ಭರತನಿದ್ದ ಬಾಹುಬಲಿಯಿದ್ದ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ
ಭರತ ಬಾಹುಬಲಿಯ ಮಧ್ಯೆ
ಯುದ್ಧ ನಡೆದಿತ್ತು ಅಣ್ಣತಮ್ಮನ ನಡುವೆ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ
ಗಧಾಯುದ್ಧ ಖಡ್ಗ ಯುದ್ಧ
ಸಕಲಾಸ್ತ್ರ ಯುದ್ಧ ನಡೆದಿತ್ತು ಸಹಸ್ರವರ್‍ಷ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ
ಸಕಲ ಸಮಬಲ ಯುದ್ಧ
ಕೊನೆಗೊಂದೆ ಯುದ್ಧ ಅದು ದೃಷ್ಟಿ ಯುದ್ಧ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ
ದೃಷ್ಟಿ ಯುದ್ಧದಲಿ ಬಾಹುಬಲಿ ಗೆದ್ದ
ಯುದ್ಧ ಗೆದ್ದವನೆ ಎಲ್ಲ ರಾಜ್ಯವ ಗೆದ್ದ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ
ಆಗಲೇ ಅವನು ಎಲ್ಲ ಬಿಟ್ಟದ್ದು
ಬಿಟ್ಟಾಗಲೇ ಅವನು ನಿಜವಾಗಿ ಗೆದ್ದುದು
ಆಗಲೇ ಅವನು ಗೊಮ್ಮಟನಾದುದು
ಜಿನನು ಆದುದು
ರಾಜ್ಯ ಕೋಶಗಳ ಬಿಟ್ಟ
ಗೆದ್ದುದೆಲ್ಲವ ಬಿಟ್ಟ
ಗೆಲ್ಲಬೇಕೆಂಬುದನೆ ಬಿಟ್ಟ
ಅಹಂ ಬಿಟ್ಟ
ಅಹಂಕಾರವ ಬಿಟ್ಟ
ಉಟ್ಟ ಬಟ್ಟೆಯನೆ ಬಿಟ್ಟೆದ್ದು ನಿಂತ
ಆಕಾಶದೆತ್ತರಕೆ ಬೆಳೆದವನೆ ಗೊಮ್ಮಟ
ನಿನ್ನೆ ಇಂದು ನಾಳೆಗೂ
ಅವನಿಗವನೆ ಸದೃಶ
*****


















