ಕತ್ತಲಿಗೂ ಬೆಳಕಿಗೂ ನಡೆಯಿತೊಮ್ಮೆ
ಮಾತಿನ ಚಕಮಕಿ
“ನಾನೇ ಶ್ರೇಷ್ಠ” ಅಂದಿತು ಕತ್ತಲು
ಪಟ್ಟು ಸಡಿಲಿಸದು ಬೆಳಕು
“ನಾನಿಲ್ಲದೆ ಲೋಕವೆಲ್ಲಾ ಕತ್ತಲೆ”
ಹೆಮ್ಮೆಯಿಂದ ಬೀಗಿತು ಬೆಳಕು
“ನಾನಿಲ್ಲದೆ ನಿನಗಾವ ಬೆಲೆ?”
ಪ್ರತಿವಾದಿಸಿತು ಕತ್ತಲು
ಪಾಠ ಕಲಿಸಲು ಬೆಳಕಿಗೆ
ಅಡಗಿಕುಳಿತಿತು ಕತ್ತಲು
ಬೆಳಕೇ ತುಂಬಿದ ಪ್ರಪಂಚದಲ್ಲಿ
ಲೋಪ-ಪಾಪಗಳೆಲ್ಲವೂ ಬೆತ್ತಲು
ರಾತ್ರಿಯಿಲ್ಲ, ನಿದಿರೆಯಿಲ್ಲ,
ಪಂಚರಂಗದ ಕನಸಿಲ್ಲ
ಮಂಕು ಬಡಿಯಿತು, ಮರುಳು ಕವಿಯಿತು
ಲೋಕದ ಜನರೆಲ್ಲರೂ ಸುಸ್ತು
ಎದೆಯುಬ್ಬಿಸಿ ಎದುರು ಬಂದಿತು ಕತ್ತಲೆ
ತೆರೆಗೆ ಸರಿಯಿತು ಬೆಳಕು ಇತ್ತಲೆ
ಜಗದಲ್ಲಿ ಅಂಧಕಾರದ ಯುಗ
ಲೋಕವೆಲ್ಲಾ ಕತ್ತಲಿನ ಸಾಮ್ರಾಜ್ಯವೀಗ
ಕತ್ತಲೆಯ ರುದ್ರನರ್ತನಕ್ಕೆ
ಜಡವಾಯಿತು ಜನಜೀವನ
ಬಡವಾಯಿತು ಜೀವಚೇತನ
ತಮ್ಮ ತನದಲ್ಲೇ ಅವೆರಡರ ಗಮನ
ಯುದ್ಧಕ್ಕೆ ಸಿದ್ಧವಾಯಿತು ರಂಗ
ದಿಟ್ಟಿಸಿತು ಒಂದನು ಇನ್ನೊಂದು
ಹಿಮ್ಮೆಟ್ಟಿಸಿತು ಬೆಳಕು ಕತ್ತಲನ್ನು
ಅಟ್ಟಿಸಹೊರಟಿತು ಕತ್ತಲು ಬೆಳಕನ್ನು
ಕೆರಳಿತು ಕದನದ ಉರಿ
ಅದರ ಮೇಲಿದು ಏರಿ
ಇದರ ಮೇಲದು ಹಾರಿ
ನಿಶ್ಚಯವಾಗದಾಯಿತು ವಿಜಯ
ನಡೆಯುತಲಿದೆ ಕಾದಾಟವಿನ್ನೂ
ಬೆಳಕು ಕತ್ತಲುಗಳ ನಡುವೆ
ಮುಗಿಯುವುದು ಎಂದೋ? ಮುಗಿಯದೋ ಎಂದೂ?
ಕೊನೆಗಾಣುವುದು ಅದೆಂತೋ?
*****


















