ನಾನೊಮ್ಮೆ ಕನಸಿನಲ್ಲಿ ರಾಜನಾಗಿದ್ದೆ
ಭೂ ಲೋಕದ ಒಡೆಯನಾಗಿ ಮೆರೆದಿದ್ದೆ
ನನ್ನದೇ ಮಾತು, ನನ್ನದೇ ರೀತಿ
ಪ್ರಶ್ನಿಸುವವರಿಲ್ಲದ ಪ್ರಪಂಚ
ಖಜಾನೆಯಲಿ ಕೊಳೆತು
ಬಿದ್ದಿರುವ ಸಂಪತ್ತು
ಇಷ್ಟಿದ್ದರೂ ಇಲ್ಲದವರಿಗೆ
ನೀಡಲೊಪ್ಪದ ಮನಸ್ಸು
ಕಾರಣವಿಲ್ಲದೆ ಹೊಗಳಿ
ಅಟ್ಟಕ್ಕೇರಿಸುವ ಮಂತ್ರಿ-ಮಾಗಧರು
ಹೊಗಳಿಕೆಯಿಂದ ಗಳಿಕೆ ಮಾಡಿಕೊಳ್ಳುವ
ಸ್ವಾರ್ಥ ತಿಳಿಯದ ಅವಿವೇಕಿ ನಾನು
ಇದ್ದಾರೆ ಪಟ್ಟದರಸಿಯರು
ಅಂತಃಪುರದಲ್ಲಿ; ಲೆಕ್ಕವಿಲ್ಲದಷ್ಟು
ನೀಡುತ್ತಿದ್ದಾರೆ ತಿಂದ ಅನ್ನಕ್ಕೆ
ಪ್ರತಿಫಲವಾಗಿ ಸುಖ, ಲೆಕ್ಕಕ್ಕಿಲ್ಲದಷ್ಟು
ರಾಜನಾದಾಗ ಅರಳಿ ಅಟ್ಟಕ್ಕೇರಿದ
ಮನಸ್ಸು ಮರುಳಾಗಿತ್ತು
ನಿಂತ ನೀರಿನ ಬದುಕು
ಬೇಸರ ತರಿಸಿತ್ತು.
ಕನಸೆಂಬ ಭ್ರಮೆಯಿಂದ
ಮನ ಹೊರಬಂದಿತ್ತು
ಖುಷಿಪಟ್ಟೆ; ನಾನಿನ್ನೂ
ರಾಜನಾಗಿಲ್ಲವಲ್ಲ ಎಂದು.
*****


















