ಅಪ್ಪಮ್ಮ ಕಾಯ್ತಾರೆ ಮನೆಯೊಳಗೆ
ಗೆಳತಿಯರಿದ್ದಾರೆ ಮರೆಯೊಳಗೆ
ಹೊರೆಯಷ್ಟು ಕೆಲಸ ಬಿದ್ದಿದೆಯೊ
ಸರಸಕ್ಕೆ ಸಮಯ ಈಗಿಲ್ಲವೊ
ಗೋವುಗಳ ಕರಕೊಂಡು ಹೊಳೆಗೊಯ್ಯಬೇಕೊ
ಅವುಗಳ ಮೈತಿಕ್ಕಿ ತೊಳೆಯಬೇಕೊ
ಪಾತ್ರೆ ಪಗಡೆ ಉಜ್ಜಿ ಬೆಳಗಿಡಬೇಕೊ
ನೆಲ ಸಾರಿಸಿ ಒರೆಸಿ ಹೊಳೆಯಿಸಬೇಕೊ
ನೀರೆತ್ತಿ ಕೊಡಪಾನ ಮನೆಗೆ ತರಬೇಕೊ
ಅಡುಗೆ ಮಾಡೆಲ್ಲರಿಗು ಬಡಿಸಬೇಕೊ
ಸಾಂಬ್ರಾಣಿ ಹಾಕಿ ನಾ ಮೀಯಬೇಕೊ
ಗಾಳಿಗೆ ಕೂದಲ ಒಣಗಿಸಬೇಕೊ
ತಂಪೆಣ್ಣೆ ಹಾಕಿ ತಲೆ ಬಾಚಬೇಕೊ
ಎರಡೆರಡು ಜಡೆಗಳ ಹಾಕಬೇಕೊ
ಮಲ್ಲಿಗೆ ಮಾಲೆಯ ನೇಯಬೇಕೊ
ಸಿಂಗಾರವಾಗದನು ಮುಡಿಯಬೇಕೊ
ತೋರುಬೆರಳಲಿ ಜಡೆ ಗಿರಗಿರ ತಿರುಗಿಸಿ
ಊರೊಳಗೆಲ್ಲಾ ಸುಳಿದಾಡಬೇಕೊ
ಆವಾಗ ನೀ ನನ್ನ ಮುಂದಿರಬೇಕೊ
ಮುಂದಿರದಿದ್ರೆ ಹಿಂದಿರಬೇಕೊ
*****


















