ಇನ್ನಾರುಮರಿಯದಿಹ ಅರಿಯಿಸಲುಮಾಗದಿಹ
ಜೀವಾತ್ಮಸಂಸ್ಥೆಯಿದು, ಮಾತಿಲ್ಲ ತೆರೆಯೆ;
ಗೀತನೃತ್ಯಾಭಿನಯ ಶಿಲ್ಪ ಕವಿತಾಚಿತ್ರ-
ಗಳಿಗರಿದು ಈ ರಹಸ್ಯದ ಮುದ್ರೆಯೊಡೆಯೆ;
ಪರಿಸರದ ಪರಿಸರದ ಪರಿಪರಿಯ ಬೆಲೆಗಳೊಳು
ಆವ ಬೆಲೆಗೂ ತರದೆ ಉಳಿವುದಿದು ಕೊನೆಗೆ:
ಜಗದಾವ ವಸ್ತುವೂ ಇದರಾಸೆ ರೇಖಿಸದು
ಜೀವಿ ಏಕಾಕಿಯಿವ ತಾನು ತನ್ನೊಳಗೆ.
ಗುಟ್ಟು ಗುಟ್ಟಿನ ಗಂಟು ವ್ಯಕ್ತಿ ವ್ಯಕ್ತಿಗಳೆಲ್ಲ; ಈ ಗುಡಿಯು ಮದರ ನಂಟು
ಈ ಮಹಾಗುಟ್ಟಿನೆಡೆ ಒಬ್ಬೊಬ್ಬನೂ ಪಡೆವ ಪಾರದರ್ಶಕತೆಯನು ಅರಿವರಾರುಂಟು?
*****


















