ಶಿಲ್ಪಗಳು
ಗತ ಕಾಲದ ಚಿರ ಸಾಕ್ಷಿಗಳು
ಕಲ್ಲನು ದೇವರ ಮಾಡಿದ ಶಿಲ್ಪಿಯ
ಗುಡಿಯಿಂದಾಚೆಗೆ ತಳ್ಳಿಸಿದ
ಭಗವಂತ-ಈ ಭಕ್ತನ ನಡುವೆ
ಸುಳ್ಳಿನ ಗೋಡೆಯ ಸೃಷ್ಟಿಸಿದ
ಕತೆಗಳ ಹೇಳಿವೆ ಶಿಲ್ಪಗಳು
ವ್ಯಥೆ ತುಂಬಿದ ಚಿರ ಗಾಥೆಗಳು
ಭೂಗತರಾದ ದನಿಗಳು ಗುಡುಗಿವೆ
ಸಿಡಿದೇಳುವ ಕಾತುರದಲ್ಲಿ
ಮೆಟ್ಟಿ ಮೆರೆದ ಆ ಹೆಜ್ಜೆಗಳೆಲ್ಲ
ಸರಿದಿವೆ ಹಿಂದಕೆ ಭೀತಿಯಲಿ
ಬಂಡಾಯದ ಬಿಸಿ ಗಾಳಿಯಲಿ
ಚರಿತೆ ಸಾಗಿದೆ ನಿಗೂಢದಲಿ
*****



















