ಸೀತೆಯ ವನವಾಸ
ಕೊನೆಗೊಂಡಿತೆನೆ ಕೆಳದಿ?
ಹದಿನಾಲ್ಕು ವರ್ಷಗಳ ಘನಘೋರ
ಕಾಡಿನ ವನವಾಸ ಅನುಭವಿಸಿ
ಅಗ್ನಿ ಪರೀಕ್ಷೆಗೆ ಮೈಯೊಡ್ಡಿ,
ಸೈ ಎನಿಸಿಕೊಂಡು ಬಂದಿದ್ದಾಳೆ
ಆಧುನಿಕ ಮೀಸಲಾತಿಯ ಸೀತೆ.
ಎಡ ಹೋರಾಟ ಮೂಲದ
ಕಾಸಗಲ ಕುಂಕುಮದ ಬೃಂದೆ
ಬಳ್ಳಾರಿ ವರಮಹಾಲಕ್ಷ್ಮೀ ಪೂಜೆಯ ಸುಷ್ಮಿತೆ
ಪಾರ್ಲಿಮೆಂಟಿನಲ್ಲಿ ಮಹಿಳಾ ಮೀಸಲಾತಿ
ಮಸೂದೆ ಪಾಸಾಗಿ ಇತಿಹಾಸ ಬರೆದ
ಚಾರಿತ್ರಿಕ ಆ ಕ್ಷಣದಲ್ಲಿ
ಅವರಿಬ್ಬರೂ ಅಪ್ಪಿಕೊಂಡಾಗ
ಸೀತೆಯ ಕಷ್ಟಗಳಿಗೆ ಕೊನೆಯಾಗಬಹುದು
ಎಂದು ಅನಿಸಿದ್ದು ಸುಳ್ಳಲ್ಲ.
ಅಂತಃಪುರದಿಂದ ಅಂಗಳಕ್ಕೆ ಕಲಿಟ್ಟು
ಹೊಸಿಲು ದಾಟಿ ಬಿಸಿಲಿಗೆ ಮುಖ ಒಡ್ಡಿ
ಅಧಿಕಾರದ ಗದ್ದುಗೆಯಲ್ಲಿ ಕುಳಿತು
ಒಮ್ಮೆ ದೂರದೂರದ ತನಕ
ಗತಿಸಿದ ದಾರಿ ವೀಕ್ಷಿಸಿದಾಗ
ಹೋರಾಟದ ಸಾಕ್ಷಾತ್ಕಾರ
ಹೊಸ ಗಾಳಿ ಬೆಳಕಿನ ವಿಸ್ತಾರ
ಹೊಸ ಕ್ರಾಂತಿಗೆ ಹಾದಿಯಾಗಬಹುದೆ?
*****
(೩೩% ಮಹಿಳಾ ಮೀಸಲಾತಿ ಬಿಲ್ಲು ರಾಜ್ಯ ಸಭೆಯಲ್ಲಿ ಪಾಸು ಮಾಡಿದಾಗ ಬರೆದ ಕವಿತೆ)