ರಾತ್ರಿ ಕಂಡ ಕನಸುಗಳ ಚಿತ್ರಿಸುವುದಕ್ಕೆ
ಕುಂಚಗಳೇ ಇಲ್ಲ
ಕುಂಚಗಳ ತಂದು ಬಣ್ಣಗಳ ಕಲಸಿ ಕ್ಯಾನ್ವಾಸಿನ ಮುಂದೆ ಕುಳಿತಾಗ
ಕನಸುಗಳಿರೋದಿಲ್ಲ ನೆನಪಿನಲ್ಲಿ
ಅವು ಎಲ್ಲಿರುತ್ತವೋ? ಬಹುಶಃ ಕಿಟಿಕಿಗಳ ಹಿಂದೆ ಛಾವಣಿಗಳ ಸಂದಿಗಳಲ್ಲಿ
ದಾರಂದದಲ್ಲಿ ಅತ್ತಾರದ ತಟ್ಟಿಗಳ ಮರೆಗೆ
ಈವತ್ತು ರಾತ್ರಿ ಅವು ಬಂದಾವೆ? ಬಾ ಎಂದರೆ ಬರುವಂಥವಲ್ಲ
ಹಲವು ದಾರಿಗಳ ನಡೆದಿರಬೇಕು ಹಲವು ನಿದ್ದೆಗಳ ಕೆಟ್ಟಿರಬೇಕು
ತಲೆದಿಂಬಿನ ಬದಲಿಗೆ ಕೈಯಿರಬೇಕು
ಟಪ್ ಟಪ್ ಎಂದು ತಡವಾದ ದಾರಿಗನೊಬ್ಬ ನಡೆದು ಹೋಗುತ್ತಿರಬೇಕು
ರಿಯಾಲಿಟಿ ನಿಧ ನಿಧಾನ ಇಳಿಯಬೇಕು ನಿದ್ದೆಯಲಿ
ಸಾಕಷ್ಟು ಬದಲಾಗಿ
ಮನುಷ್ಟ ಹೊಕ್ಕಂತೆ ತೆರೆಯಲು ನಿಧಾನವಾದ ಬಾಗಿಲು
ಸ್ವರ್ಗವೊ ನರಕವೊ ಏನೆಂದು ತಿಳಿಯದೇ
*****


















