ರಕ್ಕಸರಿನ್ನೂ ಮುಗಿದಿಲ್ಲ
ರಕ್ಕಸರಿನ್ನೂ ಬರುತಿದ್ದಾರೆ
ಬರಲೇಬೇಕು
ರಕ್ಕಸರಿನ್ನೂ ಬರದಿದ್ದರೆ
ಮುಂದುವರಿಯುವುದು ಹೇಗೆ ?
ರಕ್ಕಸರಿರ್‍ತಾರೆ ಖಳನಾಯಕರಿರ್‍ತಾರೆ
ಚೌಕಿಯಲ್ಲಿ ವೇಷ ತೊಟ್ಟುಕೊಂಡು
ಮಲಗಿರ್‍ತಾರೆ ಇಲ್ಲವೆ ಚಕ್ಕಂದ
ಆಡಿಹಾಡಿರ್‍ತಾರೆ ಹಾಡಿಕೊಂಡಿರ್‍ತಾರೆ
ಸಮಯಕ್ಕೆ ಸರಿಯಾಗಿ ಎದ್ದು ಬರುತ್ತಾರೆ
ದುಷ್ಟ ವೇಷ ಪುಂಡು ವೇಷ ಪ್ರಚಂಡ ವೇಷ
ಬಣ್ಣದ ವೇಷ
ಹಾ ಎಂಥಾವೇಶ
ರಕ್ಕಸರೂ ಕೆಲ ಛದ್ಮವೇಷ
ಬಡ ಬಡ ಬ್ರಾಹ್ಮಣ ಕಳ್ಳ ಸನ್ಯಾಸಿ
ದಾರಿಹೋಕ ಇಲ್ಲವೆ ತೀರಾ ತಲೆಹೋಕ
ಹಾವಾಡಿಗ ವರ್‍ತಕ ಅಥವಾ
ಜನಸಾಮಾನ್ಯ
ವಂಚಿಸಿದ ನಂತರ ಅವರು ನಿಜ ವೇಷವ
ತೋರುವರು
ಅದೇನು ಅಕರಾಳ ವಿಕರಾಳ
ಏನು ರಾಳದ ಪುಡಿ ಎಡಬಲ ದೊಂದಿ
ಬಯಲ ಕೊನೆಯಿಂದ ಎದ್ದು ಬರುತಾರೆ
ಅದೇನಟ್ಟಹಾಸ ಅದೇನು ಹೂಂಕಾರ
ನಿದ್ದೆ ತೂಗುತ ಇದ್ದ ಜನ ಈಗ ಎಚ್ಚರ
ನೋಡಿದರಿದೋ ಎದುರಿಗೇ ಇದೆ ಒಂದು ಘೋರಾಕಾರ
ಜನ ತತ್ತರ
ಒಮ್ಮೆಲೆ ಹಾಹಾಕಾರ
ಏನಿದು ಉಪಟಳ ಏನಿದು ಹಿಂಸೆ
ಏನಿದು ಜನಾಂಗ ಹತ್ಯೆ
ಈಗುಳಿದುದು ಒಂದೇ
ದೇವರ ಪ್ರಾರ್‍ಥನೆ
ಅಯ್ಯ ಬಾರೋ ಅಪ್ಪ ಬಾರೋ
ಹೇಗಾದರೂ ನಮ್ಮ ಕಾಪಾಡೋ
ಅವನೂ ಬರುತಾನೆ ಶಂಖ ಊದಿ
ಬರದೇನು ಮಾಡ್ತಾನೆ ಧರ್‍ಮಗ್ಲಾನಿ
ನಿವಾರಿಸಬೇಕು ತಾನೆ
ಹತ್ತವತಾರಿ ಇದೆಷ್ಟನೆ ಬಾರಿ
ಬಾರಿ ಬಾರಿಗೂ ರಕ್ಕಸರ ತಲೆ ಹಾರಿಸಿ
ದುಷ್ಟನಿಗ್ರಹ ಶಿಷ್ಟ ಅನುಗ್ರಹ
ಎಷ್ಟಾದರು ಅವತಾರ
ಅದೂ ಮುಗಿಯದು ಲೋಕವೆ ಹಾಗೆ
ನಿರಂತರ ಧಾರಾವಾಹಿ
ಇತ್ತ ವಿದೂಷಕ ವಿಧವಿಧ ವೇಷ
ಧರಿಸಿ ಪ್ರವೇಶಿಸುತಾನೆ
ಮಧ್ಯಂತರದಲಿ
ಅಥವಾ ಕೆಲವು ಸಲ ಸಣ್ಣ ಪಾತ್ರದಲಿ
ಉದಾಹರಣೆಗೆ ದೂತ
ಅಥವಾ ಅಂಬಿಗ
ರಾಯರ ಕೆಲಸ ದೇವರ ಕೆಲಸ
ಹೈರಾಣಾದ ಪ್ರೇಕ್ಷಕರನ್ನ
ನಗಿಸೋದೂ ಅವನ ಕೆಲಸ
ಆದರೆ ನಗಿಸೋದು ಯಾರು
ಖುದ್ದು ಈ ವಿದೂಷಕನ
ಅವನೆಂದೂ ನಗಲೇಬಾರದು
ಹೆಂಡ್ತಿಗೆ ಕಾಯಿಲೆ ಮಕ್ಕಳು ದಡ್ಡರು
ಇವನಿಗೊ ನಿದ್ದೇನೆ ಇಲ್ಲದೆ
ನೆತ್ತಿಗೇರಿದೆ ಕಪಿತ್ಥ ಜಂಬೂ
ಓ ದೇವರೆ, ನಿನ್ನ ಲೀಲೆಯಲಿ
ಈ ಇವನಿಗೇನು ಬೆಲೆ
ಈ ನಮಗೇನು ನೆಲೆ
ಬರಿನೆಲದಲ್ಲಿ ಕೂತವರು ನಾವು
*****


















